Chandrayan 3: ‘ಚಂದ್ರಯಾನ-3’ ಲಾಂಚ್ ಡೇಟ್ ಫಿಕ್ಸ್: ಇಸ್ರೋದಿಂದ ಅಧಿಕೃತ ಘೋಷಣೆ!
ಶ್ರೀಹರಿಕೋಟಾ: ಜಗತ್ತೇ ಭಾರತದ ಕಡೆ ಗಮನ ನೆಟ್ಟು, ಅದೊಂದು ಬಾಹ್ಯಾಕಾಶ ನೌಕೆ ಉಡಾವಣೆಗೆ ಕಾಯುತ್ತಿದೆ. ಅದರಲ್ಲೂ ನಾಸಾ ಸೇರಿ ಪ್ರಪಂಚದ ಘಟಾನುಘಟಿ ಸಂಸ್ಥೆಗಳು ಇಸ್ರೋ ಮೇಲೆ ಗಮನ ನೆಟ್ಟಿವೆ. ಈಗ ಆ ಕುತೂಹಲಕ್ಕೆ ತೆರೆಬಿದ್ದಿದ್ದು 'ಚಂದ್ರಯಾನ-3' ಉಡಾವಣೆಯ ಅಂತಿಮ ದಿನಾಂಕ ಘೋಷಣೆಯಾಗಿದೆ. ಖುದ್ದು ಇಸ್ರೋ ಚಂದ್ರಯಾನ-3 ನೌಕೆಯ ಉಡಾವಣೆ ಮುಹೂರ್ತವನ್ನು ಪ್ರಕಟಿಸಿದೆ.
Announcing the launch of Chandrayaan-3:
— ISRO (@isro) July 6, 2023
🚀LVM3-M4/Chandrayaan-3 🛰️Mission:
The launch is now scheduled for
📆July 14, 2023, at 2:35 pm IST
from SDSC, Sriharikota
Stay tuned for the updates!
'ಚಂದ್ರಯಾನ -3' ಉಡಾವಣೆಗಾಗಿ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಇಸ್ರೋ ಸಜ್ಜಾಗಿರುವ ಸಂದರ್ಭದಲ್ಲೇ ಸಿಹಿಸುದ್ದಿ ಸಿಕ್ಕಿದೆ. ಈ ಹಿಂದೆ 'ಇಸ್ರೋ' ಸಂಸ್ಥೆ ಜುಲೈ 13ರ ಮಧ್ಯಾಹ್ನ 2.30ಕ್ಕೆ ಲಾಂಚಿಂಗ್ ಫಿಕ್ಸ್ ಮಾಡಿತ್ತು. ಶ್ರೀಹರಿಕೋಟಾದಲ್ಲಿರುವ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರ ಉಡಾವಣೆಗೆ ಸಜ್ಜಾಗಿತ್ತು. ಆದ್ರೆ ಈಗ ದಿನಾಂಕ ಬದಲಾಗಿದ್ದು ಜುಲೈ 14ರಂದು ಮಧ್ಯಾಹ್ನ 2.35ಕ್ಕೆ 'ಚಂದ್ರಯಾನ -3' ಉಡಾವಣೆ ಮಾಡುವುದು ಕನ್ಫರ್ಮ್ ಆಗಿದೆ. ಈ ಮೂಲಕ ಶತಕೋಟಿ ಭಾರತೀಯರ ಕುತೂಹಲಕ್ಕೆ ಉತ್ತರ ಸಿಕ್ಕಂತಾಗಿದೆ. ಹಾಗಾದರೆ ಇದಕ್ಕೆ ಸಿದ್ಧತೆಗಳು ಹೇಗೆ ಸಾಗಿವೆ? ಬನ್ನಿ ತಿಳಿಯೋಣ.

ಉಡಾವಣೆಗೆ ಬಾಹ್ಯಾಕಾಶ ನೌಕೆ ಜೋಡಣೆ!
ಬಾಹ್ಯಾಕಾಶ ವಿಜ್ಞಾನಿಗಳ ಕುತೂಹಲದ ಕೇಂದ್ರ ಬಿಂದು, ಚಂದ್ರನ ದಕ್ಷಿಣ ಧ್ರುವದ ಅಧ್ಯಯನ ನಡೆಸುವುದೇ ಯೋಜನೆ ಟಾರ್ಗೆಟ್. ಹೀಗೆ ಚಂದ್ರನ ದಕ್ಷಿಣ ಧ್ರುವದಲ್ಲಿ ಭಾರತ ಉಡಾಯಿಸುವ ಚಂದ್ರಯಾನ ನೌಕೆ ಲ್ಯಾಂಡ್ ಆಗಲಿದೆ. ಹೀಗಾಗಿ ಇನ್ನೇನು ಕೆಲವೇ ದಿನ ಬಾಕಿ ಇದ್ದು, ನೌಕೆ ಉಡಾವಣೆಗೆ ಬೇಕಾದ ಅಂತಿಮ ಹಂತದ ಸಿದ್ಧತೆಗಳು ಅಬ್ಬರದಿಂದ ಸಾಗಿವೆ. ಚಂದ್ರಯಾನ -3 ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಲಾಂಚ್ ವೆಹಿಕಲ್ ಮಾರ್ಕ್-III ಮೂಲಕ ಲಾಂಚ್ ಆಗಲಿದೆ. ಹೀಗಾಗಿ ಈಗಾಗಲೇ 'ಚಂದ್ರಯಾನ -3'ರ ಬಾಹ್ಯಾಕಾಶ ನೌಕೆ ಹೊಂದಿರುವ ಪೇಲೋಡ್ ಫೇರಿಂಗ್ ಜಿಯೋಸಿಂಕ್ರೊನಸ್ ಲಾಂಚ್ ವೆಹಿಕಲ್ ಮಾರ್ಕ್ III (GSLV Mk-III) ಜೊತೆಗೆ ಜೋಡಣೆ ಮಾಡಲಾಗಿದೆ.
ಎಷ್ಟು ಕಿಲೋ ಮೀಟರ್ ಪ್ರಯಾಣ?
ನಿನ್ನೆ 'ಯುಆರ್ ರಾವ್' ಉಪಗ್ರಹ ಕೇಂದ್ರದಲ್ಲಿ 3900 ಕಿಲೋ ತೂಕವಿರುವ ಬಾಹ್ಯಾಕಾಶ ನೌಕೆಯನ್ನು ರಾಕೆಟ್‌ನ ಪೇಲೋಡ್ ಫೇರಿಂಗ್‌ನಲ್ಲಿ ಅಳವಡಿಸಲಾಯಿತು. ನಂತರ ಭೂಮಿಯ ಕಕ್ಷೆ ಹೊರಗೆ ತಳ್ಳುವ ರಾಕೆಟ್‌ನಲ್ಲಿ ಸಂಯೋಜಿಸಲು ಸ್ಥಳಾಂತರ ಮಾಡಲಾಗಿದೆ. ಈ ರಾಕೆಟ್ ಭೂಮಿಯಿಂದ ಸುಮಾರು 3,84,000 ಕಿಲೋಮೀಟರ್ ದೂರದಲ್ಲಿರುವ ನೈಸರ್ಗಿಕ ಉಪಗ್ರಹ ಚಂದ್ರನತ್ತ ಹಾರಲಿದೆ. ಹೀಗಾಗಿ ಅಗತ್ಯವಿರುವ ಎಲ್ಲಾ ಸಿದ್ಧತೆ ಮಾಡಿಕೊಳ್ಳುತ್ತಿದೆ ಇಸ್ರೋ. ಈ ಹೊತ್ತಲ್ಲೇ ಉಡಾವಣೆ ದಿನಾಂಕ 1 ದಿನ ಮುಂದಕ್ಕೆ ಹೋಗಿದೆ. ಆದರೆ ಮೊದಲೇ ಇದರ ಬಗ್ಗೆ ಇಸ್ರೋ ಮುನ್ಸೂಚನೆ ನೀಡಿತ್ತು.
ಉಡಾವಣೆಗೆ ವಾತಾವರಣ ಬಹುಮುಖ್ಯ!
ಸಾಮಾನ್ಯವಾಗಿ ಒಂದು ವಿಮಾನ ಹಾರಬೇಕು ಎಂದರೆ ಎಷ್ಟೆಲ್ಲಾ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗುತ್ತದೆ. ಇನ್ನು ಬಾಹ್ಯಾಕಾಶ ನೌಕೆ ಹಾರುವಾಗ ಪರಿಸ್ಥಿತಿ ಹೇಗೆ ಇರಬೇಡ? ನೀವೆ ಯೋಚಿಸಿ. ಈ ಕಾರಣಕ್ಕೆ ಇಸ್ರೋ ಕೇವಲ ಒಂದೇ ದಿನಾಂಕ ಫಿಕ್ಸ್ ಮಾಡಿರಲಿಲ್ಲ. ಅಕಸ್ಮಾತ್ ಹವಾಮಾನ ವೈಪರಿತ್ಯ ಕಾರಣ ಏನಾದರೂ ಏರುಪೇರಾಗಿ ಉಡಾವಣೆ ಸಾಧ್ಯವಾಗದೇ ಇದ್ದರೆ, 6 ದಿನಗಳ ಡೇಟ್ ಬಾಕಿ ಇಟ್ಟುಕೊಂಡಿತ್ತು. ಅಂದರೆ ಜುಲೈ 13ರಿಂದ 19ರ ತನಕ ಡೇಟ್ ಫಿಕ್ಸ್ ಮಾಡಿತ್ತು. ಈಗ ಜುಲೈ 14ರ ಮಧ್ಯಾಹ್ನ 2.35ಕ್ಕೆ 'ಚಂದ್ರಯಾನ -3' ಉಡಾವಣೆಗೆ ಮುಹೂರ್ತ ಫಿಕ್ಸ್ ಆಗಿದೆ.
ಮಾನವನ ಕುತೂಹಲಕ್ಕೆ ಸಿಗುತ್ತಾ ಉತ್ತರ?
ಈ ಬಾರಿ ಚಂದ್ರನ ಮೇಲೆ ನೀರು ಹುಡುಕುವ ಕೆಲಸ ಸೇರಿದಂತೆ, ಸಾಕಷ್ಟು ಅಧ್ಯಯನವನ್ನ ನಡೆಸಲು ಇಸ್ರೋ ವಿಜ್ಞಾನಿಗಳು ಸಜ್ಜಾಗಿದ್ದಾರೆ. ಸಾವಿರಾರು ವರ್ಷದಿಂದಲೂ ಮಾನವನಿಗೆ ಕುತೂಹಲದ ಕೇಂದ್ರಬಿಂದು ಚಂದ್ರ. ಹೀಗಾಗಿ ಚಂದ್ರನ ಮೇಲೆ ಮನುಷ್ಯನಿಗೆ ಸಾಕಷ್ಟು ಸೆಳೆತ ಇದ್ದೇ ಇದೆ. ಇಸ್ರೋ ಆ ಕುತೂಹಲಗಳಿಗೆ ಉತ್ತರ ಹುಡುಕಿ ಚಂದ್ರನತ್ತ ಹೊರಟಿದೆ. ಇನ್ನೇನು 'ಚಂದ್ರಯಾನ -3' ಕೆಲವೇ ದಿನದಲ್ಲಿ ಬಾಹ್ಯಾಕಾಶಕ್ಕೆ ಹಾರಿ, ಚಂದ್ರನ ಮೇಲೆ ರೋವರ್ ಇಳಿಸಲಿದೆ. ಮತ್ತೊಂದು ವಿಶೇಷತೆ ಏನೆಂದರೆ ಚಂದ್ರನ ಮೇಲೆ ನೀರು ಇದೆ ಎಂದಿದ್ದವರು ನಾವು. ಜಗತ್ತಿನಲ್ಲೇ ಮೊದಲ ಬಾರಿಗೆ, 2008ರಲ್ಲಿ ಇಸ್ರೋ ಸಂಸ್ಥೆ ಚಂದ್ರನ ಮೇಲೆ ನೀರು ಪತ್ತೆ ಮಾಡಿತ್ತು.












Click it and Unblock the Notifications