ಓಮಿಕ್ರಾನ್: ದೇಶಾದ್ಯಂತ ಕೋವಿಡ್ ಕಂಟೇನ್ಮೆಂಟ್ ಕಾರ್ಯತಂತ್ರ ಡಿ. 31 ರವರೆಗೆ ವಿಸ್ತರಣೆ
ನವದೆಹಲಿ ನವೆಂಬರ್ 30: ವಿಶ್ವದಾದ್ಯಂತ ಆತಂಕ ಹುಟ್ಟಿಸಿರುವ ಕೊರೊನಾವೈರಸ್ ರೂಪಾಂತರ ಓಮಿಕ್ರಾನ್‌ನ ಅಪಾಯ ಹೆಚ್ಚಿರುವ ಬೆನ್ನಲ್ಲೇ ಅನೇಕ ದೇಶಗಳಲ್ಲಿ ಕಟ್ಟುನಿಟ್ಟಿನ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ. ಮಂಗಳವಾರ ಕೆಲವು ದೇಶಗಳಲ್ಲಿ ಓಮಿಕ್ರಾನ್ ಹರಡಿರುವ ವರದಿಯಾಗುತ್ತಿದ್ದಂತೆ ರಾಷ್ಟ್ರವ್ಯಾಪಿ COVID-19 ಕಂಟೇನ್ಮೆಂಟ್ ಕಾರ್ಯತಂತ್ರವನ್ನು ಡಿಸೆಂಬರ್ 31 ರವರೆಗೆ ವಿಸ್ತರಿಸಲಾಗಿದೆ.
ಗೃಹ ವ್ಯವಹಾರಗಳ ಸಚಿವಾಲಯ (MHA), ಓಮಿಕ್ರಾನ್ ಹೊರಹೊಮ್ಮುವಿಕೆಯ ದೃಷ್ಟಿಯಿಂದ ರಾಷ್ಟ್ರವ್ಯಾಪಿ ಕೋವಿಡ್ ಕಂಟೇನ್ಮೆಂಟ್ ಕಾರ್ಯತಂತ್ರವನ್ನು ಡಿಸೆಂಬರ್ 31 ರವರೆಗೆ ವಿಸ್ತರಿಸಿದೆ. ಜೊತೆಗೆ ಕೊರೊನಾ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ರಾಜ್ಯಗಳಿಗೆ ಸೂಚಿಸಿದೆ. MHA ಆದೇಶದ ಮೂಲಕ "ಕೋವಿಡ್ ಕಂಟೇನ್ಮೆಂಟ್ ಕಾರ್ಯತಂತ್ರವನ್ನು ಡಿಸೆಂಬರ್ 31, 2021 ರವರೆಗೆ ಜಾರಿಯಲ್ಲಿರುತ್ತವೆ" ಎಂದು ಘೋಷಣೆ ಮಾಡಿದೆ.
ಸಂವಹನದಲ್ಲಿ ಕೇಂದ್ರ ಗೃಹ ಕಾರ್ಯದರ್ಶಿ ಅಜಯ್ ಭಲ್ಲಾ ಅವರು, ರಾಜ್ಯಗಳಿಗೆ ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಕೇಂದ್ರ ಆರೋಗ್ಯ ಸಚಿವಾಲಯ ಸೂಚಿಸಿದ ನವೆಂಬರ್ 25 ರ ಸಲಹೆಯನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಕೇಳಿಕೊಂಡರು. ಜೊತೆಗೆ ಎಲ್ಲಾ ಅಂತಾರಾಷ್ಟ್ರೀಯ ಆಗಮನಗಳ ಕಠಿಣ ತಪಾಸಣೆ ಮತ್ತು ಪರೀಕ್ಷೆಗೆ ಶಿಫಾರಸು ಮಾಡುವಂತೆ ಸೂಚಸಿದ್ದಾರೆ.

ಆರೋಗ್ಯ ಸಚಿವಾಲಯದ ಮಾರ್ಗಸೂಚಿಗಳ ಪ್ರಕಾರ ಅಂತಾರಾಷ್ಟ್ರೀಯ ಪ್ರಯಾಣಿಕರ ಸಂಪರ್ಕಗಳನ್ನು ಟ್ರ್ಯಾಕ್ ಮಾಡಬೇಕು ಮತ್ತು ಪರೀಕ್ಷಿಸಬೇಕು ಹಾಗೂ ಭಾರತೀಯ SARS-CoV-2 ಜೀನೋಮಿಕ್ಸ್ ಕನ್ಸೋರ್ಟಿಯಂ ಪ್ರಕಾರ, ಪಾಸಿಟಿವ್ ಆಗಿರುವ ಪ್ರಯಾಣಿಕರ ಮಾದರಿಗಳನ್ನು ತಕ್ಷಣವೇ ಗೊತ್ತುಪಡಿಸಿದ ಜೀನೋಮ್ ಸೀಕ್ವೆನ್ಸಿಂಗ್ ಪ್ರಯೋಗಾಲಯಗಳಿಗೆ ಕಳುಹಿಸಬೇಕು ಎಂದು ಭಲ್ಲಾ ಹೇಳಿದರು.

ಕೇಂದ್ರ ಆರೋಗ್ಯ ಕಾರ್ಯದರ್ಶಿ ರಾಜೇಶ್ ಭೂಷಣ್ ಅವರು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳೊಂದಿಗೆ ಪರಿಶೀಲನಾ ಸಭೆ ನಡೆಸಿದರು ಮತ್ತು ಪ್ರಕರಣಗಳ ಆರಂಭಿಕ ಗುರುತಿಸುವಿಕೆ ಮತ್ತು ನಿರ್ವಹಣೆಗಾಗಿ ಪರೀಕ್ಷೆಯನ್ನು ಹೆಚ್ಚಿಸಲು ಸಲಹೆ ನೀಡಿದರು. ಹೊಸ ರೂಪಾಂತರವು RT-PCR ಮತ್ತು RAT ಪರೀಕ್ಷೆಗಳಿಂದ ತಪ್ಪಿಸಿಕೊಳ್ಳುವುದಿಲ್ಲ ಎಂದು ಹೇಳಿದ ಅವರು, ಮೂಲಸೌಕರ್ಯ ಮತ್ತು ಮೇಲ್ವಿಚಾರಣೆ ಹಾಗೂ ಪ್ರತ್ಯೇಕತೆಯನ್ನು ಖಚಿತಪಡಿಸಿಕೊಳ್ಳಲು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳನ್ನು ಕೇಳಿದರು.
ದಕ್ಷಿಣ ಆಫ್ರಿಕಾ ಮತ್ತು ಬೋಟ್ಸ್ವಾನಾದಂತಹ ದಕ್ಷಿಣ ಆಫ್ರಿಕಾದ ದೇಶಗಳಲ್ಲಿ ಮೊದಲು ಪತ್ತೆಯಾದ ಓಮಿಕ್ರಾನ್ ರೂಪಾಂತರವು ಈಗ ಪ್ರಪಂಚದ ಹಲವಾರು ಭಾಗಗಳಿಗೆ ಹರಡಿದೆ. ಇದರ ಪರಿಣಾಮವಾಗಿ ದೇಶಗಳು ಹೊಸ ಪ್ರಯಾಣ ನಿರ್ಬಂಧ ಹೇರಲು ಮತ್ತು ತಡೆಗಟ್ಟುವ ಕ್ರಮಗಳನ್ನು ತೆಗೆದುಕೊಳ್ಳುತ್ತಿವೆ. ಒಮಿಕ್ರಾನ್‌ನ ಸೋಂಕಿತ ಪ್ರಕರಣಗಳು ಹೊಸ ದೇಶ ಮತ್ತು ಪ್ರದೇಶಗಳಿಗೆ ಹರಡಿದ ದಿನದಂದು ವಿಶ್ವ ಆರೋಗ್ಯ ಸಂಸ್ಥೆಯು ಈ ಎಚ್ಚರಿಕೆಯನ್ನು ನೀಡಿದೆ. ದಕ್ಷಿಣ ಆಫ್ರಿಕಾದ ಹೊರತಾಗಿ ಸ್ಕಾಟ್ಲೆಂಡ್ ಆರು ಪ್ರಕರಣಗಳನ್ನು ವರದಿ ಮಾಡಿದರೆ, ಪೋರ್ಚುಗಲ್ 13 ಪ್ರಕರಣಗಳನ್ನು ವರದಿ ಮಾಡಿದೆ. ಕೆನಡಾದಲ್ಲಿ ಎರಡು ಪ್ರಕರಣಗಳು ಪತ್ತೆಯಾಗಿದ್ದರೆ, ಆಸ್ಟ್ರೇಲಿಯಾದಲ್ಲಿ ಈ ಹಿಂದೆ ಪತ್ತೆಯಾದ ಎರಡರ ಜೊತೆಗೆ ಇನ್ನೂ ಎರಡು ಪ್ರಕರಣಗಳು ವರದಿಯಾಗಿವೆ. ಒಮಿಕ್ರಾನ್ ರೂಪಾಂತರ ಸೋಂಕುಗಳ ತಗುಲಿದವರ ಸಂಖ್ಯೆಯು ಈಗ 150ಕ್ಕೆ ಏರಿಕೆಯಾಗಿದ್ದು, ಕನಿಷ್ಠ 15 ದೇಶಗಳು ಅಥವಾ ಪ್ರದೇಶಗಳಲ್ಲಿ ಇದುವರೆಗೆ ಈ ರೂಪಾಂತರ ಪತ್ತೆಯಾಗಿದೆ.
Recommended Video
ಕೇಂದ್ರ ಆರೋಗ್ಯ ಸಚಿವಾಲಯದ ಅಂಕಿಅಂಶಗಳ ಪ್ರಕಾರ ಭಾರತವು 6,990 ಹೊಸ ಕೊರೊನವೈರಸ್ ಸೋಂಕನ್ನು ದಾಖಲಿಸಿದೆ. ಇದು 551 ದಿನಗಳಲ್ಲಿ ಅತ್ಯಂತ ಕಡಿಮೆಯಾದ ದಾಖಲೆಯಾಗಿದೆ. ಈವರೆಗೆ ದೇಶದಲ್ಲಿ ಒಟ್ಟು COVID-19 ಪ್ರಕರಣಗಳ ಸಂಖ್ಯೆ 3,45,87,822 ರಷ್ಟಾಗಿದ್ದು ಸಕ್ರಿಯ ಪ್ರಕರಣಗಳ ಸಂಖ್ಯೆ 1,00,543 ಕ್ಕೆ ಇಳಿಕೆಯಾಗಿದೆ. ಅಂಕಿಅಂಶಗಳ ಪ್ರಕಾರ 190 ಹೊಸ ಸಾವುಗಳೊಂದಿಗೆ ಸಾವಿನ ಸಂಖ್ಯೆ 4,68,980 ಕ್ಕೆ ಏರಿದೆ.












Click it and Unblock the Notifications