Cyber Fraud: 6 ಲಕ್ಷ ಸೈಬರ್ ವಂಚನೆ ತಡೆದು ಜನರ 1,800 ಕೋಟಿ ಉಳಿಸಿದ ಕೇಂದ್ರ, ಹೇಗೆ ?
ಕೇಂದ್ರ ಸರ್ಕಾರವು ಭಾರತದಲ್ಲಿ ಸೈಬರ್ ವಂಚನೆಯನ್ನು ತಡೆಯುವಲ್ಲಿ ಹೊಸ ದಾಖಲೆ ಸೃಷ್ಟಿ ಮಾಡಿದೆ. ದೇಶದಲ್ಲಿ ಇತ್ತೀಚಿನ ದಿನಗಳಲ್ಲಿ ವಿಪರೀತ ಸೈಬರ್ ಪ್ರಕರಣಗಳು ವರದಿಯಾಗುತ್ತಿವೆ. ಆನ್‌ಲೈನ್ ಫ್ರಾಡ್ ಹಾಗೂ ಸೈಬರ್ ವಂಚನೆ ತಡೆಯುವುದಕ್ಕೆ ಸೈಬರ್ ಶಂಕಿತರ ರಿಜಿಸ್ಟ್ರೇಷನ್ ಅನ್ನು ಕೇಂದ್ರ ಸರ್ಕಾರ ಪರಿಚಯಿಸಿತ್ತು.
ಅಂದರೆ ಸೈಬರ್ ವಂಚನೆ ಮಾಡುತ್ತಿದ್ದಾರೆ ಎನ್ನುವ ಅನುಮಾನ ಅಥವಾ ಸೈಬರ್ ವಂಚನೆಯ ಬಗ್ಗೆ ಅನುಮಾನ ಬರುವ ಮೆಸೇಜ್ ಅಥವಾ ದೂರವಾಣಿ ಕರೆಗಳನ್ನು ರಾಷ್ಟ್ರೀಯ ಸೈಬರ್ ಅಪರಾಧ ವರದಿ ಮಾಡುವ ಪೋರ್ಟಲ್ (NCRP)ನಲ್ಲಿ ವರದಿ ಮಾಡಬಹುದಾಗಿದೆ. ಈ ರೀತಿ ಶಂಕಿತರ ನೋಂದಾಣಿ ಪ್ರಾರಂಭವಾದ ಮೇಲೆ ಜನರ ಕೋಟ್ಯಾಂತರ ರೂಪಾಯಿ ಉಳಿತಾಯವಾಗಿದೆ ಎಂದು ಕೇಂದ್ರ ಗೃಹ ಸಚಿವಾಲಯದ ಮೂಲಗಳು ಹೇಳಿರುವುದಾಗಿ ದಿ ಇಂಡಿಯನ್ ಎಕ್ಸ್‌ಪ್ರೆಸ್ ರಿಪೋರ್ಟ್ ಮಾಡಿದೆ.

ಶಂಕಿತ ಸೈಬರ್ ಫ್ರಾಡ್‌ಗಳ ನೋಂದಾವಣೆ ಪ್ರಾರಂಭವಾದ ಮೂರು ತಿಂಗಳಲ್ಲೇ ಕೇಂದ್ರ ಸರ್ಕಾರವು ಆರು ಲಕ್ಷ ವಂಚನೆಯ ವಹಿವಾಟುಗಳಿಗೆ ಕಡಿವಾಣ ಹಾಕಿದೆ ಅಲ್ಲದೆ ಬರೋಬ್ಬರಿ 1,800 ಕೋಟಿ ರೂ.ಗಳನ್ನು ವಂಚಿತರ ಕೈಗೆ ಸೇರದಂತೆ ಮಾಡಿದೆ ಎಂದು ವರದಿಯಾಗಿದೆ.
ರಾಷ್ಟ್ರೀಯ ಸೈಬರ್ ಅಪರಾಧ ವರದಿ ಮಾಡುವ ಪೋರ್ಟಲ್ (NCRP) ಆಧರಿಸಿ ರಚಿಸಲಾದ ನೋಂದಾಣೆ ಪ್ರಕ್ರಿಯೆಯಿಂದ ಸೈಬರ್ ವಂಚನೆಗೆ ಕಡಿವಾಣ ಹಾಕುವುದಕ್ಕೆ ಸಾಧ್ಯವಾಗಿದೆ. ಆರ್ಥಿಕ ವಂಚನೆ ಹಾಗೂ ವಿವಿಧ ಸೈಬರ್ ಅಪರಾಧಗಳಿಗೆ ಸಂಬಂಧಿಸಿದ 1.4 ಮಿಲಿಯನ್ ಸೈಬರ್ ಅಪರಾಧಿಗಳ ಡೇಟಾವನ್ನು ಕೇಂದ್ರ ಸರ್ಕಾರ ಸಂಗ್ರಹಿಸಿದೆ ಎಂದು ಹೇಳಲಾಗಿದೆ.
ಆನ್‌ಲೈನ್ ಶಂಕಿತ ನೋಂದಾವಣೆಯನ್ನು ಭಾರತೀಯ ಸೈಬರ್ ಅಪರಾಧ ಸಮನ್ವಯ ಕೇಂದ್ರ (I4C) ಅಭಿವೃದ್ಧಿಪಡಿಸಿದೆ. ಇದನ್ನು 2024ನೇ ಸಾಲಿನ ಸೆಪ್ಟೆಂಬರ್ 10ಕ್ಕೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಪ್ರಾರಂಭಿಸಿದ್ದರು. ಇನ್ನು ಇದರ ಮೂಲಕ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಹಾಗೂ ಕೇಂದ್ರ ತನಿಖಾ ಮತ್ತು ಗುಪ್ತಚರ ಸಂಸ್ಥೆಗಳು ಪರಿಶೀಲನೆ ನಡೆಸುವುದಕ್ಕೆ ಸಾಧ್ಯವಿದೆ.
ಇನ್ನು ಮುಖ್ಯವಾಗಿ ದೇಶದ ಬ್ಯಾಂಕ್‌ಗಳು ಹಾಗೂ ಹಣಕಾಸು ಸಂಸ್ಥೆಗಳ ಸಹಯೋಗದೊಂದಿಗೆ ಈ ಅಭಿಯಾನವನ್ನು ಪ್ರಾರಂಭಿಸಲಾಗಿದ್ದು. ಸೈಬರ್ ವಂಚನೆ ಮಾಡುವ ಶಂಕಿತರ ಕುರಿತು ಏಕೀಕೃತ ಡೇಟಾವನ್ನು ಈ ವ್ಯವಸ್ಥೆ ಹೊಂದಿದೆ.
ದೇಶದಲ್ಲಿ ಹಣಕಾಸು ವ್ಯವಸ್ಥೆಯಲ್ಲಿ ನಡೆಯುತ್ತಿರುವ ಬೃಹತ್ ಪ್ರಮಾಣದ ಅಪಾಯವನ್ನು ತಪ್ಪಿಸುವ ಉದ್ದೇಶದಿಂದ ರಾಷ್ಟ್ರೀಯ ಸೈಬರ್ ಅಪರಾಧ ವರದಿ ಪೋರ್ಟಲ್ (NCRP) ನಿಂದ ಡೇಟಾವನ್ನು ಬಳಸಲಾಗುತ್ತಿದೆ. ನೋಂದಣಿಯಿಂದ ಸೈಬರ್ ಅಪರಾಧಿಗಳು ಮಾಡಬಹುದಾದ ಕೃತ್ಯಗಳಿಗೆ ಕಡಿವಾಣ ಹಾಕುವುದಕ್ಕೆ ಸಹಕಾರಿಯಾಗಿದೆ ಎಂದು ಹೇಳಲಾಗಿದೆ.
ಇನ್ನು ಈ ರೀತಿ ಶಂಕಿತ ನೋಂದಾವಣೆಯ ಸಹಾಯದಿಂದಾಗಿ ಭಾರೀ ಅನಾಹುತ ತಪ್ಪಿದೆ. ಅಂದಾಜು 6.10 ಲಕ್ಷ ವಂಚನೆಯ ವಹಿವಾಟುಗಳಿಗೆ ಕಡಿವಾಣ ಬಿದ್ದಿದೆ. ಇದರಿಂದಾಗಿ ಡಿಸೆಂಬರ್ 1 ರವರೆಗೆ ಸುಮಾರು 1,800 ಕೋಟಿ ರೂ.ಗಳನ್ನು ಉಳಿಸಲಾಗಿದೆ ಎನ್ನುವುದು ವಿಶೇಷವಾಗಿದೆ.
ಕೇಂದ್ರ ಸರ್ಕಾರದ ಹೊಸ ಪ್ಲಾನ್‌ಗೆ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ. ಇನ್ನು ಮೊಬೈಲ್ ಪೋನ್‌ಗಳಲ್ಲಿ ಜನ ಕರೆ ಮಾಡುವಾಗಲೂ ಸೈಬರ್ ಫ್ರಾಡ್‌ನ ಬಗ್ಗೆ ಎಚ್ಚರಿಕೆಯ ಸಂದೇಶಗಳನ್ನು ನೀಡಲಾಗುತ್ತಿದೆ.












Click it and Unblock the Notifications