India: ಲ್ಯಾಪ್‌ಟಾಪ್, ಟ್ಯಾಬ್ಲೆಟ್, ಕಂಪ್ಯೂಟರ್ ಆಮದಿಗೆ ಕೇಂದ್ರ ನಿಷೇಧ: ಕಾರಣ ತಿಳಿಯಿರಿ
ಬೆಂಗಳೂರು, ಆಗಸ್ಟ್ 03: ಮೇಕ್ ಇನ್ ಇಂಡಿಯಾಗೆ (Make in India) ಆದ್ಯತೆ ನೀಡುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರವು ಡಿಜಿಟಲ್ ಖರೀದಿದಾರರು ಲ್ಯಾಪ್‌ಟಾಪ್, ಟ್ಯಾಬ್ಲೆಟ್, ಆಲ್-ಇನ್-ಒನ್ ಪರ್ಸನಲ್ ಕಂಪ್ಯೂಟರ್‌ಗಳು ಮತ್ತು ಅಲ್ಟ್ರಾ-ಸ್ಮಾಲ್ ಕಂಪ್ಯೂಟರ್ ಮತ್ತು ಸರ್ವರ್‌ಗಳನ್ನು ಆಮದು ಮಾಡಿಕೊಳ್ಳಲು ನಿರ್ಬಂಧ ವಿಧಿಸಿದೆ. ಈ ಕುರಿತು ಆದೇಶ ತಕ್ಷಣದಿಂದ ಜಾರಿಗೆ ಬರುವಂತೆ ಗುರುವಾರ ಆದೇಶ ಹೊರಡಿಸಲಾಗಿದೆ.
ಈ ಕುರಿತು ವಿದೇಶ ವ್ಯವಹಾರಗಳ ಮಹಾನಿರ್ದೇಶಕರು ಪ್ರಕಟಣೆ ಹೊರಡಿಸಿದ್ದಾರೆ. ಸ್ಥಳೀಯ ಉತ್ಪಾದನೆಗೆ ಆದ್ಯತೆ ನೀಡುವ ದೃಷ್ಟಿಯಿಂದ ನಿರ್ಬಂಧ ವಿಧಿಸಿರುವ ಕೇಂದ್ರ ಸರ್ಕಾರ ಲ್ಯಾಪ್‌ಟಾಪ್, ಟ್ಯಾಬ್ಲೆಟ್, ಕಂಪ್ಯೂಟರ್ ಖರೀದಿದಾರರು ಅನುಮತಿ ಪಡೆಯುವುದನ್ನು ಕಡ್ಡಾಯಗೊಳಿಸಿದೆ.

ಸ್ಥಳೀಯ ಉತ್ಪಾದನೆಯನ್ನು ಉತ್ತೇಜಿಸುವ ಉದ್ದೇಶದಿಂದ ಕೇಂದ್ರವು ಈ ನಿರ್ಧಾರ ಕೈಗೊಂಡಿದೆ. ಒಂದು ವೇಳೆ ನಿರ್ಬಂಧಿತ ಆಮದುಗಳನ್ನು ಪರವಾನಗಿ ಇಲ್ಲದೇ ಆಮದು ಮಾಡಿಕೊಂಡರೆ ಕ್ರಮ ಜರುಗಿಸಲಾಗುವುದು ಎಂದು ತಿಳಿಸಿದೆ. ಸಕಾರಣವಿದ್ದು, ಪರವಾನಗಿ ಇದ್ದರೆ ಮಾತ್ರ 'ಎಚ್‌ಎಸ್‌ಎನ್ 8741' ವ್ಯಾಪ್ತಿಯಲ್ಲಿ ಲ್ಯಾಪ್‌ಟಾಪ್, ಟ್ಯಾಬ್ಲೆಟ್, ಪರ್ಸನಲ್ ಕಂಪ್ಯೂಟರ್ ಹಾಗೂ ನಿಷೇಧಿತ ಡಿಜಿಟಲ್ ವಸ್ತುಗಳ ಆಮದಿಗೆ ಮಾತ್ರ ಅನುಮತಿ ನೀಡಲಾಗುತ್ತದೆ ಎಂದು ತಿಳಿಸಿದೆ.
ಅನುಮತಿ ಮೇರೆಗೆ ಆಮದಿಗೆ ಅವಕಾಶ
ಒಂದು ವೇಳೆ ಸಂಶೋಧನೆ, ಅಭಿವೃದ್ಧಿಯಂತಹ ಸಕಾರರಣ ನೀಡಿ ಆಮದು ಮಾಡಿಕೊಂಡ ಡಿಜಿಟಲ್ ವಸ್ತುಗಳು ಅದೇ ಕಾರಣಕ್ಕೆ ಮಾತ್ರ ಬಳಸದೇ ಬೇರೆ ಉದ್ದೇಶಕ್ಕೆ ಬಳಸುವುದು, ಇಲ್ಲವೇ ಮಾರಾಟ ಮಾಡುವುದನ್ನು ಸಹ ಕೇಂದ್ರ ನಿಷೇಧಿಸಿದೆ. ತಮ್ಮ ಉದ್ದೇಶ ಈಡೇರಿದ ನಂತರ ಅನುಮತಿ ಮೇರೆಗೆ ಆಮದು ಮಾಡಿಕೊಂಡ ಕಂಪ್ಯೂಟರ್, ಲ್ಯಾಪ್‌ಟಾಪ್, ಲ್ಯಾಬ್ಲೆಟ್‌ಗಳನ್ನು ನಾಶಪಡಿಸಬೇಕು ಎಂದು ಸೂಚಿಸಿದೆ.

ಎಲೆಕ್ಟ್ರಾನಿಕ್ಸ್ ಉದ್ಯಮ ಸಂಸ್ಥೆಯ ತಯಾರಕರ ಮಾಹಿತಿ ತಂತ್ರಜ್ಞಾನದ ಸಂಘದ ಮಾಜಿ ಮಹಾನಿರ್ದೇಶಕ ಅಲಿ ಅಖ್ತರ್ ಜಾಫ್ರಿ ಅವರು ಈ ಬಗ್ಗೆ ಮಾತನಾಡಿದ್ದು,
ಭಾರತದಲ್ಲಿಯೇ ಸ್ವದೇಶಿಯವಾಗಿ ಈ ಎಲೆಕ್ಟ್ರಾನಿಕ್ಸ್ ವಸ್ತುಗಳ ತಯಾರಿಕೆಯ ನಿರ್ಧಾರ ಸರಿಯಾಗಿದೆ. ಮೇಕ್ ಇನ್ ಇಂಡಿಯಾದ ಭಾಗವಾಗಿ ಲ್ಯಾಪ್ ಟಾಪ್, ಟ್ಯಾಬ್ಲೆಟ್ ಇನ್ನಿತರ ಪರ್ಸನಲ್ ಕಂಪ್ಯೂಟರ್ ಗಳು ಭವಿಷ್ಯದಲ್ಲಿ ಸ್ವದೇಶದಲ್ಳೇ ತಯಾರಾಗುವ ಉಪಕ್ರಮಕ್ಕೆ ಎಲೆಕ್ಟ್ರಾನಿಕ್ಸ್ ಉದ್ಯಮ ಸಂಸ್ಥೆಯ ತಯಾರಕರ ಮಾಹಿತಿ ತಂತ್ರಜ್ಞಾನದ ಸಂಘದ ಮುಖ್ಯಸ್ಥರು ಸಂತಸ ವ್ಯಕ್ತಪಡಿಸಿದ್ದಾರೆ.
ಎಲೆಕ್ಟ್ರಾನಿಕ್ಸ್ ಗುತ್ತಿಗೆ ತಯಾರಕರ ಷೇರು ಏರಿಕೆ
ಕೇಂದ್ರ ಸರ್ಕಾರದ ಈ ನಿರ್ಬಂಧ ಘೋಷಣೆ ಬಳಿಕ ಸ್ಥಳೀಯ ಎಲೆಕ್ಟ್ರಾನಿಕ್ಸ್ ಗುತ್ತಿಗೆ ತಯಾರಕರ ಷೇರು ಪ್ರಮಾಣದಲ್ಲಿ ಏರಿಕೆ ಆಗಿದೆ. ಅಂಬರ್ ಎಂಟರ್‌ಪ್ರೈಸಸ್ ಇಂಡಿಯಾ ಲಿಮಿಟೆಡ್ ಶೇಕಡಾ 3.3, ಡಿಕ್ಸನ್ ಟೆಕ್ನಾಲಜೀಸ್ ಇಂಡಿಯಾ ಕಂಪನಿ ಷೇರು ಶೇಕಡಾ ಶೇಕಡಾ 5.5 ಹಾಗೂ ಪಿಜಿ ಎಲೆಕ್ಟ್ರೋಪ್ಲಾಸ್ಟ್ ಕಂಪನಿ ಶೇಕಡಾ 2.8ರಷ್ಟು ಏರಿಕೆ ಆಗಿದೆ.
ಭಾರತದಲ್ಲಿಐಏ ಲ್ಯಾಪ್‌ಟಾಪ್, ಟ್ಯಾಬ್ಲೆಟ್ ಹಾಗೂ ಇನ್ನಿತರ ಎಲೆಕ್ಟ್ರಾನಿಕ್ ವಸ್ತುಗಳನ್ನು ತಯಾರಕರನ್ನು ದಕ್ಷಿಣ ಏಷ್ಯಾದ ರಾಷ್ಟ್ರಕ್ಕೆ ಸೆಳೆಯಲು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ 170 ಶತಕೋಟಿ ರೂ. ($2.1 ಶತಕೋಟಿ) ಆರ್ಥಿಕ ಪ್ರೋತ್ಸಾಹ ನೀಡಲಿದೆ. ಮೇಕ್ ಇನ್ ಇಂಡಿಯಾ ಯೋಜನೆಯಡಿ ಎಲೆಕ್ಟ್ರಾನಿಕ್ ವಸ್ತುಗಳಲ್ಲಿ ಚೀನಾ ಮೀರಿ ಬೆಳೆಯಬೇಕೆಂಬ ಗುರಿ ಸರ್ಕಾರ ಹೊಂದಿದೆ.
ಸದ್ಯ ಭಾರತದ ಮಾರುಕಟ್ಟೆಗಳಲ್ಲಿ ಲೆನೊವೊ, ಡೆಲ್ಲ, ಏಸರ್, ಸ್ಯಾಮ್‌ಸಂಗ್, ಎಲ್‌ಜಿ, ಆಪಲ್ ಸೇರಿದಂತೆ ಅನೇಕ ಚೀನಾ ಮೂಲದ ಕಂಪನಿಗಳ ಉತ್ಪನ್ನಗಳೇ ಮಾರಾಟವಾಗುತ್ತಿವೆ. ಭವಿಷ್ಯದಲ್ಲಿ ಇವುಗಳ ಪ್ರಮಾಣ ತಗ್ಗಲಿದೆ.












Click it and Unblock the Notifications