ಅಯ್ಯಪ್ಪನ ಭಕ್ತರಿಗೆ ಶುಭಸುದ್ದಿ, ವಿಮಾನಗಳಲ್ಲಿ ಇರುಮುಡಿ ಸಾಗಿಸಲು ಅನುಮತಿ
ಶಬರಿಮಲೆ ಅಯ್ಯಪ್ಪಸ್ವಾಮಿ ಭಕ್ತರಿಗೆ ಕೇಂದ್ರ ಸರ್ಕಾರವು ಸಿಹಿಸುದ್ದಿ ನೀಡಿದೆ. ಶಬರಿಮಲೆ ಯಾತ್ರಾರ್ಥಿಗಳಿಗೆ ವಿಮಾನದ ಕ್ಯಾಬಿನ್‌ನಲ್ಲಿ ಇರುಮುಡಿ ಕೊಂಡೊಯ್ಯಲು ಅನುಮತಿ ನೀಡಿದೆ. ಈ ಬಗ್ಗೆ ನಾಗರಿಕ ವಿಮಾನಯಾನ ಸಚಿವ ಕೆ.ರಾಮಮೋಹನ್ ನಾಯ್ಡು ಮಾಹಿತಿ ನೀಡಿದ್ದಾರೆ.
ಕೇರಳದ ಪ್ರಸಿದ್ಧ ತೀರ್ಥಕ್ಷೇತ್ರ ಶಬರಿಮಲೆ ದೇವಸ್ಥಾನಕ್ಕೆ ತೆರಳುವ ಭಕ್ತಾದಿಗಳು ಇನ್ನು ಮುಂದೆ ವಿಮಾನಗಳ ಕ್ಯಾಬಿನ್ ಬ್ಯಾಗ್‌ನಲ್ಲಿ ತಮ್ಮ ಇರುಮುಡಿಯನ್ನು ಕೊಂಡೊಯ್ಯಬಹುದು ಎಂದು ಹೇಳಿದ್ದಾರೆ.

ಶಬರಿಮಲೆಗೆ ನವೆಂಬರ್‌ನಿಂದ ಜನವರಿ ತಿಂಗಳಲ್ಲಿ ಯಾತ್ರಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಅಯ್ಯಪ್ಪನ ದರ್ಶನಕ್ಕೆ ತೆರಳುತ್ತಾರೆ. ಹಾಗಾಗಿ 2025ರ ಜನವರಿ 20ರವರೆಗೆ ಯಾತ್ರಾರ್ಥಿಗಳು ವಿಮಾನಗಳ ಕ್ಯಾಬಿನ್ ಬ್ಯಾಗ್‌ನಲ್ಲಿ ತೆಂಗಿನಕಾಯಿಯನ್ನು (ಇರುಮುಡಿ) ತೆಗೆದುಕೊಂಡು ಪ್ರಯಾಣಿಸಬಹುದು. ಈ ಸೀಮಿತ ಅವಧಿಯಲ್ಲಿ ಮಾತ್ರ ಇರುಮುಡಿ ಕೊಂಡೊಯ್ಯಲು ಅವಕಾಶ ಕಲ್ಪಿಸಿದೆ.
ಸದ್ಯ ವಿಮಾನಗಳ ಕ್ಯಾಬಿನ್ ಬ್ಯಾಗ್‌ನಲ್ಲಿ ತೆಂಗಿನಕಾಯಿ (ಇರುಮುಡಿ) ಕೊಂಡೊಯ್ಯಲು ಯಾವುದೇ ಅನುಮತಿ ಇರಲಿಲ್ಲ. ಈ ಬಾರಿ ಯಾತ್ರಾರ್ಥಿಗಳ ಅನುಕೂಲಕ್ಕಾಗಿ ಶಬರಿಮಲೆಗೆ ಹೋಗುವವರಿಗೆ ಈ ವ್ಯವಸ್ಥೆ ಕಲ್ಪಿಸಲಾಗಿದೆ. ಮಂಡಲಂ-ಮಕರವಿಳಕ್ಕು ತೀರ್ಥಯಾತ್ರೆಯ ಅವಧಿಯಲ್ಲಿ ಇರುಮುಡಿ ಕಟ್ಟಿರುವ ತೆಂಗಿನಕಾಯಿಯನ್ನು ಸಾಗಿಸಲು ವಿನಾಯಿತಿ ನೀಡಲಾಗಿದೆ ಎಂದು ನಾಗರಿಕ ವಿಮಾನಯಾನ ಸಚಿವ ಕೆ.ರಾಮಮೋಹನ್ ನಾಯ್ಡು ಹೇಳಿದ್ದಾರೆ.
ಇನ್ನು ಈ ಆದೇಶವು ಜನವರಿ 20ರವರೆಗೆ ಮಾತ್ರವೇ ಮಾನ್ಯವಾಗಿರುತ್ತದೆ. ಇರುಮುಡಿಯನ್ನು ವಿಮಾನಗಳಲ್ಲಿ ಸಾಗಿಸುವ ಮುನ್ನ ಎಕ್ಸ್-ರೇ, ಇಟಿಡಿ (ಎಕ್ಸ್ಪ್ಲೋಸಿವ್ ಟ್ರೇಸ್ ಡಿಟೆಕ್ಟರ್) ಹಾಗೂ ಭೌತಿಕ ತಪಾಸಣೆ ಸೇರಿದಂತೆ ಭದ್ರತಾ ತಪಾಸಣೆಗಳ ನಂತರ ವಿಮಾನದಲ್ಲಿ ಸಾಗಾಟಕ್ಕೆ ಅನುವು ಮಾಡಿಕೊಡಲಾಗುವುದು ಎಂದಿದ್ದಾರೆ.

ಈ ಬಗ್ಗೆ ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಸಂತಸ ವ್ಯಕ್ತಪಡಿಸಿದ್ದಾರೆ. ಶಬರಿಮಲೆ ಅಯ್ಯಪ್ಪ ಸ್ವಾಮಿಯ ದರ್ಶನಕ್ಕೆ ತೆರಳುವ ವ್ರತದಾರಿ ಭಕ್ತರಿಗೆ ವಿಮಾನಗಳ ಕ್ಯಾಬಿನ್‌ನಲ್ಲಿ 'ಇರುಮುಡಿ' ಕೊಂಡೊಯ್ಯಲು ಹೆಮ್ಮೆಯ ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದ ಕೇಂದ್ರ ಸರ್ಕಾರವು ಅವಕಾಶ ಕಲ್ಪಿಸುವ ಮೂಲಕ ಮಹತ್ವದ ನಿರ್ಧಾರ ಕೈಗೊಂಡಿದೆ ಎಂದಿದ್ದಾರೆ.
ದೇಶದ ಕೋಟ್ಯಂತರ ಭಕ್ತರು ಇನ್ನುಮುಂದೆ ವಿಮಾನ ಪ್ರಯಾಣದ ಮೂಲಕವು ವೃತಾಚರಣೆಗಳನ್ನು ಸುಸೂತ್ರವಾಗಿ ಆಚರಿಸುವಂತಹ ಮಹತ್ವದ ನಿರ್ಧಾರ ಧಾರ್ಮಿಕ ಪರಂಪರೆಯ ಶ್ರೇಷ್ಠತೆ ಉಳಿಸಿ, ಬೆಳೆಸುವ ನಿಟ್ಟಿನಲ್ಲಿ ಮೋದಿ ಸರ್ಕಾರಕ್ಕಿರುವ ಬದ್ಧತೆಯನ್ನು ಸಾಕ್ಷೀಕರಿಸುತ್ತಿದೆ ಎಂದಿದ್ದಾರೆ.
ಹಿಂದೂಗಳ ಪವಿತ್ರ ಸ್ಥಳ ಶಬರಿಮಲೆ ಅಯ್ಯಪ್ಪನ ದರುಶನಕ್ಕೆ ತೆರಳುವ ಮಾಲಾಧಾರಿಗಾಳು ವಿಮಾನದಲ್ಲಿ "ಇರುಮುಡಿ" ಕೊಂಡೊಯ್ಯಲು ಅನುಮತಿ ನೀಡಿದ್ದು, ಕಠಿಣ ವ್ರತದ ಮೂಲಕ ಅಯ್ಯಪ್ಪನ ದರ್ಶನಕ್ಕಾಗಿ ತೆರಳುವ ಮಾಲಾಧಾರಿ ಸ್ವಾಮಿಗಳ ಬಹುಬೇಡಿಕೆ ಈಡೇರಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಕೂಡ ಹೇಳಿದ್ದಾರೆ.

ಬ್ಯೂರೋ ಆಫ್ ಸಿವಿಲ್ ಏವಿಯೇಷನ್ ಸೆಕ್ಯುರಿಟಿಯು ಈ ನಿಗದಿತ ಅವಧಿಯಲ್ಲಿ ಶಬರಿಮಲೆ ಯಾತ್ರಿಕರು ತಮ್ಮ ಕ್ಯಾಬಿನ್‌ನಲ್ಲಿ ಈ ಇರುಮುಡಿ ತೆಂಗಿನಕಾಯಿಯನ್ನು ಸಾಗಿಸಲು ತಾತ್ಕಾಲಿಕವಾಗಿಯಷ್ಟೇ ಅನುಮತಿ ನೀಡಿದೆ. ಆದರೆ ವಿಮಾನಯಾನದ ಸುರಕ್ಷತಾ ನಿಯಮಗಳ ಪ್ರಕಾರ ಕ್ಯಾಬಿನ್‌ಗಳಲ್ಲಿ ತೆಂಗಿನಕಾಯಿ ಸೇರಿದಂತೆ ಇತರೆ ವಸ್ತುಗಳನ್ನು ಕೊಂಡೊಯ್ಯುವುದನ್ನು ನಿಷೇಧಿಸಲಾಗಿದೆ.












Click it and Unblock the Notifications