CBSE Class 10 Maths: ಸಂಪೂರ್ಣಪರೀಕ್ಷಾ ಮಾದರಿ ಮತ್ತು ಅಂಕಗಳ ಹಂಚಿಕೆಯ ಮಾರ್ಗದರ್ಶಿ ಇಲ್ಲಿದೆ
ಕೇಂದ್ರೀಯ ಪ್ರೌಢಶಿಕ್ಷಣ ಮಂಡಳಿಯು (CBSE) 2026ರ ಸಾಲಿನ 10ನೇ ತರಗತಿಯ ಬೋರ್ಡ್ ಪರೀಕ್ಷೆಗಳಿಗೆ ಭರದ ಸಿದ್ಧತೆ ನಡೆಸುತ್ತಿದ್ದು, ವಿದ್ಯಾರ್ಥಿಗಳ ಪಾಲಿಗೆ ಅತ್ಯಂತ ನಿರ್ಣಾಯಕವಾಗಿರುವ ಗಣಿತ ಪರೀಕ್ಷೆಯು ಫೆಬ್ರವರಿ 17, 2026 ರಂದು ನಡೆಯಲಿದೆ. ಗಣಿತ ವಿಷಯವು ವಿದ್ಯಾರ್ಥಿಗಳ ಒಟ್ಟಾರೆ ಬೋರ್ಡ್ ಪರೀಕ್ಷೆಯ ಶೇಕಡಾವಾರು ಅಂಕಗಳನ್ನು ಹೆಚ್ಚಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಹೀಗಾಗಿ, ಪರೀಕ್ಷೆಯಲ್ಲಿ ಅತ್ಯುನ್ನತ ಶ್ರೇಣಿ ಗಳಿಸಲು ನೆರವಾಗುವಂತೆ ಗಣಿತ ವಿಷಯದ ಪರೀಕ್ಷಾ ಮಾದರಿ (Exam Pattern), ಹಾಗೂ ವಿಷಯವಾರು ಅಂಕಗಳ ಹಂಚಿಕೆ (Unit-wise Weightage) ಕುರಿತಾದ ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ.
ಸಿಬಿಎಸ್‌ಇ ಗಣಿತ ಪರೀಕ್ಷಾ ಮಾದರಿ
ಬೋರ್ಡ್ ಪರೀಕ್ಷೆಯ ಪ್ರಶ್ನೆಪತ್ರಿಕೆಯು ಒಟ್ಟು 5 ವಿಭಾಗಗಳನ್ನು (Section A-E) ಒಳಗೊಂಡಿದ್ದು, ಒಟ್ಟು 80 ಅಂಕಗಳಿಗೆ ಲಿಖಿತ ಪರೀಕ್ಷೆ ನಡೆಯಲಿದೆ. ಇದರ ಸಂಪೂರ್ಣ ಸ್ವರೂಪ ಈ ಕೆಳಗಿನಂತಿದೆ:

1. ವಿಭಾಗ A: ಪ್ರಶ್ನೆ ಸಂಖ್ಯೆ 1 ರಿಂದ 18 ರವರೆಗೆ ಬಹು ಆಯ್ಕೆಯ ಪ್ರಶ್ನೆಗಳು (MCQs) ಹಾಗೂ 19-20ನೇ ಪ್ರಶ್ನೆಗಳು ಸಮರ್ಥನೆ-ಕಾರಣ (Assertion-Reason) ಆಧಾರಿತವಾಗಿರುತ್ತವೆ. ಈ ವಿಭಾಗದ ಪ್ರತಿಯೊಂದು ಪ್ರಶ್ನೆಗೆ 1 ಅಂಕವಿದ್ದು, ಒಟ್ಟು 20 ಅಂಕಗಳನ್ನು ಒಳಗೊಂಡಿರುತ್ತದೆ.
2. ವಿಭಾಗ B: ಪ್ರಶ್ನೆ ಸಂಖ್ಯೆ 21 ರಿಂದ 25 ರವರೆಗೆ ಅತಿ ಸಣ್ಣ ಉತ್ತರದ ಪ್ರಶ್ನೆಗಳಿದ್ದು, ಪ್ರತಿಯೊಂದಕ್ಕೂ ತಲಾ 2 ಅಂಕಗಳಂತೆ ಒಟ್ಟು 10 ಅಂಕಗಳನ್ನು ನಿಗದಿಪಡಿಸಲಾಗಿದೆ.
3. ವಿಭಾಗ C: 26 ರಿಂದ 31 ರವರೆಗಿನ ಸಣ್ಣ ಉತ್ತರದ ಪ್ರಶ್ನೆಗಳಿಗೆ ಉತ್ತರಿಸಬೇಕು. ಪ್ರತಿಯೊಂದಕ್ಕೂ ತಲಾ 3 ಅಂಕಗಳಂತೆ ಒಟ್ಟು 18 ಅಂಕಗಳು ಇಲ್ಲಿ ಲಭ್ಯವಿವೆ.
4. ವಿಭಾಗ D: 32 ರಿಂದ 35 ರವರೆಗೆ ದೀರ್ಘ ಉತ್ತರದ ಪ್ರಶ್ನೆಗಳಿರುತ್ತವೆ. ಈ ವಿಭಾಗದಲ್ಲಿ ಪ್ರತಿಯೊಂದು ಪ್ರಶ್ನೆಗೆ ತಲಾ 5 ಅಂಕಗಳಂತೆ ಒಟ್ಟು 20 ಅಂಕಗಳು ಇರುತ್ತವೆ.
5. ವಿಭಾಗ E: 36 ರಿಂದ 38 ರವರೆಗೆ ಕೇಸ್ ಸ್ಟಡಿ ಆಧಾರಿತ ಪ್ರಶ್ನೆಗಳಾಗಿದ್ದು ಪ್ರತಿಯೊಂದಕ್ಕೂ 4 ಅಂಕಗಳನ್ನು ನಿಗದಿಪಡಿಸಲಾಗಿದೆ. ಈ ವಿಭಾಗವು ಒಟ್ಟು 12 ಅಂಕಗಳನ್ನು ಒಳಗೊಂಡಿರುತ್ತದೆ.
ಘಟಕವಾರು ಅಂಕಗಳ ಹಂಚಿಕೆ (Unit-wise)
ಸಿಬಿಎಸ್‌ಇ ಬಿಡುಗಡೆ ಮಾಡಿರುವ 2026ರ ಹೊಸ ಪಠ್ಯಕ್ರಮದ ಪ್ರಕಾರ, ಗಣಿತ ಪಠ್ಯಪುಸ್ತಕದ ಯಾವ ಘಟಕದಿಂದ ಎಷ್ಟು ಅಂಕದ ಪ್ರಶ್ನೆಗಳು ಬರಲಿವೆ ಎಂಬ ನಿಖರ ವಿವರ ಇಲ್ಲಿದೆ:
ಘಟಕ I - ಸಂಖ್ಯಾ ಪದ್ಧತಿ (Number Systems): 6 ಅಂಕಗಳು
ಘಟಕ II - ಬೀಜಗಣಿತ (Algebra): 20 ಅಂಕಗಳು
ಘಟಕ III - ಸಮನ್ವಯ ರೇಖಾಗಣಿತ (Coordinate Geometry): 6 ಅಂಕಗಳು
ಘಟಕ IV - ರೇಖಾಗಣಿತ (Geometry): 15 ಅಂಕಗಳು
ಘಟಕ V - ತ್ರಿಕೋನಮಿತಿ (Trigonometry): 12 ಅಂಕಗಳು
ಘಟಕ VI - ಮಾಪನ (Mensuration): 10 ಅಂಕಗಳು
ಘಟಕ VII - ಸಂಖ್ಯಾಶಾಸ್ತ್ರ ಮತ್ತು ಸಂಭವನೀಯತೆ (Statistics & Probability): 11 ಅಂಕಗಳು ಒಟ್ಟಾರೆಯಾಗಿ ಲಿಖಿತ ಪರೀಕ್ಷೆಯು 80 ಅಂಕಗಳಿಗೆ ನಡೆಯಲಿದೆ.
ವಿದ್ಯಾರ್ಥಿಗಳಿಗೆ ಕಿವಿಮಾತು:
ಘಟಕವಾರು ಅಂಕಗಳ ಹಂಚಿಕೆಯನ್ನು ಗಮನಿಸಿದರೆ, 'ಬೀಜಗಣಿತ' (20 ಅಂಕ) ಹಾಗೂ 'ರೇಖಾಗಣಿತ' (15 ಅಂಕ) ಘಟಕಗಳು ಅತಿ ಹೆಚ್ಚು ಪ್ರಾಮುಖ್ಯತೆ ಪಡೆದಿವೆ. ಈ ಎರಡು ಘಟಕಗಳನ್ನು ಚೆನ್ನಾಗಿ ಕರಗತ ಮಾಡಿಕೊಂಡರೆ ಒಟ್ಟು 35 ಅಂಕಗಳನ್ನು ಸುಲಭವಾಗಿ ಗಳಿಸಬಹುದು. ದೈನಂದಿನ ಅಭ್ಯಾಸ, ಸೂತ್ರಗಳ ಮನನ ಮತ್ತು ಮಾದರಿ ಪ್ರಶ್ನೆಪತ್ರಿಕೆಗಳನ್ನು ಬಿಡಿಸುವುದರಿಂದ ಪರೀಕ್ಷಾ ಭಯ ದೂರವಾಗುವುದರ ಜೊತೆಗೆ, ಸಮಯ ನಿರ್ವಹಣೆಯನ್ನು ಸಾಧಿಸಲು ಸಾಧ್ಯವಾಗುತ್ತದೆ.












Click it and Unblock the Notifications