CBSE ಬೇಸಿಕ್ ಗಣಿತ ಪರೀಕ್ಷೆ ತಂದ ಆಘಾತ: "ನನಗೆ ದ್ರೋಹವಾದಂತೆ ಅನಿಸುತ್ತಿದೆ" ಎಂದ ವಿದ್ಯಾರ್ಥಿನಿ Video Viral
ನವದೆಹಲಿ: ಕೇಂದ್ರೀಯ ಪ್ರೌಢ ಶಿಕ್ಷಣ ಮಂಡಳಿ (CBSE) ನಡೆಸುತ್ತಿರುವ 2026-27ನೇ ಸಾಲಿನ 10ನೇ ತರಗತಿಯ ಬೋರ್ಡ್ ಪರೀಕ್ಷೆಗಳು ವಿವಾದದೊಂದಿಗೆ ಆರಂಭವಾಗಿವೆ. ಗಣಿತ ವಿಷಯದ ಪರೀಕ್ಷೆಯ ನಂತರ, 'ಸರಳ ಗಣಿತʼ' (Basic Mathematics) ಆಯ್ದುಕೊಂಡಿದ್ದ ವಿದ್ಯಾರ್ಥಿಗಳು ತಮಗೆ ಅನ್ಯಾಯವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ನಿರೀಕ್ಷೆಗಿಂತಲೂ ಪ್ರಶ್ನೆಪತ್ರಿಕೆ ಅತ್ಯಂತ ಕಠಿಣವಾಗಿತ್ತು ಮತ್ತು ದೀರ್ಘವಾಗಿತ್ತು ಎಂಬುದು ವಿದ್ಯಾರ್ಥಿಗಳ ದೂರು.
ವಿದ್ಯಾರ್ಥಿನಿಯ ಆಕ್ರೋಶದ ವಿಡಿಯೋ ವೈರಲ್
ಈ ಬೆಳವಣಿಗೆಯ ನಡುವೆ, ಇನ್‌ಸ್ಟಾಗ್ರಾಮ್‌ನಲ್ಲಿ ಖಾತೆಯಲ್ಲಿ ವಿದ್ಯಾರ್ಥಿನಿಯೊಬ್ಬರು ಹಂಚಿಕೊಂಡಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಸದ್ದು ಮಾಡುತ್ತಿದೆ. ಆಕೆ ವಿಡಿಯೋದಲ್ಲಿ ಪರೀಕ್ಷೆಗಾಗಿ ತಾನು ಸಿದ್ಧತೆ ನಡೆಸಿದ್ದ ಪುಸ್ತಕಗಳ ರಾಶಿಯನ್ನು ತೋರಿಸುತ್ತಾ, "ಇಷ್ಟೆಲ್ಲಾ ಓದಿದರೂ ಪರೀಕ್ಷೆಯಲ್ಲಿ ಕೇಳಲಾದ ಪ್ರಶ್ನೆಗಳು ನಮ್ಮ ಪಠ್ಯಕ್ರಮದ ಅಧ್ಯಯನದಲ್ಲಿಯೇ ಇರಲಿಲ್ಲ" ಎಂದು ಬೇಸರ ವ್ಯಕ್ತಪಡಿಸಿದ್ದಾರೆ. "ಇದು ನಮಗೆ ಮಾಡಿದ ದ್ರೋಹ" ಎಂದು ಆಕೆ ಭಾವುಕವಾಗಿ ನುಡಿದಿದ್ದಾಳೆ.

ವಿಶೇಷವೆಂದರೆ, ಸ್ಟ್ಯಾಂಡರ್ಡ್ ಗಣಿತ ಪತ್ರಿಕೆಗಿಂತಲೂ ಬೇಸಿಕ್ ಗಣಿತ ಪತ್ರಿಕೆ ಹೆಚ್ಚು ಸಂಕೀರ್ಣವಾಗಿತ್ತು ಎಂದು ಹಲವು ವಿದ್ಯಾರ್ಥಿಗಳು ಮತ್ತು ಪೋಷಕರು ಅಭಿಪ್ರಾಯಪಟ್ಟಿದ್ದಾರೆ. "ಮೌಲ್ಯಮಾಪನ ಮಾಡುವಾಗ ಸ್ವಲ್ಪ ಉದಾರತೆ ತೋರಿ (Moderate Checking), ಅಷ್ಟೇ ನಮ್ಮ ಬೇಡಿಕೆ" ಎಂದು ವಿದ್ಯಾರ್ಥಿನಿಯು ತನ್ನ ವಿಡಿಯೋದಲ್ಲಿ ಮಂಡಳಿಯನ್ನು ವಿನಂತಿಸಿದ್ದಾರೆ.
ಬೇಸಿಕ್ ಮತ್ತು ಸ್ಟ್ಯಾಂಡರ್ಡ್ ಗಣಿತದ ವ್ಯತ್ಯಾಸವೇನು?
ವಿದ್ಯಾರ್ಥಿಗಳ ಮೇಲಿನ ಶೈಕ್ಷಣಿಕ ಒತ್ತಡವನ್ನು ಕಡಿಮೆ ಮಾಡಲು ಸಿಬಿಎಸ್‌ಇ 2019 ರಲ್ಲಿ ಎರಡು ಹಂತದ ಗಣಿತ ಪರೀಕ್ಷಾ ಪದ್ಧತಿಯನ್ನು ಜಾರಿಗೆ ತಂದಿತ್ತು. 11 ಮತ್ತು 12ನೇ ತರಗತಿಯಲ್ಲಿ ಗಣಿತವನ್ನು ಮುಂದುವರಿಸಲು ಇಚ್ಛಿಸುವವರು 'ಸ್ಟ್ಯಾಂಡರ್ಡ್' ಪತ್ರಿಕೆಯನ್ನು ಬರೆಯುತ್ತಾರೆ. ಗಣಿತ ಬೇಡ ಎನ್ನುವವರು ಸುಲಭವಾಗಿರಲಿ ಎಂದು 'ಬೇಸಿಕ್' ಪತ್ರಿಕೆಯನ್ನು ಆಯ್ಕೆ ಮಾಡಿಕೊಳ್ಳುತ್ತಾರೆ. ನಿಯಮದ ಪ್ರಕಾರ ಬೇಸಿಕ್ ಪತ್ರಿಕೆಯು ನೇರವಾದ ಮತ್ತು ಸರಳವಾದ ಪ್ರಶ್ನೆಗಳನ್ನು ಹೊಂದಿರಬೇಕು. ಆದರೆ ಈ ಬಾರಿ ಪರಿಸ್ಥಿತಿ ತದ್ವಿರುದ್ಧವಾಗಿತ್ತು ಎಂಬುದು ವಿದ್ಯಾರ್ಥಿಗಳ ವಾದ.
ಹಲವು ಶಿಕ್ಷಕರು ಕೂಡ ಈ ಬಾರಿ ಬೇಸಿಕ್ ಪತ್ರಿಕೆಯಲ್ಲಿ 'ಕೇಸ್ ಸ್ಟಡಿ' ಆಧಾರಿತ ಪ್ರಶ್ನೆಗಳು ಮತ್ತು ಕೆಲವು ರೇಖಾಗಣಿತ (Geometry) ಪ್ರಶ್ನೆಗಳು 10ನೇ ತರಗತಿಯ ಮಟ್ಟಕ್ಕಿಂತ ಹೆಚ್ಚಿದ್ದವು ಎಂದು ಒಪ್ಪಿಕೊಂಡಿದ್ದಾರೆ. "ಸ್ಟ್ಯಾಂಡರ್ಡ್ ಪತ್ರಿಕೆಯು ಎನ್‌ಸಿಇಆರ್‌ಟಿ (NCERT) ಪುಸ್ತಕದಿಂದ ನೇರವಾಗಿ ಕೇಳಲಾಗಿತ್ತು. ಆದರೆ ಬೇಸಿಕ್ ಪತ್ರಿಕೆಯಲ್ಲಿ ಹೆಚ್ಚಿನ ಲೆಕ್ಕಾಚಾರ ಮತ್ತು ವಿಶ್ಲೇಷಣಾತ್ಮಕ ಚಿಂತನೆಯ ಅಗತ್ಯವಿತ್ತು" ಎಂದು ದೆಹಲಿಯ ಪ್ರತಿಷ್ಠಿತ ಶಾಲೆಯ ಗಣಿತ ಶಿಕ್ಷಕ ಸಂಜಯ್ ಶರ್ಮಾ ಅಭಿಪ್ರಾಯಪಟ್ಟಿದ್ದಾರೆ.
ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಸಿಬಿಎಸ್‌ಇ ವಿರುದ್ಧ ಆಕ್ರೋಶ ವ್ಯಕ್ತವಾಗುತ್ತಿದ್ದು, ಮಂಡಳಿಯು ಈ ಕುರಿತು ಯಾವುದೇ ಅಧಿಕೃತ ಸ್ಪಷ್ಟನೆ ನೀಡಿಲ್ಲ.












Click it and Unblock the Notifications