CBSE 10ನೇ ತರಗತಿ ಫಲಿತಾಂಶ 2026 ಪ್ರಕಟ: ನಿಮ್ಮ ಅಂಕಗಳನ್ನು ಕ್ಷಣಾರ್ಧದಲ್ಲಿ ಇಲ್ಲಿ ಚೆಕ್ ಮಾಡಿ
ಕೇಂದ್ರೀಯ ಪ್ರೌಢ ಶಿಕ್ಷಣ ಮಂಡಳಿ (CBSE) ತನ್ನ ಬಹುನಿರೀಕ್ಷಿತ 2026ನೇ ಸಾಲಿನ 10ನೇ ತರಗತಿಯ ಬೋರ್ಡ್ ಪರೀಕ್ಷೆಯ ಫಲಿತಾಂಶವನ್ನು ಇಂದು (ಏಪ್ರಿಲ್ 15) ಅಧಿಕೃತವಾಗಿ ಪ್ರಕಟಿಸಿದೆ. ಈ ವರ್ಷ ಸುಮಾರು 25 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, ಇದೀಗ ತಮ್ಮ ಫಲಿತಾಂಶವನ್ನು ಅಧಿಕೃತ ವೆಬ್‌ಸೈಟ್‌ಗಳು ಹಾಗೂ ಸರ್ಕಾರಿ ಅಪ್ಲಿಕೇಶನ್‌ಗಳ ಮೂಲಕ ಸುಲಭವಾಗಿ ವೀಕ್ಷಿಸಬಹುದಾಗಿದೆ.
ಈ ವರ್ಷ ಸಿಬಿಎಸ್ಇ 10ನೇ ತರಗತಿ ಪರೀಕ್ಷೆಗಳು ಫೆಬ್ರವರಿ 17 ರಿಂದ ಮಾರ್ಚ್ 11 ರವರೆಗೆ ಯಶಸ್ವಿಯಾಗಿ ನಡೆದಿದ್ದವು. ಇದೀಗ ಮೌಲ್ಯಮಾಪನ ಪ್ರಕ್ರಿಯೆ ಪೂರ್ಣಗೊಂಡಿದ್ದು, ವಿದ್ಯಾರ್ಥಿಗಳು ತಮ್ಮ ಅಂಕಗಳನ್ನು ಸುಲಭವಾಗಿ ಚೆಕ್ ಮಾಡಲು ಬೋರ್ಡ್ ಹಲವು ವೇದಿಕೆಗಳನ್ನು ಕಲ್ಪಿಸಿದೆ. ಪ್ರಮುಖವಾಗಿ cbse.gov.in ಮತ್ತು results.cbse.nic.in ವೆಬ್‌ಸೈಟ್‌ಗಳ ಮೂಲಕ ಫಲಿತಾಂಶ ಲಭ್ಯವಿದೆ.

ಆದರೆ, ಏಕಕಾಲದಲ್ಲಿ ಲಕ್ಷಾಂತರ ವಿದ್ಯಾರ್ಥಿಗಳು ಲಾಗಿನ್ ಆಗುವುದರಿಂದ ವೆಬ್‌ಸೈಟ್ ಸರ್ವರ್ ಡೌನ್ ಆಗುವ ಅಥವಾ ನಿಧಾನವಾಗುವ ಸಾಧ್ಯತೆ ಹೆಚ್ಚಿರುತ್ತದೆ. ಇಂತಹ ಸಂದರ್ಭದಲ್ಲಿ ವಿದ್ಯಾರ್ಥಿಗಳು ಯಾವುದೇ ಗೊಂದಲವಿಲ್ಲದೆ ಉಮಂಗ್ ಆ್ಯಪ್(UMANG App) ಹಾಗೂ ಡಿಜಿಲಾಕರ್ (DigiLocker) ಮೂಲಕ ಕ್ಷಣಾರ್ಧದಲ್ಲಿ ತಮ್ಮ ಅಂಕಪಟ್ಟಿಯನ್ನು (Marksheet) ಪಡೆಯಬಹುದಾಗಿದೆ.
ಉಮಂಗ್ ಆ್ಯಪ್ ಮೂಲಕ ರಿಸಲ್ಟ್ ಚೆಕ್ ಮಾಡುವುದು ಹೇಗೆ?
ಕೇಂದ್ರ ಸರ್ಕಾರದ ಉಮಂಗ್ ಆಪ್ ಮೂಲಕ ವಿದ್ಯಾರ್ಥಿಗಳು ತಮ್ಮ ಸಿಬಿಎಸ್ಇ 10ನೇ ತರಗತಿ ಫಲಿತಾಂಶ 2026 ಅನ್ನು ಅತ್ಯಂತ ಸುಲಭವಾಗಿ ವೀಕ್ಷಿಸಬಹುದು:
1. ನಿಮ್ಮ ಮೊಬೈಲ್‌ನಲ್ಲಿ 'UMANG App' ಡೌನ್‌ಲೋಡ್ ಮಾಡಿ ಅಥವಾ umang.gov.in ವೆಬ್‌ಸೈಟ್‌ಗೆ ಭೇಟಿ ನೀಡಿ.
2. ನಿಮ್ಮ ಮೊಬೈಲ್ ಸಂಖ್ಯೆಯನ್ನು ನಮೂದಿಸಿ ಲಾಗಿನ್ ಆಗಿ.
3. ಆ್ಯಪ್‌ನಲ್ಲಿರುವ 'Education' ವಿಭಾಗದಲ್ಲಿ ಅಥವಾ ಸರ್ಚ್ ಬಾರ್‌ನಲ್ಲಿ 'CBSE' ಎಂದು ಟೈಪ್ ಮಾಡಿ.
4. ಅಲ್ಲಿ ಕಾಣಿಸುವ 'CBSE Class 10 Result 2026' ಲಿಂಕ್ ಮೇಲೆ ಕ್ಲಿಕ್ ಮಾಡಿ.
5. ನಿಮ್ಮ ರೋಲ್ ನಂಬರ್, ಶಾಲೆಯ ಸಂಖ್ಯೆ , ಮತ್ತು ಅಡ್ಮಿಟ್ ಕಾರ್ಡ್ ಐಡಿ ನಮೂದಿಸಿ.
6. Submit ಬಟನ್ ಒತ್ತಿದ ಕೂಡಲೇ ನಿಮ್ಮ ಡಿಜಿಟಲ್ ಮಾರ್ಕ್ಸ್‌ಕಾರ್ಡ್ ಪರದೆಯ ಮೇಲೆ ಕಾಣಿಸುತ್ತದೆ. ಅದನ್ನು ತಕ್ಷಣವೇ ಡೌನ್‌ಲೋಡ್ ಮಾಡಿಕೊಳ್ಳಿ.
ಇಂಟರ್ನೆಟ್ ಇಲ್ಲದಿದ್ದರೂ SMS ಮೂಲಕ ರಿಸಲ್ಟ್ ಪಡೆಯಿರಿ
ಒಂದು ವೇಳೆ ಸ್ಮಾರ್ಟ್‌ಫೋನ್ ಅಥವಾ ಇಂಟರ್ನೆಟ್ ಸೌಲಭ್ಯ ಇಲ್ಲದಿದ್ದರೆ, ವಿದ್ಯಾರ್ಥಿಗಳು ಎಸ್‌ಎಂಎಸ್ (SMS) ಮೂಲಕವೂ ತಮ್ಮ ಅಂಕಗಳನ್ನು ತಿಳಿಯಬಹುದು. ನಿಮ್ಮ ಮೊಬೈಲ್‌ನ ಮೆಸೇಜ್ ಬಾಕ್ಸ್‌ಗೆ ಹೋಗಿ, CBSE10 (Space) ನಿಮ್ಮ ರೋಲ್ ನಂಬರ್ (Space) ಜನ್ಮ ದಿನಾಂಕ (Space) ಶಾಲೆಯ ನಂಬರ್ (Space) ಸೆಂಟರ್ ನಂಬರ್ ಟೈಪ್ ಮಾಡಿ, 7738299899 ಸಂಖ್ಯೆಗೆ SMS ಕಳುಹಿಸಿ. ಕೆಲವೇ ಕ್ಷಣಗಳಲ್ಲಿ ನಿಮ್ಮ ವಿಷಯವಾರು ಅಂಕಗಳು ಮೆಸೇಜ್ ಮೂಲಕ ಬರಲಿವೆ.
ವಿದ್ಯಾರ್ಥಿಗಳ ಮುಂದಿನ ವ್ಯಾಸಂಗಕ್ಕೆ ಅನುಕೂಲವಾಗುವಂತೆ ಡಿಜಿಲಾಕರ್ ಮೂಲಕ ಒರಿಜಿನಲ್ ಅಂಕಪಟ್ಟಿ, ಮೈಗ್ರೇಷನ್ ಸರ್ಟಿಫಿಕೇಟ್ ಹಾಗೂ ಪಾಸ್ ಸರ್ಟಿಫಿಕೇಟ್‌ಗಳನ್ನು ಶೀಘ್ರದಲ್ಲೇ ಒದಗಿಸಲಾಗುವುದು ಎಂದು ಬೋರ್ಡ್ ತಿಳಿಸಿದೆ. ತೇರ್ಗಡೆಯಾದ ಎಲ್ಲಾ ವಿದ್ಯಾರ್ಥಿಗಳಿಗೂ ಶುಭಾಶಯಗಳು, ಒಂದು ವೇಳೆ ಅಂಕಗಳು ಕಡಿಮೆಯಾಗಿದ್ದರೆ ನಿರಾಶರಾಗದೆ ಎರಡನೇ ಬೋರ್ಡ್ ಪರೀಕ್ಷೆಯ ಮೂಲಕ ಅಂಕಗಳನ್ನು ಹೆಚ್ಚಿಸಿಕೊಳ್ಳುವ ಅವಕಾಶವನ್ನೂ ಬಳಸಿಕೊಳ್ಳಬಹುದು.












Click it and Unblock the Notifications