ವರ್ಷಗಳ ವಿರಾಮದ ಬಳಿಕ ಮತ್ತೆ ಉದ್ಯೋಗ ಲೋಕಕ್ಕೆ ಎಂಟ್ರಿ: ಗೃಹಿಣಿಯ ಸಾಧನೆಗೆ ಸಿಕ್ಕಿತು ಭರ್ಜರಿ ಪ್ಯಾಕೇಜ್
ಕಾಲೇಜು ಮುಗಿದ ತಕ್ಷಣ ಕೆಲಸಕ್ಕೆ ಸೇರಬೇಕು. ಮಧ್ಯೆ ಗ್ಯಾಪ್ ಇದ್ದರೂ ಒಳ್ಳೆಯ ಕೆಲಸ ಸಿಗುವುದಿಲ್ಲ ಎನ್ನುವ ಭಾವನೆ ನಮ್ಮಲ್ಲಿ ಬಹಳ ಮಂದಿಗೆ ಇದೆ. ಅದರಲ್ಲಿಯೂ ೩೦ ವರ್ಷ ದಾಟಿತು ಎಂದಾದರೆ ಇನ್ನು ಕೆಲಸ ಕನಸೇ ಸರಿ. ಯಾಕಂದರೆ ಈಗ ಬಹುತೇಕ ಕಂಪನಿಗಳಲ್ಲಿ ಕೆಲಸಕ್ಕೆ ವಯಸ್ಸಿನ ಮಿತಿ ಇಟ್ಟಿರುತ್ತಾರೆ. ಆದ್ರೆ ಇಲ್ಲೊಬ್ಬ ಮಹಿಳೆ ೩೦ ವರ್ಷ ದಾಟಿದ ಮೇಲೆ ಕೆಲಸಕ್ಕೆ ಸೇರಿ ಲಕ್ಷಾಂತರ ಜನರಿಗೆ ಪ್ರೇರಣೆಯಾಗಿದ್ದಾರೆ.
ದಾಟುತ್ತಿತ್ತು ವಯಸ್ಸಿನ ಮಿತಿ
ಸುಭಾಶ್ರೀ ಮುಖರ್ಜಿ ಎಲ್ಲಾ ಹುಡುಗಿಯರಂತೆ ಡಿಗ್ರಿ ಮುಗಿದ ಕೂಡಲೇ ಕೆಲಸಕ್ಕೆ ಸೇರಬೇಕು ಎನ್ನುವ ಕನಸು ಹೊತ್ತಿದ್ದರು. 2016 ರಲ್ಲಿ ಪದವಿ ಪಡೆದ ನಂತರ ತಾನೂ ಎಲ್ಲರಂತೆ ಕೆಲಸಕ್ಕೆ ಸೇರಬೇಕು ತಂದೆ ತಾಯಿಗೆ ಆಸರೆಯಾಗಬೇಕು ಅಂದು ಕೊಂಡಿದ್ದರು. ಆದ್ರೆ, ತನ್ನ ಮನೆಯ ಸ್ಥಿತಿ ಎಲ್ಲವನ್ನೂ ಬುಡ ಮೇಲು ಮಾಡಿತ್ತು. ತಂದೆಯ ಮೆದುಳಿನ ಶಸ್ತ್ರಚಿಕಿತ್ಸೆ ಎಲ್ಲವನ್ನೂ ಬದಲಾಯಿಸಿತು. ಕುಟುಂಬದ ಜವಾಬ್ದಾರಿ ಸುಭಾಶ್ರೀ ಮುಖರ್ಜಿಯ ಮೊದಲ ಆದ್ಯತೆಯಾಯಿರು.

ತಂದೆಯ ಅನಾರೋಗ್ಯ ಅವರು ಕೆಲಸಕ್ಕೆ ಸೇರುವ ಅವಕಾಶ ಕೊಡಲಿಲ್ಲ. ತಂದೆಯ ಆರೋಗ್ಯವನ್ನು ನೋಡಿಕೊಳ್ಳಬೇಕು, ಜೊತೆಗೆ ಸರ್ಕಾರಿ ಪರೀಕ್ಷೆಗಳಿಗೆ ತಯಾರಿಯೂ ನಡೆಸಬೇಕು. ಸುಭಾಶ್ರೀ ಮುಖರ್ಜಿ ಬಿ.ಟೆಕ್ ಪದವೀಧರೆ. ತನ್ನ ಪದವಿ ಜೀವನವನ್ನು ಬದಲಾಯಿಸುತ್ತದೆ ಎಂದು ಕೊಂಡಿದ್ದವರು. ಆದರೆ ಅವರ ನಿರೀಕ್ಷೆ ಸುಳ್ಳಾಗುವತ್ತ ಹೆಜ್ಜೆ ಹಾಕುತ್ತಿತ್ತು. ವಯಸ್ಸಿನ ಮಿತಿ ದಾಟುತ್ತಾ ಇತ್ತು. ವೃತ್ತಿಜೀವನ ಆರಂಭಕ್ಕಿಂತ ಮೊದಲೇ ಮುಗಿದಿದೆ ಎನ್ನುವ ಭಾವ ಅವರನ್ನು ಆವರಿಸಿತ್ತಂತೆ. ಆ ಹಂತದಲ್ಲಿ ಒಬ್ಬರೇ ಕುಳಿತು ಅತ್ತ ದಿನಗಳೆಷ್ಟೋ?
ಸ್ನೇಹಿತರೇ ಹಂಗಿಸಿದ್ದರು
ಇನ್ನು ಸುಭಾಶ್ರೀ ಮುಖರ್ಜಿಗೆ ಕೆಲಸ ಇಲ್ಲ ಎನ್ನುವ ಕಾರಣಕ್ಕೆ ಅವರ ಸ್ನೇಹಿತರೇ ಹಂಗಿಸ್ತಾ ಇದ್ದರಂತೆ. ಶಾಲಾ ಸ್ನೇಹಿತೆಯೊಬ್ಬಳು ಏನಾದರೂ ಸಣ್ಣ ಪುಟ್ಟ ಕೆಲಸವಿದ್ದರೆ ಹೇಳಿ ಸುಭಾಶ್ರೀ ಸಹಾಯ ಮಾಡ್ತಾರೆ ಅಂತ ಹಂಗಿಸಿದ್ದು ಸುಭಾಶ್ರೀ ಮುಖರ್ಜಿಯ ತಲೆಯಲ್ಲಿ ಕೂತು ಬಿಟ್ಟಿದೆಯಂತೆ. ಸ್ನೇಹಿತೆ ಆಡಿದ ಆ ಮಾತುಗಳು ಅವರಿಗೆ ತುಂಬಾ ಬೇಸರ ಉಂಟು ಮಾಡಿತ್ತಂತೆ.ಎಲ್ಲರ ರೀತಿಯಲ್ಲಿ ನನಗೂ ಯಾವಾಗ ಗೌರವ ಸಿಗುವುದೋ ಎಂದು ಅಳುತ್ತಿದ್ದರಂತೆ. ಹೀಗಿರುವಾಗ ಒಂದು ದಿನ ಅವರಿಗೆ ಡಿಜಿಟಲ್ ಮಾರ್ಕೆಟಿಂಗ್ ಬಗ್ಗೆ ಗೊತ್ತಾಗುತ್ತೆ. ಇದು ತನಗೆ ಸಿ್ಕಿರುವ ಇನ್ನೊಂದು ಅವಕಾಶ. ಇದನ್ನು ಸರಿಯಾಗಿ ಬಳಸಿಕೊಳ್ಳಬೇಕು ಎನ್ನುವ ತೀರ್ಮಾನಕ್ಕೆ ಬರ್ತಾರೆ.
ಪುಟ್ಟ ಮಗುವಿನ ಜೊತೆ ಹೊಸ ಆರಂಭ
ಮನೆಯಲ್ಲಿ ನವಜಾತ ಶಿಶು, ಮಧ್ಯರಾತ್ರಿಯ ನಂತರ ತರಗತಿಗಳು. ಆ ಹೊತ್ತಿಗೆ,ಅವರಿಗೆ ಮದುವೆಯೂ ಆಗಿತ್ತು. ಕೈಯ್ಯಲ್ಲಿ ಪುಟ್ಟ ಮಗುವಿತ್ತು. ಆದ್ರೆ, ಸುಭಾಶ್ರೀ ಮುಖರ್ಜಿ ಸುಮ್ಮನಾಗಲಿಲ್ಲ. ಆ ಪುಟ್ಟ ಮಗುವಿನ ಜೊತೆಯಲ್ಲಿಯೇ ಅಂದರೆ ಹೆರಿಗೆಯಾದ ಕೇವಲ 97 ದಿನಗಳ ನಂತರ, ಅವರು ಡಿಜಿಟಲ್ ಮಾರ್ಕೆಟಿಂಗ್ ಕಲಿಯಲು ನಿರ್ಧರಿಸಿದರು. ಕ್ರಾಫ್ಟ್‌ಶಾಲಾದ ಕಾರ್ಯಕ್ರಮಕ್ಕೆ ಸೇರಿಕೊಂಡರು. ಇಲ್ಲಿಂದ ಅವರ ಎರಡನೇ ಇನ್ನಿಂಗ್ಸ್ ಶುರುವಾಗುತ್ತದೆ. ಊಟ, ನಿದ್ದೆಯ ಪರಿವೇ ಇರಲಿಲ್ಲ. ರಾತ್ರಿ 2- 3 ಗಂಟೆಗೆ ಓದುತ್ತಿದ್ದರು. ಎಷ್ಟೋ ಸಲ ಇದೆಲ್ಲಾ ಸಾಕು ಎಂದನಿಸಿದ್ದೂ ಇದೆಯಂತೆ.
ಕಠಿಣ ಶ್ರಮಕ್ಕೆ ಕೊನೆಗೂ ಸಿಕ್ಕಿತು ಫಲ
ಅವರ ಕಠಿಣ ಶ್ರಮಕ್ಕೆ ಶೀಘ್ರ ಪ್ರತಿಫಲ ಸಿಕ್ಕಿತು. ಹಲವಾರು ಕಂಪನಿಗಳ ಸಂದರ್ಶನಕ್ಕೆ ಹೋಗ್ತಾರೆ. ನಂತರ ವಿಶ್ವದ ಪ್ರಮುಖ ಮಾರ್ಕೆಟಿಂಗ್ ಮತ್ತು ಕಮ್ಯುನಿಕೇಶನ್ ಗ್ರೂಪ್‌ನಲ್ಲಿ ಪ್ರೋಗ್ರಾಮ್ಯಾಟಿಕ್ ಜಾಹೀರಾತು ತರಬೇತಿದಾರರಾಗಿ ಕೆಲಸಕ್ಕೆ ಸೇರುತ್ತಾರೆ. ಪ್ರೊಬೇಶನ್ ಪಿರೀಯೆಡ್‌ನಲ್ಲಿ ತಿಂಗಳಿಗೆ 25,000 ರೂ. ಸಂಬಳ, ಪರ್ಮನೆಂಟ್ ಆದ ಬಳಿಕ ವರ್ಷಕ್ಕೆ 4.5 ಲಕ್ಷ ಸಂಬಳ.
ಕಣ್ಣೀರು ತರಿಸಿದ ಆಫರ್ ಲೆಟರ್
ತನ್ನ ಪತಿಯೊಂದಿಗೆ ಮೊಮೊಸ್ ತಿನ್ನುತ್ತಿರುವಾಗ ಶಾರ್ಟ್‌ಲಿಸ್ಟ್ ಮಾಡಿದ ಇಮೇಲ್ ಬರುತ್ತದೆ. ತನ್ನ ಅಪಾಯಿಂಟ್ ಆಗಿದೆ ಎನ್ನುವುದನ್ನು ಮೆಲ್ಲ ಧ್ವನಿಯಲ್ಲಿ ಪತಿಗೆ ತಿಳಿಸುತ್ತಾರೆ. ಪತಿಯ ಖುಷಿಗೂ ಎಲ್ಲೆಯೇ ಇರಲಿಲ್ಲ. ಎಲ್ಲವೂ ಕನಸು ಎನ್ನುವ ರೀತಿ ಭಾಸವಾಗುತ್ತಾ ಇತ್ತಂತೆ. ತನ್ನ ತಂದೆಗೆ ಆಫರ್ ಲೆಟರ್ ಕೊಟ್ಟಾಗ ಅದು ಅತ್ಯಂತ ಭಾವನಾತ್ಮಕ ಕ್ಷಣವಾಗಿತ್ತು.
ಮೆದುಳಿನ ಶಸ್ತ್ರಚಿಕಿತ್ಸೆ, ಬಹು ಆಂಜಿಯೋಪ್ಲಾಸ್ಟಿಗಳು ಮತ್ತು ಪಾರ್ಶ್ವವಾಯುವಿನ ನಂತರ, ಅವರು ಹೆಚ್ಚು ಮಾತನಾಡಲು ಆಗುತ್ತಿರಲಿಲ್ಲ. ಒಮ್ಮೊಮ್ಮೆ ಮಗಳ ಹೆಸರೂ ಮರೆತು ಬಿಡುತ್ತಿದ್ದರು. ಆದರೆ ಆ ದಿನ ಮಾತ್ರ ಮಗಳ ಆಫರ್ ಲೆಟರ್ ಅನ್ನು ಕೈಯ್ಯಲ್ಲಿ ಹಿಡಿದಾಗ, ಅವರ ಕಣ್ಣಲ್ಲೂ ನೀರು ತುಂಬಿತ್ತು.
ನಾನು ಜೀವನದಲ್ಲಿ ಏನಾದರೂ ಸಾಧಿಸಿಯೇ ಸಾಧಿಸುತ್ತೇನೆ ಎನ್ನುವ ನಂಬಿಕೆ ನನ್ನ ತಂದೆಗಿತ್ತು.ಅವರು ಆ ಆಫರ್ ಲೆಟರ್ ಹಿಡಿದಿರುವ ಕ್ಷಣವನ್ನು ತಾನೆಂದೂ ಮರೆಯುವುದಿಲ್ಲ ಎನ್ನುತ್ತಾರೆ ಸುಭಾಶ್ರೀ ಮುಖರ್ಜಿ. ಯಾವಾಗ ನಮ್ಮ ಜೀವನದಲ್ಲಿ ಎಲ್ಲವೂ ಮುಗಿದೇ ಹೋಯಿತು ಎಂದುಕೊಳ್ಳುತ್ತೇವೆಯೋ ಅದೇ ನಮ್ಮ ಜೀವನದ ಆರಂಭ ಎನ್ನುತ್ತಾರೆ ಸುಭಾಶ್ರೀ ಮುಖರ್ಜಿ.
ವೃತ್ತಿಜೀವನದಲ್ಲಿನ ಬ್ರೇಕ್ ಪ್ರತಿಭೆ ಅಥವಾ ಸಾಮರ್ಥ್ಯವನ್ನು ಅಳಿಸಿಹಾಕುವುದಿಲ್ಲ. ಬದಲಿಗೆ ನಮ್ಮ ಕಠಿಣ ಪರಿಶ್ರಮ, ಅವಕಾಶವಿದ್ದರೆ, ವೃತ್ತಿಜೀವನವನ್ನು ಯಾವಾಗ ಬೇಕಾದರೂ ಪುನರಾರಂಭಿಸಬಹುದು.


Click it and Unblock the Notifications
