95ರ ಹರೆಯದಲ್ಲೂ ಬಡವರಿಗೆ ಚಿಕಿತ್ಸೆ ನೀಡುತ್ತಿದ್ದ ದೇಶದ ಮೊದಲ ಮಹಿಳಾ ಕಾರ್ಡಿಯಾಲಜಿಸ್ಟ್‌ ! ಡಾ. ಎಸ್.ಐ. ಪದ್ಮಾವತಿ ಸ್ಫೂರ್ತಿ ಕತೆ

Cardiac Care: ಯುದ್ಧದ ಸಂಕಷ್ಟ, ತಾಯ್ನಾಡಿನಿಂದ ವಲಸೆ, ವೈದ್ಯಕೀಯ ಕ್ಷೇತ್ರದಲ್ಲಿ ಮಹಿಳೆಯರು ಎದುರಿಸುತ್ತಿದ್ದ ಅಡೆತಡೆಗಳು... ಇವೆಲ್ಲವನ್ನೂ ಮೆಟ್ಟಿ ನಿಂತು ಭಾರತದ ಹೃದ್ರೋಗ ಚಿಕಿತ್ಸಾ ಕ್ಷೇತ್ರದಲ್ಲಿ ಹೊಸ ಅಧ್ಯಾಯವನ್ನೇ ಬರೆದವರು ಡಾ. ಎಸ್.ಐ. ಪದ್ಮಾವತಿ. "ಭಾರತದ ಮೊದಲ ಮಹಿಳಾ ಹೃದ್ರೋಗ ತಜ್ಞೆ" ಎಂದೇ ಪ್ರಸಿದ್ಧರಾಗಿರುವ ಅವರು, 103 ವರ್ಷ ಬದುಕಿದರು. 95ರ ಹರೆಯದಲ್ಲೂ ಕ್ಲಿನಿಕ್‌ ಓಪನ್‌ ಇಟ್ಟು, ಬಡವರಿಗೆ ಹೃದ್ರೋಗ ಚಿಕಿತ್ಸೆ ನೀಡುತ್ತಿದ್ದ ದಣಿವರಿಯದ ಪರಿಶ್ರಮಿ, ವಾತ್ಸಲ್ಯಮಯಿ ಈಕೆ.

1917ರಲ್ಲಿ ಬರ್ಮಾದಲ್ಲಿ (ಇಂದಿನ ಮ್ಯಾನ್ಮಾರ್) ಜನಿಸಿದ ಪದ್ಮಾವತಿ, ವೈದ್ಯಕೀಯ ಶಿಕ್ಷಣದಿಂದ ಹಿಡಿದು ಹೃದ್ರೋಗ ಚಿಕಿತ್ಸಾ ಸಂಸ್ಥೆಗಳ ಸ್ಥಾಪನೆಯವರೆಗೆ ಹಲವು ಮೈಲಿಗಲ್ಲುಗಳನ್ನು ಸಾಧಿಸಿದರು. ಲಂಡನ್ ಮತ್ತು ಅಮೆರಿಕದಲ್ಲಿ ಉನ್ನತ ವೈದ್ಯಕೀಯ ತರಬೇತಿ ಪಡೆದು 1952ರಲ್ಲಿ ಭಾರತಕ್ಕೆ ಮರಳಿದರು. ಬಳಿಕ ಉತ್ತರ ಭಾರತದಲ್ಲಿ ಮೊದಲ ಕ್ಯಾಥೆಟರೈಸೇಶನ್ ಪ್ರಯೋಗಾಲಯ ಸ್ಥಾಪಿಸುವಲ್ಲಿ ಪ್ರಮುಖ ಪಾತ್ರ ವಹಿಸಿದರು. ದೆಹಲಿಯ ಲೇಡಿ ಹಾರ್ಡಿಂಜ್ ವೈದ್ಯಕೀಯ ಕಾಲೇಜಿನಲ್ಲಿ ಹೃದ್ರೋಗ ವಿಭಾಗದ ಮುಖ್ಯಸ್ಥೆಯಾಗಿ ಸೇವೆ ಸಲ್ಲಿಸಿ, 1962ರಲ್ಲಿ ಆಲ್ ಇಂಡಿಯಾ ಹಾರ್ಟ್ ಫೌಂಡೇಶನ್ ಮತ್ತು 1981ರಲ್ಲಿ ನ್ಯಾಷನಲ್ ಹಾರ್ಟ್ ಇನ್‌ಸ್ಟಿಟ್ಯೂಟ್ ಸ್ಥಾಪಿಸಿದರು.

Cardiac Care First Woman Cardiologist Dr S I Padmavati the Pioneer Who Helped Build Modern Cardiac Care in India

ಬರ್ಮಾದಿಂದ ಆರಂಭವಾದ ವೈದ್ಯಕೀಯ ಪಯಣ

ಡಾ. ಎಸ್.ಐ. ಪದ್ಮಾವತಿ 1917ರಲ್ಲಿ ಬರ್ಮಾದಲ್ಲಿ ಜನಿಸಿದರು. ಆ ಕಾಲದಲ್ಲಿ ಮಹಿಳೆಯರಿಗೆ (women) ಉನ್ನತ ಶಿಕ್ಷಣ ಪಡೆಯುವುದು ಸುಲಭವಾಗಿರಲಿಲ್ಲ. ಇಂತಹ ಪರಿಸ್ಥಿತಿಯಲ್ಲಿಯೇ ಅವರು ವೈದ್ಯಕೀಯ ಶಿಕ್ಷಣದತ್ತ ಹೆಜ್ಜೆಯಿಟ್ಟರು. ರಂಗೂನ್ ವೈದ್ಯಕೀಯ ಕಾಲೇಜಿನಲ್ಲಿ ವೈದ್ಯಕೀಯ ಅಧ್ಯಯನ ನಡೆಸುತ್ತಿದ್ದಾಗ ಎರಡನೇ ಮಹಾಯುದ್ಧ ಆರಂಭವಾಯಿತು. ಯುದ್ಧದ ಪರಿಣಾಮವಾಗಿ ಅವರ ಕುಟುಂಬ ಬರ್ಮಾವನ್ನು ತೊರೆದು ಬೇರೆಡೆಗೆ ಪಲಾಯನ ಮಾಡಬೇಕಾಯಿತು.

ಆದರೆ, ಈ ಸಂಕಷ್ಟಗಳು ಅವರ ವೈದ್ಯೆಯಾಗಬೇಕೆಂಬ ಕನಸನ್ನು ನುಚ್ಚುನೂರು ಮಾಡಲಿಲ್ಲ. ಅವರು ಲಂಡನ್‌ಗೆ ತೆರಳಿ ತಮ್ಮ ವೈದ್ಯಕೀಯ ಅಧ್ಯಯನವನ್ನು ಮುಂದುವರಿಸಿದರು. ನಂತರ ಅಮೆರಿಕದ ಪ್ರತಿಷ್ಠಿತ ಜಾನ್ಸ್ ಹಾಪ್ಕಿನ್ಸ್ ಆಸ್ಪತ್ರೆಯಲ್ಲಿ ಉನ್ನತ ತರಬೇತಿ ಪಡೆದರು. ಅಲ್ಲಿ ಗಳಿಸಿದ ಅನುಭವ ಭಾರತದ ಹೃದ್ರೋಗ ಚಿಕಿತ್ಸಾ ಕ್ಷೇತ್ರದಲ್ಲಿ ಅವರು ಹೊಸ ಬದಲಾವಣೆಗಳನ್ನು ತರಲು ನೆರವಾಯಿತು.

1952ರಲ್ಲಿ ಭಾರತಕ್ಕೆ ಮರಳಿದ ಪದ್ಮಾವತಿ ಅವರ ಮುಂದಿದ್ದ ಗುರಿ ಸ್ಪಷ್ಟವಾಗಿತ್ತು. ಆಗ ಭಾರತದಲ್ಲಿ ಹೃದಯ ಸಂಬಂಧಿ ಕಾಯಿಲೆಗಳಿಗೆ ( heart attack) ವಿಶೇಷ ಚಿಕಿತ್ಸೆ ನೀಡುವ ವ್ಯವಸ್ಥೆ ಇನ್ನೂ ಅಭಿವೃದ್ಧಿಯ ಹಂತದಲ್ಲಿತ್ತು. ಆಧುನಿಕ ವೈದ್ಯಕೀಯ ಸೌಲಭ್ಯಗಳನ್ನು ದೇಶದಲ್ಲಿ ಬೆಳೆಸುವುದು ಮತ್ತು ಹೆಚ್ಚಿನ ಜನರಿಗೆ ಅವುಗಳನ್ನು ತಲುಪಿಸುವುದು ಅವರ ಉದ್ದೇಶವಾಗಿತ್ತು.

ಭಾರತಕ್ಕೆ ಮರಳಿದ ಕೆಲವೇ ಸಮಯದಲ್ಲಿ ಅವರು ಬೋಧಕಿಯಾಗಿ ಕಾರ್ಯನಿರ್ವಹಿಸಲು ಆರಂಭಿಸಿದರು. ಅಲ್ಲಿ ಕೆಲಸಕ್ಕೆ ಸೇರಿದ ಒಂದು ವರ್ಷದೊಳಗೆ ಉತ್ತರ ಭಾರತದಲ್ಲಿ ಮೊದಲ ಕ್ಯಾಥೆಟರೈಸೇಶನ್ ಪ್ರಯೋಗಾಲಯ ಸ್ಥಾಪಿಸುವಲ್ಲಿ ಪ್ರಮುಖ ಪಾತ್ರ ವಹಿಸಿದರು. ಹೃದಯದ ಕಾರ್ಯನಿರ್ವಹಣೆಯನ್ನು ಪರೀಕ್ಷಿಸಲು ಮತ್ತು ಹೃದಯ ಸಂಬಂಧಿ ಕಾಯಿಲೆಗಳನ್ನು ಪತ್ತೆಹಚ್ಚಲು ನೆರವಾಗುವ ಈ ಸೌಲಭ್ಯವು ಆ ಕಾಲದ ವೈದ್ಯಕೀಯ ಕ್ಷೇತ್ರದಲ್ಲಿ ಮಹತ್ವದ ಹೆಜ್ಜೆಯಾಗಿತ್ತು.

ಭಾರತದ Cardiac Care ಕ್ಷೇತ್ರದಲ್ಲಿ ಹೊಸ ಕ್ರಾಂತಿ

ಪದ್ಮಾವತಿ ಅವರ ಸಾಧನೆಯ ಪಯಣ ಇಲ್ಲಿಗೇ ನಿಲ್ಲಲಿಲ್ಲ. ದೆಹಲಿಯ ಲೇಡಿ ಹಾರ್ಡಿಂಜ್ ವೈದ್ಯಕೀಯ ಕಾಲೇಜಿನಲ್ಲಿ ಹೃದ್ರೋಗ ವಿಭಾಗದ ಮುಖ್ಯಸ್ಥೆಯಾಗಿ, ಈ ಸ್ಥಾನವನ್ನು ಅಲಂಕರಿಸಿದ ಮೊದಲ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಪುರುಷರ ಪ್ರಾಬಲ್ಯ ಹೆಚ್ಚಿದ್ದ ವೈದ್ಯಕೀಯ ಕ್ಷೇತ್ರದಲ್ಲಿ ತಮ್ಮ ಸಾಮರ್ಥ್ಯದಿಂದಲೇ ಅವರು ವಿಶಿಷ್ಟ ಸ್ಥಾನ ಗಳಿಸಿದರು.

1962ರಲ್ಲಿ ಅವರು ಆಲ್ ಇಂಡಿಯಾ ಹಾರ್ಟ್ ಫೌಂಡೇಶನ್ ಸ್ಥಾಪಿಸಿದರು. ಹೃದಯ ಸಂಬಂಧಿ ಕಾಯಿಲೆಗಳ ಕುರಿತು ಜನರಲ್ಲಿ ಅರಿವು ಮೂಡಿಸುವುದು, ಹೃದ್ರೋಗ ಚಿಕಿತ್ಸೆಯ ಅಭಿವೃದ್ಧಿಗೆ ನೆರವಾಗುವುದು ಮತ್ತು ವೈದ್ಯಕೀಯ ಸಂಶೋಧನೆಗೆ ಉತ್ತೇಜನ ನೀಡುವುದು ಈ ಸಂಸ್ಥೆಯ ಪ್ರಮುಖ ಉದ್ದೇಶಗಳಾಗಿದ್ದವು.

ಸುಮಾರು ಎರಡು ದಶಕಗಳ ಬಳಿಕ, 1981ರಲ್ಲಿ ನವದೆಹಲಿಯಲ್ಲಿ ನ್ಯಾಷನಲ್ ಹಾರ್ಟ್ ಇನ್‌ಸ್ಟಿಟ್ಯೂಟ್ ಸ್ಥಾಪಿಸಿದರು. ಹೃದ್ರೋಗ ಚಿಕಿತ್ಸೆಗೆ ಮೀಸಲಾದ ಈ ಸಂಸ್ಥೆಯ ಮೂಲಕ ಆಧುನಿಕ ವೈದ್ಯಕೀಯ ಸೌಲಭ್ಯಗಳನ್ನು ಹೆಚ್ಚು ಜನರಿಗೆ ತಲುಪಿಸುವ ಪ್ರಯತ್ನ ಮಾಡಿದರು.

ವಿಶೇಷ ವೈದ್ಯಕೀಯ ಸೇವೆ ಶ್ರೀಮಂತರಿಗೆ ಮಾತ್ರ ಸೀಮಿತವಾಗಬಾರದು ಎಂಬುದು ಪದ್ಮಾವತಿ ಅವರ ನಂಬಿಕೆಯಾಗಿತ್ತು. ಹಣವಿರುವವರು ಮಾತ್ರ ಉತ್ತಮ ಚಿಕಿತ್ಸೆ ಪಡೆಯುವ ಪರಿಸ್ಥಿತಿ ಬದಲಾಗಬೇಕು, ಆರ್ಥಿಕವಾಗಿ ದುರ್ಬಲರಾಗಿರುವವರಿಗೂ ಸೂಕ್ತ ವೈದ್ಯಕೀಯ ನೆರವು ದೊರೆಯಬೇಕು ಎಂಬ ಆಶಯದೊಂದಿಗೆ ಅವರು ಕೆಲಸ ಮಾಡಿದರು.

ಅವರ ಸೇವೆ ಆಸ್ಪತ್ರೆಯಲ್ಲಿನ ಚಿಕಿತ್ಸೆಗೆ ಮಾತ್ರ ಸೀಮಿತವಾಗಿರಲಿಲ್ಲ. ವೈದ್ಯಕೀಯ ಶಿಕ್ಷಣ, ಸಂಶೋಧನೆ (research) ಮತ್ತು ಯುವ ವೈದ್ಯರಿಗೆ ಮಾರ್ಗದರ್ಶನ ನೀಡುವ ಕಾರ್ಯಗಳಲ್ಲಿಯೂ ತೊಡಗಿಸಿಕೊಂಡಿದ್ದರು. 90ರ ಹರೆಯ ದಾಟಿದ ಬಳಿಕವೂ ರೋಗಿಗಳಿಗೆ ಚಿಕಿತ್ಸೆ ನೀಡುವುದನ್ನು ಮುಂದುವರಿಸಿದ್ದರು. ವೃದ್ಧಾಪ್ಯದಲ್ಲಿಯೂ ದೀರ್ಘ ಸಮಯ ಕೆಲಸ ಮಾಡುತ್ತಿದ್ದ ಅವರ ಶ್ರದ್ಧೆ ಮತ್ತು ಕರ್ತವ್ಯನಿಷ್ಠೆ ಅನೇಕರಿಗೆ ಸ್ಫೂರ್ತಿಯಾಯಿತು.

ಪದ್ಮಭೂಷಣ, ಪದ್ಮವಿಭೂಷಣ ಗೌರವ ಪಡೆದ ಸಾಧಕಿ

ಭಾರತದ ವೈದ್ಯಕೀಯ ಕ್ಷೇತ್ರಕ್ಕೆ ಅವರು ನೀಡಿದ ಅಮೂಲ್ಯ ಕೊಡುಗೆಯನ್ನು ಗುರುತಿಸಿ ದೇಶದ ಅತ್ಯುನ್ನತ ನಾಗರಿಕ ಗೌರವಗಳಲ್ಲಿ ಒಂದಾದ ಪದ್ಮಭೂಷಣ ಮತ್ತು ಪದ್ಮವಿಭೂಷಣ ಪ್ರಶಸ್ತಿಗಳನ್ನು ನೀಡಿ ಗೌರವಿಸಲಾಯಿತು. ಭಾರತ ಮತ್ತು ವಿದೇಶಗಳ ಹಲವು ವೈದ್ಯಕೀಯ ಸಂಸ್ಥೆಗಳಿಂದಲೂ ಅವರಿಗೆ ಮನ್ನಣೆ ದೊರೆಯಿತು.

ರೋಗಿಗಳ ಬಗ್ಗೆ ಅವರಿಗಿದ್ದ ಕಾಳಜಿ, ಸೇವಾ ಮನೋಭಾವ ಮತ್ತು ಸಮಾನತೆಯ ನಿಲುವು ಅವರನ್ನು ವಿಶೇಷ ವ್ಯಕ್ತಿಯನ್ನಾಗಿಸಿತು. ಪ್ರಮುಖ ವ್ಯಕ್ತಿಗಳು ಚಿಕಿತ್ಸೆಗಾಗಿ ಬಂದಾಗ ಅವರಿಗೆ ವಿಶೇಷ ಆದ್ಯತೆ ನೀಡುವ ಬದಲು, ರೋಗಿಗಳ ಅಗತ್ಯಕ್ಕೆ ಅನುಗುಣವಾಗಿ ಚಿಕಿತ್ಸೆ ನೀಡಬೇಕು ಎಂಬ ನಿಲುವನ್ನು ಅವರು ಹೊಂದಿದ್ದರು. ವಿಐಪಿ ಸಂಸ್ಕೃತಿಗಿಂತ ರೋಗಿಗಳ ಆರೋಗ್ಯಕ್ಕೆ ಆದ್ಯತೆ ನೀಡುತ್ತಿದ್ದರು ಎಂಬುದು ಅವರ ಜೀವನದ ಪ್ರಮುಖ ಅಂಶಗಳಲ್ಲಿ ಒಂದಾಗಿದೆ.

103 ವರ್ಷಗಳ ಸಾರ್ಥಕ ಬದುಕು

ಯುದ್ಧದ ಕಾರಣದಿಂದ ತಾಯ್ನಾಡನ್ನು ತೊರೆಯಬೇಕಾದ ಪರಿಸ್ಥಿತಿಯಿಂದ ಆರಂಭವಾದ ಪದ್ಮಾವತಿ ಅವರ ಬದುಕು, ಭಾರತದ ಹೃದ್ರೋಗ ಚಿಕಿತ್ಸಾ ಕ್ಷೇತ್ರದ ಬೆಳವಣಿಗೆಯೊಂದಿಗೆ ಬೆಸೆದುಕೊಂಡಿತು. ವಿದೇಶದಲ್ಲಿ ಉನ್ನತ ವೈದ್ಯಕೀಯ ಶಿಕ್ಷಣ ಪಡೆದು ತಾಯ್ನಾಡಿಗೆ ಮರಳಿದ ಅವರು, ದೇಶದಲ್ಲಿ ಆಧುನಿಕ ಹೃದ್ರೋಗ ಚಿಕಿತ್ಸೆಗೆ ಅಗತ್ಯವಾದ ವ್ಯವಸ್ಥೆಗಳನ್ನು ನಿರ್ಮಿಸುವಲ್ಲಿ ಮಹತ್ವದ ಪಾತ್ರ ವಹಿಸಿದರು. 2020ರಲ್ಲಿ 103ನೇ ವಯಸ್ಸಿನಲ್ಲಿ ಡಾ. ಎಸ್.ಐ. ಪದ್ಮಾವತಿ ನಿಧನರಾದರು.'

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+