ಮಧ್ಯಪ್ರದೇಶ ಬಾಲಕಿ ಮೇಲೆ ಅತ್ಯಾಚಾರ ಪ್ರಕರಣ: ಆರೋಪಿಗಳ ಮನೆ ಮೇಲೆ ಬುಲ್ಡೋಜರ್ ಕ್ರಮ!
ಭೋಪಾಲ್ ಜುಲೈ 29: 12 ವರ್ಷದ ಬಾಲಕಿಯ ಮೇಲೆ ಅಮಾನುಷವಾಗಿ ಅತ್ಯಾಚಾರದ ಆರೋಪಿಗಳ ಮನೆಗಳ ಮೇಲೆ ಬುಲ್ಡೋಜರ್ ಕ್ರಮ ಕೈಗೊಳ್ಳಲಾಗಿದೆ. ಮಧ್ಯಪ್ರದೇಶದಲ್ಲಿ ಅಧಿಕಾರಿಗಳು ಆರೋಪಿಗಳ ಮನೆಗಳನ್ನು ಬುಲ್ಡೋಜರ್‌ಗಳಿಂದ ಉರುಳಿಸಿದ್ದಾರೆ. 12 ವರ್ಷದ ಬಾಲಕಿಯ ಮೇಲೆ ಅತ್ಯಾಚಾರ ಮತ್ತು ಕ್ರೂರವಾಗಿ ವರ್ತಿಸಿದ ಆರೋಪದ ಮೇಲೆ ಇಬ್ಬರ ಮನೆಗಳನ್ನು ಕೆಡವಿದ್ದಾರೆ.
ಇಬ್ಬರು ಆರೋಪಿಗಳನ್ನು ರವೀಂದ್ರ ಚೌಧರಿ ಮತ್ತು ಅತುಲ್ ಬಧೌಲಿಯಾ ಎಂದು ಗುರುತಿಸಲಾಗಿದ್ದು, ಸತ್ನಾ ಜಿಲ್ಲೆಯ ಮೈಹಾರ್ ಪಟ್ಟಣದ ಪ್ರಸಿದ್ಧ ದೇವಸ್ಥಾನವನ್ನು ನಿರ್ವಹಿಸುವ ಟ್ರಸ್ಟ್‌ನ ದೈನಂದಿನ ಕೂಲಿ ನೌಕರರಾಗಿದ್ದಾರೆ ಎಂದು ತಿಳಿದು ಬಂದಿದೆ.

ಅತ್ಯಾಚಾರ ಘಟನೆ ಮುನ್ನೆಲೆಗೆ ಬಂದ ನಂತರ ಸಮಿತಿ ಇವರಿಬ್ಬರನ್ನೂ ಕೆಲಸದಿಂದ ವಜಾಗೊಳಿಸಿದೆ. ರಾಜ್ಯದ ವಿದಿಶಾ ಜಿಲ್ಲೆಯ ಉದಯಪುರದಲ್ಲಿ ರವೀಂದ್ರ ಅವರ ಮನೆ ನೆಲಸಮವಾಗಿದ್ದರೆ, ನ್ಯೂ ಬಸ್ತಿಯ ಮಲಿಯನ್ ತೋಲಾದಲ್ಲಿ ಅತುಲ್ ಅವರ ಮನೆಯೂ ನೆಲಸಮವಾಗಿದೆ. ಧ್ವಂಸ ಕಾರ್ಯ ನಡೆಯುತ್ತಿದ್ದಂತೆ ಸ್ಥಳದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು.
ಪ್ರಕರಣ
12 ವರ್ಷದ ಬಾಲಕಿಯ ಮೇಲೆ ಅತ್ಯಾಚಾರ ಎಸಗಿರುವ ಘಟನೆ ಬೆಳಕಿಗೆ ಬಂದಿದೆ. ಬಾಲಕಿಯ ದೇಹದ ಮೇಲೆ ಅನೇಕ ಅಧಿಕ ಕಚ್ಚಿದ ಗಾಯಗಳಿವೆ. ಬಾಲಕಿಯೊಂದಿಗೆ ಇಬ್ಬರು ವ್ಯಕ್ತಿಗಳು ಕ್ರೂರವಾಗಿ ವರ್ತಿಸಿದ್ದಾರೆ. ಈ ಘಟನೆ ಗುರುವಾರ ನಡೆದಿದ್ದು ಇಬ್ಬರನ್ನು ಬಂಧಿಸಲಾಗಿದೆ.
ಇಬ್ಬರೂ ಆರೋಪಿಗಳು ಅಪ್ರಾಪ್ತ ಬಾಲಕಿಯ ಖಾಸಗಿ ಅಂಗಗಳಲ್ಲಿ ಗಟ್ಟಿಯಾದ ವಸ್ತುವನ್ನು ಸೇರಿಸಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಆದರೆ ಆಕೆಯ ವೈದ್ಯಕೀಯ ಪರೀಕ್ಷೆಯ ವರದಿ ಬಂದ ನಂತರವೇ ಇದನ್ನು ದೃಢೀಕರಿಸಬಹುದು ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ತೀವ್ರ ರಕ್ತಸ್ರಾವದಿಂದ ಬಳಲುತ್ತಿದ್ದ ಬಾಲಕಿಯನ್ನು ಸುಧಾರಿತ ವೈದ್ಯಕೀಯ ಆರೈಕೆಗಾಗಿ ವಿಭಾಗೀಯ ಪ್ರಧಾನ ಕಛೇರಿ ರೇವಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಇಬ್ಬರು ಆರೋಪಿಗಳನ್ನು ಶುಕ್ರವಾರ ಸ್ಥಳೀಯ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಇಬ್ಬರ ವಿರುದ್ಧ ಐಪಿಸಿ ಸೆಕ್ಷನ್ 376 (ಅತ್ಯಾಚಾರಕ್ಕೆ ಶಿಕ್ಷೆ), 376 ಡಿಬಿ (12 ವರ್ಷದೊಳಗಿನ ಮಹಿಳೆಯ ಮೇಲೆ ಸಾಮೂಹಿಕ ಅತ್ಯಾಚಾರಕ್ಕೆ ಶಿಕ್ಷೆ), 366 ಎ, 323 (ಸ್ವಯಂಪ್ರೇರಿತವಾಗಿ ಗಾಯಗೊಳಿಸುವುದು), 324 (ಸ್ವಯಂಪ್ರೇರಿತವಾಗಿ ಗಾಯಗೊಳಿಸುವುದು) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಆರೋಪಿಗಳು ಬಾಲಕಿಗೆ ಆಮಿಷವೊಡ್ಡಿ ಆಕೆಯನ್ನು ಪ್ರತ್ಯೇಕ ಸ್ಥಳಕ್ಕೆ ಕರೆದೊಯ್ದು ಅತ್ಯಾಚಾರ ಎಸಗಿ ಹಲ್ಲೆ ನಡೆಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.












Click it and Unblock the Notifications