Budget 2025: ಬಜೆಟ್ ತಯಾರಿ, ಹಲ್ವಾ ಕಾರ್ಯಕ್ರಮದ ಆಸಕ್ತಿಕರ ವಿಚಾರಗಳು
ನವದೆಹಲಿ, ಜನವರಿ 25: ಫೆಬ್ರವರಿ 1ರಂದು ಕೇಂದ್ರ ಹಣಕಾಸು ಮತ್ತು ಕಾರ್ಪೊರೇಟ್ ವ್ಯವಹಾರಗಳ ಸಚಿವೆ ನಿರ್ಮಲಾ ಸೀತಾರಾಮನ್ 2025-26ನೇ ಸಾಲಿನ ಬಜೆಟ್ ಮಂಡಿಸಲಿದ್ದಾರೆ. ಸಾಮಾನ್ಯ ಮತ್ತು ರೈಲ್ವೆ ಬಜೆಟ್ ಒಟ್ಟಿಗೆ ಸೇರಿಸಿ ಮಂಡನೆ ಮಾಡಲಾಗುತ್ತದೆ. ಬಜೆಟ್ ಮಂಡನೆಗೆ ಸುಮಾರು 6 ತಿಂಗಳಿನಿಂದ ತಯಾರಿ ಆರಂಭವಾಗುತ್ತದೆ. ಹಲ್ವಾ ಕಾರ್ಯಕ್ರಮದ ಮೂಲಕ ಬಜೆಟ್ ಪ್ರತಿಗಳ ಮುದ್ರಣಕ್ಕೆ ಚಾಲನೆ ನೀಡಲಾಗುತ್ತದೆ.
ಸಚಿವೆ ನಿರ್ಮಲಾ ಸೀತಾರಾಮನ್ 8ನೇ ಬಾರಿಗೆ ಬಜೆಟ್ ಮಂಡನೆ ಮಾಡುತ್ತಿದ್ದಾರೆ. ಈಗಾಗಲೇ ಬಜೆಟ್ ಪ್ರತಿಗಳ ಮುದ್ರಣಕ್ಕೆ ಚಾಲನೆ ಸಿಕ್ಕಿದೆ. ಲೋಕಸಭೆಯಲ್ಲಿ ಫೆಬ್ರವರಿ 1ರ ಶನಿವಾರ ಬಜೆಟ್ ಮಂಡನೆಯಾಗಲಿದೆ. ಟ್ಯಾಬ್ ಮೂಲಕ ಸಚಿವರು ಡಿಜಿಟಲ್ ಮಾದರಿಯಲ್ಲಿ ಬಜೆಟ್ ಮಂಡಿಸಲಿದ್ದಾರೆ.

ಬಜೆಟ್ ಎಂಬುದು ಸರ್ಕಾರಗಳ ವಾರ್ಷಿಕ ಲೆಕ್ಕಾಚಾರವಾಗಿದೆ. ಇದು ಸರ್ಕಾರದ ಖರ್ಚು ಮತ್ತು ಆದಾಯದ ಮಾಹಿತಿಯನ್ನು ವಲಯವಾರು ನೀಡುತ್ತದೆ. ಏಪ್ರಿಲ್ 1 ರಿಂದ ಮಾರ್ಚ್ 31ರ ತನಕ ಅನ್ವಯವಾಗುವಂತೆ ಪ್ರತಿವರ್ಷ ಬಜೆಟ್ ಮಂಡನೆ ಮಾಡಲಾಗುತ್ತದೆ.
ಬಜೆಟ್ ತಯಾರಿ ಹೇಗೆ?; ಬಜೆಟ್ ಮಂಡನೆ ಮಾಡುವ ದಿನಾಂಕಕ್ಕೂ 6 ತಿಂಗಳ ಮೊದಲು ಬಜೆಟ್ ಮಂಡನೆ ತಯಾರಿಯನ್ನು ಆರಂಭಿಸಲಾಗುತ್ತದೆ. ಸಾಮಾನ್ಯವಾಗಿ ಸೆಪ್ಟೆಂಬರ್ ತಿಂಗಳಿನಲ್ಲಿ ಮುಂದಿನ ಆರ್ಥಿಕ ವರ್ಷದ ಬಜೆಟ್ ಮಂಡನೆ ತಯಾರಿ ಆರಂಭಗೊಳ್ಳುತ್ತದೆ.
ಮೊದಲ ಹಂತದಲ್ಲಿ ಹಣಕಾಸು ಸಚಿವಾಲಯದಿಂದ ಎಲ್ಲಾ ಸಚಿವಾಲಯಗಳಿಗೆ ಈ ವರ್ಷದ ಮತ್ತು ಮುಂದಿನ ವರ್ಷದ ವೆಚ್ಚದ ಮಾಹಿತಿ ನೀಡುವಂತೆ ಸುತ್ತೋಲೆ ಕಳಿಸಲಾಗುತ್ತದೆ. ತೆರಿಗೆ ಸೇರಿದಂತೆ ಇತರ ಆದಾಯವನ್ನು ಸೇರಿಸಿ ಸಚಿವಾಲಯದ ವೆಚ್ಚ, ಆದಾಯದ ಕುರಿತು ಅವುಗಳು ಸಚಿವಾಲಯಕ್ಕೆ ವರದಿ ಸಲ್ಲಿಸುತ್ತವೆ. ಸಚಿವಾಲಯಗಳು ಈ ವರ್ಷದ ಬಜೆಟ್‌ನಲ್ಲಿನ ಅನುದಾನದ ಕುರಿತು ಸಹ ಪ್ರಸ್ತಾವನೆ ಸಲ್ಲಿಕೆ ಮಾಡುತ್ತವೆ.
ಹಣಕಾಸು ಸಚಿವಾಲಯ ಈ ವರ್ಷದ ಬಜೆಟ್ ವೆಚ್ಚದ ಕುರಿತು ಇಲಾಖೆಯ ಉನ್ನತ ಮಟ್ಟದ ಅಧಿಕಾರಿಗಳ ಜೊತೆ ಸಭೆಯನ್ನು ನಡೆಸುತ್ತದೆ. ಅಕ್ಟೋಬರ್ ತಿಂಗಳ ಮಧ್ಯದಲ್ಲಿ ಈ ಸಭೆ ಸಾಮಾನ್ಯವಾಗಿ ಆರಂಭವಾಗುತ್ತದೆ. ಬಳಿಕ ಸಚಿವಾಲಯ ಇಲಾಖೆಗಳ ವೆಚ್ಚದ ಕುರಿತು ಒಂದು ಪ್ರಸ್ತಾವನೆಯನ್ನು ಸಲ್ಲಿಸುತ್ತದೆ. ಈ ಪ್ರಸ್ತಾವನೆಗೆ ಆಕ್ಷೇಪಣೆಗಳನ್ನು ಸಚಿವಾಲಯ ಸಲ್ಲಿಕೆ ಮಾಡಲು ಅವಕಾಶವಿದೆ.
ಸಚಿವಾಲಯಗಳಿಂದ ಆಕ್ಷೇಪಣೆಗಳನ್ನು ಪಡೆದ ಬಳಿಕ ಬಜೆಟ್ ಭಾಷಣದ ಪ್ರತಿ ಸಿದ್ಧತೆ ಆರಂಭವಾಗುತ್ತದೆ. ವಲಯವಾರು, ಇಲಾಖಾವಾರು ಅಂಕಿ ಸಂಖ್ಯೆಗಳನ್ನು ಸೇರಿಸಿ ವರದಿಯನ್ನು ತಯಾರು ಮಾಡಲಾಗುತ್ತದೆ. ಹಣಕಾಸು ಸಚಿವಾಲಯದ ಮುದ್ರಣಾಲಯದಲ್ಲಿಯೇ ಬಜೆಟ್ ಪ್ರತಿ ತಯಾರಾಗುತ್ತದೆ. ಬಜೆಟ್ ಪ್ರತಿ ಮುದ್ರಣವಾಗುವಾಗ ಕೆಲವು ಅಧಿಕಾರಿಗಳಿಗೆ ಮಾತ್ರ ಷರತ್ತುಗಳೊಂದಿಗೆ ಆ ಪ್ರದೇಶಕ್ಕೆ ಪ್ರವೇಶ ಇರುತ್ತದೆ.
'ಹಲ್ವಾ' ಕಾರ್ಯಕ್ರಮದ ಮೂಲಕ ಅಂತಿಮ ಬಜೆಟ್ ಪ್ರತಿ ಮುದ್ರಣಕ್ಕೆ ಚಾಲನೆ ನೀಡಲಾಗುತ್ತದೆ. ಬಜೆಟ್ ತಯಾರಿಕೆಯಲ್ಲಿ ತೊಡಗಿರುವ ಅಧಿಕಾರಿಗಳು ಈ ಮುದ್ರಣ ಕಾರ್ಯ ಪೂರ್ಣಗೊಳ್ಳುವ ತನಕ ಅಲ್ಲಿಯೇ ಇರಬೇಕಿದೆ. ಲೋಕಸಭೆಯಲ್ಲಿ ಬಜೆಟ್ ಮಂಡನೆ ಮಾಡುವ ಮೊದಲು ಪ್ರತಿಯನ್ನು ರಾಷ್ಟ್ರಪತಿಗಳಿಗೆ ನೀಡಲಾಗುತ್ತದೆ. ಸಚಿವ ಸಂಪುಟ ಸಭೆಯಲ್ಲಿ ಒಪ್ಪಿಗೆ ಪಡೆದ ಬಳಿಕ ಲೋಕಸಭೆ ಕಲಾಪದಲ್ಲಿ ಮಂಡಿಸಲಾಗುತ್ತದೆ.












Click it and Unblock the Notifications