Budget 2024; ಸೂರ್ಯೋದಯ ಯೋಜನೆಗೆ ಹೆಚ್ಚು ಅನುದಾನ?
ನವದೆಹಲಿ, ಜನವರಿ 30: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಫೆಬ್ರವರಿ 1ರ ಗುರುವಾರ 2024-25ನೇ ಸಾಲಿನ ಬಜೆಟ್ ಮಂಡಿಸಲಿದ್ದಾರೆ. ಲೋಕಸಭೆ ಚುನಾವಣೆ ಇರುವುದರಿಂದ ಇದು ಮಧ್ಯಂತರ ಬಜೆಟ್ ಆಗಿದೆ. ಆದರೆ ಬಜೆಟ್ ಮೇಲೆ ಹಲವು ನಿರೀಕ್ಷೆಗಳಿವೆ.
ಈ ಬಾರಿಯ ಬಜೆಟ್‌ನಲ್ಲಿ ಇಂಧನ ಕ್ಷೇತ್ರದ ಪ್ರಮುಖ ಯೋಜನೆಯಾದ 'ಪ್ರಧಾನ ಮಂತ್ರಿ ಸೂರ್ಯೋದಯ ಯೋಜನೆ'ಗೆ ಹೆಚ್ಚಿನ ಆದ್ಯತೆ ಸಿಗಲಿದೆ. ಪ್ರಧಾನಿ ನರೇಂದ್ರ ಮೋದಿ ಈ ಯೋಜನೆಯನ್ನು ಈಗಾಗಲೇ ಘೋಷಿಸಿದ್ದಾರೆ.

ಈ ಯೋಜನೆಯಡಿಯಲ್ಲಿ 1 ಕೋಟಿ ಕುಟುಂಬಗಳು ತಮ್ಮ ವಸತಿಯ ಮೇಲ್ಛಾವಣಿಯ ಮೇಲೆ ಸೌರಶಕ್ತಿ ಸೌಲಭ್ಯವನ್ನು ಪಡೆಯುತ್ತವೆ. ಈ ಯೋಜನೆ ಬಡ ಮತ್ತು ಮಧ್ಯಮ ವರ್ಗದವರ ವಿದ್ಯುತ್ ಬಿಲ್ ಅನ್ನು ಕಡಿಮೆ ಮಾಡುವ ಜೊತೆಗೆ ಇಂಧನ ಕ್ಷೇತ್ರದಲ್ಲಿ ಭಾರತವನ್ನು ಸ್ವಾವಲಂಬಿಯನ್ನಾಗಿ ಮಾಡುತ್ತದೆ ಎಂದು ನರೇಂದ್ರ ಮೋದಿ ಹೇಳಿದ್ದಾರೆ.
ಅಯೋಧ್ಯೆಯಲ್ಲಿ ಘೋಷಣೆ; ನರೇಂದ್ರ ಮೋದಿ ಅಯೋಧ್ಯೆಯಲ್ಲಿ ಈ ಯೋಜನೆಯನ್ನು ಘೋಷಣೆ ಮಾಡಿದ್ದಾರೆ. "ಅಯೋಧ್ಯೆಯಲ್ಲಿ ಜೀವನದ ಪವಿತ್ರೀಕರಣದ ಶುಭ ಸಂದರ್ಭದಲ್ಲಿ, ಭಾರತದ ಜನರು ತಮ್ಮ ಮನೆಗಳ ಛಾವಣಿಯ ಮೇಲೆ ಸೌರಶಕ್ತಿ ವ್ಯವಸ್ಥೆಯನ್ನು ಹೊಂದಿರಬೇಕು ಎಂಬ ನನ್ನ ಸಂಕಲ್ಪ ಮತ್ತಷ್ಟು ಬಲಗೊಂಡಿದೆ" ಎಂದು ನರೇಂದ್ರ ಮೋದಿ ಯೋಜನೆ ಕುರಿತು ಮಾತನಾಡಿದರು.
"ನಮ್ಮ ಸರ್ಕಾರವು 1 ಕೋಟಿ ಮನೆಗಳಿಗೆ ಮೇಲ್ಛಾವಣಿಯ ಸೌರಶಕ್ತಿ ( ಸೋಲಾರ್ ರೂಫ್ ಟಾಪ್) ವ್ಯವಸ್ಥೆಯನ್ನು ಸ್ಥಾಪಿಸುವ ಗುರಿಯೊಂದಿಗೆ ಪ್ರಧಾನಮಂತ್ರಿ ಸೂರ್ಯೋದಯ ಯೋಜನೆಯನ್ನು ಪ್ರಾರಂಭಿಸಲಿದೆ" ಎಂದು ಪ್ರಧಾನಿಗಳು ಘೋಷಣೆ ಮಾಡಿದ್ದಾರೆ.
ಈಗಾಗಲೇ ಪ್ರಧಾನಿ ನರೇಂದ್ರ ಮೋದಿ 1 ಕೋಟಿ ಮನೆಗಳಿಗೆ ಮೇಲ್ಛಾವಣಿ ಸೌರಶಕ್ತಿ ಅಳವಡಿಸುವ ಗುರಿಯೊಂದಿಗೆ ಘೋಷಣೆ ಮಾಡಿರುವ ಪ್ರಧಾನಮಂತ್ರಿ ಸೂರ್ಯೋದಯ ಯೋಜನೆಗೆ ಚಾಲನೆ ನೀಡುವ ಕುರಿತು ಸಭೆಯನ್ನು ನಡೆಸಿದ್ದಾರೆ.
ತಮ್ಮ ವಿದ್ಯುತ್ ಬಿಲ್‌ಗಳನ್ನು ಕಡಿಮೆ ಮಾಡಲು ಮತ್ತು ಅವರ ವಿದ್ಯುತ್ ಅಗತ್ಯಗಳಿಗಾಗಿ ಸೌರಶಕ್ತಿ ಅವಲಂಬಿಸುವ ಮೂಲಕ ನಿಜವಾದ ಆತ್ಮನಿರ್ಭರ್ ಆಗಲು ಪ್ರತಿ ಮನೆಯವರು ಸೂರ್ಯನ ಶಕ್ತಿಯನ್ನು ಬಳಸಿಕೊಳ್ಳಬಹುದು ಎಂದು ಸಭೆಯಲ್ಲಿ ಮೋದಿ ಹೇಳಿದ್ದಾರೆ.
ಪ್ರಧಾನಮಂತ್ರಿ ಸೂರ್ಯೋದಯ ಯೋಜನೆಯಡಿ ಸೌರ ಮೇಲ್ಛಾವಣಿ ಸ್ಥಾಪನೆಗಳ ಮೂಲಕ ಉಚಿತವಾಗಿ ವಿದ್ಯುತ್ ಅನ್ನು ಪಡೆಯಬಹುದು ಅಲ್ಲದೇ ಹೆಚ್ಚುವರಿ ವಿದ್ಯುತ್ ಅನ್ನು ಮಾರಾಟ ಮಾಡಿ ಹೆಚ್ಚುವರಿ ಆದಾಯವನ್ನು ಗಳಿಸಬಹುದಾಗಿದೆ. ಹೆಚ್ಚಿನ ಸಂಖ್ಯೆಯಲ್ಲಿ ಮೇಲ್ಛಾವಣಿ ಸೌರಶಕ್ತಿಯನ್ನು ಅಳವಡಿಸಿಕೊಳ್ಳಲು ಜನರಿಗೆ ಅರಿವು ಮೂಡಿಸಲು ಬೃಹತ್ ರಾಷ್ಟ್ರೀಯ ಅಭಿಯಾನವನ್ನು ಪ್ರಾರಂಭಿಸಬೇಕು ಎಂದು ಪ್ರಧಾನಮಂತ್ರಿಗಳು ಸಭೆಯಲ್ಲಿ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ.
ಮನೆಗಳ ಮೇಲೆ ಪ್ರಧಾನಮಂತ್ರಿ ಸೂರ್ಯೋದಯ ಯೋಜನೆಯಡಿ 12 ರಿಂದ 40 ಜಿಗಾವ್ಯಾಟ್ ಸೋಲಾರ್ ವಿದ್ಯುತ್ ಉತ್ಪಾದನೆ ಮಾಡುವ ಫಲಕ ನಿರ್ಮಾಣ ಮಾಡಲಾಗುತ್ತದೆ. ಪ್ರಧಾನ ಮಂತ್ರಿಗಳೇ ಘೋಷಣೆ ಮಾಡಿರುವ ಯೋಜನೆಗೆ ಸರ್ಕಾರ ಬಜೆಟ್‌ನಲ್ಲಿ ಹೆಚ್ಚಿನ ಅನುದಾನವನ್ನು ನೀಡಲಿದೆ.
ಈಗಾಗಲೇ ಅಂತರಾಷ್ಟ್ರೀಯ ಮಟ್ಟದಲ್ಲಿಯೂ ಈ ಕುರಿತು ಚರ್ಚೆಗಳು ನಡೆಯುತ್ತಿವೆ. 'ಅಂತರರಾಷ್ಟ್ರೀಯ ಸೌರ ಮೈತ್ರಿಕೂಟ'ವನ್ನು ಸಹ ರಚನೆ ಮಾಡಲಾಗಿದ್ದು, ಈ ಮೈತ್ರಿಕೂಟ 110 ಸದಸ್ಯ ಮತ್ತು ಸಹಸಹಿದಾರ ದೇಶಗಳನ್ನು ಹೊಂದಿರುವ ಒಂದು ಅಂತರರಾಷ್ಟ್ರೀಯ ಸಂಸ್ಥೆಯಾಗಿದೆ.
ವಿಶ್ವದಾದ್ಯಂತ ಇಂಧನ ಲಭ್ಯತೆ ಮತ್ತು ಭದ್ರತೆಯನ್ನು ಸುಧಾರಿಸಲು ಮತ್ತು ಭವಿಷ್ಯದಲ್ಲಿ ಸೌರಶಕ್ತಿ ಬಳಕೆ ಉತ್ತೇಜಿಸಲು ಸರ್ಕಾರಗಳೊಂದಿಗೆ ಈ ಮೈತ್ರಿಕೂಟ ಕೆಲಸ ಮಾಡುತ್ತದೆ. 2030ರ ವೇಳೆಗೆ ಸೌರಶಕ್ತಿಯಲ್ಲಿ 1 ಟ್ರಿಲಿಯನ್ ಅಮೆರಿಕನ್ ಡಾಲರ್ ಹೂಡಿಕೆಗಳನ್ನು ತೊಡಗಿಸುವುದು ಹಾಗೂ ತಂತ್ರಜ್ಞಾನಗಳ ವಿನಿಮಯ ಮಾಡಿಕೊಳ್ಳುವುದು ಮೈತ್ರಿಕೂಟದ ಪ್ರಮುಖ ಗುರಿಯಾಗಿದೆ.
ಈಗಾಗಲೇ ವಿವಿಧ ದೇಶಗಳಿಂದ ಸೌರ ತಂತ್ರಜ್ಞಾನಕ್ಕೆ ಬೇಡಿಕೆ ಹೆಚ್ಚುತ್ತಿದೆ. ಇಂಧನ ವೆಚ್ಚಗಳನ್ನು ಕಡಿಮೆ ಮಾಡುವ, ಖಾಸಗಿ ಹೂಡಿಕೆಯನ್ನು ಹೆಚ್ಚು ಆಕರ್ಷಿಸುತ್ತದೆ. 2017ರ ಡಿಸೆಂಬರ್ 6ರಂದು 15 ದೇಶಗಳು ಐ.ಎಸ್.ಎ. ರಚನಾ ಒಪ್ಪಂದಕ್ಕೆ ಸಹಿ ಹಾಕುವುದರೊಂದಿಗೆ ಐ.ಎಸ್.ಎ. ಆರಂಭಗೊಂಡಿತು. ಭಾರತದಲ್ಲಿ ಪ್ರಧಾನ ಕಚೇರಿಯನ್ನು ಹೊಂದಿರುವ ಮೊದಲ ಅಂತಾರಾಷ್ಟ್ರೀಯ ಅಂತರ-ಸರಕಾರಿ ಸಂಸ್ಥೆ ಇದು.












Click it and Unblock the Notifications