Black Magic: ತೆಲಂಗಾಣದಲ್ಲಿ ಮಳೆ ಬರದಂತೆ ತಡೆಯಲು ಶಿವಮೊಗ್ಗ ದೇಗುಲದಲ್ಲಿ ಮಾಟ ಮಂತ್ರ: ಕಾಂಗ್ರೆಸ್ ಗಂಭೀರ ಆರೋಪ
ಹೈದರಾಬಾದ್: ತೆಲಂಗಾಣದಲ್ಲಿ ಮಳೆ ಕೊರತೆಯಿಂದ ಉಂಟಾಗುವ ಸಂಕಷ್ಟವನ್ನು ರಾಜಕೀಯ ಲಾಭಕ್ಕಾಗಿ ಬಳಸಿಕೊಳ್ಳುವ ಉದ್ದೇಶದಿಂದ ಬಿಆರ್‌ಎಸ್ (ಭಾರತ ರಾಷ್ಟ್ರ ಸಮಿತಿ) ಶಾಸಕರು ಕರ್ನಾಟಕದ ಶಿವಮೊಗ್ಗ ಜಿಲ್ಲೆಯ ದೇಗುಲವೊಂದರಲ್ಲಿ ಮಾಟಮಂತ್ರ ಮಾಡಿಸಿದ್ದಾರೆ ಎಂದು ತೆಲಂಗಾಣ ಕಾಂಗ್ರೆಸ್ ಅಧ್ಯಕ್ಷ ಮಹೇಶ್ ಕುಮಾರ್ ಗೌಡ್ ಗಂಭೀರ ಆರೋಪ ಮಾಡಿದ್ದಾರೆ.
ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಮಹೇಶ್ ಕುಮಾರ್ ಗೌಡ್, ರಾಜ್ಯದಲ್ಲಿ ಮಳೆಯಾಗದೇ ಬರ ಸಂಭವಿಸಿದರೆ ಅದರಿಂದ ಸಂಕಷ್ಟ ಎದುರಾಗಿದೆ. ಬರ ಪರಿಸ್ಥಿತಿ ಎದುರಾದರೆ ಅದನ್ನು ಸರ್ಕಾರದ ವಿರುದ್ಧ ರಾಜಕೀಯ ಅಸ್ತ್ರವಾಗಿ ಬಳಸಿಕೊಳ್ಳುವ ಉದ್ದೇಶದಿಂದ ಬಿಆರ್‌ಎಸ್ ನಾಯಕರು ಈ ರೀತಿಯ ಕ್ರಮಕ್ಕೆ ಮುಂದಾಗಿದ್ದಾರೆ ಎಂದು ಆರೋಪಿಸಿದರು.

ಇದೇ ಕಾರಣಕ್ಕಾಗಿ ಬಿಆರ್‌ಎಸ್ ಶಾಸಕ ಹರೀಶ್ ರಾವ್ ಅವರು ಕಳೆದ ಮಾರ್ಚ್, ಮೇ ಮತ್ತು ಜೂನ್ ತಿಂಗಳಲ್ಲಿ ಕರ್ನಾಟಕದ ಶಿವಮೊಗ್ಗ ಜಿಲ್ಲೆಯ ಕೆಲವೊಂದು ದೇಗುಲ, ತಮಿಳುನಾಡಿನ ತಿರುಚ್ಚಿ ದೇಗುಲಗಳಿಗೆ ಭೇಟಿ ನೀಡಿ 'ಕ್ಷುದ್ರ ಪೂಜೆ' ಮಾಡಿಸಿದ್ದಾರೆ. ಇದಕ್ಕೆ ನಮ್ಮ ಬಳಿ ಸಾಕ್ಷ್ಯಗಳಿವೆ. ಈ ಬಗ್ಗೆ ಅವರೇ ಸ್ಪಷ್ಟಪಡಿಸಬೇಕು ಎಂದು ತೆಲಂಗಾಣ ಕಾಂಗ್ರೆಸ್ ಅಧ್ಯಕ್ಷ ಮಹೇಶ್ ಕುಮಾರ್ ಗೌಡ್ ಹೇಳಿದ್ದಾರೆ.
ಕರ್ನಾಟಕದ ಶಿವಮೊಗ್ಗ ಜಿಲ್ಲೆಯ ದೇವಾಲಯವೊಂದಕ್ಕೆ ತೆರಳಿ ವಿಶೇಷ ಪೂಜೆ ಹಾಗೂ ಮಾಟಮಂತ್ರ ನಡೆಸಲಾಗಿದೆ ಎಂಬ ಮಾಹಿತಿ ನಮ್ಮ ಬಳಿ ಇದೆ. ಇದು ಮೂಢನಂಬಿಕೆಯನ್ನು ಉತ್ತೇಜಿಸುವ ಪ್ರಯತ್ನವಾಗಿದ್ದು, ಜನರನ್ನು ದಿಕ್ಕುತಪ್ಪಿಸುವ ರಾಜಕೀಯವಾಗಿದೆ ಎಂದು ಟೀಕಿಸಿದರು.ಕಾಂಗ್ರೆಸ್ ಸರ್ಕಾರ ಅಭಿವೃದ್ಧಿ ಮತ್ತು ಜನಕಲ್ಯಾಣಕ್ಕೆ ಆದ್ಯತೆ ನೀಡುತ್ತಿದ್ದು, ಇಂತಹ ಆರೋಪಿತ ಮೂಢನಂಬಿಕೆ ಆಧಾರಿತ ರಾಜಕೀಯವನ್ನು ಜನರು ತಿರಸ್ಕರಿಸಲಿದ್ದಾರೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.
ಬರ ಪರಿಸ್ಥಿತಿ ಉಂಟಾದರೆ ಸರ್ಕಾರದ ವಿರುದ್ಧ ಜನರಲ್ಲಿ ಅಸಮಾಧಾನ ಹೆಚ್ಚಾಗಿ ಬಿಆರ್‌ಎಸ್‌ಗೆ ರಾಜಕೀಯ ಲಾಭವಾಗಬಹುದು. ಆದ್ದರಿಂದ ಮಳೆ ಬಾರದಂತೆ ಮಾಡಲು ಮಾಟಮಂತ್ರದ ಆಶ್ರಯ ಪಡೆಯಲಾಗಿದೆ ಎಂದು ಮಹೇಶ್ ಕುಮಾರ್ ಗೌಡ್ ಅವರು ಆರೋಪಿಸಿದ್ದಾರೆ. ಶಿವಮೊಗ್ಗ ಮತ್ತು ತಿರುಚ್ಚಿಯಲ್ಲಿ ನಡೆಸಿದ ಪೂಜೆಗಳು ಕ್ಷುದ್ರ ಸ್ವರೂಪದವು ಎಂದು ಕರೆದಿದ್ದಾರೆ. ಈ ಆರೋಪ ತೆಲಂಗಾಣ ರಾಜಕೀಯದಲ್ಲಿ ಚರ್ಚೆಗೆ ಕಾರಣವಾಗಿದ್ದು, ಈ ಆರೋಪವನ್ನ ಬಿಆರ್‌ಎಸ್ ಶಾಸಕ ಹರೀಶ್ ರಾವ್ ಅವರು ತಳ್ಳಿ ಹಾಕಿದ್ದಾರೆ.
ಇನ್ನೂ ಬಿಆರ್‌ಎಸ್ ಶಾಸಕ ಹರೀಶ್ ರಾವ್ ಅವರು ಈ ಕುರಿತು ಮಾತನಾಡಿ, ಇದೊಂದು ಕೀಳು ಮಟ್ಟದ ಆರೋಪ. ಇದನ್ನು ನಾನು ತಿರಸ್ಕರಿಸುತ್ತೇನೆ ಎಂದು ಅವರು ಹೇಳಿದ್ದಾರೆ. ಅವರು ಯಾವುದೇ ಮಾಟಮಂತ್ರ ಅಥವಾ ಕ್ಷುದ್ರ ಪೂಜೆ ಮಾಡಿಸಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಹರೀಶ್ ರಾವ್ ಅವರು ದೇವಾಲಯಗಳಿಗೆ ಭೇಟಿ ನೀಡುವುದು ಸಾಮಾನ್ಯವಾಗಿದೆ ಎಂದು ಅವರ ಬೆಂಬಲಿಗರು ಹೇಳುತ್ತಿದ್ದಾರೆ. ರಾಜಕೀಯ ಲಾಭಕ್ಕಾಗಿ ಮಳೆ ತಡೆಯುವಂತಹ ಆರೋಪವು ಅಸಹ್ಯಕರ ಮತ್ತು ನಿರಾಧಾರವಾದುದು ಎಂದು ತಿಳಿಸಿದ್ದಾರೆ.


Click it and Unblock the Notifications
