ದೇವಸ್ಥಾನದೊಳಗೆ ಅರ್ಚಕರಿಂದ ಅ*ಚಾರ ಆರೋಪ: ನೇಹಾ ಬೋರಾ ಹೇಳಿಕೆಗೆ ಬಿಜೆಪಿ ಆಕ್ರೋಶ
'ದೇವಸ್ಥಾನಗಳ ಒಳಗೆ ಅರ್ಚಕರು ಅತ್ಯಾಚಾರ ಎಸಗುತ್ತಾರೆ' ಎಂದು ಅಖಿಲ ಭಾರತ ವಿದ್ಯಾರ್ಥಿ ಸಂಘಟನೆ (AISA) ಅಧ್ಯಕ್ಷೆ ನೇಹಾ ಬೋರಾ ನೀಡಿರುವ ವಿವಾದಾತ್ಮಕ ಹೇಳಿಕೆ ಇದೀಗ ರಾಜಕೀಯ ವಲಯದಲ್ಲಿ ಭಾರೀ ಸಂಚಲನ ಮೂಡಿಸಿದೆ. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರಿಂದ ಬೆಂಬಲ ಪಡೆದಿದ್ದಾರೆ ಎನ್ನಲಾದ ನೇಹಾ ಬೋರಾ ಅವರ ಹಳೆಯ ವಿಡಿಯೋವೊಂದು ಮಂಗಳವಾರ (ನವೆಂಬರ್ 3) ವೈರಲ್ ಆಗಿದ್ದು, ಇದು ಭಾರೀ ವಿವಾದಕ್ಕೆ ಕಾರಣವಾಗಿದೆ.
ಈ ವಿಡಿಯೋದಲ್ಲಿ ಅವರು, ಮಹಿಳೆಯರಿಗೆ ಬ್ರಾಹ್ಮಣ್ಯ ವ್ಯವಸ್ಥೆಯಿಂದ ರಕ್ಷಣೆ ಬೇಕಾಗಿದೆ ಎಂದು ಹೇಳಿದ್ದು, ಬಿಜೆಪಿ ಮಾತ್ರವಲ್ಲದೆ ಕಾಂಗ್ರೆಸ್ ಮಿತ್ರಪಕ್ಷಗಳಾದ ಶಿವಸೇನೆ (ಯುಬಿಟಿ) ಮತ್ತು ಸಮಾಜವಾದಿ ಪಕ್ಷದ (ಎಸ್‌ಪಿ) ನಾಯಕರು ಕೂಡ ನೇಹಾ ಅವರ ಹೇಳಿಕೆಯನ್ನಾ ತೀವ್ರವಾಗಿ ಖಂಡಿಸಿದ್ದಾರೆ.

ನೇಹಾ ಬೋರಾ ವಿರುದ್ಧ ಬಿಜೆಪಿ ಆಕ್ರೋಶ: ರಾಹುಲ್ ಗಾಂಧಿ ಪೋಸ್ಟರ್ ಗರ್ಲ್ ಎಂದು ಟೀಕೆ
ನೇಹಾ ಬೋರಾ ಅವರ ವಿಡಿಯೋವನ್ನ ಹಂಚಿಕೊಂಡಿರುವ ಬಿಜೆಪಿ ರಾಷ್ಟ್ರೀಯ ವಕ್ತಾರ ಪ್ರದೀಪ್ ಭಂಡಾರಿ, ಇದೊಂದು ಹಿಂದೂ ವಿರೋಧಿ ಮನಸ್ಥಿತಿಯ ಪ್ರತೀಕ ಎಂದು ಕಿಡಿಕಾರಿದ್ದಾರೆ. "ಬೋರಾ ಅವರ ಹೇಳಿಕೆಗಳು ರಾಹುಲ್ ಗಾಂಧಿಯವರ ಮಾತುಗಳನ್ನೇ ಹೋಲುತ್ತವೆ. ಆಕೆ ರಾಹುಲ್ ಗಾಂಧಿಯವರ 'ಪೋಸ್ಟರ್ ಗರ್ಲ್'. ಹಿಂದೆ ರಾಹುಲ್ ಗಾಂಧಿ ಕೂಡ ದೇವಸ್ಥಾನಗಳಲ್ಲಿ ಹುಡುಗಿಯರ ಮೇಲೆ ದೈಂಗಿಕ ದೌರ್ಜನ್ಯ ನಡೆಯುತ್ತದೆ ಎಂದು ಹೇಳಿದ್ದರು. ಈ ವಿಡಿಯೋ ಸನಾತನ ಧರ್ಮದ ವಿರುದ್ಧದ ವ್ಯವಸ್ಥಿತ ಅಪಪ್ರಚಾರವನ್ನ ಪ್ರತಿಬಿಂಬಿಸುತ್ತದೆ," ಎಂದು ಭಂಡಾರಿ ವಾಗ್ದಾಳಿ ನಡೆಸಿದ್ದಾರೆ.
ಬಿಜೆಪಿ ಮುಖಂಡ ಗೌರವ್ ಭಾಟಿಯಾ ಕೂಡ ನೇಹಾ ಅವರನ್ನ ತರಾಟೆಗೆ ತೆಗೆದುಕೊಂಡಿದ್ದು, "ಬಾಂಗ್ಲಾದೇಶದ ದಂಗೆಯಿಂದ ಪ್ರೇರಣೆ ಪಡೆದ ಬೋರಾ, ಇಂದು ಅರ್ಚಕರನ್ನ ಅವಮಾನಿಸುತ್ತಿದ್ದಾರೆ. ಇದು ಅಪಾಯಕಾರಿ," ಎಂದಿದ್ದಾರೆ.
ನೇಹಾ ಬೋರಾ ವಿಡಿಯೋದಲ್ಲಿ ಹೇಳಿದ್ದೇನು?
ಬಿಜೆಪಿ ಹಂಚಿಕೊಂಡಿರುವ ವಿಡಿಯೋದಲ್ಲಿ ಮಾತನಾಡಿರುವ ನೇಹಾ ಬೋರಾ, "ಸಂಪೂರ್ಣವಾಗಿ ರಕ್ಷಣೆಯ ಅಗತ್ಯವಿದೆ. ಬ್ರಾಹ್ಮಣ್ಯದ ವ್ಯವಸ್ಥೆಯಿಂದಲೇ ನಮಗೆ ರಕ್ಷಣೆ ಬೇಕಿದೆ. ಬಡವರು, ದೀನದಲಿತರು, ಪ್ರಾಣಿಗಳು ಮತ್ತು ಮಹಿಳೆಯರು ದೌರ್ಜನ್ಯಕ್ಕೆ ಒಳಗಾಗಬೇಕು ಎಂದು ಈ ವ್ಯವಸ್ಥೆ ಪ್ರತಿಪಾದಿಸುತ್ತದೆ. ಬ್ರಾಹ್ಮಣ ಮಹಿಳೆಯರು ಸಹ ಇಲ್ಲಿ ಸುರಕ್ಷಿತವಾಗಿಲ್ಲ. ದೇವಸ್ಥಾನಗಳ ಒಳಗೆ ಅರ್ಚಕರು ಅತ್ಯಾಚಾರ ಎಸಗುತ್ತಾರೆ. ಉನ್ನಾವೋ ಮತ್ತು ಕಠುವಾ ಪ್ರಕರಣಗಳಲ್ಲಿ ನಾವು ಇಂತಹ ಉದಾಹರಣೆಗಳನ್ನ ನೋಡಿದ್ದೇವೆ," ಎಂದು ಗಂಭೀರ ಆರೋಪ ಮಾಡಿದ್ದಾರೆ.
2018ರ ಕಠುವಾ ಪ್ರಕರಣವನ್ನು ಉಲ್ಲೇಖಿಸಿ ಇಡೀ ಧಾರ್ಮಿಕ ವ್ಯವಸ್ಥೆ ಹಾಗೂ ಅರ್ಚಕರನ್ನ ದೂಷಿಸಿರುವುದು ವ್ಯಾಪಕ ಟೀಕೆಗೆ ಗುರಿಯಾಗಿದೆ.
ಇಂಡಿಯಾ ಒಕ್ಕೂಟದ ಮಿತ್ರಪಕ್ಷಗಳಿಂದಲೂ ವಿರೋಧ
ಕಾಂಗ್ರೆಸ್ ನೇತೃತ್ವದ ಇಂಡಿಯಾ (INDIA) ಒಕ್ಕೂಟದ ಮಿತ್ರಪಕ್ಷಗಳು ಕೂಡ ನೇಹಾ ಬೋರಾ ಹೇಳಿಕೆಯನ್ನ ಖಂಡಿಸಿವೆ. ಶಿವಸೇನೆಯ ಮಾಜಿ ಸಂಸದೆ ಪ್ರಿಯಾಂಕಾ ಚತುರ್ವೇದಿ ಪ್ರತಿಕ್ರಿಯಿಸಿ, "ಇದು ಅತ್ಯಂತ ದುರದೃಷ್ಟಕರ. ದೇವಸ್ಥಾನಗಳಲ್ಲಿ ಅತ್ಯಾಚಾರ ನಡೆಯುತ್ತದೆ ಮತ್ತು ಬ್ರಾಹ್ಮಣ ಮಹಿಳೆಯರು ಅಸುರಕ್ಷಿತರಾಗಿದ್ದಾರೆ ಎನ್ನುವುದು ಸರಿಯಲ್ಲ. ಈ ರೀತಿಯ ಕೀಳುಮಟ್ಟದ ಭಾಷೆ ಬಳಸುವುದು ತಪ್ಪು. ಎಡ ಅಥವಾ ಬಲ ಯಾವುದೇ ಇರಲಿ, ಇಂತಹ ತೀವ್ರಗಾಮಿ ಆಲೋಚನೆಗಳು ದೇಶಕ್ಕೆ ಹಾನಿಕಾರಕ," ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಸಮಾಜವಾದಿ ಪಕ್ಷದ ಸಂಸದ ರಾಜೀವ್ ರೈ ಕೂಡ, "ಯಾವುದೇ ಧರ್ಮ, ಜಾತಿ ಅಥವಾ ಸಮುದಾಯದ ಬಗ್ಗೆ ಇಂತಹ ಹೇಳಿಕೆಗಳನ್ನ ನೀಡುವುದು ಒಪ್ಪಲು ಸಾಧ್ಯವಿಲ್ಲ. ಇದರಿಂದ ಬಿಜೆಪಿಗೇ ಲಾಭವಾಗುತ್ತದೆ," ಎಂದು ಎಚ್ಚರಿಸಿದ್ದಾರೆ.
ನೇಹಾ ಬೋರಾ ವಿರುದ್ಧ ದೂರು ದಾಖಲು
ವಿವಾದ ಭುಗಿಲೇಳುತ್ತಿದ್ದಂತೆ, ದೆಹಲಿ ಮೂಲದ ಸುಪ್ರೀಂ ಕೋರ್ಟ್ ವಕೀಲೆ ಅಮಿತಾ ಸಚದೇವ ಅವರು ನೇಹಾ ಬೋರಾ ವಿರುದ್ಧ ನವದೆಹಲಿಯ ಸಂಸತ್ ಮಾರ್ಗ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. "ಧಾರ್ಮಿಕ ಸಮುದಾಯದ ವಿರುದ್ಧ ಇಂತಹ ಬೇಜವಾಬ್ದಾರಿಯುತ ಆರೋಪಗಳು ಕೋಮು ಸೌಹಾರ್ದತೆಯನ್ನ ಕದಡುವ ಸಾಮರ್ಥ್ಯ ಹೊಂದಿವೆ," ಎಂದು ಅವರು ತಮ್ಮ ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಇತ್ತೀಚೆಗಷ್ಟೇ ನೀಟ್ ಪ್ರತಿಭಟನೆಯಲ್ಲಿ ಮುಂಚೂಣಿಯಲ್ಲಿದ್ದ 29 ವರ್ಷದ ನೇಹಾ ಬೋರಾ, ರಾಹುಲ್ ಗಾಂಧಿ ಅವರೊಂದಿಗೆ ಹಲವು ವೇದಿಕೆಗಳಲ್ಲಿ ಕಾಣಿಸಿಕೊಂಡಿದ್ದರು. ಇದೀಗ ಅವರ ಹಳೆಯ ವಿಡಿಯೋ ಕಾಂಗ್ರೆಸ್ ಮತ್ತು ಇಂಡಿಯಾ ಒಕ್ಕೂಟಕ್ಕೆ ಹೊಸ ತಲೆನೋವಾಗಿ ಪರಿಣಮಿಸಿದೆ.


Click it and Unblock the Notifications
