ದೆಹಲಿಯಲ್ಲಿ ಕಾಂಗ್ರೆಸ್ ಸೋಲು: ಸ್ಟಾರ್ ಪ್ರಚಾರಕ ಡಿಕೆಶಿಗೆ ಅಭಿನಂದನೆ ಎಂದ ಅಶೋಕ್
ದೆಹಲಿ ವಿಧಾನಸಭಾ ಚುನಾವಣೆಯ ಮತ ಎಣಿಕೆ ನಡೆದಿದ್ದು, ಬಿಜೆಪಿ ಹಲವು ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದೆ. ಆಡಳಿತಾರೂಢ ಆಮ್ ಆದ್ಮಿ ಪಕ್ಷ ಕೂಡ ತೀವ್ರ ಹಿನ್ನಡೆಯಲ್ಲಿದ್ದರೆ, ಕಾಂಗ್ರೆಸ್ ಹೀನಾಯ ಸೋಲಿನ ಸುಳಿಯಲ್ಲಿದೆ. ದೆಹಲಿ ಚುನಾವಣೆಗೆ ಸ್ಟಾರ್ ಕ್ಯಾಂಪೇನರ್ ಆಗಿ ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಭರ್ಜರಿ ಪ್ರಚಾರ ಮಾಡಿದ್ದರು. ಈ ಬಗ್ಗೆ ಬಿಜೆಪಿ ನಾಯಕ ಆರ್.ಅಶೋಕ್ ಅವರು ಡಿ.ಕೆ.ಶಿವಕುಮಾರ್ ಅವರನ್ನು ಗೇಲಿ ಮಾಡಿದ್ದಾರೆ.
ದೆಹಲಿ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಶೂನ್ಯ ಸಾಧನೆ ಮಾಡಲು ರಾಹುಲ್ ಗಾಂಧಿ ಅವರ ಬೆನ್ನಿಗೆ ಬೆನ್ನು ಕೊಟ್ಟು ಸಹಕರಿಸಿದ ಸ್ಟಾರ್ ಕ್ಯಾಂಪೆನರ್ ಡಿ.ಕೆ.ಶಿವಕುಮಾರ್ ಅವರಿಗೆ ಅವರಿಗೆ ಹೃತ್ಪೂರ್ವಕ ಅಭಿನಂದನೆಗಳು ಎಂದು ಆರ್.ಅಶೋಕ್ ವ್ಯಂಗ್ಯ ಮಾಡಿದ್ದಾರೆ.

ದೆಹಲಿ ವಿಧಾನಸಭೆಯ ಕಳಪೆ ಫಲಿತಾಂಶವನ್ನೇ ಆಧಾರವಾಗಿಟ್ಟುಕೊಂಡು ಸಿಎಂ ಸಿದ್ದರಾಮಯ್ಯ ಅವರನ್ನ ಕಡೆಗಣಿಸಿದರೆ ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷದ ಗತಿ ಏನಾಗಲಿದೆ? ಎಂದು ಸಿದ್ದರಾಮಯ್ಯ ಬಣದವರು ಕಾಂಗ್ರೆಸ್ ಹೈಕಮಾಂಡ್‌ಗೆ ರಹಸ್ಯ ಪತ್ರಗಳನ್ನು ಬರೆಯುತ್ತಿದ್ದಾರೆ ಎನ್ನುವ ಸುದ್ದಿ ರಾಜಕೀಯ ಪಡಸಾಲೆಯಲ್ಲಿ ಜೋರಾಗಿಯೇ ಹರಿದಾಡುತ್ತಿದೆ ಎಂದು ಕಾಲೆಳೆದಿದ್ದಾರೆ.
ಈ ಹಿಂದೆ ದೆಹಲಿ ವಿಧಾನಸಭೆ ಚುನಾವಣಾ ಪ್ರಚಾರಕ್ಕೆ ಸ್ಟಾರ್ ಪ್ರಚಾರಕರ ಪಟ್ಟಿಯಲ್ಲಿ ಕರ್ನಾಟಕದಿಂದ ಡಿ.ಕೆ.ಶಿವಕುಮಾರ್ ಅವರ ಹೆಸರಿತ್ತು. ಸಾಮಾನ್ಯವಾಗಿ ಸಿದ್ದರಾಮಯ್ಯ ಅವರು ಕೂಡ ಸ್ಟಾರ್ ಪ್ರಚಾರಕರ ಪಟ್ಟಿಯಲ್ಲಿರುತ್ತಿದ್ದರು. ಆದರೆ, ದೆಹಲಿ ಚುನಾವಣೆಗೆ ಸಿದ್ದರಾಮಯ್ಯ ಅವರು ಹೆಸರು ಸ್ಟಾರ್ ಪ್ರಚಾರಕರ ಪಟ್ಟಿಯಲ್ಲಿ ಇರಲಿಲ್ಲ. ಈ ವಿಚಾರವಾಗಿಯೂ ಬಿಜೆಪಿ ನಾಯಕರು ಕಾಂಗ್ರೆಸ್ ಬಗ್ಗೆ ವ್ಯಂಗ್ಯ ಮಾಡಿದ್ದರು.
ರಾಜಧಾನಿಯಲ್ಲಿ ಬಿಜೆಪಿ ಜಯಭೇರಿ ಬಾರಿಸಿದೆ. ದೆಹಲಿ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಐತಿಹಾಸಿಕ ವಿಜಯ ಸಾಧಿಸಿದ್ದು, ಈ ಅಭೂತಪೂರ್ವ ಗೆಲುವಿಗೆ ಕಾರಣೀಭೂತರಾದ ಎಲ್ಲ ನಾಯಕರಿಗೆ ಹಾಗೂ ಕಾರ್ಯಕರ್ತರಿಗೆ ಹೃತ್ಪೂರ್ವಕ ಅಭಿನಂದನೆಗಳು. ಹರಿಯಾಣ, ಮಹಾರಾಷ್ಟ್ರ ವಿಧಾನಸಭೆ ಚುನಾವಣೆಗಳ ನಂತರ ಈಗ ದೆಹಲಿ ವಿಧಾನಸಭೆ ಚುನಾವಣೆಯಲ್ಲೂ ಕಾಂಗ್ರೆಸ್ ಪಕ್ಷ ಕಳಪೆ ಸಾಧನೆ ತೋರಿದ್ದು, ದೇಶದ ಜನತೆ ಕಾಂಗ್ರೆಸ್ ಪಕ್ಷವನ್ನು ಸಂಪೂರ್ಣವಾಗಿ ತಿರಸ್ಕರಿಸಿದ್ದಾರೆ ಎಂದು ಅಶೋಕ್ ವಾಗ್ದಾಳಿ ನಡೆಸಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಅವರ ನಾಯಕತ್ವ ಹಾಗೂ ಬಿಜೆಪಿಯ ಸಕಾರಾತ್ಮಕ ರಾಜಕಾರಣಕ್ಕೆ ಮೊಹರು ಒತ್ತಿರುವ ರಾಷ್ಟ್ರ ರಾಜಧಾನಿ ದೆಹಲಿಯ ಜನತೆ, ಇಂಡಿ ಮೈತ್ರಿಕೂಟಕ್ಕೆ ಭವಿಷ್ಯವಿಲ್ಲ ಎನ್ನುವುದನ್ನು ಮತ್ತೊಮ್ಮೆ ನಿರೂಪಿಸಿದ್ದಾರೆ ಎಂದು ಅಶೋಕ್ ಹೇಳಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರ ದೂರದೃಷ್ಟಿಯ ನಾಯಕತ್ವದಲ್ಲಿ ದೆಹಲಿ ಜನರು ಮತ್ತೊಮ್ಮೆ ವಿಕಸಿತ ಭಾರತ, ಆತ್ಮನಿರ್ಭರ ಭಾರತ ಮತ್ತು ತುಷ್ಟೀಕರಣ ರಾಜಕೀಯದ ಮೇಲೆ ಅಭಿವೃದ್ಧಿ-ಚಾಲಿತ ಆಡಳಿತವನ್ನು ಆಯ್ಕೆ ಮಾಡಿದ್ದಾರೆ. ಈ ಆದೇಶವು ಬಲವಾದ ನಾಯಕತ್ವ, ಆರ್ಥಿಕ ಬೆಳವಣಿಗೆ ಮತ್ತು ರಾಷ್ಟ್ರೀಯ ಭದ್ರತೆಯಲ್ಲಿ ಇಟ್ಟಿರುವ ನಂಬಿಕೆಗೆ ಸಾಕ್ಷಿ. ಅವರ ಅಚಲ ಬೆಂಬಲಕ್ಕಾಗಿ ಕಾರ್ಯಕರ್ತರು ಮತ್ತು ನಾಗರಿಕರಿಗೆ ಕೃತಜ್ಞತೆಗಳು. ಭಾರತವು ಆತ್ಮವಿಶ್ವಾಸದಿಂದ ಮುನ್ನಡೆಯುತ್ತದೆ ಎಂದು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅಭಿನಂದಿಸಿದ್ದಾರೆ.












Click it and Unblock the Notifications