ವಿಶಿಷ್ಟ ದಾಖಲೆ ಬರೆದ ಬಿಜೆಪಿ ಈಗ ವಿಶ್ವದಲ್ಲೇ ನಂಬರ್ 1
1951ರಲ್ಲಿ ಶ್ಯಾಂ ಪ್ರಸಾದ್ ಮುಖರ್ಜಿ ಸ್ಥಾಪಿಸಿದ ಜನಸಂಘ ತುರ್ತು ಪರಿಸ್ಥಿತಿಯ ವೇಳೆ ಜನತಾ ಪಾರ್ಟಿಯಲ್ಲಿ ವಿಲೀನವಾಯಿತು. ಜನತಾ ಪರಿವಾರ ಇಬ್ಬಾಗಗೊಂಡ ನಂತರ 1980ರಲ್ಲಿ ಅಧಿಕೃತವಾಗಿ ರಾಜಕೀಯ ಪಕ್ಷವಾಗಿ ಹೊರಹೊಮ್ಮಿದ ಬಿಜೆಪಿ ಈಗ ಜಾಗತಿಕ ಮಟ್ಟದಲ್ಲಿ ನೂತನ ದಾಖಲೆ ಬರೆದಿದೆ.
ವಿಶ್ವದಲ್ಲೇ ನಮ್ಮ ಪಕ್ಷವೀಗ ಅತಿಹೆಚ್ಚು ಸದಸ್ಯರನ್ನು ಹೊಂದಿರುವ ಪಕ್ಷವಾಗಿದೆ. ಈ ಮೂಲಕ, ಚೀನಾದ ಕಮ್ಯೂನಿಸ್ಟ್ ಪಾರ್ಟಿಯನ್ನು ಹಿಂದಿಕ್ಕಿದ್ದೇವೆಂದು ಬಿಜೆಪಿ ಅಧಿಕೃತ ಹೇಳಿಕೆ ನೀಡಿದೆ. (50 ಲಕ್ಷ ದಾಟಿದ ಬಿಜೆಪಿ ಸದಸ್ಯರ ಸಂಖ್ಯೆ)
1984ರ ಲೋಕಸಭಾ ಚುನಾವಣೆಯಲ್ಲಿ ಕೇವಲ ಎರಡು ಸ್ಥಾನ ಗೆದ್ದಿದ್ದ ಬಿಜೆಪಿ ನಂತರ ಹಿಂದಿರುಗಿ ನೋಡಲೇ ಇಲ್ಲ. ಪಕ್ಷ ಕೇಂದ್ರದಲ್ಲಿ ಅಧಿಕಾರಕ್ಕೆ ಬರಲು ಹಲವು ಬಾರಿ ವಿಫಲವಾಗಿದ್ದರೂ, ವೈಯಕ್ತಿಕವಾಗಿ ಬಿಜೆಪಿ ತನ್ನ ಶಕ್ತಿಯನ್ನು ಪ್ರತೀ ಚುನಾವಣೆಯಲ್ಲೂ ವೃದ್ದಿಸಿಕೊಂಡು ಬರುತ್ತಲೇ ಇದೆ.
ಬಿಜೆಪಿ ರಾಷ್ಟ್ರಾಧ್ಯಕ್ಷರಾದ ನಂತರ ಪಕ್ಷದ ಸದಸ್ಯತ್ವ ಅಭಿಯಾನಕ್ಕೆ ಹೊಸ ಆಯಾಮ ನೀಡಿದ ಅಮಿತ್ ಶಾ, ತಾವು ಅಂದುಕೊಂಡಿದ್ದ ಗುರಿಯನ್ನು ನಿರಾಂತಕವಾಗಿ ಸಾಧಿಸಿದ್ದಾರೆ.
ಎಲ್ಲಾ ನಗರ ಸೇವಕರು, ಶಾಸಕರು ಮತ್ತು ಸಂಸದರಿಗೆ ಇಂತಿಷ್ಟು ಸದಸ್ಯರನ್ನು ಪಕ್ಷಕ್ಕೆ ನೊಂದಾಣಿ ಮಾಡಿಸಲೇಬೇಕೆಂದು ಕಟ್ಟಪ್ಪಣೆ ಮಾಡಿದ್ದ ಅಮಿತ್ ಶಾ, ಪಕ್ಷಕ್ಕೀಗ ವಿಶ್ವ ಮಟ್ಟದಲ್ಲಿ ಹೊಸ ಮೆರುಗನ್ನು ನೀಡುವಲ್ಲಿ ಯಶಸ್ವಿಯಾಗಿದ್ದಾರೆ. ಪಕ್ಷದ ಸದಸ್ಯರ ಸಂಖ್ಯೆ ಎಷ್ಟು? ಮುಂದೆ ಓದಿ..

ಚೀನಾದ ಕಮ್ಯೂನಿಸ್ಟ್ ಪಕ್ಷ
ಸಿಪಿಸಿ (ಕಮ್ಯೂನಿಸ್ಟ್ ಪಾರ್ಟಿ ಆಫ್ ಚೀನಾ) ಎಂದೇ ಕರೆಯಲ್ಪಡುವ ಈ ಪಕ್ಷವನ್ನು 1921ರಲ್ಲಿ Chen Duxiu ಮತ್ತು Li Dazhao ಸ್ಥಾಪಿಸಿದ್ದರು. ಈ ಪಕ್ಷ ಸದ್ಯ ಒಟ್ಟು 8.6 ಕೋಟಿ ಸದಸ್ಯರನ್ನು ಹೊಂದಿದೆ.

ಮಾರ್ಚ್ 31ಕ್ಕೆ ಮುಗಿದ ಅಭಿಯಾನ
ವಿಶೇಷ ಸದಸ್ಯತ್ವ ಅಭಿಯಾನ ಮಂಗಳವಾರ ಮಾರ್ಚ್ 31ಕ್ಕೆ ಮುಕ್ತಾಯಗೊಂಡಿದೆ. ಕಳೆದ ನವೆಂಬರ್ ತಿಂಗಳಲ್ಲಿ ಆರಂಭವಾಗಿದ್ದ ಸದಸ್ಯತ್ವ ಅಭಿಯಾನಕ್ಕೆ ಕರ್ನಾಟಕವೂ ಸೇರಿದಂತೆ ದೇಶದಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿತ್ತು.

ಪಕ್ಷದ ರಾಷ್ಟ್ರೀಯ ಕಾರ್ಯಕಾರಿಣಿಯಲ್ಲಿ ಶಾ ಘೋಷಣೆ
ಏಪ್ರಿಲ್ ಎರಡರಿಂದ ಬೆಂಗಳೂರಿನಲ್ಲಿ ಆರಂಭವಾಗಲಿರುವ ಪಕ್ಷದ ಮೂರು ದಿನದ ರಾಷ್ಟ್ರೀಯ ಕಾರ್ಯಕಾರಿಣಿಯಲ್ಲಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಒಟ್ಟು ಸದಸ್ಯರ ಕರಾರುವಕ್ಕಾದ ಸಂಖ್ಯೆಯನ್ನು ಘೋಷಿಸಲಿದ್ದಾರೆ.

ವಿಶ್ವದಲ್ಲೇ ಬಿಜೆಪಿ ನಂಬರ್ ಒನ್
8.6 ಕೋಟಿ ಸದಸ್ಯರನ್ನು ಹೊಂದಿರುವ ಕಮ್ಯೂನಿಸ್ಟ್ ಪಾರ್ಟಿಯನ್ನು ಬಿಜೆಪಿ ಹಿಂದಿಕ್ಕಿದೆ. ಮಾರ್ಚ್ 28ನೇ ತಾರೀಕಿಗೆ ಅನ್ವಯವಾಗುವಂತೆ ಪಕ್ಷ ಒಟ್ಟು 8.8 ಕೋಟಿ ಸದಸ್ಯರನ್ನು ಹೊಂದುವ ಮೂಲಕ ವಿಶ್ವದಲ್ಲೇ ಅತಿಹೆಚ್ಚು ಸದಸ್ಯರನ್ನು ಹೊಂದಿರುವ ರಾಜಕೀಯ ಪಕ್ಷವಾಗಿ ಹೊರಹೊಮ್ಮಿದೆ.

ಹತ್ತು ಕೋಟಿ ಟಾರ್ಗೆಟ್
ಮಾರ್ಚ್ 31ರೊಳಗೆ ಹತ್ತು ಕೋಟಿ ಸದಸ್ಯರನ್ನು ಪಕ್ಷಕ್ಕೆ ನೊಂದಾಯಿಸುವ ಗುರಿಯನ್ನು ಅಮಿತ್ ಶಾ ಹೊಂದಿದ್ದರು. ಅಂತಿಮ ಅಂಕಿ ಅಂಶವನ್ನು ಅಮಿತ್ ಶಾ ಇನ್ನೆರಡು ದಿನದಲ್ಲಿ ಘೋಷಿಸಲಿದ್ದಾರೆ.












Click it and Unblock the Notifications