Jharkhand Election: ಜಾರ್ಖಂಡ್‌ನಲ್ಲಿ ಅಧಿಕಾರ ಯಾರಿಗೆ? ಸಮೀಕ್ಷೆಗಳು ಹೇಳಿದ್ದೇನು
ಜಾರ್ಖಂಡ್ ವಿಧಾನಸಭಾ ಚುನಾವಣೆ 2024ರ ಮತದಾನ ಮುಕ್ತಾಯವಾಗಿದೆ. 81 ಕ್ಷೇತ್ರಗಳಲ್ಲಿ ಎರಡು ಹಂತಗಳಲ್ಲಿ ಮತದಾನ ನಡೆದಿದೆ. ನವೆಂಬರ್ 13ರಂದು ಮೊದಲ ಹಂತದಲ್ಲಿ 43 ಕ್ಷೇತ್ರಗಳಲ್ಲಿ ಮತದಾನ ನಡೆದಿದ್ದು, ನವೆಂಬರ್ 20ರಂದು 38 ಕ್ಷೇತ್ರಗಳಲ್ಲಿ ಮತದಾನ ನಡೆದಿದೆ. ನವೆಂಬರ್ 23ರಂದು ಮತ ಎಣಿಕೆ ನಡೆಯಲಿದ್ದು, ಜಾರ್ಖಂಡ್ ಜನತೆ ಯಾರಿಗೆ ಒಲವು ತೋರಿಸಿದ್ದಾನೆ ಎನ್ನುವುದು ಬಹಿರಂಗವಾಗಲಿದೆ.
ಎರಡನೇ ಹಂತದ ಮತದಾನ ಮುಕ್ತಾಯವಾದ ಬಳಿಕ ಹಲವು ಸಂಸ್ಥೆಗಳು, ಸುದ್ದಿವಾಹಿನಿಗಳು ಚುನಾವಣೋತ್ತರ ಸಮೀಕ್ಷೆ ನಡೆಸಿದ್ದು, ಬಿಡುಗಡೆ ಮಾಡಿವೆ. ಈ ಸಮೀಕ್ಷೆಗಳನ್ನು ಫಲಿತಾಂಶದ ಮುನ್ಸೂಚನೆ ಎನ್ನಲಾಗುತ್ತದೆ. ಹಲವು ಎಕ್ಸಿಟ್ ಪೋಲ್‌ಗಳು ಕೆಲವು ಬಾರಿ ತಪ್ಪಾದರೂ, ಮತ್ತೆ ಕೆಲವು ಸಮೀಕ್ಷೆಗಳು ಫಲಿತಾಂಶಕ್ಕೆ ಹತ್ತಿರವಾಗಿರುತ್ತವೆ.

ಅಧಿಕಾರ ಯಾರಿಗೆ?
ನಾಲ್ಕು ಎಕ್ಸಿಟ್ ಪೋಲ್‌ಗಳ ಪ್ರಕಾರ ಜಾರ್ಖಂಡ್‌ನಲ್ಲಿ ಈ ಬಾರಿ ಬಿಜೆಪಿ ನೇತೃತ್ವದ ಎನ್‌ಡಿಎ ಗೆಲುವು ಸಾಧಿಸಲಿದೆ. ಮತ್ತೊಂದು ಸಮೀಕ್ಷೆಯು ಈ ಬಾರಿ ಮುಖ್ಯಮಂತ್ರಿ ಹೇಮಂತ್ ಸೊರೆನ್ ಅವರ ಜಾರ್ಖಂಡ್ ಮುಕ್ತಿ ಮೋರ್ಚಾ (ಜೆಎಂಎಂ) ಭರ್ಜರಿ ಗೆಲುವು ಸಾಧಿಸಿ ಎರಡನೇ ಬಾರಿ ಅಧಿಕಾರ ಹಿಡಿಯಲಿದೆ ಎಂದು ಹೇಳಿದೆ. ಜಾರ್ಖಂಡ್‌ನಲ್ಲಿ ಬಹುಮತ ಪಡೆಯಲು 41 ಸ್ಥಾನಗಳಲ್ಲಿ ಗೆಲುವು ಸಾಧಿಸಬೇಕಿದೆ.
ಮ್ಯಾಟ್ರಿಜ್ ಎಕ್ಸಿಟ್‌ಪೋಲ್ ಪ್ರಕಾರ ಜಾರ್ಖಂಡ್‌ನ 81 ಸ್ಥಾನಗಳಲ್ಲಿ ಎನ್‌ಡಿಎ 42 - 47 ಸ್ಥಾನಗಳಲ್ಲಿ ಗೆಲುವು ಸಾಧಿಸಲಿದ್ದು, ಇಂಡಿಯಾ ಒಕ್ಕೂಟ 25-30 ಸ್ಥಾನಗಳಲ್ಲಿ ಗೆಲುವು ಸಾಧಿಸುತ್ತದೆ ಎಂದು ಹೇಳಿದೆ. ಪೀಪಲ್ಸ್ ಪಲ್ಸ್ ಎಕ್ಸಿಟ್ ಪೋಲ್ ಪ್ರಕಾರ ಎನ್‌ಡಿಎ 44-53 ಸ್ಥಾನಗಳಲ್ಲಿ ಗೆಲುವು ಸಾಧಿಸಲಿದ್ದು, ಇಂಡಿಯಾ ಬ್ಲಾಕ್ 25-37 ಸ್ಥಾನಗಳಲ್ಲಿ ಗೆಲುವು ಸಾಧಿಸುತ್ತದೆ ಎಂದು ಹೇಳಿದೆ.
ಟೈಮ್ಸ್ ನೌ - ಜೆವಿಸಿ ಎಕ್ಸಿಟ್ ಪೋಲ್ ಪ್ರಕಾರ ಎನ್‌ಡಿಎ 40-44 ಸ್ಥಾನಗಳಲ್ಲಿ ಗೆಲುವು ಸಾಧಿಸಲಿದ್ದು, ಇಂಡಿಯಾ ಒಕ್ಕೂಟ 30-40 ಸ್ಥಾನಗಳಲ್ಲಿ ಗೆಲುವು ಸಾಧಿಸಲಿದೆ ಎಂದು ತಿಳಿಸಿದೆ. ಆಕ್ಸಿಸ್ ಮೈ ಇಂಡಿಯಾ ಎಕ್ಸಿಟ್ ಪೋಲ್ ಪ್ರಕಾರ ಜೆಎಂಎಂ ನೇತೃತ್ವದ ಮೈತ್ರಿಕೂಟಕ್ಕೆ 53 ಸ್ಥಾನಗಳು ಸಿಗಲಿದ್ದು ಎನ್‌ಡಿಎಗೆ 25 ಸ್ಥಾನ ಬರುವ ಸಾಧ್ಯತೆ ಇದೆ ಎಂದು ಹೇಳಿದೆ.
ಎಲೆಕ್ಟೋರಲ್ ಎಡ್ಜ್ ಸಮೀಕ್ಷೆಗಳ ಪ್ರಕಾರ ಎನ್‌ಡಿಎ 32 ಸ್ಥಾನಗಳಲ್ಲಿ ಗೆಲುವು ಸಾಧಿಸಲಿದ್ದು, ಇಂಡಿಯಾ ಒಕ್ಕೂಟ 42 ಸ್ಥಾನಗಳಲ್ಲಿ ಗೆಲುವ ಸಾಧಿಸಬಹುದು ಎಂದು ಭವಿಷ್ಯ ನುಡಿದಿದೆ. ಹಲವು ಸಮೀಕ್ಷೆಗಳು ಎನ್‌ಡಿಎ ಪರವಾಗಿದ್ದರೆ ಒಂದು ಸಮೀಕ್ಷೆ ಮಾತ್ರ ಜೆಎಂಎಂ ಪರವಾಗಿದೆ.
ಎಷ್ಟು ಸ್ಥಾನಗಳಲ್ಲಿ ಸ್ಪರ್ಧೆ
ಬಿಜೆಪಿ 68 ಸ್ಥಾನಗಳಲ್ಲಿ ಸ್ಪರ್ಧಿಸಿದ್ದು, ಆಲ್ ಜಾರ್ಖಂಡ್ ಸ್ಟೂಡೆಂಟ್ಸ್ ಯೂನಿಯನ್ (ಎಜೆಎಸ್‌ಯು) 10 ಸ್ಥಾನಗಳಲ್ಲಿ, ಜನತಾ ದಳ (ಯುನೈಟೆಡ್) 2 ಸ್ಥಾನಗಳಲ್ಲಿ ಮತ್ತು ಲೋಕ ಜನಶಕ್ತಿ ಪಕ್ಷ (ರಾಮ್ ವಿಲಾಸ್) 1 ಸ್ಥಾನಗಳಲ್ಲಿ ಸ್ಪರ್ಧಿಸಿದೆ.
ಆಡಳಿತಾರೂಢ ಜೆಎಂಎಂ 41 ಸ್ಥಾನಗಳಲ್ಲಿ, ಕಾಂಗ್ರೆಸ್ 30 ಸ್ಥಾನಗಳಲ್ಲಿ, ರಾಷ್ಟ್ರೀಯ ಜನತಾ ದಳ 6 ಸ್ಥಾನಗಳಲ್ಲಿ ಮತ್ತು ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಮಾರ್ಕ್ಸಿಸ್ಟ್-ಲೆನಿನಿಸ್ಟ್) 4 ಸ್ಥಾನಗಳಲ್ಲಿ ಸ್ಪರ್ಧಿಸಿವೆ.












Click it and Unblock the Notifications