Bihar Election 2025: ಅಖಾಡದಲ್ಲಿ ಪ್ರಧಾನಿ, ರಾಗಾ, ಅಮಿತ್ ಶಾ, ಜೆಪಿ ನಡ್ಡಾ...ರಂಗೇರಿದ ಚುನಾವಣಾ ಕಣ
ಪಾಟ್ನಾ, ಅಕ್ಟೋಬರ್ 30: ಬಿಹಾರ ರಾಜ್ಯದ ಚುನಾವಣಾ ಕಣ ರಂಗೇರುತ್ತಿದೆ. ಪ್ರಚಾರ ಭರಾಟೆ ಜೋರಾಗಿದ್ದು, ಕಾವು ಹೆಚ್ಚಾಗುತ್ತಿದೆ. ಇಂದು ಗುರುವಾರ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮತ್ತು ಬಿಜೆಪಿ ಅಧ್ಯಕ್ಷ ಜೆ ಪಿ ನಡ್ಡಾ ಬಿಹಾರದಲ್ಲಿ ಹಲವಾರು ಸಾರ್ವಜನಿಕ ರ್ಯಾಲಿಗಳಲ್ಲಿ ಪಾಲ್ಗೊಳ್ಳಲಿದ್ದಾರೆ.
ಪ್ರಧಾನಿ ಮೋದಿ ಮುಜಫರ್‌ಪುರ ಮತ್ತು ಸರನ್ ಜಿಲ್ಲೆಗಳಲ್ಲಿ ಎರಡು ಸಾರ್ವಜನಿಕ ರ್ಯಾಲಿಗಳನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಪ್ರಧಾನಿ ಅಕ್ಟೋಬರ್ 24 ರಂದು ಸಮಷ್ಟಿಪುರ ಮತ್ತು ಬೇಗುಸರಾಯ್‌ನಲ್ಲಿ ರ್ಯಾಲಿಗಳನ್ನು ಉದ್ದೇಶಿಸಿ ಮಾತನಾಡುವ ಮೂಲಕ ಬಿಹಾರ ವಿಧಾನಸಭಾ ಚುನಾವಣೆಗೆ ಎನ್‌ಡಿಎ ಪ್ರಚಾರ ಅಧಿಕೃತವಾಗಿದ್ದ ಅರಂಭಿಸಿದ್ದರು. ಕಾಂಗ್ರೆಸ್ ಸೇರಿದಂತೆ ವಿಪಕ್ಷಗಳ ವಿರುದ್ಧ ಚಾಟಿ ಬೀಸಿದ್ದರು. ಇದೀಗ ಆಡಳಿತ ಪಕ್ಷ ಮತ್ತು ವಿಪಕ್ಷ ಏಕಕಾಲಕ್ಕೆ ರ್ಯಾಲಿ, ಪ್ರಚಾರ ನಡೆಸುತ್ತಿರುವುದು ತೀವ್ರ ಕುತೂಹಲ ಕೆರಳಿಸಿದೆ.

ಇಂದಿನ ರ್ಯಾಲಿ ಬಗ್ಗೆ ಎಕ್ಸ್ ಪೋಸ್ಟ್ ಮಾಡಿರುವ ಪ್ರಧಾನಿ ಅವರು, "ಬಿಹಾರದಲ್ಲಿ ನನ್ನ ಕುಟುಂಬ ಸದಸ್ಯರು ಬಿಜೆಪಿ-ಎನ್‌ಡಿಎಗೆ ಭಾರಿ ಗೆಲುವು ಸಾಧಿಸಲು ಚುನಾವಣೆಯಲ್ಲಿ ಸ್ಪರ್ಧಿಸುತ್ತಿದ್ದಾರೆ. ಈ ಉತ್ಸಾಹ ಭರಿತ ವಾತಾವರಣದಲ್ಲಿ, ಮುಜಫರ್‌ಪುರದಲ್ಲಿ ಇಂದು ಬೆಳಗ್ಗೆ ಮತ್ತು ಮಧ್ಯಾಹ್ನ 12.45 ಗಂಟೆಗೆ ಛಪ್ರಾದಲ್ಲಿ ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಲಿದ್ದೇನೆ' ಎಂದು ಬರೆದಿದ್ದಾರೆ. "ವಿಧಾನಸಭೆ ಚುನಾವಣೆಯಲ್ಲಿ, ರಾಜ್ಯದ ನನ್ನ ಸಹೋದರ ಸಹೋದರಿಯರು ಮತ್ತೊಮ್ಮೆ ಭರ್ಜರಿ ಗೆಲುವನ್ನು ಸಾರುತ್ತಾರೆ ಎಂದು ನನಗೆ ವಿಶ್ವಾಸವಿದೆ" ಎಂದು ಅವರು ಬರೆದುಕೊಂಡಿದ್ದಾರೆ.
ಚುನಾವಣೆ ಸಂಬಂಧ ಬಿಹಾರ ರಾಜ್ಯದಲ್ಲಿ ಕಳೆದ ಎರಡು ದಿನಗಳಿಂದ ಕೇಂದ್ರ ಗೃಹ ಸಚಿವ ಅಮಿತ್ ಶಾ ಮತ್ತು ಲೋಕಸಭೆಯಲ್ಲಿ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು ಬೀಡು ಬಿಟ್ಟಿದ್ದಾರೆ. ಬಿಹಾರದ ವಿವಿಧ ಭಾಗಗಳಲ್ಲಿ ಕ್ರಮವಾಗಿ ತಮ್ಮ ಎನ್‌ಡಿಎ ಮತ್ತು ಭಾರತ ಬಣದ ಅಭ್ಯರ್ಥಿಗಳ ಪರವಾಗಿ ವಿವಿಧ ಪ್ರಚಾರ ಕಾರ್ಯಕ್ರಮಗಳಲ್ಲಿ ಅಮಿತ್ ಶಾ ಅವರು ಪಾಲ್ಗೊಳ್ಳಲಿದ್ದಾರೆ. ರಾಹುಲ್ ಗಾಂಧಿ ಸಹ ಆಡಳಿತ ಪಕ್ಷದ ವಿರುದ್ಧ ಆರೋಪಗಳ ಮಳೆ ಗರೆಯುವ ನಿರೀಕ್ಷೆ ಇದೆ. ಪಕ್ಷಗಳ ಪ್ರಮುಖ ಮುಖಂಡರೇ ಚುನಾವಣೆ ಕಣದಲ್ಲಿರುವುದರಿಂದ ಬಿಹಾರದಲ್ಲಿ ಹೊಸ ಬಗೆಯ ಕಳೆ ಬಂದಿದೆ.
ರಾಹುಲ್ ಗಾಂಧಿಯವರು ನಳಂದ ಮತ್ತು ಶೇಖ್‌ಪುರ ಜಿಲ್ಲೆಗಳಲ್ಲಿ ರ್ಯಾಲಿಗಳನ್ನು ಉದ್ದೇಶಿಸಿ ಮಾತನಾಡಲಿದ್ದಾರೆ, ಆದರೆ ಶಾ ಅವರು ಲಖಿಸರೈ, ಮುಂಗೇರ್, ನಳಂದ ಮತ್ತು ಪಾಟ್ನಾದಲ್ಲಿ ನಾಲ್ಕು ಚುನಾವಣಾ ಸಭೆಗಳನ್ನು ನಿಗದಿಪಡಿಸಿದ್ದಾರೆ. ಇತ್ತ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜಗತ್ ಪ್ರಕಾಶ್ ನಡ್ಡಾ ಅವರು ಬಕ್ಸರ್ ಮತ್ತು ಪಾಟ್ನಾ ಜಿಲ್ಲೆಗಳಲ್ಲಿ ಪ್ರಚಾರ ಸಮಾರಂಭಗಳಲ್ಲಿ ಪಾಲ್ಗೊಳ್ಳಲಿದ್ದಾರೆ.
ಬಿಹಾರದ 243 ವಿಧಾನಸಭಾ ಕ್ಷೇತ್ರಗಳಿಗೆ ನವೆಂಬರ್ 6 ಮತ್ತು 11ರಂದು ಎರಡು ಹಂತಗಳಲ್ಲಿ ಚುನಾವಣೆ ನಡೆಯಲಿದೆ. ಈ ಸಂಬಂಧ ವಿವಿಧ ಪಕ್ಷಗಳ ಚುನಾವಣೆ ಪ್ರವಾರದ ಅಬ್ಬರ ಜೋರಾಗಿದೆ.












Click it and Unblock the Notifications