ಬಿಜೆಪಿ ಶಾಸಕರೊಬ್ಬರು ನಕಲಿ ಪದವಿ ಹೊಂದಿದ್ದಾರೆ: ಜೆಡಿಯು
ಪಾಟ್ನಾ ಮೇ 19: ಭಾರತೀಯ ಜನತಾ ಪಕ್ಷದ (ಬಿಜೆಪಿ) ಶಾಸಕರು ನಕಲಿ ಪದವಿ ಹೊಂದಿದ್ದು, ಈ ಮೂಲಕ ಬಿಹಾರ ಮತ್ತೊಂದು ನಕಲಿ ಪದವಿ ವಿವಾದಕ್ಕೆ ಸಾಕ್ಷಿಯಾಗಿದೆ. ಚುನಾವಣಾ ಆಯೋಗಕ್ಕೆ 2020ರಲ್ಲಿ ಸಲ್ಲಿಕೆಯಾದ ಅಫಿಡವಿಟ್ ಆಧಾರದಲ್ಲಿ ಬಿಜೆಪಿ ವಿರುದ್ಧ ಜನತಾ ದಳ (ಯುನೈಟೆಡ್) ಆರೋಪಿಸಿದ್ದಾರೆ.
ಇತ್ತೀಚೆಗೆ ನಡೆದ ಸುದ್ದಿಗೋಷ್ಠಿಯಲ್ಲಿ ಈ ಕುರಿತು ಆರೋಪ ಮಾಡಿದ ಜೆಡಿಯು ವಕ್ತಾರ ನೀರಜ್ ಕುಮಾರ್ ಅವರು, ಬಿಜೆಪಿ ಶಾಸಕ ಹರಿಭೂಷಣ್ ಠಾಕೂರ್ ಬಚೌಲ್ ಪದವಿ ಪ್ರಮಾಣಪತ್ರ ಮಹಿಳಾ ಕಾಲೇಜಿನದ್ದು ಎಂದು ಆರೋಪಿಸಿದರು. ಬಚೌಲ್ ಅವರು ಸಲ್ಲಿಸಿರುವ ಅಫಿಡವಿಟ್‌ನಲ್ಲಿ 1993 ರಲ್ಲಿ ತಾವು ಸೀತಾಮರ್ಹಿ ಜಿಲ್ಲೆಯ ರಾಮ್ ಸೇವಕ್ ಸಿಂಗ್ ಕಾಲೇಜಿನಲ್ಲಿ ಪದವಿ ಪಡೆದಿದ್ದಾಗಿ ತಿಳಿಸಿದ್ದಾರೆ.

ಆದರೆ ವಾಸ್ತವವಾಗಿ ಆ ಕಾಲೇಜು ಮಹಿಳಾ ಕಾಲೇಜು. ಹಾಗಾದರೆ ಬಚೌಲ್ ಆ ಕಾಲೇಜಿನಿಂದ ಹೇಗೆ ಪದವಿ ಪಡೆದಿದ್ದಾರೆ?. ಈ ಪ್ರಮಾಣ ಪತ್ರ ನಕಲಿಯಾಗಿದೆ. ಈ ಸಂಬಂಧ ರಾಜ್ಯ ಚುನಾವಣಾ ಆಯೋಗದಿಂದ ತನಿಖೆ ನಡೆಸುವಂತೆ ನೀರಜ್ ಆಗ್ರಹಿಸಿದರು.
ಬಿಜೆಪಿ ಶಾಸಕರ ಪ್ರತಿಕ್ರಿಯೆ, ಸಮರ್ಥನೆ ಏನು?
ಪ್ರಧಾನಿಯ ಪದವಿ ಕುರಿತು ಪ್ರಶ್ನೆ ಮಾಡುವ ಬಿಜೆಪಿಯಲ್ಲಿ ಮಾತ್ರ ಹೀಗೆ ನಡೆಯಲು ಸಾಧ್ಯ. ಪ್ರಧಾನಿ ನರೇಂದ್ರ ಮೋದಿ ಅವರ ಶೈಕ್ಷಣಿಕ ಅರ್ಹತೆಯ ಬಗ್ಗೆ ಪ್ರಶ್ನೆಗಳನ್ನು ಎತ್ತುತ್ತಿರುವ ಪ್ರತಿಪಕ್ಷಗಳ ಪರವಾಗಿ ಅವರು ಬ್ಯಾಟ್ ಬೀಸಿ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.
ಈ ಮಧ್ಯೆ ನಕಲಿ ಪದವಿ ವಿಚಾರ ಕುರಿತು ಸ್ವತಃ ಪ್ರತಿಕ್ರಿಯಿಸಿರುವ ಬಿಜೆಪಿ ಶಾಸಕ ಹರಿಭೂಷಣ್ ಠಾಕೂರ್ ಬಚೌಲ್ ಅವರು, 2020ರ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ತಾವು ಸಲ್ಲಿಸಿದ್ದ ಅಫಿಡವಿಟ್‌ನಲ್ಲಿ 'ಟೈಪಿಂಗ್ ವೇಳೆ ತಪ್ಪಾಗಿದೆ' ಎಂದು ಸ್ಪಷ್ಟನೆ ನೀಡಿದ್ದಾರೆ.

ಇನ್ನೂ ಸೀತಾಮರ್ಹಿಯಲ್ಲಿ ವಾಸ್ತವವಾಗಿ ಕೇವಲ ಮಹಿಳಾ ಕಾಲೇಜು ಮಾತ್ರ ಇಲ್ಲ. ಹುಡುಗರಿಗಾಗಿ ರಾಮ್ ಸಕಲ್ ಸಿಂಗ್ ಕಾಲೇಜು ಮತ್ತು ಮಹಿಳಾ ರಾಮ್ ಸೇವಕ್ ಸಿಂಗ್ ಕಾಲೇಜು ಎಂದು ಎರಡು ಕಾಲೇಜುಗಳು ಇವೆ. ನಾನು 1993 ರಲ್ಲಿ ರಾಮ್ ಸಕಲ್ ಕಾಲೇಜಿನಿಂದ ಪದವಿ ಪಡೆದಿದ್ದೇನೆ, ಆದರೆ ರಾಮ್ ಸೇವಕ್ ಸಿಂಗ್ ಕಾಲೇಜ್ ಅನ್ನು ತಪ್ಪಾಗಿ ಟೈಪ್ ಮಾಡಲಾಗಿದೆ ಎಂದು ಅವರು ತಾವು ಸಲ್ಲಿಸಿರುವ ಅಫಿಡವಿಟ್‌ನಲ್ಲಿರುವ ಮಾಹಿತಿಯನ್ನು ಸಮರ್ಥಿಸಿಕೊಂಡರು.
ತನಿಖೆಗೆ ನಾನು ಸಿದ್ಧ ಎಂದ ಬಚೌಲ್
ಮಾಹಿತಿಯಲ್ಲಿ ತಪ್ಪಾಗಿ ನಮೂದಾಗಿದೆ. ಹೊರತು ನನ್ನಿಂದ ತಪ್ಪಾಗಿಲ್ಲ. ಯಾವುದೇ ತನಿಖೆಗೆ ನಾನು ಸಿದ್ಧ. ಜೆಡಿಯು ಪಕ್ಷವು ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡಾಗಲೂ ನಾನು ನಿತೀಶ್ ಕುಮಾರ್ ಅವರನ್ನು ತೀವ್ರವಾಗಿ ಟೀಕಿಸಿದ್ದೇನೆ ಎಂಬ ಕಾರಣಕ್ಕಾಗಿ ಜೆಡಿಯು ಈ ವಿಚಾರವಾಗಿ ಇದೀಗ ಗುರಿಯಾಗಿಸಿಕೊಂಡಿದೆ ಎಂದು ಬಚೌಲ್ ತಿರುಗೇಟು ಕೊಟ್ಟರು.
ಬಿಹಾರದಲ್ಲಿ ನಕಲಿ ಪದವಿಗಳ ದುಷ್ಪರಿಣಾಮ ಕುರಿತು ಮಾತನಾಡಿದ ಪಾಟ್ನಾ ವಿಶ್ವವಿದ್ಯಾಲಯದ ಮಾಜಿ ಪ್ರಾಧ್ಯಾಪಕ ಎನ್.ಕೆ. ಚೌಧರಿ, ಬಿಹಾರದಲ್ಲಿ ಶಿಕ್ಷಣ ವ್ಯವಸ್ಥೆ ಕುಸಿತದ ಹಾದಿ ಹಿಡಿದಿದೆ, ಪರಿಣಾಮ ಹೆಚ್ಚಿನ ಪ್ರಮಾಣದಲ್ಲಿ ನಕಲಿ ಪದವಿಗಳ ಸೃಷ್ಟಿಯಾಗುತ್ತಿವೆ ಎಂದು ಅವರು ಕಳವಳ ವ್ಯಕ್ತಪಡಿಸಿದರು.
ಸುಮಾರು ಎರಡು ದಶಕಗಳ ಹಿಂದೆ ಕೆಲವು ವ್ಯಕ್ತಿಗಳು ಇದೇ ರೀತಿ ನಕಲಿ ಪದವಿ ಪಡೆದದ್ದ ಸುದ್ದಿಯಾಗಿತ್ತು. ಹೀಗೆ ಪದವಿ ನೀಡಿದ ಉಪಕುಲಪತಿಗಳು ವಿರುದ್ಧ ವಿಜಿಲೆನ್ಸ್ ಪ್ರಕರಣ ದಾಖಲಾಗಿತ್ತು. ವಿವಿ ಸೇವಾ ಆಯೋಗ ಅಧ್ಯಕ್ಷರು ಸಹ ಜೈಲುಪಾಲಾಗಿದ್ದರು.
ಬಿಹಾರದಲ್ಲಿ ಶಿಕ್ಷಣ ಸಂಸ್ಥೆ ಹೀಗೆ ನಕಲಿ ಪದವಿಯ ಆರೋಪದ ಮೇಲೆ ವಿವಾದಕ್ಕೆ ಗುರಿಯಾಗಿದ್ದು ಇದೇ ಮೊದಲೇನಲ್ಲ. ದೆಹಲಿಯ ಆಮ್ ಆದ್ಮಿ ಪಕ್ಷದ (ಎಎಪಿ) ಸರ್ಕಾರದ ಮಾಜಿ ಕಾನೂನು ಸಚಿವ ಜಿತೇಂದರ್ ಸಿಂಗ್ ತೋಮರ್ ಅವರು ಬಿಹಾರದ ತಿಲ್ಕಾ ಮಾಂಝಿ ಭಾಗಲ್ಪುರ್ ವಿಶ್ವವಿದ್ಯಾಲಯದಿಂದ ನಕಲಿ ಕಾನೂನು ಪದವಿ ಪಡೆದಿದ್ದಾರೆ ಎಂಬ ಆರೋಪ ಇದೆ ಎಂದು ನಳಂದ ಮುಕ್ತ ವಿಶ್ವವಿದ್ಯಾಲಯದ ಉಪಕುಲಪತಿ ವಿ.ಎಸ್ ದುಬೆ ತಿಳಿಸಿದರು.












Click it and Unblock the Notifications