ಬಿಹಾರ ವಿಧಾನಸಭೆ ಚುನಾವಣೆ 2025ರ ಫಲಿತಾಂಶ ಈ ಕಾರಣಗಳಿಗೆ ಮುಖ್ಯ
ಬಿಹಾರ ವಿಧಾನಸಭೆ ಚುನಾವಣೆ ಫಲಿತಾಂಶಕ್ಕೆ ಕ್ಷಣಗಣನೆ ಪ್ರಾರಂಭವಾಗಿದೆ. ಇನ್ನು ಬಿಹಾರ ವಿಧಾನಸಭೆ ಚುನಾವಣೆಯ ಫಲಿತಾಂಶವು ದೇಶದ ಮಟ್ಟದಲ್ಲಿ ಪ್ರಮುಖವಾಗಿದೆ. ಬಿಹಾರ ಹಾಗೂ ಉತ್ತರ ಪ್ರದೇಶದಲ್ಲಿ ಯಾರು ಅಧಿಕಾರಕ್ಕೆ ಬರುತ್ತಾರೆ ಎನ್ನುವ ಆಧಾರದ ಮೇಲೆ ರಾಷ್ಟ್ರ ರಾಜಕೀಯವೂ ನಿರ್ಧಾರವಾಗುತ್ತದೆ. ಕೇಂದ್ರದಲ್ಲಿ ಅಧಿಕಾರ ಪಡೆಯುವುದಕ್ಕೆ ಉತ್ತರ ಪ್ರದೇಶ ಹಾಗೂ ಬಿಹಾರ ರಾಜ್ಯಗಳ ಲೋಕಸಭಾ ಕ್ಷೇತ್ರಗಳು ಪ್ರಮುಖ ಮೆಟ್ಟಿಲುಗಳಾಗಿವೆ. ಇನ್ನು ಬಿಹಾರದಲ್ಲಿ ಯಾವ ಗ್ಯಾರಂಟಿ ಯೋಜನೆ ಹಾಗೂ ಯಾವ ಪ್ರಣಾಳಿಕೆ ಅಥವಾ ವಿಷಯಗಳಿಗೆ ಜನ ಮತ ನೀಡಿದ್ದಾರೆ ಎನ್ನುವುದು ಪ್ರಮುಖವಾಗುತ್ತದೆ. ಇದರ ಹೊರತಾಗಿಯೂ ಈ ರಾಜ್ಯದ ಫಲಿತಾಂಶ ಹಲವು ಕಾರಣಗಳಿಗೆ ಪ್ರಮುಖವಾಗಿದೆ.
ಹಿಂದಿ ಭಾಷಿಕರು ಹೆಚ್ಚಾಗಿರುವ ರಾಜ್ಯಗಳಲ್ಲಿ ಬಿಹಾರ ಪ್ರಮುಖವಾಗಿದೆ. ಅತಿ ದೊಡ್ಡ ರಾಜ್ಯಗಳಲ್ಲೂ ಒಂದಾಗಿದೆ. ಅಲ್ಲದೇ ರಾಜ್ಯದ ಕಳಪೆ ಆರ್ಥಿಕ ಸ್ಥಿತಿಯ ಕಾರಣದಿಂದಾಗಿ ಬಿಹಾರ ಚುನಾವಣೆಯ ಫಲಿತಾಂಶ ಮಹತ್ವದ್ದಾಗಿದೆ. ಬಿಹಾರವು ಭಾರತದ ಒಟ್ಟು ಆರ್ಥಿಕತೆಗೆ ಸರಿಸುಮಾರು 2.8% ಕೊಡುಗೆ ನೀಡುತ್ತದೆ. ಆದರೆ ಜನಸಂಖ್ಯೆಯಲ್ಲಿ 10% ರಷ್ಟಿದೆ, ಇದು ಇತರ ಹಲವು ರಾಜ್ಯಗಳಿಗೆ ಹೋಲಿಸಿದರೆ ಪ್ರತಿ ವ್ಯಕ್ತಿಗೆ ಸರಾಸರಿ ಆರ್ಥಿಕ ಉತ್ಪಾದನೆ (GDP) ಕಡಿಮೆಯಾಗಿದೆ ಎಂದು ಹೇಳಲಾಗುತ್ತದೆ.

ಬಿಹಾರ ವಿಧಾನಸಭೆ ಚುನಾವಣೆಯಲ್ಲಿ ಈ ಬಾರಿ ದಾಖಲೆಯ ಪ್ರಮಾಣದ ಶೇ.67.13% ಮತದಾನ ದಾಖಲಾಗಿದೆ. ಇದು ಇತ್ತೀಚಿನ ವರ್ಷಗಳಲ್ಲೇ ಹೆಚ್ಚು ಮತದಾನದ ದಾಖಲೆಯಾಗಿದೆ. ಅಲ್ಲದೇ ಚುನಾವಣಾ ಇತಿಹಾಸದಲ್ಲಿ ಅತಿ ಹೆಚ್ಚು. ಈ ಬಾರಿಯೂ ನಿತೀಶ್ ಕುಮಾರ್ ಮುಖ್ಯಮಂತ್ರಿ ಆಗಲಿದ್ದಾರೆಯೇ ಅಥವಾ ಮಾಜಿ ಉಪಮುಖ್ಯಮಂತ್ರಿ ತೇಜಸ್ವಿ ಯಾದವ್ ಈ ಬಾರಿ ಅಧಿಕಾರವನ್ನು ವಶಪಡಿಸಿಕೊಳ್ಳುತ್ತಾರೆಯೇ ಎನ್ನುವ ಕುತೂಹಲ ಹೆಚ್ಚಾಗಿದೆ.
ಅಲ್ಲದೇ ಈ ರಾಜ್ಯದ ಅಭಿವೃದ್ಧಿ ಹಾಗೂ ಪ್ರಗತಿಯ ವಿಚಾರದಲ್ಲಿ ಈ ಹಿಂದಿನ ಸರ್ಕಾರದ ಅವಧಿಯಲ್ಲಿ ಹಲವು ಗಂಭೀರವಾದ ಆರೋಪಗಳು ಕೇಳಿ ಬಂದಿವೆ. ಅಲ್ಲದೇ ಆಡಳಿತ ವಿರೋಧಿ ಅಲೆ ಇರುವುದು ಹಾಗೂ ಸರಣಿ ಸೇತುವೆಗಳ ಕುಸಿತ ವಿಚಾರವೂ ಇದೆ. ಇದೆಲ್ಲದರ ನಡುವೆ ಮತದಾರರು ಯಾರ ಪರವಾಗಿ ಮತಚಲಾಯಿಸಿದ್ದಾರೆ ಎನ್ನುವ ಕುತೂಹಲಕ್ಕೆ ಇಂದು ತೆರೆ ಬೀಳಲಿದೆ.
ಬಿಹಾರ ಫಲಿತಾಂಶ ನಿರ್ಣಾಯಕ
ಬಿಹಾರ ವಿಧಾನಸಭೆ ಚುನಾವಣೆ ಫಲಿತಾಂಶಕ್ಕೆ ಕ್ಷಣಗಣನೆ ಪ್ರಾರಂಭವಾಗಿದೆ. ಬಿಹಾರದ ವಿಧಾನಸಭೆ ಚುನಾವಣೆಯ ಫಲಿತಾಂಶ ಕರ್ನಾಟಕ ಸರ್ಕಾರ ಹಾಗೂ ಕೇಂದ್ರ ಸರ್ಕಾರದ ಮೇಲೂ ಪ್ರಭಾವ ಬೀರುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ ಈ ಚುನಾವಣೆಯ ಫಲಿತಾಂಶ ಭಾರೀ ಕುತೂಹಲ ಮೂಡಿಸಿದೆ. ಬಿಹಾರದಲ್ಲಿ ಯಾರು ಅಧಿಕಾರಕ್ಕೆ ಬರಲಿದ್ದಾರೆ ಎನ್ನುವ ಆಧಾರದ ಮೇಲೆ ಹಲವು ಪ್ರಮುಖ ರಾಜಕೀಯ ಬದಲಾವಣೆಗಳು ಆಗುವ ನಿರೀಕ್ಷೆ ಇದೆ. ಈ ರಾಜ್ಯದ ಅಹಿಂದ ಮತದಾರರು ಯಾರ ಪರವಾಗಿದ್ದಾರೆ ಎನ್ನುವ ಮಾಹಿತಿ ಇನ್ನು ಕೆಲವೇ ಗಂಟೆಗಳಲ್ಲಿ ನಿಖರವಾಗಿ ತಿಳಿಯಲಿದೆ.












Click it and Unblock the Notifications