ಮಕ್ಕಳಿಗೆ ಕೊರೊನಾ ಲಸಿಕೆ; ದತ್ತಾಂಶ ವರದಿ ಸಲ್ಲಿಸಿದ ಭಾರತ್ ಬಯೋಟೆಕ್
ಹೈದರಾಬಾದ್, ಅಕ್ಟೋಬರ್ 07: ಮಕ್ಕಳಿಗೆ ತನ್ನ 'ಕೋವ್ಯಾಕ್ಸಿನ್' ಕೊರೊನಾ ಲಸಿಕೆಯ 2/3 ಹಂತದ ವೈದ್ಯಕೀಯ ಪ್ರಯೋಗವನ್ನು ಪೂರ್ಣಗೊಳಿಸಿರುವ ಭಾರತ್ ಬಯೋಟೆಕ್, ಕೇಂದ್ರ ಔಷಧ ನಿಯಂತ್ರಕ- ಡಿಸಿಜಿಐಗೆ ದತ್ತಾಂಶ ವರದಿಯನ್ನು ಬುಧವಾರ ಸಲ್ಲಿಸಿರುವುದಾಗಿ ಕಂಪನಿ ಮೂಲಗಳು ತಿಳಿಸಿವೆ.
2-18 ವರ್ಷದ ಮಕ್ಕಳಿಗೆ ಕೋವ್ಯಾಕ್ಸಿನ್ ಲಸಿಕೆ ನೀಡುವ ಸಂಬಂಧ ಕ್ಲಿನಿಕಲ್ ಪ್ರಯೋಗ ನಡೆಸಲಾಗಿದ್ದು, ಪ್ರಯೋಗ ಫಲಿತಾಂಶ ವರದಿಯನ್ನು ಸಂಬಂಧಿತ ಸಂಸ್ಥೆಗೆ ಸಲ್ಲಿಸಲಾಗಿದೆ. ಈ ವರದಿ ಲಸಿಕೆಯ 1,2 ಹಾಗೂ 3ನೇ ಹಂತದ ಪರೀಕ್ಷಾ ವಿವರಗಳು, ಫಲಿತಾಂಶಗಳನ್ನು ಒಳಗೊಂಡಿದೆ ಎಂದು ಪಿಟಿಐಗೆ ಸಂಸ್ಥೆ ತಿಳಿಸಿದೆ.
ಸೆಪ್ಟೆಂಬರ್ 21ರಂದು ಮಕ್ಕಳಲ್ಲಿ ಕೋವ್ಯಾಕ್ಸಿನ್ ಲಸಿಕೆಯ 2/3ನೇ ಹಂತದ ಪ್ರಯೋಗ ಪೂರ್ಣಗೊಂಡಿದೆ. 1000 ಮಕ್ಕಳ ಮೇಲೆ ಪ್ರಯೋಗ ನಡೆಸಿದ್ದು, ದತ್ತಾಂಶ ವಿಶ್ಲೇಷಣೆ ಸಾಗುತ್ತಿದೆ ಎಂದು ಭಾರತ್ ಬಯೋಟೆಕ್ ಇಂಟರ್‌ನ್ಯಾಷನಲ್ ಲಿಮಿಟೆಡ್ ವ್ಯವಸ್ಥಾಪಕ ನಿರ್ದೇಶಕ ಕೃಷ್ಣ ಎಲ್ಲಾ ತಿಳಿಸಿದ್ದಾರೆ.

2 ಹಾಗೂ 3ನೇ ಹಂತದ ಪ್ರಯೋಗದಲ್ಲಿ, 28 ದಿನಗಳ ಅಂತರದಲ್ಲಿ ಕೋವ್ಯಾಕ್ಸಿನ್ ಲಸಿಕೆಯ ಎರಡು ಡೋಸ್‌ಗಳನ್ನು ಪ್ರಯೋಗಕ್ಕೆ ಒಳಪಟ್ಟವರಿಗೆ ನೀಡಲಾಗಿದೆ.
ಲಸಿಕಾ ಪ್ರಯೋಗ ಮೂರು ಹಂತಗಳಲ್ಲಿ ನಡೆಯಲಿದೆ. ಮೊದಲು 12 ರಿಂದ 18 ವರ್ಷದ ಮಕ್ಕಳಿಗೆ, ನಂತರ 6-12 ವರ್ಷದವರಿಗೆ ಹಾಗೂ ಅಂತಿಮವಾಗಿ 2-6 ವರ್ಷದ ಮಕ್ಕಳಿಗೆ ಲಸಿಕೆ ಪ್ರಯೋಗ ನಡೆಸಲಾಗುತ್ತದೆ. ಉತ್ತಮ ಫಲಿತಾಂಶ ಬಂದರೆ ಅಂತಹ ಮಕ್ಕಳಿಗೆ 28 ದಿನದ ಬಳಿಕ 2ನೇ ಡೋಸ್ ನೀಡಲಾಗುತ್ತದೆ ಎಂದು ಎಲಾ ತಿಳಿಸಿದ್ದರು.
ಅಕ್ಟೋಬರ್ ಅಥವಾ ನವೆಂಬರ್ ತಿಂಗಳಿನಲ್ಲಿ ದೇಶದಲ್ಲಿ ಕೊರೊನಾ ಮೂರನೇ ಅಲೆ ಕಾಣಿಸಿಕೊಳ್ಳಲಿದ್ದು, ಈ ಅಲೆ ಮಕ್ಕಳ ಮೇಲೆ ಹೆಚ್ಚು ಪ್ರಭಾವ ತೋರಲಿದೆ ಎಂದು ಕೆಲವು ತಜ್ಞರು ಅಂದಾಜು ಮಾಡಿದ್ದಾರೆ. ಹೀಗಾಗಿ ಮಕ್ಕಳಿಗೆ ಕೊರೊನಾ ಲಸಿಕೆ ಅಭಿವೃದ್ಧಿ ಪಡಿಸಲು ಹಲವು ಸಂಸ್ಥೆಗಳು ಮುಂದಾಗಿವೆ.

ಈಗಾಗಲೇ ದೇಶದ ಝೈಡಸ್ ಕ್ಯಾಡಿಲಾ ಸಂಸ್ಥೆಯ ಝೈಕೋವ್ ಡಿ ಲಸಿಕೆಯನ್ನು ಮಕ್ಕಳಿಗೆ ನೀಡಲು ಭಾರತದಲ್ಲಿ ಅನುಮೋದನೆ ನೀಡಲಾಗಿದೆ. ಅಕ್ಟೋಬರ್ ಅಂತ್ಯದ ವೇಳೆಗೆ ಮಕ್ಕಳಿಗೆ ಲಸಿಕೆ ನೀಡುವ ಕಾರ್ಯ ಆರಂಭಗೊಳ್ಳುವ ಸೂಚನೆಯಿದೆ.
ಮಕ್ಕಳಲ್ಲಿ ಸೋಂಕಿನ ವಿರುದ್ಧ ರೋಗನಿರೋಧಕ ಶಕ್ತಿ ಹೆಚ್ಚಿಸುವ ಹಲವು ಪ್ರಯೋಗಗಳನ್ನು ಕೂಡ ನಡೆಸಲಾಗುತ್ತಿದೆ.
ಭಾರತದಲ್ಲಿ ಕೊರೊನಾ ಸೋಂಕಿನ ವಿರುದ್ಧ ಮೊದಲು ಲಸಿಕೆ ಸಿದ್ಧಪಡಿಸಿದ ಭಾರತ್ ಬಯೋಟೆಕ್ ಮಕ್ಕಳ ಮೇಲೂ ಲಸಿಕೆ ಪ್ರಯೋಗ ನಡೆಸಿದೆ. ಹೈದರಾಬಾದ್ ಮೂಲದ ಜೈವಿಕ ತಂತ್ರಜ್ಞಾನ ಕಂಪನಿ ಹಾಗೂ ಕೋವ್ಯಾಕ್ಸಿನ್ ಲಸಿಕೆ ಅಭಿವೃದ್ಧಿಗೊಳಿಸಿದ ಭಾರತ್ ಬಯೋಟೆಕ್, 18 ವರ್ಷದೊಳಗಿನವರಿಗೆ ಕೋವ್ಯಾಕ್ಸಿನ್ ಲಸಿಕೆಯ 2/3 ಹಂತದ ಪ್ರಯೋಗಗಳನ್ನು ಪೂರ್ಣಗೊಳಿಸಿ ವರದಿ ಸಲ್ಲಿಸಿದೆ.
ಕೊರೊನಾ ವಿರುದ್ಧ ಇದೇ ಸಂಸ್ಥೆ ಮೂಗಿನ ಮೂಲಕ ನೀಡುವ ಇಂಟ್ರಾನೇಸಲ್ ಲಸಿಕೆಯ ಎರಡನೇ ಹಂತದ ಪ್ರಯೋಗ ನಡೆಸಿದ್ದು, ಈ ಪ್ರಯೋಗ ಶೀಘ್ರ ಪೂರ್ಣಗೊಳ್ಳುವ ನಿರೀಕ್ಷೆಯಿದೆ ಎಂದು ಎಲಾ ಘೋಷಿಸಿದ್ದರು.
ದೆಹಲಿಯ ಏಮ್ಸ್ ಆಸ್ಪತ್ರೆಯಲ್ಲಿ ಈ ಪ್ರಯೋಗ ನಡೆದಿದ್ದು,, ಆಗಸ್ಟ್ ತಿಂಗಳಿನಲ್ಲಿಯೇ ಭಾರತ್ ಬಯೋಟೆಕ್ ಸಂಸ್ಥೆ, ಮೂಗಿನ ಮೂಲಕ ನೀಡುವ ಲಸಿಕೆ BBV154 ಪ್ರಯೋಗ ನಡೆಸಲು ಕೇಂದ್ರದಿಂದ ಅನುಮೋದನೆ ಪಡೆದುಕೊಂಡಿತ್ತು.
ಕೊರೊನಾ ಸೋಂಕಿನ ವಿರುದ್ಧ ದೇಶದಲ್ಲಿ ಮೊದಲು ಲಸಿಕೆ ಉತ್ಪಾದನೆ ಮಾಡಿದ ಸಂಸ್ಥೆಯಲ್ಲಿ ಭಾರತ್ ಬಯೋಟೆಕ್ ಒಂದಾಗಿದೆ. ಭಾರತ್ ಬಯೋಟೆಕ್‌ನ ಕೋವ್ಯಾಕ್ಸಿನ್ ಹಾಗೂ ಸೆರಂ ಇನ್‌ಸ್ಟಿಟ್ಯೂಟ್‌ನ ಕೋವಿಶೀಲ್ಡ್ ಲಸಿಕೆಯನ್ನು ಹೆಚ್ಚಿನ ಸಂಖ್ಯೆಯಲ್ಲಿ ನೀಡಲಾಗುತ್ತಿದೆ. ಕೊರೊನಾ ಸೋಂಕಿನ ವಿರುದ್ಧ ವಯಸ್ಕರಲ್ಲಿ ಕೋವ್ಯಾಕ್ಸಿನ್ ಲಸಿಕೆ 77.8% ದಕ್ಷತೆ ತೋರಿದೆ.












Click it and Unblock the Notifications