ಬಿಎಫ್ 7 ಸೋಂಕು ದೇಶದಲ್ಲಿ ಮತ್ತೊಂದು ಅಲೆ ಸೃಷ್ಟಿಸುವ ಸಾಧ್ಯತೆ ಕಡಿಮೆ: ಬೆಂಗಳೂರಿನ ತಜ್ಞರು
ಬೆಂಗಳೂರು, ಡಿ. 26: ಹಲವು ದೇಶಗಳಲ್ಲಿ ಪತ್ತೆಯಾಗುತ್ತಿರುವ ಕೋವಿಡ್ ಉಪತಳಿ ಬಿಎಫ್ 7 ವಿರುದ್ಧ ದೇಶದಲ್ಲಿ ಮುಂಜಾಗ್ರತೆ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ. ಆದರೆ, ಈ ಸೋಂಕಿನ ಬಗ್ಗೆ ಯಾವ ಭಯವೂ ಇಲ್ಲ ಎಂದು ಹಲವು ತಜ್ಞರು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ. ಬೆಂಗಳೂರಿನ ಹಲವು ಸಾಂಕ್ರಾಮಿಕ ರೋಗಶಾಸ್ರ್ತಜ್ಞರು ಕೂಡ ಇದೇ ಅಭಿಪ್ರಾಯಪಟ್ಟಿದ್ದಾರೆ.
ಬೆಂಗಳೂರಿನ ಟಾಟಾ ಮೆಡಿಕಲ್ ಅಂಡ್ ಡಯಾಗ್ನೋಸ್ಟಿಕ್ಸ್‌ನ ವೈರಾಲಜಿಸ್ಟ್ ಮತ್ತು ಸಂಶೋಧನೆ ಮತ್ತು ಅಭಿವೃದ್ಧಿ ಕೇಂದ್ರದ ಮುಖ್ಯಸ್ಥ ಡಾ ವಿ.ರವಿ, ಕೊರೊನಾದ ಹೊಸ ರೂಪಾಂತರವು ಭಾರತದಲ್ಲಿ ಮತ್ತೊಂದು ಅಲೆಗೆ ಕಾರಣವಾಗುವುದಿಲ್ಲ ಎಂದು ದೃಢವಾಗಿ ಹೇಳಿದ್ದಾರೆ.
"ಈ ರೂಪಾಂತರವು ಭಾರತೀಯ ಜನಸಂಖ್ಯೆಗೆ ಗಂಭೀರ ಅಪಾಯವನ್ನುಂಟುಮಾಡುವ ಸಾಧ್ಯತೆಯಿಲ್ಲ. ಈ ರೂಪಾಂತರವು ಸೋಂಕಿತರಿಗೆ ಒಂದು ಅಥವಾ ಎರಡು ದಿನಗಳವರೆಗೆ ಅತ್ಯಂತ ಸೌಮ್ಯವಾದ ಉಸಿರಾಟದ ರೋಗಲಕ್ಷಣಗಳನ್ನು ಉಂಟುಮಾಡುತ್ತದೆ" ಎಂದು ತಿಳಿಸಿದ್ದಾರೆ ಎಂದು ಟೈಮ್ಸ್ ಅಫ್ ಇಂಡಿಯಾ ವರದಿ ಮಾಡಿದೆ.

ದೇಶದಲ್ಲಿ ಮೊದಲ ಬಿಎಫ್ 7 ಸೋಂಕು ಗುಜರಾತ್‌ನಲ್ಲಿ ಪತ್ತೆಯಾಗಿದೆ. ವಡೋದರದ 61 ವರ್ಷದ ಎನ್‌ಆರ್‌ಐ ಮಹಿಳೆಯೊಬ್ಬರು ಸೆಪ್ಟೆಂಬರ್ 17 ರಂದು ತನ್ನ ಮನೆಗೆ ಮರಳಿದ ನಂತರ ಸೋಂಕಿಗೆ ಒಳಗಾಗಿದ್ದರು. ವಡೋದರಾ ಮುನ್ಸಿಪಲ್ ಕಾರ್ಪೊರೇಷನ್ ಅಧಿಕಾರಿಗಳ ಪ್ರಕಾರ, ಮಹಿಳೆಯು ಸೆಪ್ಟೆಂಬರ್ 11 ರಂದು ವಡೋದರಾ ತಲುಪಿದ್ದರು, ಅವರ ಪ್ರಾಥಮಿಕ ಸಂಪರ್ಕಗಳನ್ನು ಕೂಡ ಪರೀಕ್ಷಿಸಲಾಗಿದೆ ಎಂದಿದ್ದಾರೆ.
"ಬಿಎಫ್ 7 ಓಮಿಕ್ರಾನ್ ಉಪತಳಿಯಾಗಿದೆ. ಸುಮಾರು 80% ರಷ್ಟು ಲಕ್ಷಣರಹಿತವಾಗಿರುತ್ತದೆ. ಇದರಿಂದ ಶೇಕಡಾ 15 ರಿಂದ 20 ಜನರಿಗೆ ಮಧ್ಯಮ ಕಾಯಿಲೆ ಮತ್ತು ಶೇಕಡಾ 5 ರಷ್ಟು ಮಂದಿಗೆ ತೀವ್ರತರವಾದ ಕಾಯಿಲೆಗೆ ಒಳಪಡುತ್ತಾರೆ" ಎಂದು ಮಾಹಿತಿ ನೀಡಿದ್ದಾರೆ.
ರಾಜ್ಯ ಆರೋಗ್ಯ ಸಚಿವ ಕೆ ಸುಧಾಕರ್ ಕೂಡ ಇದೇ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ನಾವು ಸೋಂಕು ಎದುರಿಸಲು ತಯಾರಾಗಬೇಕು ಆದರೆ ಭಯಪಡಬಾರದು ಎಂದು ಹೇಳಿದ್ದಾರೆ.

"ಕೆಲವು ದೇಶಗಳಲ್ಲಿ ಕಂಡುಬರುವ ಪರಿಸ್ಥಿತಿಯು ಭಾರತದಲ್ಲಿ ಉಂಟಾಗುವುದಿಲ್ಲ. ಏಕೆಂದರೆ. ಮೊದಲನೆಯದಾಗಿ, ಭಾರತದಲ್ಲಿ ಲಸಿಕೆಯ ಎರಡು ಡೋಸ್‌ಗಳನ್ನು 100% ನೀಡಲಾಗಿದೆ. 220 ಕೋಟಿಗೂ ಹೆಚ್ಚು ಡೋಸ್ ಲಸಿಕೆಗಳನ್ನು ನೀಡಿದ್ದೇವೆ. ಇದರ ಜೊತೆಗೆ ಬೂಸ್ಟರ್ ಶಾಟ್‌ಗಳನ್ನು ಸಹ ನೀಡುತ್ತಿದ್ದೇವೆ. ನಮ್ಮ ಲಸಿಕೆಗಳು ಹೆಚ್ಚು ಪರಿಣಾಮಕಾರಿ ಎಂದು ಕಂಡುಬಂದಿದೆ. ಎರಡನೆಯದಾಗಿ, ನಮ್ಮಲ್ಲಿ ಹೆಚ್ಚಿನವರು ಈಗಾಗಲೇ ಓಮಿಕ್ರಾನ್ ಮತ್ತು ಅದರ ಉಪತಳಿಗಳ ಸೋಂಕಿಗೆ ಒಳಗಾಗಿದ್ದು, ಅನೇಕ ಭಾರತೀಯರು ಹೈಬ್ರಿಡ್ ಇಮ್ಯುನಿಟಿ ಎಂಬುದನ್ನು ತಮ್ಮದಾಗಿಸಿಕೊಂಡಿದ್ದಾರೆ" ಎಂದು ಹೇಳಿದ್ದಾರೆ.
"ಇದಲ್ಲದೆ, ಗುಜರಾತ್‌ನಲ್ಲಿ ಮೊದಲ ಪ್ರಕರಣ ವರದಿಯಾದ ಸೆಪ್ಟೆಂಬರ್ ಅಂತ್ಯದಿಂದ ಈ ಬಿಎಫ್7 ರೂಪಾಂತರವು ಭಾರತದಲ್ಲಿದೆ. ಮೂರು ತಿಂಗಳ ನಂತರವೂ ಆಸ್ಪತ್ರೆಯಲ್ಲಿ ಯಾವುದೇ ಏರಿಕೆ ಕಂಡಿಲ್ಲ" ಎಂದು ಸುಧಾಕರ್ ಮಾಹಿತಿ ನೀಡಿದ್ದಾರೆ.
ಒಮಿಕ್ರಾನ್ ಉಪತಳಿ ಬಿಎಫ್7 ಲಕ್ಷಣಗಳೆಂದರೆ ಮೂಗು ಕಟ್ಟುವುದು, ಗಂಟಲು ನೋವು, ಜ್ವರ, ವಾಕರಿಕೆ, ಆಯಾಸ ಮತ್ತು ಅತಿಸಾರ.
(ಮಾಹಿತಿ ಕೃಪೆ- ಟೈಮ್ಸ್ ಅಫ್ ಇಂಡಿಯಾ)












Click it and Unblock the Notifications