ಎಟಿಎಂನಲ್ಲಿ ಉಚಿತ ವಿತ್ ಡ್ರಾ 5 ರಿಂದ 3ಕ್ಕೆ ಇಳಿಕೆ?
ನವದೆಹಲಿ, ಫೆಬ್ರವರಿ 16: ಎಟಿಎಂನಲ್ಲಿನ ಉಚಿತ ನಗದು ಹಿಂಪಡೆಯುವಿಕೆ ಮಿತಿಯನ್ನು 5 ರಿಂದ 3ಕ್ಕೆ ಇಳಿಸಬೇಕು ಎಂದು ಆರ್‌ಬಿಐಗೆ ಮನವಿ ಸಲ್ಲಿಸಲಾಗಿದೆ. ನಗದು ಹಿಂಪಡೆಯುವಿಕೆ ಶುಲ್ಕವನ್ನು ಏರಿಕೆ ಮಾಡಬೇಕು ಎಂದು ಒತ್ತಾಯಿಸಲಾಗಿದೆ.
ಎಟಿಎಂ ಆಪರೇಟರ್ಸ್ ಅಸೋಸಿಯೇಷನ್ ಆರ್‌ಬಿಐಗೆ ಈ ಕುರಿತು ಮನವಿ ಸಲ್ಲಿಸಿದೆ. ನಿರ್ವಹಣಾ ವೆಚ್ಚ ಹೆಚ್ಚಾಗುತ್ತಿರುವ ಹಿನ್ನಲೆ ಎಟಿಎಂ ಗ್ರಾಹಕರ ನಗದು ಹಿಂಪಡೆಯುವಿಕೆ ಮೇಲಿನ ಶುಲ್ಕವನ್ನು ಹೆಚ್ಚಿಸುವಂತೆ ಮನವಿಯಲ್ಲಿ ತಿಳಿಸಿದೆ.
ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಮಾನದಂಡಗಳ ಪಾಲನೆಗಾಗಿ ಎಟಿಎಂ ಯಂತ್ರಗಳ ನಿರ್ವಹಣಾ ವೆಚ್ಚ ಹೆಚ್ಚಳವಾಗಿದೆ. ದೈನಂದಿನ ಕಾರ್ಯಾಚರಣೆಗೆ ಈಗ ಇರುವ ಮೊತ್ತಗಳು ಸಾಕಾಗುವುದಿಲ್ಲ ಎಂದು ಆಪರೇಟರ್‌ಗಳು ಹೇಳಿದ್ದಾರೆ.

ಪ್ರಸ್ತುತ ಎಟಿಎಂನಲ್ಲಿ ಮೊದಲ 5 ವಹಿವಾಟು ಉಚಿತವಾಗಿದೆ. ಇದನ್ನು 3ಕ್ಕೆ ಇಳಿಕೆ ಮಾಡಬೇಕು ಎಂದು ಅಸೋಸಿಯೇಷನ್ ಮನವಿ ಮಾಡಿದೆ. ಎಟಿಎಂನಿಂದ ವಿತ್ ಡ್ರಾ ಮಾಡುವ ಶುಲ್ಕವನ್ನು ಏರಿಕೆ ಮಾಡಲು ಪ್ರಸ್ತಾವನೆ ಸಲ್ಲಿಸಲಾಗಿದೆ.
ಮೊದಲ 5 ವಹಿವಾಟು ಉಚಿತವಾಗಿದೆ. ನಂತರದ ಪ್ರತಿ ವಹಿವಾಟಿಗೆ 15 ರೂ. ದರವನ್ನು ನಿಗದಿ ಮಾಡಲಾಗಿದೆ. 10 ಲಕ್ಷಕ್ಕಿಂತ ಅಧಿಕ ಜನಸಂಖ್ಯೆ ಇರುವ ನಗರ ಪ್ರದೇಶಗಳ ಎಟಿಎಂಗಳ ನಗದು ಹಿಂಪಡೆಯುವಿಕೆ ಶುಲ್ಕನ್ನು 17 ರೂ.ಗೆ ಹೆಚ್ಚಿಸಬೇಕು ಎಂದು ಬೇಡಿಕೆ ಇಡಲಾಗಿದೆ.
ಹಣಕಾಸೇತರ ವ್ಯವಹಾರ ಶುಲ್ಕವನ್ನು 7 ರೂ.ಗೆ ಏರಿಸಬೇಕು ಎಂದು ಸಹ ಆರ್‌ಬಿಐಗೆ ಮನವಿ ಮಾಡಲಾಗಿದೆ. ಆದರೆ, ಆರ್‌ಬಿಐ ಈ ಕುರಿತು ಯಾವುದೇ ತೀರ್ಮಾನವನ್ನು ಇನ್ನೂ ಕೈಗೊಂಡಿಲ್ಲ.












Click it and Unblock the Notifications