ಅತಿಥಿ ದೇವೋ ಭವ ಎಂದು ರಷ್ಯಾ ಮಹಿಳೆ ನೀಡಿದ ಟಿಪ್ಸ್ ವಾಪಸ್ ನೀಡಿದ ಕ್ಯಾಬ್ ಡ್ರೈವರ್‌ ಕಥೆ ವೈರಲ್

ಜಗತ್ತಿನಾದ್ಯಂತ ಭಾರತದ ಸಂಸ್ಕೃತಿ ಮತ್ತು ಅತಿಥಿ ಸತ್ಕಾರಕ್ಕೆ ವಿಶೇಷವಾದ ಸ್ಥಾನವಿದೆ. ನಮ್ಮ ದೇಶಕ್ಕೆ ಬರುವ ವಿದೇಶಿಗರು ಇಲ್ಲಿನ ಜನರ ಪ್ರೀತಿ ಮತ್ತು ಕಾಳಜಿಗೆ ಮಾರುಹೋಗಿರುವ ಅನೇಕ ಉದಾಹರಣೆಗಳಿವೆ. ಇದೀಗ ಅಂತಹದ್ದೇ ಒಂದು ಹೃದಯಸ್ಪರ್ಶಿ ಘಟನೆಯೊಂದು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗುತ್ತಿದೆ.

ಹೌದು, ಭಾರತಕ್ಕೆ ಮೊದಲ ಬಾರಿ ಭೇಟಿ ನೀಡಿದ್ದ ರಷ್ಯಾದ ಮಹಿಳೆಯೊಬ್ಬರಿಗೆ ಕ್ಯಾಬ್ ಚಾಲಕನೊಬ್ಬ ತೋರಿದ ಮಾನವೀಯತೆ ಹಾಗೂ ಅತಿಥಿ ದೇವೋ ಭವಎಂಬ ಶ್ರೇಷ್ಠ ಮೌಲ್ಯವನ್ನ ಎತ್ತಿಹಿಡಿದ ಕಥೆ ಎಲ್ಲರ ಮನಗೆದ್ದಿದೆ. ಲಕ್ಷ್ಮಿ ಎಂಬುವವರು ತಮ್ಮ ಎಕ್ಸ್ ಖಾತೆಯಲ್ಲಿ ಈ ಕಥೆಯನ್ನ ಹಂಚಿಕೊಂಡಿದ್ದಾರೆ.

Atithi Devo Bhava Indian Cab Driver s Heartwarming Gesture Towards Russian Woman Wins Hearts

ರಾತ್ರಿಯ ಸಮಯವದು, ರಷ್ಯಾದಿಂದ ಬಂದಿದ್ದ ಮಹಿಳೆಯೊಬ್ಬರು ಭಾರತದ ವಿಮಾನ ನಿಲ್ದಾಣದಲ್ಲಿ ಇಳಿದು, ತಾವು ಉಳಿದುಕೊಳ್ಳಬೇಕಿದ್ದ ಹೋಟೆಲ್‌ಗೆ ಹೋಗಲು ಕ್ಯಾಬ್ ಬುಕ್ ಮಾಡಿದ್ದರು. ಕ್ಯಾಬ್ ಹತ್ತಿದ ಕೂಡಲೇ ಡ್ರೈವರ್‌, "ಮೇಡಂ, ನಿಮಗೆ ಇಂಗ್ಲಿಷ್ ಬರುತ್ತದಾ? ದಯವಿಟ್ಟು ಒಟಿಪಿ ತೋರಿಸಿ" ಎಂದು ಕೇಳಿದ್ದಾನೆ. ಸ್ವಲ್ಪ ಇಂಗ್ಲಿಷ್ ಅರ್ಥಮಾಡಿಕೊಳ್ಳುತ್ತಿದ್ದ ಆಕೆ ಒಟಿಪಿ ತೋರಿಸಿದ್ದಾರೆ.

ಪ್ರಯಾಣದ ಮಧ್ಯೆ ಡ್ರೈವರ್‌ ಆಕೆಯನ್ನ ಮತ್ತೆ ಮಾತನಾಡಿಸುತ್ತಾ, "ಭಾರತಕ್ಕೆ ಇದು ನಿಮ್ಮ ಮೊದಲ ಭೇಟಿಯೇ? ನೀವು ಒಬ್ಬರೇ ಪ್ರಯಾಣಿಸುತ್ತಿದ್ದೀರಾ?" ಎಂದು ಕೇಳಿದ್ದಾನೆ. ಅದಕ್ಕೆ ಹೌದು ಎಂದು ತಲೆಯಾಡಿಸಿದ ಮಹಿಳೆ, ತನಗೆ ತುಂಬಾ ಹಸಿವಾಗುತ್ತಿದೆ, ಪಿಜ್ಜಾ ತಿನ್ನಬೇಕು ಎಂದು ಹೇಳಿಕೊಂಡಿದ್ದಾಳೆ. ಸ್ವಲ್ಪ ದೂರ ಹೋದ ಮೇಲೆ ಚಾಲಕ ಹೋಟೆಲೊಂದರ ಬಳಿ ಕ್ಯಾಬ್ ನಿಲ್ಲಿಸಿ, ಹೊರಗೆ ಹೋಗಿ ಎರಡು ನಿಮಿಷದ ನಂತರ ವಾಪಸ್ ಬಂದು ಮತ್ತೆ ಗಾಡಿ ಓಡಿಸಲು ಶುರುಮಾಡಿದ್ದಾನೆ.

ಹೊಸ ದೇಶ, ರಾತ್ರಿ ಸಮಯ, ಜೊತೆಗೆ ಡ್ರೈವರ್‌ನ ಈ ವರ್ತನೆ ಆಕೆಗೆ ಸ್ವಲ್ಪ ಆತಂಕ ಮೂಡಿಸಿತ್ತು. ಕೂಡಲೇ ಆಕೆ ಕ್ಯಾಬ್‌ನ ವಿವರಗಳನ್ನ ತನ್ನ ಪತಿಗೆ ಕಳುಹಿಸಿ, ಏನೋ ವಿಚಿತ್ರವಾಗಿ ನಡೆಯುತ್ತಿದೆ ಎಂದು ಹೇಳಿಕೊಂಡಿದ್ದಳು.

ಚಾಲಕನ ಅಚ್ಚರಿಯ ಸತ್ಕಾರ

ಆದರೆ, ಸ್ವಲ್ಪ ಹೊತ್ತಿನಲ್ಲೇ ಆಕೆಯ ಆತಂಕವೆಲ್ಲಾ ಮರೆಯಾಗಿ ಆಶ್ಚರ್ಯ ಕಾದಿತ್ತು. ಕ್ಯಾಬ್ ಚಾಲಕ ವಾಹನ ನಿಲ್ಲಿಸಿದ್ದು ಬೇರೆ ಯಾವುದಕ್ಕೂ ಅಲ್ಲ, ಆಕೆ ಹಸಿವಾಗಿದೆ ಎಂದು ಹೇಳಿದ್ದಕ್ಕೆ ಅವಳಿಗಾಗಿ ಪಿಜ್ಜಾ ತರಲು. ಆತ ತಂದಿದ್ದ ಪಿಜ್ಜಾವನ್ನ ಆಕೆಗೆ ನೀಡಿ, ಹೋಟೆಲ್ ತಲುಪಿದಾಗ ಆಕೆಗೆ ಸುಲಭವಾಗಿ ದಾರಿ ಹುಡುಕಲು ಸಹಾಯವಾಗುವಂತೆ ಹೋಟೆಲ್‌ನ ಸ್ಥಳವನ್ನ ಸಹ ಎತ್ತಿತೋರಿಸಿದ್ದಾನೆ. ಹೊಸ ದೇಶದಲ್ಲಿ ಅಪರಿಚಿತ ವ್ಯಕ್ತಿಯೊಬ್ಬ ತೋರಿದ ಈ ಕಾಳಜಿ ಕಂಡು ಆ ಮಹಿಳೆ ಅಕ್ಷರಶಃ ಅಚ್ಚರಿಗೊಂಡಿದ್ದಾಳೆ ಹಾಗೂ ಆಕೆಯ ಮುಖದಲ್ಲಿ ಮಂದಹಾಸ ಮೂಡಿದೆ.

ಹಣ ವಾಪಸ್ ನೀಡಿ ಹೃದಯ ಗೆದ್ದ ಚಾಲಕ

ಚಾಲಕನ ಈ ಮಾನವೀಯತೆಗೆ ಮಹಿಳೆ, ಆತನಿಗೆ ಕ್ಯಾಬ್ ಬಾಡಿಗೆಯ ಜೊತೆಗೆ ಪಿಜ್ಜಾದ ಹಣವನ್ನ ಸಹ ನೀಡಿದ್ದಾಳೆ. ಅಷ್ಟೇ ಅಲ್ಲದೆ, ಆತನ ಸಹಾಯಕ್ಕೆ ಕೃತಜ್ಞತೆ ಸಲ್ಲಿಸುವ ಉದ್ದೇಶದಿಂದ 1,000 ರೂಪಾಯಿಗಳನ್ನ ಹೆಚ್ಚುವರಿಯಾಗಿ ಟಿಪ್ಸ್ ರೂಪದಲ್ಲಿ ನೀಡಿದ್ದಾಳೆ.

ಆದರೆ, ಆ ಹಣವನ್ನು ತೆಗೆದುಕೊಳ್ಳದ ಚಾಲಕ, ತಕ್ಷಣವೇ ಆ ಹೆಚ್ಚಿನ ಹಣವನ್ನ ವಾಪಸ್ ನೀಡಿ, ಎರಡು ಕೈಮುಗಿದು "ಅತಿಥಿ ದೇವೋ ಭವ"ಎಂದು ನಗುಮುಖದಿಂದಲೇ ಹೇಳಿದ್ದಾನೆ. ಆತನ ಈ ಮಾತನ್ನು ಕೇಳಿ ಮಹಿಳೆಯ ಹೃದಯ ತುಂಬಿಬಂದಿದೆ.

ಲೈವ್ ಬಂದು ಸಂತಸ ಹಂಚಿಕೊಂಡ ಮಹಿಳೆ

ಸುರಕ್ಷಿತವಾಗಿ ತನ್ನ ಹೋಟೆಲ್ ಕೊಠಡಿ ತಲುಪಿದ ಬಳಿಕ, ಆ ರಷ್ಯಾದ ಮಹಿಳೆ ಸಾಮಾಜಿಕ ಜಾಲತಾಣದಲ್ಲಿ ಲೈವ್ ಬಂದು ತನ್ನ ಈ ಸುಂದರ ಅನುಭವವನ್ನ ಹಂಚಿಕೊಂಡಿದ್ದಾಳೆ. "ಭಾರತದ ಬಗ್ಗೆ ನನ್ನ ಮೊದಲ ಇಂಪ್ರೆಶನ್‌ ತುಂಬಾ ಚೆನ್ನಾಗಿದೆ. ಇಲ್ಲಿನ ಜನರ ಪ್ರೀತಿ ಮತ್ತು ಕಾಳಜಿ ನನ್ನ ಹೃದಯ ಗೆದ್ದಿದೆ. ಮುಂದಿನ ಬಾರಿ ನಾನು ಭಾರತಕ್ಕೆ ಬರುವಾಗ ಖಂಡಿತವಾಗಿಯೂ ನನ್ನ ಪತಿಯನ್ನೂ ಜೊತೆಯಲ್ಲಿ ಕರೆತರುತ್ತೇನೆ" ಎಂದು ಆಕೆ ಸಂತಸದಿಂದ ಹೇಳಿಕೊಂಡಿದ್ದಾಳೆ.

ಈ ಘಟನೆಯು ಕೇವಲ ಆ ಮಹಿಳೆಯ ಮನಸ್ಸನ್ನ ಮಾತ್ರವಲ್ಲ, ಸೋಶಿಯಲ್‌ ಮಿಡಿಯಾದಲ್ಲಿ ಇದನ್ನು ಓದಿದ ಪ್ರತಿಯೊಬ್ಬ ಭಾರತೀಯ ಖುಷಿ ಪಡುವಂತೆ ಮಾಡಿದೆ. ಕ್ಯಾಬ್‌ ಡ್ರೈವರ್‌ ಒಬ್ಬ ನಮ್ಮ ದೇಶದ ಸಂಸ್ಕೃತಿಯನ್ನ ಜಗತ್ತಿಗೆ ಸಾರಿದ ಪರಿ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+