Pension: ನೀವು 60 ವರ್ಷ ಮೇಲ್ಪಟ್ಟವರಾಗಿದ್ರೆ ತಿಂಗಳಿಗೆ 5,000 ರೂಪಾಯಿ ಪಿಂಚಣಿ ಪಡೆಯಬಹುದು: ಅನುಸರಿಸಬೇಕಾದ ವಿಧಾನಗಳು
Pension: ಕೇಂದ್ರ ಸರ್ಕಾರ ಆಗಾಗ ಮಹತ್ವ ನಿರ್ಧಾರ ತೆಗೆದುಕೊಳುತ್ತಿರುತ್ತದೆ. ಇದೀಗ ದೇಶದಲ್ಲಿ ಮಧ್ಯಮ ವರ್ಗ ಮತ್ತು ಹಿರಿಯ ನಾಗರಿಕರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಈ ಹಿನ್ನೆಲೆ ಕೇಂದ್ರ ಹಿರಿಯರ ಆರ್ಥಿಕ ಭದ್ರತೆಗೆ ಹೆಚ್ಚಿನ ಒತ್ತು ನೀಡಿದೆ. ಇದರ ಭಾಗವಾಗಿ ಅಟಲ್ ಪಿಂಚಣಿ ಯೋಜನೆಯನ್ನು ನವೀಕರಿಸಿ, ಸಿಂಧುತ್ವವನ್ನು ಇನ್ನೂ 5 ವರ್ಷಗಳವರೆಗೆ ವಿಸ್ತರಣೆ ಮಾಡಲಾಗಿದೆ.
ಈ ಯೋಜನೆಯ ಲಾಭವನ್ನು 2030-31ರ ಆರ್ಥಿಕ ವರ್ಷದವರೆಗೆ ಪಡೆಯಬಹುದಾಗಿದೆ. ಅಟಲ್ ಪಿಂಚಣಿ ಯೋಜನೆಯ ಮೂಲಕ ಯಾವುದೇ ರೀತಿಯ ಕೆಲಸ ಮಾಡದೇ ಇದ್ದರೂ, ಅರ್ಹ ಫಲಾನುಭವಿಗಳು ಪ್ರತಿ ತಿಂಗಳು ಗರಿಷ್ಠ 5,000 ರೂಪಾಯಿ ಪಿಂಚಣಿ ಪಡೆಯಬಹುದು. ಇದು ವಿಶೇಷವಾಗಿ ಅಸಂಘಟಿತ ವಲಯದ ಕಾರ್ಮಿಕರು ಹಾಗೂ ಹಿರಿಯ ನಾಗರಿಕರಿಗೆ ಹೆಚ್ಚು ಸಹಾಯ ಆಗಲಿದೆ.

ಅಟಲ್ ಪಿಂಚಣಿ ಯೋಜನೆಗೆ ಅಸಂಘಟಿತ ವಲಯದ ಸಣ್ಣ ವ್ಯಾಪಾರಿಗಳು, ಬೀದಿ ವ್ಯಾಪಾರಿಗಳು, ಕಾರ್ಮಿಕರು, ಕೃಷಿ ಕಾರ್ಮಿಕರು, ಚಾಲಕರು, ಗೃಹಿಣಿಯರು ಹಾಗೂ ಮನೆಕೆಲಸಗಾರರು ಸೇರಬಹುದು. 60 ವರ್ಷ ಪೂರೈಸಿದ ಬಳಿಕ ತಿಂಗಳಿಗೆ 1,000ರಿಂದ 5,000 ರೂಪಾಯಿವರೆಗೆ ಪಿಂಚಣಿ ಪಡೆಯುವ ಅವಕಾಶವನ್ನು ಇದರಲ್ಲಿ ಕಲ್ಪಿಸಲಾಗಿದೆ. ದೇಶಾದ್ಯಂತ ಈಗಾಗಲೇ 8.66 ಕೋಟಿ ಜನ ಈ ಯೋಜನೆಯ ಭಾಗವಾಗಿದ್ದಾರೆ.
ಪಿಂಚಣಿ 60 ವರ್ಷ ತುಂಬುತ್ತಿದ್ದಂತೆಯೇ ಆರಂಭ ಆಗುವುದಿಲ್ಲ. ಫಲಾನುಭವಿಗಳು 60 ವರ್ಷ ಪೂರೈಸಿ 61ನೇ ವರ್ಷಕ್ಕೆ ಕಾಲಿಟ್ಟ ಬಳಿಕ ಪಿಂಚಣಿ ಪಾವತಿ ಪ್ರಾರಂಭ ಆಗುತ್ತದೆ. ಪಿಂಚಣಿ ಪಡೆಯುವ ವ್ಯಕ್ತಿ ಮೃತಪಟ್ಟರೆ, ಅವರ ಪತ್ನಿ ಅಥವಾ ಪತಿಗೆ ಜೀವನಪರ್ಯಂತ ಪಿಂಚಣಿ ಸಿಗಲಿದೆ. ಇಬ್ಬರೂ ಮೃತಪಟ್ಟಲ್ಲಿ, ನಾಮಿನಿಗೆ ಪಿಂಚಣಿ ಕಾರ್ಪಸ್ ನಿಧಿ ನೀಡಲಾಗುತ್ತದೆ. ಈ ಮೊತ್ತ 1.7 ಲಕ್ಷದಿಂದ 8.5 ಲಕ್ಷ ರೂಪಾಯಿವರೆಗೆ ಇರಲಿದೆ.
ಅರ್ಜಿ ಸಲ್ಲಿಸುವವರು ಗಮನಿಸಬೇಕಾದ ಪ್ರಮುಖ ಅಂಶಗಳು
* ಅರ್ಜಿ ಸಲ್ಲಿಸುವವರ ವಯಸ್ಸು 18ರಿಂದ 40 ವರ್ಷಗಳ ನಡುವೆ ಇರಬೇಕು
* ಭಾರತೀಯ ನಾಗರಿಕರಾಗಿರಬೇಕು
* ಉಳಿತಾಯ ಬ್ಯಾಂಕ್ ಅಥವಾ ಅಂಚೆ ಕಚೇರಿ ಉಳಿತಾಯ ಖಾತೆ ಹೊಂದಿರಬೇಕು
* ಆಧಾರ್ ಕಾರ್ಡ್ ಹೊಂದಿದ್ದು ಇ-ಕೆವೈಸಿ ಪೂರ್ಣಗೊಂಡಿರಬೇಕು
* ಒಬ್ಬ ವ್ಯಕ್ತಿಗೆ ಒಂದೇ ಅಟಲ್ ಪಿಂಚಣಿ ಖಾತೆ ಮಾತ್ರ
* ಮಾಸಿಕ ಪಾವತಿ ಮತ್ತು ಪಿಂಚಣಿ ವಿವರ
* ಮಾಸಿಕವಾಗಿ ಎಷ್ಟು ಹಣ ಪಾವತಿಸುತ್ತೀರೋ ಅದರ ಆಧಾರದಲ್ಲಿ ಪಿಂಚಣಿ ಮೊತ್ತ ನಿರ್ಧಾರ ಆಗುತ್ತದೆ. ದೀರ್ಘಾವಧಿಯ ಲಾಭಕ್ಕಾಗಿ 5,000 ರೂಪಾಯಿ ಪಿಂಚಣಿ ಯೋಜನೆ ಆಯ್ಕೆ ಮಾಡುವುದು ಸೂಕ್ತ ಎಂದು ತಜ್ಞರು ನೀಡುಬ ಸಲಹೆಯಾಗಿದೆ.
ಅರ್ಜಿ ಸಲ್ಲಿಸುವ ವಿಧಾನಗಳು
* ಅಟಲ್ ಪಿಂಚಣಿ ಯೋಜನೆಗೆ https://enps.nsdl.com ಮೂಲಕ ಡಿಜಿಟಲ್ ಆನ್‌ಲೈನ್‌ನಲ್ಲಿ ಹೆಸರು ನೋಂದಾಯಿಸಿ.
* ಮೊಬೈಲ್ ಸಂಖ್ಯೆ ಅಥವಾ ಆಧಾರ್ ಒಟಿಪಿ ಮೂಲಕ ಲಾಗಿನ್ ಆಗಿ ಅರ್ಜಿ ಸಲ್ಲಿಸಿ.
* ಬ್ಯಾಂಕ್ ಅಥವಾ ಅಂಚೆ ಕಚೇರಿ ಖಾತೆಯ ವಿವರಗಳನ್ನು ನೀಡಬೇಕಾಗುತ್ತದೆ.
* ಹೆಚ್ಚಿನ ಮಾಹಿತಿಗಾಗಿ ಸಹಾಯವಾಣಿ ಸಂಖ್ಯೆ 1800-110-069 ಗೆ ಕರೆ ಮಾಡಬಹುದು
* NPS by Protean eGov ಆಪ್ ಮೂಲಕವೂ ಅರ್ಜಿ ಸಲ್ಲಿಸಬಹುದಾಗಿದೆ.












Click it and Unblock the Notifications