Jharkhand Assembly Election 2024: ಜಾರ್ಖಂಡ್‌ನಲ್ಲಿ ಸೀಟು ಹಂಚಿಕೆ ಮಾತುಕತೆ ಬಹುತೇಕ ಪೂರ್ಣ: ಹಿಮಂತ ಬಿಸ್ವಾ
Jharkhand Assembly Election 2024: ಈಗಾಗಲೇ ಹರಿಯಾಣ ಮತ್ತು ಜಮ್ಮು ಕಾಶ್ಮೀರ ವಿಧಾನಸಭೆ ಚುಣೆವಣೆ ನಡೆದಿದ್ದು, ಫಲಿತಾಂಶ ಕೂಡ ಪ್ರಟಕವಾಗಿದೆ. ಇದೀಗ ಜಾರ್ಖಂಡ್ ವಿಧಾನಸಭೆ ಚುನಾವಣೆ ಹಿನ್ನೆಲೆ ರಾಜ್ಯದಲ್ಲಿ ಸೀಟು ಹಂಚಿಕೆ ಲೆಕ್ಕಾಚಾರಗಳು ಆಗುತ್ತಿವೆ. ಇದರ ನಡುವೆಯೇ ಹಿಮಂತ ಬಿಸ್ವಾ ಅವರು ಬಿಜೆಪಿ ಸೀಟು ಹಂಚಿಕೆ ಬಗ್ಗೆ ಮಾಹಿತಿ ಬಿಚ್ಚಿಟ್ಟಿದ್ದಾರೆ.
ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅವರು ಸೋಮವಾರ (ಅಕ್ಟೋಬರ್ 14) ಬಿಜೆಪಿ ಸೀಟು ಹಂಚಿಕೆ ಬಗ್ಗೆ ಮಾತನಾಡಿದ್ದು, ಜಾರ್ಖಂಡ್‌ನಲ್ಲಿನ ವಿಧಾನಸಭಾ ಚುನಾವಣೆಗೆ ಎನ್‌ಡಿಎ ಮೈತ್ರಿಕೂಟದಲ್ಲಿ ಸೀಟು ಹಂಚಿಕೆ ಮಾತುಕತೆ ಬಹುತೇಕ ಅಂತಿಮವಾಗಿದೆ. ಅಧಿಕೃತವಾಗಿ ಘೋಷಣೆಯಾದ 48 ಗಂಟೆಗಳ ಒಳಗೆ ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಬಿಡುಗಡೆ ಮಾಡಲಾಗುತ್ತದೆ ಎಂದು ಹೇಳಿದರು.

ವಿಧಾನಸಭಾ ಚುನಾವಣೆಯ ಬಿಜೆಪಿ ಉಸ್ತುವಾರಿಗಳಲ್ಲಿ ಒಬ್ಬರಾಗಿರುವ ಹಿಮಂತ ಬಿಸ್ವಾ ಶರ್ಮಾ ಅವರು ಪಕ್ಷದ ಚುನಾವಣಾ ಸಮಿತಿಯ ಸಭೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು. "ಎನ್‌ಡಿಎ ಮೈತ್ರಿಕೂಟಲ್ಲಿ ಸೀಟು ಹಂಚಿಕೆ ಬಹುತೇಕ ಅಂತಿಮವಾಗಿದೆ. ಚುನಾವಣಾ ಆಯೋಗವು ಮಾದರಿ ನೀತಿ ಸಂಹಿತೆ ಘೋಷಿಸಿದ ತಕ್ಷಣವೇ ನಾವು 24 ರಿಂದ 48ಗಂಟೆಗಳ ಒಳಗೆ ಮೊದಲ ಪಟ್ಟಿಯನ್ನು ಘೋಷಣೆ ಮಾಡುತ್ತೇವೆ," ಎಂದು ಹೇಳಿದರು.
ಸುದೇಶ್ ಮಹ್ತೋ ನೇತೃತ್ವದ ಎಜೆಎಸ್‌ಯು ಪಕ್ಷವು 9-11 ಸ್ಥಾನಗಳಲ್ಲಿ ಸ್ಪರ್ಧಿಸಲಿದೆ ಎಂದು ಅವರು ಹೇಳಿದರು.
ಈಗಾಗಲೇ ಎಜೆಎಸ್‌ಯು ಪಕ್ಷದೊಂದಿಗಿನ ಸೀಟು ಹಂಚಿಕೆ ಮಾತುಕತೆ ಬಹುತೇಕ ಅಂತಿಮವಾಗಿದೆ. ಒಂದು ಸ್ಥಾನಕ್ಕೆ ಸಂಬಂಧಿಸಿದಂತೆ ಸಮಸ್ಯೆಯಿದ್ದು, ಅದನ್ನು ಮಂಗಳವಾರದೊಳಗೆ ಪರಿಹರಿಸುತ್ತೇವೆ" ಎಂದು ಹೇಳಿದರು.
ನಿತೀಶ್ ಕುಮಾರ್ ನೇತೃತ್ವದ ಜೆಡಿಯು ಎರಡು ಕ್ಷೇತ್ರಗಳಲ್ಲಿ ಸ್ಪರ್ಧಿಸಲಿದ್ದು, ಎಲ್‌ಜೆಪಿ ಜೊತೆ ಸೀಟು ಹಂಚಿಕೆ ವಿಚಾರವಾಗಿ ಅದರ ಮುಖ್ಯಸ್ಥ ಚಿರಾಗ್ ಪಾಸ್ವಾನ್ ವಿದೇಶದಿಂದ ಮರಳಿದ ನಂತರ ಚರ್ಚೆ ನಡೆಯಲಿದೆ ಎಂದು ಹೇಳಿದರು.
ಐದು ಅಥವಾ ಆರು ಸ್ಥಾನಗಳನ್ನು ಹೊರತುಪಡಿಸಿ ಬಹುತೇಕ ಎಲ್ಲಾ ಸ್ಥಾನಗಳಿಗೆ ಅಭ್ಯರ್ಥಿಗಳನ್ನು ಅಂತಿಮಗೊಳಿಸಲಾಗಿದ್ದು, ಶೀಘ್ರದಲ್ಲಿಯೇ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಹೇಳಿದರು. ಇನ್ನು ಚುನಾವಣಾ ಸಮಿತಿಯು ನಾಳೆ ಮತ್ತೆ ಸಭೆ ಸೇರಲಿದೆ. ಬಳಿಕ ಪಕ್ಷದ ಸಂಸದೀಯ ಮಂಡಳಿ ಸಭೆ ನಡೆಯಲಿದೆ, ಎಂದು ತಿಳಿಸಿದರು. ಒಟ್ಟು ರಾಜ್ಯದ 81 ವಿಧಾನಸಭೆ ಕ್ಷೇತ್ರಗಳಿಗೆ ಚುನಾವಣೆ ನಡೆಯಲಿದೆ.
ಇನ್ನು ಈಗಾಗಲೇ ಜಮ್ಮು ಮತ್ತು ಕಾಶ್ಮಿರ ವಿಧಾನಸಭೆ ಚುನಾವಣೆಯ ಮೂರು ಹಂತಗಳಲ್ಲಿ ಸೇರಿ ಒಟ್ಟಾರೆ ಶೇಕಡ 63.88ರಷ್ಟು ಮತದಾನವಾಗಿತ್ತು. ಮೊದಲ ಹಂತದಲ್ಲಿ ಶೇಕಡ 61.38ರಷ್ಟು, ಎರಡನೇ ಹಂತದಲ್ಲಿ 57.31 ರಷ್ಟು ಮತದಾನ ಆಗಿತ್ತು. ಅಕ್ಟೋಬರ್ 1ರಂದು ನಡೆದ ಮೂರನೇ ಹಂತದಲ್ಲಿ 69.69 ರಷ್ಟು ಮತದಾನವಾಗಿದೆ. ಸೆಪ್ಟೆಂಬರ್ 15, 18 ಹಾಗೂ ಅಕ್ಟೋಬರ್ 1ರಂದು ಮೂರು ಹಂತಗಳಲ್ಲಿ ಮತದಾನ ನಡೆದಿತ್ತು. ಇನ್ನು ಅಕ್ಟೋಬರ್ 8ರಂದು ಮತ ಎಣಿಕೆ ಮುಕ್ತಾಯವಾಗಿದ್ದು, ಜಮ್ಮು ಕಾಶ್ಮೀರದಲ್ಲಿ ನ್ಯಾಷನಲ್ ಕಾಂಗ್ರೆಸ್ ಹಾಗೂ ಕಾಂಗ್ರೆಸ್ ಮೈತ್ರಿಕೂಟಕ್ಕೆ 48 ಸೀಟ್‌ಗಳು ಸಿಕ್ಕಿದ್ದು, ಬಿಜೆಪಿಗೆ 29 ಸೀಟ್ ಗಳಿಸಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.












Click it and Unblock the Notifications