ಮತ ಗಳಿಸಲು ಜೇಟ್ಲಿ, ಮೋದಿ ನಾನಾ ಕಸರತ್ತು!
ಬೆಂಗಳೂರು, ಫೆಬ್ರವರಿ 01 : ಬಜೆಟ್ ಮಂಡನೆಯ ಹಿಂದೆ ಯಾವುದೇ ದೂರಾಲೋಚನೆ ಇಲ್ಲದೆ, ಯಾವುದೇ ಲೆಕ್ಕಾಚಾರವಿಲ್ಲದೆ, ಯಾವುದೇ ಹಿಡನ್ ಅಜೆಂಡಾ ಇಲ್ಲದೆ, ಕೇವಲ ಬಡವರು, ನಿರ್ಗತಿಕರು, ಶ್ರಮಿಕ ಕೃಷಿಕರು ಮತ್ತು ಹಿರಿಯ ನಾಗರಕನ್ನು ಉದ್ಧಾರ ಮಾಡುವ ಉದ್ದೇಶದಿಂದ ಬಜೆಟ್ ಮಂಡಿಸಿರುವುದಾಗಿ ಅರುಣ್ ಜೇಟ್ಲಿ ಹೇಳಿದ್ದಾರೆ.
ಲೋಕಸಭೆ ಚುನಾವಣೆಗೆ ಹೆಚ್ಚೂಕಡಿಮೆ ಒಂದು ವರ್ಷ ಬಾಕಿಯಿದೆ. ಅದಕ್ಕೂ ಮುಂಚೆ 2018ರಲ್ಲಿ ಕರ್ನಾಟಕ, ರಾಜಸ್ತಾನ, ಮಧ್ಯಪ್ರದೇಶ, ಛತ್ತೀಸಗಢ ಸೇರಿದಂತೆ 8 ರಾಜ್ಯಗಳಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದೆ. ಇಂಥ ಸಮಯದಲ್ಲಿ ದೂರಾಲೋಚನೆ ಇಲ್ಲದೆ ಬಜೆಟ್ ಮಂಡಿಸಲು ಸಾಧ್ಯವೆ? ಎನ್ನುತ್ತಿದ್ದಾರೆ ರಾಜಕೀಯ ಪಂಡಿತರು.
ಹೇಳಿಕೇಳಿ ಅರುಣ್ ಜೇಟ್ಲಿಯವರು ಚುನಾವಣೆಗಳ ಮಾಸ್ಟರ್ ಸ್ಟ್ರಾಟಜಿಸ್ಟ್. ಕಳೆದ ಲೋಕಸಭೆ ಚುನಾವಣೆಯಲ್ಲಿ ಕರ್ನಾಟಕದ ಉಸ್ತುವಾರಿ ವಹಿಸಿದ್ದ ಜೇಟ್ಲಿ ಸಾಹೇಬರು, ಕರ್ನಾಟಕದಲ್ಲಿ ಕಾಂಗ್ರೆಸ್ ಆಡಳಿತವಿದ್ದರೂ ಭಾರತೀಯ ಜನತಾ ಪಕ್ಷಕ್ಕೆ 17 ಲೋಕಸಭೆ ಸೀಟುಗಳನ್ನು ಗೆಲ್ಲಿಸುವಲ್ಲಿ ತಮ್ಮ ಕೈಚಳಕ ತೋರಿದ್ದರು.
ಗುಜರಾತ್ ಚುನಾವಣೆಗೂ ಮೊದಲು ಉತ್ತರ ಪ್ರದೇಶ ಚುನಾವಣೆ ಸೇರಿದಂತೆ ಹಲವಾರು ರಾಜ್ಯಗಳಲ್ಲಿ ಭಾರತೀಯ ಜನತಾ ಪಕ್ಷ ಭರ್ಜರಿ ಜಯ ಗಳಿಸಿತ್ತು, ಪಂಜಾಬ್ ಹೊರತುಪಡಿಸಿ. ಆದರೆ, ಗುಜರಾತ್ ನಲ್ಲಿ ಗ್ರಾಮೀಣ ಭಾಗದ ಜನತೆ ತಿರುಗಿಬಿದ್ದರೆ ಏನಾಗುತ್ತದೆಂದು ನರೇಂದ್ರ ಮೋದಿ ಮತ್ತು ಅರುಣ್ ಜೇಟ್ಲಿಯವರು ನೋಡಿದ್ದಾರೆ.

ಮಧ್ಯಮ ವರ್ಗದವರು ಕೈಬಿಡುವುದಿಲ್ಲ
ಹೇಗಿದ್ದರೂ ಚುನಾವಣೆಯಲ್ಲಿ ವಿದ್ಯಾವಂತರು, ಧನಿಕರು, ಮಧ್ಯಮ ವರ್ಗದವರು ಮತ್ತು ಮೋದಿಯನ್ನು ಮೆಚ್ಚುವವರು ತಮ್ಮ ಕೈಬಿಡುವುದಿಲ್ಲ ಎಂಬುದು ಭಾರತೀಯ ಜನತಾ ಪಕ್ಷದ ಥಿಂಕ್ ಟ್ಯಾಂಕ್ ನ ಬಲವಾದ ನಂಬಿಕೆ. ಈ ಕಾರಣದಿಂದಾಗಿಯೇ ಮಧ್ಯಮ ವರ್ಗದವರ ಮೇಲೆ ತುಸು ತೆರಿಗೆ ಹೇರಿಕೆ ಒಡ್ಡಿದರೂ, ಅವರು ತಮ್ಮ ಕೈಬಿಡುವುದಿಲ್ಲ ಎಂಬ ಅಚಲ ನಂಬಿಕೆ ಜೇಟ್ಲಿ ಅವರದು.

ಅಪನಗದೀಕರಣ ಉಲ್ಟಾ ಹೊಡೆದಿದ್ದರೆ
ಇದಕ್ಕೆ ಜ್ವಲಂತ ಉದಾಹರಣೆ ಅಪನಗದೀಕರಣ ಮತ್ತು ಸರಕು ಮತ್ತು ಸೇವಾ ತೆರಿಗೆ ಜಾರಿಗೆ ತಂದಿರುವುದು. ಅಪನಗದೀಕರಣ ಆರಂಭದಲ್ಲಿ ಮಧ್ಯಮ ವರ್ಗದವರಿಗೆ ಭಾರೀ ಹೊಡೆತ ಕೊಟ್ಟಿದ್ದರೂ, ನಂತರ ಅದಕ್ಕೆ ಹೊಂದಿಕೊಂಡರು ಮತ್ತು ಶ್ಲಾಘಿಸಲು ಆರಂಭಿಸಿದ್ದರು. ಅಪನಗದೀಕರಣ ಉಲ್ಟಾ ಹೊಡೆದಿದ್ದರೆ ಗುಜರಾತ್ ನಲ್ಲಿ ಬಿಜೆಪಿ ಗೆಲ್ಲುತ್ತಲೇ ಇರಲಿಲ್ಲ.

ನಿರೀಕ್ಷೆಗೂ ಮೀರಿ ಮತಗಳಿಸಿದ್ದ ಕಾಂಗ್ರೆಸ್
ಅಪನಗದೀಕರಣದಿಂದಾಗಿ ಮತ್ತು ಜಿಎಸ್ಟಿ ಜಾರಿಯಿಂದಾಗಿ ಭಾರೀ ಆತಂಕಕ್ಕೆ ಮತ್ತು ನಷ್ಟಕ್ಕೆ ಒಳಗಾದವರು ಬಡವರು, ಕೃಷಿಕರು, ಸಣ್ಣ ಉದ್ದಿಮೆದಾರರು. ಗುಜರಾತ್ ಚುನಾವಣೆಯಲ್ಲಿ ಗ್ರಾಮೀಣ ಪ್ರದೇಶದಲ್ಲಿ ಮತದಾರರು ಕೈಕೊಟ್ಟಿದ್ದರಿಂದಲೇ ಕಾಂಗ್ರೆಸ್ಸಿಗೆ ನಿರೀಕ್ಷೆಗೂ ಮೀರಿ ಹೆಚ್ಚಿನ ಮತಗಳು ಬಂದಿದ್ದವು.

ಗ್ಯಾಸ್ ಸಂಪರ್ಕ, ಆರೋಗ್ಯ ವಿಮೆ ಯೋಜನೆ
ಇದನ್ನು ಮನಗಂಡು ಬಡವರು ಮತ್ತು ಕೆಳಮಧ್ಯಮ ವರ್ಗದ ಜನರ ಮತ ಮತ್ತು ಮನಗೆಲ್ಲುವ ಉದ್ದೇಶದಿಂದ ಹಲವಾರು ಯೋಜನೆಗಳನ್ನು ಅರುಣ್ ಜೇಟ್ಲಿ ಹರಿಯಬಿಟ್ಟಿದ್ದಾರೆ. ಎಲ್ಲಕ್ಕಿಂತ ಮಹಿಳಾ ವರ್ಗದ ಮನವೊಲಿಕೆಗಾಗಿ ಗ್ಯಾಸ್ ಸಂಪರ್ಕ, ಆರೋಗ್ಯ ವಿಮೆ ಯೋಜನೆಗಳನ್ನು 10 ಕೋಟಿಗೂ ಹೆಚ್ಚು ಬಡ ಕುಟುಂಬಗಳಿಗೆ ನೀಡಿದ್ದಾರೆ.

ಆರೋಗ್ಯ ವಿಮೆ ಹೇಗೆ ಜಾರಿಗೆ ತರುತ್ತದೆ?
ಬಡ ಕುಟುಂಬಗಳಿಗೆ 5 ಲಕ್ಷ ರುಪಾಯಿ ಆರೋಗ್ಯ ವಿಮೆ ನೀಡುವುದಾಗಿ ಕೇಂದ್ರ ಹೇಳಿದೆ. ಆದರೆ, ಇದನ್ನು ಹೇಗೆ ಜಾರಿಗೆ ತರುತ್ತದೆ ಎಂಬುದೇ ಬಹುದೊಡ್ಡ ಸವಾಲು. 10 ಕೋಟಿ ಜನರಿಗೆ 5 ಲಕ್ಷದಂತೆ ಆರೋಗ್ಯ ವಿಮೆ ನೀಡಿದರೆ ಕನಿಷ್ಠ 5,000 ಕೋಟಿ ರು. ಬೇಕಾಗುತ್ತದೆ. ಆದರೆ, ಜೇಟ್ಲಿ ಅವರು ಇದಕ್ಕಾಗಿ ನಿಯೋಜನೆ ಮಾಡಿದ್ದು 1,200 ಕೋಟಿ ರುಪಾಯಿ ಮಾತ್ರ. ಹೇಗೆ ಮಾಡ್ತೀರಾ ಸಾರ್ ಜೇಟ್ಲಿ?

ಜೇಟ್ಲಿ ಏನೇ ಗಲಾಟಿ ಹೊಡೆದರೂ
ಕಾಂಗ್ರೆಸ್ ನ ವೋಟ್ ಬ್ಯಾಂಕ್ ಎಂದರೆ ಅಲ್ಪಸಂಖ್ಯಾತರು, ಹಿಂದುಳಿದ ವರ್ಗದವರು. ನೀವೇನೇ ಗಲಾಟಿ ಹೊಡೆದರೂ ಅವರು ತಮಗೇ ಮತ ಹಾಕುತ್ತಾರೆ ಎಂಬ ನಂಬಿಕೆ ಕಾಂಗ್ರೆಸ್ಸಿನದು. ಆದರೆ, 2013ರ ಚುನಾವಣೆಯಲ್ಲಿ ಆಗಿದ್ದೇನು? ಹಾಗೆಯೆ, 2013ರಲ್ಲಿ ಆಗಿದ್ದು 2019ರಲ್ಲಿ ಮರುಕಳಿಸುತ್ತದೆ ಎಂಬ ನಂಬಿಕೆಯೂ ಬಿಜೆಪಿಯಲ್ಲಿಲ್ಲ. ಅದಕ್ಕಾಗಿಯೇ ಇಷ್ಟೆಲ್ಲ ದೊಂಬರಾಟ.

ಜಿಗ್ನೇಶ್ ಮೇವಾನಿ ಏನು ಹೇಳುತ್ತೀರಿ?
ಪರಿಶಿಷ್ಟ ಜಾತಿಯ ಅಭ್ಯದಯಕ್ಕಾಗಿ 56,619 ಕೋಟಿ ರುಪಾಯಿ ಮತ್ತು ಪರಿಶಿಷ್ಟ ಪಂಗಡಗಳಿಗಾಗಿ 39,135 ಕೋಟಿ ರುಪಾಯಿ ನೀಡಿದ್ದಾರೆ ಅರುಣ್ ಜೇಟ್ಲಿ. ಆದರೆ, ಇದು ಮತಗಳಾಗಿ ಪರಿವರ್ತನೆಯಾಗುವುದಾ? ಎಂಬುದೇ ಮಿಲಿಯನ್ ಡಾಲರ್ ಪ್ರಶ್ನೆ. ಅದೆಲ್ಲ ಇರ್ಲಿ ಜೇಟ್ಲಿಯವರೆ, ಪ್ರತಿಭಾವಂತರ ಬಗ್ಗೆ ಮಾತನಾಡುವ ನೀವು ಜಾತಿಗೆ ಮಣೆ ಹಾಕುವುದನ್ನು ಯಾವಾಗ ನಿಲ್ಲಿಸುತ್ತೀರಿ ಎಂದು ಓದುಗರೊಬ್ಬರು ಕೇಳಿದ್ದಾರೆ. ಜಿಗ್ನೇಶ್ ಮೇವಾನಿ ಏನು ಹೇಳುತ್ತೀರಿ?

ಕರ್ನಾಟಕ, ರಾಜಸ್ತಾನ, ಮಧ್ಯಪ್ರದೇಶದಲ್ಲಿ ಸೋಲಿನ ಸುಳಿವು
ಬಿಜೆಪಿಗೆ ಇನ್ನು ಉಳಿದಿರುವುದು ಕೇವಲ ಒಂದು ವರ್ಷ ಮಾತ್ರ. ಅಷ್ಟರಲ್ಲಿ, ಇದೇ ವರ್ಷ ಸಾಲುಸಾಲು ವಿಧಾನಸಭೆ ಚುನಾವಣೆಗಳಿವೆ. ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷವನ್ನು ಕಿತ್ತುಕೊಳ್ಳಬೇಕಿದ್ದರೆ, ರಾಜಸ್ತಾನ, ಮಧ್ಯಪ್ರದೇಶಗಳಲ್ಲಿ ಮತದಾರರು ಬಿಜೆಪಿ ಈಗಾಗಲೆ ಸೋಲಿನ ಸುಳಿವು ನೀಡಿದ್ದಾರೆ. ಉಪಚುನಾವಣೆಗಳಲ್ಲಿಯೂ ಬಿಜೆಪಿ ಭಾರೀ ಸೋಲು ಅನುಭವಿಸಿದೆ. ಈ ಮೂರು ರಾಜ್ಯಗಳಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಂಡರೂ ಗೆಲ್ಲುವುದು ಕಷ್ಟ ಕಷ್ಟ ಕಷ್ಟ.












Click it and Unblock the Notifications