Article 370 Verdict: ಕಾಶ್ಮೀರದ ವಿಶೇಷ ಸ್ಥಾನಮಾನ ರದ್ದು: ಇಂದು ಸುಪ್ರೀಂ ಕೋರ್ಟ್ ತೀರ್ಪು
ನವದೆಹಲಿ, ಡಿಸೆಂಬರ್ 11: ಜಮ್ಮು ಮತ್ತು ಕಾಶ್ಮೀರಕ್ಕೆ ಸಂವಿಧಾನದಲ್ಲಿ ನೀಡಲಾಗಿದ್ದ ವಿಶೇಷ ಸ್ಥಾನಮಾನ ಪರಿಚ್ಛೇದ 370 ಅನ್ನು ರದ್ದು ಮಾಡಿದ್ದ ಕೇಂದ್ರ ಸರ್ಕಾರದ ನಿರ್ಧಾರವನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿಗಳ ಕುರಿತ ತೀರ್ಪನ್ನು ಇಂದು ಸೋಮವಾರ (ಡಿಸೆಂಬರ್ 11) ಸುಪ್ರೀಂ ಕೋರ್ಟ್ ಪ್ರಕಟಿಸಲಿದೆ.
ಕೇಂದ್ರ ಬಿಜೆಪಿ ಸರ್ಕಾರವು ಎರಡನೇ ಬಾರಿಗೆ ಅಧಿಕಾರಕ್ಕೆ ಬಂದ ಬಳಿಕ 2019ರಲ್ಲಿ ಆಗಸ್ಟ್ ಮೊದಲ ವಾರ ಜಮ್ಮು-ಕಾಶ್ಮೀರಕ್ಕೆ ನೀಡಿದ್ದ ವಿಶೇಷ ಸ್ಥಾನಮಾನವನ್ನು ರದ್ದುಗೊಳಿಸಿತ್ತು. ಇದೇ ವೇಳೆ ಕಾಶ್ಮೀರ ಪ್ರತ್ಯೇಕ ಮಾಡಿ ಲಡಾಕ್ ಅನ್ನು ಕೇಂದ್ರಾಡಳಿತ ಪ್ರದೇಶವಾಗಿ ಮಾಡಿತು.

ಕೇಂದ್ರದ ಈ ನಿರ್ಧಾರಗಳಿಗೆ ಒಂದು ಕಡೆ ವ್ಯಾಪಕ ಆಕ್ರೋಶವು ವ್ಯಕ್ತವಾಗಿತ್ತು ಮತ್ತೊಂದು ಕಡೆ ಮೆಚ್ಚುಗೆಯು ವ್ಯಕ್ತವಾಗಿತ್ತು. ಪರಿಚ್ಛೇಧ 370 ರದ್ದು ಕುರಿತಂತೆ ಒಟ್ಟು 23 ಅರ್ಜಿಗಳು ಸುಪ್ರೀಂ ಕೋರ್ಟ್ ಗ ಸಲ್ಲಿಕೆ ಆಗಿದ್ದವು. ಈಗಾಗಲೇ ಇವುಗಳನ್ನು ಸುಪ್ರೀಂ ಕೋರ್ಟ್ ನ್ಯಾಯಪೀಠದಲ್ಲಿ ವಿಚಾರಣೆಗಳನ್ನು ನಡೆಸಲಾಗಿದೆ.
ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಡಿ.ವೈ ಚಂದ್ರಚೂಡ ಅವರ ನೇತೃತ್ವದ ಪಂಚಸದಸ್ಯ ಸಾಂವಿಧಾನಿಕ ಪೀಠ ಈ ಅರ್ಜಿಗಳ ಸುದೀರ್ಘ ವಿಚಾರಣೆ ನಡೆಸಿತ್ತು. ವಾದ-ಪ್ರತಿವಾದ ಆಲಿಸಿದ ನಂತರ ಸೆಪ್ಟಂಬರ್ 5 ರಂದು ತೀರ್ಪು ಕಾಯ್ದಿರಿಸಿತ್ತು. ಇದೀದ ಈ ಅರ್ಜಿಗಳ ಅಂತಿಮ ತೀರ್ಪು ಇಂದು ಡಿಸೆಂಬರ್ 11 ರಂದು ಹೊರ ಬೀಳಲಿದೆ.
ಇಂದು ಸುಪ್ರೀಂ ಕೋರ್ಟ್ ತೀರ್ಪು ಪ್ರಕಟವಾಗುವ ಹಿನ್ನೆಲೆಯಲ್ಲಿ ಜಮ್ಮು ಮತ್ತು ಕಾಶ್ಮೀರದಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ತಡೆಯಲು ಸೂಕ್ತ ಬಿಗಿ ಭದ್ರತೆ ಕೈಗೊಳ್ಳಲಾಗಿದೆ. ಅಲ್ಲದೇ ಯಾವುದೇ ತೀರ್ಪು ಬಂದರೂ ಅದರ ಪರ ಮತ್ತು ವಿರುದ್ಧವಾಗಿ ಕೆಲವರು ರಸ್ತೆಗೂ ಇಳಿಯಬಹುದಾಗಿದೆ. ಈ ಸಂಬಂಧ ಜಮ್ಮು ಕಾಶ್ಮೀರದಲ್ಲಿ ಕಟ್ಟೆಚ್ಚರ ವಹಿಸಲಾಗಿದೆ ಎಂದು ವರದಿ ಆಗಿದೆ.
ಸ್ಥಾನಮಾನ ರದ್ದು ಮಾಡಿದ್ದ ಬಿಜೆಪಿ
ಭಾರತ ದೇಶ ಇಬ್ಬಾಗವಾದ ಬಳಿಕ ಜಮ್ಮು ಮತ್ತು ಕಾಶ್ಮೀರ ಭಾರತಕ್ಕೆ ಸೇರ್ಪಡೆಯಾಗಿತ್ತು. ಆದರೆ ಇದಕ್ಕೆ ವಿಶೇಷ ಸ್ಥಾನ ಮಾನ ನೀಡಲಾಗಿತ್ತು. ಇದು ಭಾರತಕ್ಕೆ ಸೇರ್ಪಡೆಯಾಗಿದ್ದರೂ ಸಹಿತ 1949ರ ಸುಮಾರಿಗೆ ಪರಿಚ್ಛೇದ 370ರಡಿ ವಿಶೇಷ ಸ್ಥಾನ ಕೊಡಲಾಯಿತು. ಇದರಿಂದ ಈ ಭಾಗಕ್ಕೆ ಪ್ರತ್ಯೇಕ ಧ್ವಜ, ಅಧಿಕಾರ, ಕಾನೂನು ರಕ್ಷಣೆ, ವಿದೇಶಾಂಗ ವ್ಯವಹಾರ ಹೊರತಾಗಿ ಯಾವುದೇ ಕಾನೂನುಗಳು ಕಾಶ್ಮೀರಕ್ಕೆ ಅನ್ವಯವಾಗದಂತೆ ವಿಶೇಷ ಸ್ಥಾನಮಾನದ ರಕ್ಷಣೆ ಕೊಡಲಾಗಿತ್ತು. ಅದನ್ನು ಬಿಜೆಪಿ ಸರ್ಕಾರ ಬಂದ ಮೇಲೆ ರದ್ದುಗೊಳಿಸಿತ್ತು. ಇದನ್ನು ಪ್ರಶ್ನಿಸಿ ನ್ಯಾಯಾಲಯದ ಮೊರೆ ಹೋಗಲಾಗಿತ್ತು.












Click it and Unblock the Notifications