14,000 ಅಡಿ ಎತ್ತರದಲ್ಲಿ ಸೇನಾ ಶ್ವಾನಗಳ ಸಾಹಸ; ಲಡಾಖ್‌ನ ಹಿಮಚಳಿಯಲ್ಲಿ ಹೇಗೆ ತರಬೇತಿ ಪಡೆಯುತ್ತವೆ?

Army Dogs: ಭಾರತದ ಕೊಟ್ಟ ಕೊನೆಯ ಪ್ರದೇಶವಾದ ಹಿಮಾಲಯದ ಲಡಾಖ್‌ನಂತಹ ಅತಿ ಎತ್ತರದ ಪ್ರದೇಶಗಳಲ್ಲಿ ಗಡಿ ಕಾವಲು ಎನ್ನುವುದು ಸೈನಿಕರಿಗೆ ಸಿಕ್ಕಾಪಟ್ಟೆ ಸವಾಲಿನ ಕೆಲಸ. ಅಲ್ಲಿ ಕಾರ್ಯನಿರ್ವಹಿಸುವ ಸೇನಾ ಶ್ವಾನಗಳಿಗೂ ಪರಿಸರದ ಸವಾಲುಗಳು ಕಡಿಮೆ ಇಲ್ಲ. ಅತ್ಯಂತ ಚಳಿ, ಕಡಿಮೆ ಆಮ್ಲಜನಕ, ಹಿಮಾವೃತ ಪ್ರದೇಶ ಮತ್ತು ಕಠಿಣ ಭೂಪ್ರದೇಶದ ನಡುವೆಯೂ ಈ ಶ್ವಾನಗಳು ತಮ್ಮ ಕರ್ತವ್ಯ ನಿರ್ವಹಿಸಬೇಕಾಗುತ್ತದೆ.

ಭಾರತೀಯ ಸೇನೆ ಮತ್ತು ಇಂಡೋ-ಟಿಬೆಟನ್ ಬಾರ್ಡರ್ ಪೊಲೀಸ್ ಫೋರ್ಸ್ (ITBP), ಲಡಾಖ್ ಗಡಿಯ ಸೂಕ್ಷ್ಮ ಪ್ರದೇಶಗಳಲ್ಲಿ ತರಬೇತಿ ಪಡೆದ ಹಿಮಾಲಯನ್ ಶ್ವಾನಗಳನ್ನು ಕಣ್ಗಾವಲು ಮತ್ತು ಭದ್ರತಾ ಕಾರ್ಯಗಳಿಗೆ ಬಳಸುತ್ತಿದೆ. ಬಖರ್ವಾಲ್ ಮತ್ತು ಟಿಬೆಟನ್ ಮಾಸ್ಟಿಫ್‌ನಂತಹ ಸ್ಥಳೀಯ ತಳಿಗಳೂ ಇಂತಹ ಕಾರ್ಯಗಳಿಗೆ ಬಳಸಲ್ಪಡುತ್ತವೆ.

Army Dogs at 14 000 Feet From Low Oxygen to Extreme Cold How Military Dogs Prepare for Ladakh

'ದಿ ಟೆಲಿಗ್ರಾಫ್' ಆನ್‌ಲೈನ್ ವರದಿ ಪ್ರಕಾರ, ಲೈನ್ ಆಫ್ ಆಕ್ಚುವಲ್ ಕಂಟ್ರೋಲ್ (LAC) ಸಮೀಪದ ಕೆಲವು ಸೂಕ್ಷ್ಮ ಪ್ರದೇಶಗಳಲ್ಲಿ ಸುಮಾರು 14,000 ಅಡಿ ಎತ್ತರದಲ್ಲಿಯೂ ಈ ಶ್ವಾನಗಳನ್ನು ನಿಯೋಜಿಸಲಾಗಿದೆ. ಆದರೆ ಇಷ್ಟು ಎತ್ತರದಲ್ಲಿ ಕೆಲಸ ಮಾಡಲು ಶ್ವಾನ ಕೇವಲ ದೈಹಿಕವಾಗಿ ಬಲಿಷ್ಠವಾಗಿದ್ದರೆ ಸಾಕಾಗುವುದಿಲ್ಲ. ಕಡಿಮೆ ಆಮ್ಲಜನಕ, ತೀವ್ರ ಚಳಿ ಮತ್ತು ಕಠಿಣ ಭೂಪ್ರದೇಶಕ್ಕೆ ಹೊಂದಿಕೊಳ್ಳುವಂತೆ ಅವುಗಳಿಗೆ ವಿಶೇಷ ತರಬೇತಿ ನೀಡಲಾಗುತ್ತದೆ.

Army Dogs ತರಬೇತಿ ಹೇಗೆ ಭಿನ್ನ?

ಸೇನಾ ಶ್ವಾನಗಳಿಗೆ ಯಾವುದೇ ಪರಿಸ್ಥಿತಿಯಲ್ಲೂ ತಮ್ಮ ಕೆಲಸದ ಮೇಲೆ ಗಮನ ಕೇಂದ್ರೀಕರಿಸುವಂತೆ ತರಬೇತಿ ನೀಡಲಾಗುತ್ತದೆ. ಆದರೆ ಎತ್ತರದ ಪ್ರದೇಶಗಳಿಗೆ ನಿಯೋಜಿಸುವ ಮೊದಲು ಅವುಗಳಿಗೆ ವಿಶೇಷ ರೀತಿಯಲ್ಲಿ ದೇಹವನ್ನು ಸಿದ್ಧಪಡಿಸಲಾಗುತ್ತದೆ.

ಗುರ್ಗಾಂವ್‌ನ DCC Animal Hospitalನ ಪಶುವೈದ್ಯಕೀಯ ಸೇವೆಗಳ ನಿರ್ದೇಶಕ ಹಾಗೂ ಮುಖ್ಯಸ್ಥ ಡಾ. ವಿನೋದ್ ಶರ್ಮಾ ಅವರ ಪ್ರಕಾರ, ಇಂತಹ ಶ್ವಾನಗಳ ತರಬೇತಿಯನ್ನು ಅವುಗಳ ನಿಯೋಜನೆಯ ಪ್ರದೇಶಕ್ಕೆ ಅನುಗುಣವಾಗಿ ಬದಲಾಯಿಸಲಾಗುತ್ತದೆ.

ಅವರ ಪ್ರಕಾರ, ಹೆಚ್ಚಿನ ಎತ್ತರದ ಪ್ರದೇಶಗಳ ತರಬೇತಿ ಸಾಮಾನ್ಯ ತರಬೇತಿಗಿಂತ ಭಿನ್ನ. ಶ್ವಾನವು ವಾಸನೆ ಪತ್ತೆಹಚ್ಚುವುದು, ಜಾಡು ಹಿಡಿಯುವುದು ಅಥವಾ ಗಸ್ತು ತಿರುಗುವುದು ಮುಂತಾದ ಕೆಲಸಗಳನ್ನು ಮಾಡಬೇಕಾಗಿರುವುದರ ಜೊತೆಗೆ, ಕಡಿಮೆ ಆಮ್ಲಜನಕ ಮತ್ತು ತೀವ್ರ ಚಳಿಗೂ ದೇಹವನ್ನು ಹೊಂದಿಸಿಕೊಳ್ಳಬೇಕಾಗುತ್ತದೆ.

ಹೀಗಾಗಿ ಶ್ವಾನಗಳನ್ನು ಎತ್ತರದ ಪ್ರದೇಶಕ್ಕೆ ಕರೆದೊಯ್ದ ತಕ್ಷಣವೇ ಕಠಿಣ ವ್ಯಾಯಾಮ ಅಥವಾ ಗಸ್ತು ಕರ್ತವ್ಯಕ್ಕೆ ನಿಯೋಜಿಸಲಾಗುವುದಿಲ್ಲ. ಮೊದಲು ಅವುಗಳಿಗೆ ನಿಧಾನವಾಗಿ ಪರಿಸರಕ್ಕೆ ಹೊಂದಿಕೊಳ್ಳುವ ಅವಕಾಶ ನೀಡಲಾಗುತ್ತದೆ. ಈ ಪ್ರಕ್ರಿಯೆಗೆ ಹಲವು ವಾರಗಳೂ ಬೇಕಾಗಬಹುದು.

ಆರಂಭದಲ್ಲಿ ವ್ಯಾಯಾಮದ ಅವಧಿ ಮತ್ತು ತೀವ್ರತೆ ಕಡಿಮೆ. ನಂತರ ಶ್ವಾನವು ಎತ್ತರದ ಪ್ರದೇಶದ ಪರಿಸ್ಥಿತಿಯನ್ನು ಸಹಿಸಿಕೊಳ್ಳುವ ಸಾಮರ್ಥ್ಯ ಬೆಳೆಸಿಕೊಂಡಂತೆ ಅದರ ಕೆಲಸದ ಪ್ರಮಾಣವನ್ನು ಹಂತಹಂತವಾಗಿ ಹೆಚ್ಚಿಸಲಾಗುತ್ತದೆ.

14,000 ಅಡಿಯಲ್ಲಿ ಕಡಿಮೆ ಆಮ್ಲಜನಕದ ಸವಾಲು

ಸಮುದ್ರಮಟ್ಟಕ್ಕೆ ಹೋಲಿಸಿದರೆ ಸುಮಾರು 14,000 ಅಡಿ ಎತ್ತರದಲ್ಲಿ ಗಾಳಿಯಲ್ಲಿನ ಲಭ್ಯ ಆಮ್ಲಜನಕದ ಪ್ರಮಾಣ ಕಡಿಮೆ ಇರುತ್ತದೆ. ಇದರಿಂದ ಶ್ವಾನಗಳು ಬೇಗನೆ ದಣಿಯಬಹುದು. ಉಸಿರಾಟ ಹೆಚ್ಚಾಗಬಹುದು ಮತ್ತು ದೈಹಿಕ ಚಟುವಟಿಕೆಯ ನಂತರ ಸಹಜ ಸ್ಥಿತಿಗೆ ಮರಳಲು ಹೆಚ್ಚು ಸಮಯ ಬೇಕಾಗಬಹುದು.

ಆದರೆ ಸೇನಾ ಶ್ವಾನಗಳಿಗೆ ಕೇವಲ ಓಡುವುದು ಅಥವಾ ನಡೆಯುವುದು ಮಾತ್ರ ಕೆಲಸವಲ್ಲ. ಅವು ಒಂದು ನಿರ್ದಿಷ್ಟ ವಾಸನೆಯನ್ನು ಗುರುತಿಸಬೇಕಾಗಬಹುದು. ವ್ಯಕ್ತಿಯ ಅಥವಾ ವಸ್ತುವಿನ ಜಾಡನ್ನು ಹಿಡಿಯಬೇಕಾಗಬಹುದು. ನಿರ್ದಿಷ್ಟ ಪ್ರದೇಶವನ್ನು ಹುಡುಕಬೇಕಾಗಬಹುದು. ಇದೆಲ್ಲವನ್ನೂ ಮಾಡುವಾಗ ಅವುಗಳ ಗಮನವೂ ಅಷ್ಟೇ ಮುಖ್ಯ.

ಎತ್ತರದ ಪ್ರದೇಶದಲ್ಲಿ ವಾಸನೆ ಪತ್ತೆಹಚ್ಚುವುದು ಅಥವಾ ಜಾಡು ಹಿಡಿಯುವ ಕೌಶಲ್ಯ ಮೂಲಭೂತವಾಗಿ ಬದಲಾಗುವುದಿಲ್ಲ. ಆದರೆ ಅದೇ ಕೆಲಸವನ್ನು ಮಾಡಲು ದೇಹದ ಮೇಲೆ ಬೀಳುವ ಒತ್ತಡ ಹೆಚ್ಚಾಗುತ್ತದೆ ಎಂದು ಡಾ. ಶರ್ಮಾ ವಿವರಿಸುತ್ತಾರೆ.

ಹೀಗಾಗಿ ಕೆಲಸದ ವೇಗ, ವಿಶ್ರಾಂತಿ ಮತ್ತು ಚೇತರಿಕೆಗೆ ಹೆಚ್ಚಿನ ಪ್ರಾಮುಖ್ಯತೆ ನೀಡಲಾಗುತ್ತದೆ. ತರಬೇತಿ ಮತ್ತು ಕಾರ್ಯಾಚರಣೆ ವೇಳೆ ಹ್ಯಾಂಡ್ಲರ್‌ಗಳು ಶ್ವಾನಗಳ ದೈಹಿಕ ಸ್ಥಿತಿಯನ್ನು ಗಮನಿಸುತ್ತಿರುತ್ತಾರೆ. ಅಗತ್ಯವಿದ್ದರೆ ಕೆಲಸ ಮತ್ತು ವಿಶ್ರಾಂತಿಯ ಸಮಯವನ್ನು ಬದಲಾಯಿಸಲಾಗುತ್ತದೆ.

ಹಿಮ, ಚಳಿ ಮತ್ತು ಕಠಿಣ ನೆಲದಲ್ಲಿ ತರಬೇತಿ

ಲಡಾಖ್‌ನಂತಹ ಪ್ರದೇಶಗಳಲ್ಲಿ ಶ್ವಾನಗಳ ಪಾದಗಳಿಗೆ ವಿಶೇಷ ಗಮನ ನೀಡಬೇಕಾಗುತ್ತದೆ. ಹಿಮ, ಮಂಜು ಮತ್ತು ಕಲ್ಲುಗಳಿಂದ ಕೂಡಿದ ಕಠಿಣ ನೆಲದ ಮೇಲೆ ದೀರ್ಘಕಾಲ ನಡೆಯುವುದರಿಂದ ಪಾದದ ಪ್ಯಾಡ್‌ಗಳಲ್ಲಿ ಬಿರುಕುಗಳು ಉಂಟಾಗಬಹುದು. ಗಾಯಗಳಾಗುವ ಸಾಧ್ಯತೆಯೂ ಇರುತ್ತದೆ. ಅಗತ್ಯವಿದ್ದಲ್ಲಿ ರಕ್ಷಣಾತ್ಮಕ ಸಾಧನಗಳನ್ನು ಬಳಸಲಾಗುತ್ತದೆ. ಶ್ವಾನಗಳ ಪಾದಗಳು ಮತ್ತು ದೇಹವನ್ನು ನಿಯಮಿತವಾಗಿ ಪರಿಶೀಲಿಸಲಾಗುತ್ತದೆ.

ತೀವ್ರ ಚಳಿಯಲ್ಲಿ ಫ್ರಾಸ್ಟ್‌ಬೈಟ್ ಮತ್ತು ಹೈಪೋಥರ್ಮಿಯಾದಂತಹ ಗಂಭೀರ ಸಮಸ್ಯೆಗಳ ಅಪಾಯವೂ ಇರುತ್ತದೆ. ಹೀಗಾಗಿ ದೀರ್ಘಕಾಲ ಹೊರಾಂಗಣದಲ್ಲಿ ಕೆಲಸ ಮಾಡುವಾಗ ಅವುಗಳ ದೇಹದ ಉಷ್ಣತೆಯ ಮೇಲೂ ಗಮನ ನೀಡಲಾಗುತ್ತದೆ.

ಶ್ವಾನಗಳಿಗೆ ಎದುರಾಗುವ ಆರೋಗ್ಯ ಸಮಸ್ಯೆಗಳು

ಎತ್ತರದ ಪ್ರದೇಶಗಳಲ್ಲಿ ಕಡಿಮೆ ಆಮ್ಲಜನಕದಿಂದ ಉಂಟಾಗುವ ಹೈಪೋಕ್ಸಿಯಾ ಪ್ರಮುಖ ಸವಾಲು. ಶ್ವಾನವು ಅತಿಯಾಗಿ ಉಸಿರಾಡುತ್ತಿದ್ದರೆ, ಸಾಮಾನ್ಯಕ್ಕಿಂತ ಬೇಗನೆ ದಣಿಯುತ್ತಿದ್ದರೆ ಅಥವಾ ಕೆಲಸದ ನಂತರ ಚೇತರಿಸಿಕೊಳ್ಳಲು ಹೆಚ್ಚು ಸಮಯ ತೆಗೆದುಕೊಳ್ಳುತ್ತಿದ್ದರೆ ಅದರ ಆರೋಗ್ಯವನ್ನು ಪರಿಶೀಲಿಸಬೇಕಾಗುತ್ತದೆ. ಅಗತ್ಯವಿದ್ದರೆ ಅದರ ಕೆಲಸದ ಪ್ರಮಾಣವನ್ನು ಕಡಿಮೆ ಮಾಡಲಾಗುತ್ತದೆ.

ಇದರ ಜೊತೆಗೆ ಪರ್ವತ ಪ್ರದೇಶದ ಕಠಿಣ ಭೂಪ್ರದೇಶವೂ ಮತ್ತೊಂದು ಸವಾಲು. ಸಮತಟ್ಟಾದ ತರಬೇತಿ ಮೈದಾನಕ್ಕೆ ಹೋಲಿಸಿದರೆ ಪರ್ವತ ಪ್ರದೇಶದ ನೆಲ ಅಸಮವಾಗಿರುತ್ತದೆ ಮತ್ತು ಹೀಗೇ ಅಂತ ಊಹಿಸಲು ಸಾಧ್ಯವಾಗುವುದಿಲ್ಲ. ಇಂತಹ ನೆಲದ ಮೇಲೆ ಪದೇಪದೇ ಓಡುವುದು ಅಥವಾ ನಡೆಯುವುದರಿಂದ ಸ್ನಾಯುಗಳು, ಕೀಲುಗಳು ಮತ್ತು ಪಾದಗಳ ಮೇಲೆ ಹೆಚ್ಚಿನ ಒತ್ತಡ ಬೀಳಬಹುದು. ಇದರಿಂದ ಸ್ನಾಯು ಅಥವಾ ಕೀಲುಗಳ ಸಮಸ್ಯೆ ಮತ್ತು ಪಾದದ ಗಾಯಗಳ ಅಪಾಯ ಹೆಚ್ಚಾಗಬಹುದು.

ಆಹಾರ ಮತ್ತು ನೀರು ಕೂಡ ಅಷ್ಟೇ ಮುಖ್ಯ

ಎತ್ತರದ ಪ್ರದೇಶದಲ್ಲಿ ಕರ್ತವ್ಯ ನಿರ್ವಹಿಸುವ ಶ್ವಾನಗಳಿಗೆ ತರಬೇತಿ (training) ಮಾತ್ರ ಸಾಕಾಗುವುದಿಲ್ಲ. ಅವುಗಳ ಆಹಾರ ಮತ್ತು ನೀರಿನ ಮೇಲೂ ವಿಶೇಷ ಗಮನ ನೀಡಬೇಕಾಗುತ್ತದೆ. ಡಾ. ಶರ್ಮಾ ಅವರ ಪ್ರಕಾರ, ಶ್ವಾನಗಳ ಆಹಾರವನ್ನು ಅವುಗಳ ಕೆಲಸದ ಪ್ರಮಾಣ ಮತ್ತು ಪರಿಸರದ ಪರಿಸ್ಥಿತಿಗೆ ಅನುಗುಣವಾಗಿ ಬದಲಾಯಿಸಬೇಕಾಗುತ್ತದೆ.

ತೀವ್ರ ಚಳಿ ಮತ್ತು ಎತ್ತರದ ಪ್ರದೇಶದಲ್ಲಿ ಕೆಲಸ ಮಾಡುವ ಶ್ವಾನಗಳಿಗೆ ದೇಹದ ತೂಕ ಮತ್ತು ಕಾರ್ಯಕ್ಷಮತೆಯನ್ನು ಕಾಪಾಡಿಕೊಳ್ಳಲು ಹೆಚ್ಚಿನ ಪ್ರಮಾಣದ ಶಕ್ತಿಯ ಅಗತ್ಯವಿರಬಹುದು. ನೀರಿನ ಕೊರತೆಯೂ ಮತ್ತೊಂದು ಸಮಸ್ಯೆ. ಒಣ ಗಾಳಿ, ನಿರಂತರ ದೈಹಿಕ ಚಟುವಟಿಕೆ ಮತ್ತು ನೀರು ಸಿಗುವ ಅವಕಾಶ ಕಡಿಮೆ ಇರುವುದು ನಿರ್ಜಲೀಕರಣದ ಅಪಾಯವನ್ನು ಹೆಚ್ಚಿಸಬಹುದು.

ಜೊತೆಗೆ ಹೊಟ್ಟೆ ಮತ್ತು ಜೀರ್ಣಕ್ರಿಯೆಗೆ ಸಂಬಂಧಿಸಿದ ಸಮಸ್ಯೆಗಳು ಉಂಟಾದರೆ ಶ್ವಾನಕ್ಕೆ ಸರಿಯಾಗಿ ಆಹಾರ ಮತ್ತು ನೀರು ಸೇವಿಸಲು ಸಾಧ್ಯವಾಗುವುದಿಲ್ಲ. ಇದರಿಂದ ಅದರ ಕಾರ್ಯಕ್ಷಮತೆಯ ಮೇಲೂ ಪರಿಣಾಮ ಬೀಳಬಹುದು.

ಲಡಾಖ್‌ನ 14,000 ಅಡಿ ಎತ್ತರದಂತಹ ಪ್ರದೇಶದಲ್ಲಿ ಸೇನಾ ಶ್ವಾನವನ್ನು ನಿಯೋಜಿಸುವುದು ಎಂದರೆ ಅದನ್ನು ಅಲ್ಲಿಗೆ ಕರೆದೊಯ್ದು ಕೆಲಸ ನೀಡುವುದಷ್ಟೇ ಅಲ್ಲ. ಕಡಿಮೆ ಆಮ್ಲಜನಕಕ್ಕೆ (oxygen) ಹೊಂದಿಕೊಳ್ಳುವಿಕೆ, ತೀವ್ರ ಚಳಿಯನ್ನು ಎದುರಿಸುವ ಸಾಮರ್ಥ್ಯ, ಪರ್ವತ ಪ್ರದೇಶದಲ್ಲಿ ಚಲಿಸುವ ತರಬೇತಿ, ಸರಿಯಾದ ಆಹಾರ ಮತ್ತು ನೀರು, ಸಾಕಷ್ಟು ವಿಶ್ರಾಂತಿ ಹಾಗೂ ನಿರಂತರ ಆರೋಗ್ಯ ಮೇಲ್ವಿಚಾರಣೆ- ಇವೆಲ್ಲವೂ ಅದರ ತರಬೇತಿಯ ಭಾಗವಾಗಿರುತ್ತವೆ. ಗಡಿಯ ಕಠಿಣ ಪರಿಸ್ಥಿತಿಗಳಲ್ಲಿ ಸೈನಿಕರ ಜೊತೆಗೆ ಕರ್ತವ್ಯ ನಿರ್ವಹಿಸುವ ಈ ಶ್ವಾನಗಳು ಕೂಡ ಒಂದು ರೀತಿಯಲ್ಲಿ ಯೋಧರೇ!

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+