ತ್ರಿಪುರದಲ್ಲಿ ಬಿಜೆಪಿಗೆ ಮತ್ತೆ ಆಘಾತ; ಮತ್ತೊಬ್ಬ ಶಾಸಕ ರಾಜೀನಾಮೆ
ತ್ರಿಪುರಾ, ಅ. 14: ತ್ರಿಪುರಾದಲ್ಲಿ ಆಡಳಿತಾರೂಢ ಬಿಜೆಪಿಯ ಕಿರಿಯ ಮಿತ್ರಪಕ್ಷವಾದ ಇಂಡಿಜಿನಸ್ ಪೀಪಲ್ಸ್ ಫ್ರಂಟ್ ಆಫ್ ತ್ರಿಪುರ (IPFT) ಯ ಮತ್ತೊಬ್ಬ ಶಾಸಕ ಶುಕ್ರವಾರ ವಿಧಾನಸಭೆಗೆ ರಾಜೀನಾಮೆ ನೀಡಿದ್ದಾರೆ.
ರಾಜೀನಾಮೆ ನೀಡಿರುವ ಅವರು ಬುಡಕಟ್ಟು ಪಕ್ಷವಾದ ತಿಪ್ರಾಹ ಇಂಡಿಜಿನಸ್ ಪ್ರೋಗ್ರೆಸ್ಸಿವ್ ರೀಜನನಲ್ ಅಲೈಯನ್ಸ್ (ಟಿಪ್ರಾ) ಗೆ ಸೇರುವ ಸಾಧ್ಯತೆಯಿದೆ. ಮುಂದಿನ ವರ್ಷದ ವಿಧಾನಸಭೆ ಚುನಾವಣೆಗೆ ತಯಾರಾಗುತ್ತಿರುವ ಭಾರತೀಯ ಜನತಾ ಪಕ್ಷ ಮತ್ತೊಂದು ಹಿನ್ನಡೆಯನ್ನು ಎದುರಿಸಿದೆ.
IPFT ಶಾಸಕ ಧನಂಜಯ್ ತ್ರಿಪುರ ರಾಜೀನಾಮೆ ಸಲ್ಲಿಸುವಾಗ ರಾಜಮನೆತನದ ವಂಶಸ್ಥರು, TIPRA ಮುಖ್ಯಸ್ಥ ಮತ್ತು ಮಾಜಿ ರಾಜಮನೆತನದ ಪ್ರದ್ಯೋತ್ ಬಿಕ್ರಮ್ ಮಾಣಿಕ್ಯ ದೇಬ್ ಬರ್ಮನ್ ಕಾಣಿಸಿಕೊಂಡಿದ್ದಾರೆ. ರಾಜೀನಾಮೆ ಪತ್ರವನ್ನು ಸ್ವೀಕರಿಸಿದ ಸ್ಪೀಕರ್ ರತನ್ ಚಕ್ರವರ್ತಿ, ತಕ್ಷಣ ಅದನ್ನು ಅಂಗೀಕರಿಸಿದ್ದಾರೆ.

ಶಾಸಕ ಧನಂಜಯ್ ತ್ರಿಪುರ 2018 ರ ವಿಧಾನಸಭಾ ಚುನಾವಣೆಯಲ್ಲಿ ಧಲೈ ಜಿಲ್ಲೆಯ ರೈಮಾವಲ್ಲಿ ಕ್ಷೇತ್ರದಿಂದ ಗೆದ್ದಿದ್ದಾರೆ.
"ಐಪಿಎಫ್ಟಿ ಶಾಸಕ ಧನಂಜಯ್ ತ್ರಿಪುರ ಇಂದು ರಾಜೀನಾಮೆ ಸಲ್ಲಿಸಿದ್ದಾರೆ. ನಾನು ಅವರ ರಾಜೀನಾಮೆಯನ್ನು ಅಂಗೀಕರಿಸಿದ್ದೇನೆ ಮತ್ತು ಅದನ್ನು ಗೆಜೆಟ್ ಅಧಿಸೂಚನೆಗೆ ಕಳುಹಿಸಿದ್ದೇನೆ" ಎಂದು ಸ್ಪೀಕರ್ ರತನ್ ಚಕ್ರವರ್ತಿ ಸುದ್ದಿಗಾರರಿಗೆ ತಿಳಿಸಿದ್ದಾರೆ.
ಕಳೆದ ವರ್ಷದಿಂದ ಪಕ್ಷದಿಂದ ನಿರ್ಗಮಿಸಿದ ಐಪಿಎಫ್‌ಟಿಯ ಎರಡನೇ ಶಾಸಕರಾಗಿದ್ದಾರೆ. ಒಂದು ವರ್ಷದ ಹಿಂದೆ, ಐಪಿಎಫ್‌ಟಿ ಶಾಸಕ ಬೃಶಕೇತು ದೆಬ್ಬರ್ಮಾ ಪಕ್ಷ ತೊರೆದು ಟಿಪ್ರಾ ಮೋಥಾ ಸೇರಿದ್ದರು. ಆದರೂ, ಪಕ್ಷಾಂತರ ವಿರೋಧಿ ಕಾನೂನನ್ನು ಉಲ್ಲಂಘಿಸಿದ್ದಕ್ಕಾಗಿ ವಿಧಾನಸಭೆಯು ಇತ್ತೀಚೆಗೆ ಅವರ ಸದಸ್ಯತ್ವವನ್ನು ಅನರ್ಹಗೊಳಿಸಿದೆ.
ಧನಂಜಯ್ ತ್ರಿಪುರ ಮತ್ತು ವಿವಿಧ ರಾಜಕೀಯ ಪಕ್ಷಗಳ ಇತರ ಕೆಲವು ನಾಯಕರು ಶನಿವಾರ ಟಿಪ್ರಾಗೆ ಸೇರಲಿದ್ದಾರೆ ಎಂದು ದೇಬ್ ಬರ್ಮನ್ ತಿಳಿಸಿದ್ದಾರೆ.
ಧನಂಜಯ್ ತ್ರಿಪುರ ಅವರು ವಿಧಾನಸಭೆಯಿಂದ ಕೆಳಗಿಳಿದ ಬಿಜೆಪಿ-ಐಪಿಎಫ್‌ಟಿ ಆಡಳಿತ ಮೈತ್ರಿಕೂಟದ ಆರನೇ ಶಾಸಕರಾಗಿದ್ದಾರೆ. ಈ ಹಿಂದೆ ಬಿಜೆಪಿ ಶಾಸಕರಾದ ಬುರ್ಬಾ ಮೋಹನ್ ತ್ರಿಪುರ, ಆಶಿಸ್ ದಾಸ್, ಸುದೀಪ್ ರಾಯ್ ಬರ್ಮನ್ ಮತ್ತು ಆಶಿಸ್ ಕುಮಾರ್ ಸಹಾ ಸಹ ಪಕ್ಷ ಮತ್ತು ವಿಧಾನಸಭೆ ಸದಸ್ಯತ್ವವನ್ನು ತೊರೆದಿದ್ದಾರೆ.
ರಾಜ್ಯದಲ್ಲಿನ 60 ವಿಧಾನಸಭಾ ಸ್ಥಾನಗಳಲ್ಲಿ 2018ರ ಚುನಾವಣೆಯಲ್ಲಿ ಬಿಜೆಪಿ 36 ಸ್ಥಾನಗಳನ್ನು ಪಡೆದುಕೊಂಡಿದ್ದು, IPFT 8 ಸ್ಥಾನಗಳನ್ನು ಗೆದ್ದಿದೆ. ಇತ್ತೀಚಿನ ರಾಜೀನಾಮೆಯೊಂದಿಗೆ ಐಪಿಎಫ್‌ಟಿ ಶಾಸಕರ ಸಂಖ್ಯೆ ಆರಕ್ಕೆ ಇಳಿದಿದೆ.












Click it and Unblock the Notifications