ಗುಪ್ತಚರ ಮಾಹಿತಿ ಆಧರಿಸಿ ಭಾರತದ ವಿರುದ್ಧ ಆರೋಪಿಸಿದ್ರಾ ಕೆನಡಾ ಪಿಎಂ?
ಭಾರತ & ಕೆನಡಾ ನಡುವೆ ಕಿಚ್ಚು ಹೊತ್ತಿಸಿರುವ ಖಲಿಸ್ತಾನಿಗಳ ವಿಚಾರ ಈಗ ಮತ್ತೊಂದು ಮಹತ್ವದ ತಿರುವು ಪಡೆದಿದೆ. ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡೋ ದಿಢೀರ್ ಭಾರತ ಮತ್ತು ಭಾರತದ ಗುಪ್ತಚರ ಅಧಿಕಾರಿಗಳ ವಿರುದ್ಧ ಆರೋಪ ಮಾಡಿದ್ದು ಏಕೆ? ಎಂಬ ಪ್ರಶ್ನೆಗಳಿಗೆ ಅಮೆರಿಕ ಅಧಿಕಾರಿಗಳು ಉತ್ತರ ನೀಡಿದ್ದಾರಂತೆ. ಹಾಗಾದ್ರೆ ಆ ಸ್ಫೋಟಕ ಮಾಹಿತಿ ಏನು?
ಭಾರತದ ಮೋಸ್ಟ್ ವಾಟೆಂಡ್ ಉಗ್ರ & ಖಲಿಸ್ತಾನಿ ಗ್ಯಾಂಗ್ ನಾಯಕ ಹರ್ದೀಪ್ ಸಿಂಗ್ ನಿಜ್ಜರ್‌ನ ಇದೇ ಜೂನ್ 18ರಂದು ಕೆನಡಾದ ಸರ್ರೆಯಲ್ಲಿ ಗುಂಡಿಟ್ಟು ಭೀಕರವಾಗಿ ಹತ್ಯೆ ಮಾಡಲಾಗಿತ್ತು. ಆದ್ರೆ ಈ ಹತ್ಯೆಗೆ ಭಾರತದ ಅಧಿಕಾರಿಗಳೇ ಕಾರಣ ಎಂದು ಕೆನಡಾ ಪ್ರಧಾನಿ ಗಂಭೀರವಾದ ಆರೋಪ ಮಾಡಿದ್ದರು. ಹೀಗೆ ಜಸ್ಟಿನ್ ಟ್ರುಡೋ ಆರೋಪ ಮಾಡಲು ಸಾಕ್ಷ್ಯಗಳೇ ಇಲ್ಲ ಎಂಬ ಆರೋಪ ಕೂಡ ಕೇಳಿಬಂದಿತ್ತು. ಆದ್ರೆ ಈಗ ಬೇರೆಯದ್ದೇ ಮಾಹಿತಿ ಹೊರಬಿದ್ದಿದೆ.

ಕೆನಡಾ ಪ್ರಧಾನಿ ಆರೋಪ ಮಾಡಿದ್ದು ಏಕೆ?
ಹೌದು 'ಫೈವ್ ಐಸ್' ಇಂಟೆಲಿಜೆನ್ಸ್ ನೆಟ್‌ವರ್ಕ್ ಅಂದ್ರೆ ಅಮೆರಿಕ, ಬ್ರಿಟನ್, ಆಸ್ಟ್ರೇಲಿಯಾ ಹಾಗೂ ನ್ಯೂಜಿಲೆಂಡ್, ಕೆನಡಾ ರಾಷ್ಟ್ರಗಳನ್ನ ಒಳಗೊಂಡಿರುವ ಒಕ್ಕೂಟ ಇದಾಗಿದೆ. ಇದೇ ಒಕ್ಕೂಟ ನೀಡಿರುವ ಮಾಹಿತಿ ಆಧಾರದಲ್ಲಿ, ಕೆನಡಾ ಪಿಎಂ ಭಾರತದ ವಿರುದ್ಧ ಆರೋಪ ಮಾಡಿದ್ದಾರೆ ಎಂದು ಅಮೆರಿಕದ ಹಿರಿಯ ರಾಜತಾಂತ್ರಿಕ ಅಧಿಕಾರಿಗಳ ಮಾಹಿತಿ ಉಲ್ಲೇಖಿಸಿ ವರದಿ ಪ್ರಕಟವಾಗಿದೆ. ಅಂತಾರಾಷ್ಟ್ರೀಯ ಮಾಧ್ಯಮಗಳು ಈ ಬಗ್ಗೆ ವರದಿ ಪ್ರಕಟಿಸಿದ್ದು, ಸಂಚಲನ ಸೃಷ್ಟಿಯಾಗಿದೆ.

ಈ ಆರೋಪ ಮಾಡುವುದಕ್ಕೂ ಮೊದಲು ಕೆನಡಾ ಪ್ರಧಾನಿ ಟ್ರುಡೋ ಹಲವು ರೀತಿಯಲ್ಲಿ ಪರಿಶೀಲನೆ ನಡೆಸಿದ್ದರಂತೆ. ಈ ಪೈಕಿ ಕೆನಡಾ ಗುಪ್ತಚರ ಮಾಹಿತಿಗಳನ್ನ ಮಾತ್ರವಲ್ಲ ಇತ್ತ ಫೈವ್ ಐಸ್ ಇಂಟೆಲಿಜೆನ್ಸ್ ನೆಟ್‌ವರ್ಕ್ ಕೊಟ್ಟ ಮಾಹಿತಿಯನ್ನೂ ಆಧರಿಸಿ ಆರೋಪಿಸಿದ್ದಾರೆ ಎಂದು ಅಂತಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ. ಬೇಹುಗಾರಿಕಾ ಕೂಟವಾಗಿರುವ 'ಫೈವ್ ಐಸ್' ನೆಟ್‌ವರ್ಕ್ ಜಗತ್ತಿನಲ್ಲೇ ಅತ್ಯಂತ ಶಕ್ತಿಶಾಲಿ ದೇಶಗಳನ್ನು ಒಳಗೊಂಡಿದೆ.
ಭಾರತದ ಪರ ನಿಲ್ಲುತ್ತಾ ಅಮೆರಿಕ?
ಇಷ್ಟೆಲ್ಲಾ ಘಟನೆ ನಡುವೆ ಕೆನಡಾ ಪ್ರಧಾನಿ ಭಾರತ ಜೊತೆ ಕಿರಿಕ್ ತೆಗೆದ ವಿಚಾರಕ್ಕೆ ಅಮೆರಿಕದ ಮಾಜಿ ರಕ್ಷಣಾ ಅಧಿಕಾರಿ ಮೈಕಲ್ ರುಬಿನ್ ಖಡಕ್ ಉತ್ತರ ಕೊಟ್ಟಿದ್ದಾರೆ. ಅಮೆರಿಕ ಯಾರ ಪರ ನಿಲ್ಲಲಿದೆ ಎಂಬುದನ್ನು ಸ್ಪಷ್ಟವಾಗಿ ಹೇಳಿದ್ದಾರೆ. ಕೆನಡಾ ಪ್ರಧಾನಿ ಭಾರತದ ಜೊತೆ ತೆಗೆದಿರುವ ಕಿರಿಕ್ ಬಗ್ಗೆ ತಿಳಿಸಿರುವ ಮೈಕಲ್ ರುಬಿನ್, ಕೆನಡಾ ಭಾರತ ಜತೆ ಸಂಘರ್ಷಕ್ಕೆ ಇಳಿದಿದೆ ಅಂದ್ರೆ ಅದು ಆನೆಯ ಜೊತೆಗೆ ಇರುವೆ ಕಾಳಗಕ್ಕೆ ಇಳಿದಂತೆ ಎಂದಿದ್ದಾರೆ. ಕೆನಡಾದ ಪ್ರಧಾನಿ ಟ್ರುಡೋ ಆರೋಪದ ಬಗ್ಗೆ ಈ ಮೂಲಕ ರುಬಿನ್ ಗೇಲಿ ಮಾಡಿದ್ದಾರೆ. ಇಷ್ಟೆಲ್ಲದರ ಮಧ್ಯೆ ಈಗ ಬೇರೆ ವಿಚಾರ ಹೊರಬಿದ್ದಿದ್ದು, ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ.












Click it and Unblock the Notifications