ಬಿಜೆಪಿ ತೊರೆದು ಹೊಸ ಪಕ್ಷ ಕಟ್ಟಲಿದ್ದಾರಾ ಅಣ್ಣಾಮಲೈ? ಅಮಿತ್ ಶಾ ಕೊಟ್ಟ ಗ್ರೀನ್ ಸಿಗ್ನಲ್ ಏನು
ಚೆನ್ನೈ: ತಮಿಳುನಾಡು ವಿಧಾನಸಭೆ ಚುನಾವಣೆ 2026ರ ಫಲಿತಾಂಶ ಪ್ರಕಟವಾದ ಬೆನ್ನಲ್ಲೇ, ಅಲ್ಲಿನ ರಾಜಕೀಯ ರಂಗದಲ್ಲಿ ಅತ್ಯಂತ ರೋಚಕ ಹಾಗೂ ಸದ್ದಿಲ್ಲದೆ ಮಹಾ ಆಪರೇಷನ್ ಒಂದು ಅಂತಿಮ ಹಂತಕ್ಕೆ ತಲುಪಿದೆ ಎಂದು ಹೇಳಲಾಗುತ್ತಿದೆ. ತಮಿಳುನಾಡು ಬಿಜೆಪಿಯ ಮಾಜಿ ರಾಜ್ಯಾಧ್ಯಕ್ಷ ಮತ್ತು ಫೈರ್‌ಬ್ರಾಂಡ್ ನಾಯಕ ಕೆ.ಅಣ್ಣಾಮಲೈ ಅವರು ಬಿಜೆಪಿಯ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿ, ತಮಿಳುನಾಡಿನ ಯುವಕರನ್ನು ಕೇಂದ್ರೀಕರಿಸಿ, ಹೊಸ ರಾಜಕೀಯ ಪಕ್ಷ ಸ್ಥಾಪಿಸಲು ಸಜ್ಜಾಗಿದ್ದಾರೆ ಎಂಬ ಮಾಹಿತಿ ಹೊರಬಿದ್ದಿದೆ.
ದೆಹಲಿ ಹೈಕಮಾಂಡ್‌ನ ಸಂಪೂರ್ಣ ಸಮ್ಮತಿ, ಅದರಲ್ಲೂ ಮುಖ್ಯವಾಗಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ 'ಗ್ರೀನ್ ಸಿಗ್ನಲ್' ಪಡೆದೇ ಅಣ್ಣಾಮಲೈ ಈ ಮಾಸ್ಟರ್ ಪ್ಲಾನ್ ಮಾಡುತ್ತಿದ್ದಾರೆ ಎಂದು ಅವರ ಆಪ್ತವಾಗಿರುವ ಮೂಲಗಳು ಖಚಿತಪಡಿಸಿವೆ. ಇದು ತಮಿಳುನಾಡು ರಾಜಕೀಯದಲ್ಲಿ ಹೊಸ ಅಧ್ಯಾಯಕ್ಕೆ ನಾಂದಿ ಹಾಡಲಿದೆ ಎಂದು ವಿಶ್ಲೇಷಿಸಲಾಗುತ್ತಿದೆ. ಇತ್ತೀಚೆಗೆ ನಡೆದ ತಮಿಳುನಾಡು ಚುನಾವಣೆಯಲ್ಲಿ ತಮಿಳು ನಟ ದಳಪತಿ ವಿಜಯ್ ಅವರ 'ತಮಿಳಗ ವೆಟ್ರಿ ಕಳಗಂ' (TVK) ಪಕ್ಷವು ಯುವಕರು ಮತ್ತು ಮೊದಲ ಬಾರಿಗೆ ಮತದಾನ ಮಾಡಿದ ಮತದಾರರಲ್ಲಿ ಭಾರಿ ಸಂಚಲನ ಸೃಷ್ಟಿಸಿತು.

ವಿಜಯ್ ಅವರ ಈ ಯಶಸ್ಸು ಸಾಂಪ್ರದಾಯಿಕ ದ್ರಾವಿಡ ಪಕ್ಷಗಳ ಲೆಕ್ಕಾಚಾರವನ್ನೇ ಉಲ್ಟಾ ಮಾಡಿದೆ. ಈ ರೇಸ್‌ನಲ್ಲಿ ಕೇವಲ ಬಿಜೆಪಿಯ ಚೌಕಟ್ಟಿನೊಳಗೆ ಇದ್ದರೆ ತಮಿಳುನಾಡಿನ ಯುವಕರ ಸಂಪೂರ್ಣ ಬೆಂಬಲ ಗಳಿಸಲು ಸಾಧ್ಯವಿಲ್ಲ ಎಂಬುದನ್ನು ಅಣ್ಣಾಮಲೈ ಮನಗಂಡಿದ್ದಾರೆ. ಹಾಗಾಗಿಯೇ ಅವರು ತಮ್ಮದೇ ಆದ ಪ್ರತ್ಯೇಕ ಹಾದಿ ಹಿಡಿಯಲು ನಿರ್ಧರಿಸಿದ್ದಾರೆ ಎಂದು ಹೇಳಲಾಗುತ್ತಿದೆ. ಅಣ್ಣಾಮಲೈ ಅವರು ಈಗಾಗಲೇ ಹೊಂದಿರುವ ತಮ್ಮದೇ ಆದ 'ವಿ ದಿ ಲೀಡರ್ಸ್' (We The Leaders) ಎಂಬ ಸಾಮಾಜಿಕ ಸಂಘಟನೆಯ ಮೂಲಸೌಕರ್ಯಗಳನ್ನು ಬಳಸಿಕೊಂಡು, "ಮಕ್ಕಳ್ ಶಕ್ತಿ ಇಯಕ್ಕಮ್" (Makkal Sakthi Iyakkam) ಅಥವಾ "ತಮಿಳುನಾಡು ಜನತಾ" ಎಂಬ ಹೆಸರಿನಲ್ಲಿ ಬೃಹತ್ ಯುವ ಚಳುವಳಿಯನ್ನು ಆರಂಭಿಸಲಿದ್ದಾರೆ. ಆರಂಭದಲ್ಲಿ ಇದು ಸಾಮಾಜಿಕ ಹೋರಾಟದ ಸಂಘಟನೆಯಾಗಿ ಗುರುತಿಸಿಕೊಂಡರೂ, ಅತ್ಯಂತ ಕಡಿಮೆ ಅವಧಿಯಲ್ಲಿ ಪೂರ್ಣ ಪ್ರಮಾಣದ ಪ್ರಾದೇಶಿಕ ರಾಜಕೀಯ ಪಕ್ಷವಾಗಿ ರೂಪಾಂತರಗೊಳ್ಳಲಿದೆ ಎನ್ನಲಾಗುತ್ತಿದೆ.
ಚುನಾವಣೆ ಟಿಕೆಟ್ ಸಿಗದಿದ್ದರ ಹಿಂದಿತ್ತು ಅಮಿತ್ ಶಾ ಬಿಗ್ ಪ್ಲಾನ್
2026ರ ತಮಿಳುನಾಡು ಚುನಾವಣೆಯ ಬಿಜೆಪಿ ಅಭ್ಯರ್ಥಿಗಳ ಪಟ್ಟಿಯಲ್ಲಿ ಅಣ್ಣಾಮಲೈ ಹೆಸರು ಇಲ್ಲದಿದ್ದಾಗ ಇಡೀ ದೇಶವೇ ಆಶ್ಚರ್ಯ ಪಟ್ಟಿತ್ತು. ಕೊಯಮತ್ತೂರು ಉತ್ತರ ಅಥವಾ ತಿರುಪ್ಪೂರು ಉತ್ತರ ಕ್ಷೇತ್ರದಿಂದ ಅವರು ಸ್ಪರ್ಧಿಸುತ್ತಾರೆ ಎನ್ನಲಾಗಿತ್ತು. ಆದರೆ ಅವರಿಗೆ ಸೀಟ್ ಸಿಗದಿದ್ದರ ಹಿಂದೆ ದೆಹಲಿ ಹೈಕಮಾಂಡ್‌ನ ದೊಡ್ಡ 'ಮಾಸ್ಟರ್ ಪ್ಲಾನ್' ಇತ್ತು ಎನ್ನಲಾಗಿದೆ. ಕೇವಲ ಒಂದು ಕ್ಷೇತ್ರಕ್ಕೆ ಮಾತ್ರ ಅಣ್ಣಾಮಲೈ ಅವರನ್ನು ಸೀಮಿತಗೊಳಿಸುವ ಬದಲು, ರಾಜ್ಯ ಮಟ್ಟದಲ್ಲಿ ದ್ರಾವಿಡ ಪಕ್ಷಗಳಿಗೆ ಪರ್ಯಾಯವಾಗಿ ಹೊಸ ಪ್ರಾದೇಶಿಕ ಶಕ್ತಿಯನ್ನು ಕಟ್ಟಲು ಅಮಿತ್ ಶಾ ನೇತೃತ್ವದ ಟೀಮ್ ಅವರಿಗೆ ಸೂಚಿಸಿತ್ತು ಎನ್ನಲಾಗಿದೆ.
ದ್ರಾವಿಡ ಸಿದ್ಧಾಂತಕ್ಕೆ ಟಕ್ಕರ್ ಕೊಡಲು 'ತಮಿಳು ಮುಖ'ದ ಅನಿವಾರ್ಯತೆ
ತಮಿಳುನಾಡಿನಲ್ಲಿ ಡಿಎಂಕೆ ಮತ್ತು ಎಐಎಡಿಎಂಕೆ ಪಕ್ಷಗಳಿಗೆ ದೀರ್ಘಕಾಲೀನ ಪರ್ಯಾಯ ಶಕ್ತಿ ಸೃಷ್ಟಿಸಬೇಕಾದರೆ, ಅಲ್ಲಿ ಕೇವಲ ರಾಷ್ಟ್ರೀಯ ಪಕ್ಷದ ತಂತ್ರ ವರ್ಕ್ ಆಗಲ್ಲ, ಬದಲಿಗೆ ಅಣ್ಣಾಮಲೈ ಅವರಂತಹ ಪ್ರಾದೇಶಿಕ ಅಸ್ಮಿತೆ ಇರುವ ಶಕ್ತಿಯೇ ಬೇಕು ಎಂಬುದನ್ನು ದೆಹಲಿ ನಾಯಕರು ಒಪ್ಪಿಕೊಂಡಿದ್ದಾರೆ. ಇದೇ ಕಾರಣಕ್ಕೆ ಅಣ್ಣಾಮಲೈ ಅವರು ಇತ್ತೀಚೆಗೆ ಕೇಂದ್ರ ಸರ್ಕಾರದ ತ್ರಿಭಾಷಾ ಸೂತ್ರ ಸೇರಿದಂತೆ ಕೆಲವು ಯೋಜನೆಗಳನ್ನು ಬಹಿರಂಗವಾಗಿಯೇ ವಿರೋಧಿಸಿದ್ದರು. ಇದು ಮೇಲ್ನೋಟಕ್ಕೆ ಬಿಜೆಪಿ ಮತ್ತು ಅಣ್ಣಾಮಲೈ ನಡುವಿನ ಮುನಿಸು ಎನಿಸಿದರೂ, ಅಸಲಿಗೆ ತಮಿಳು ಜನರ ಪ್ರಾದೇಶಿಕ ಭಾವನೆಗಳಿಗೆ ಹತ್ತಿರವಾಗಲು ದೆಹಲಿ ನಾಯಕರೇ ಹೆಣೆದ ರಾಜತಾಂತ್ರಿಕ ತಂತ್ರಗಾರಿಕೆಯ ಭಾಗ ಎಂದು ಹೇಳಲಾಗುತ್ತಿದೆ.
ಹೇಗಿರಲಿದೆ ಅಣ್ಣಾಮಲೈ ಹೊಸ ಸಂಘಟನೆ?
ಅಣ್ಣಾಮಲೈ ಕಟ್ಟಲಿರುವ ಹೊಸ ಇಯಕ್ಕಮ್ (ಚಳುವಳಿ) ಸಂಪೂರ್ಣವಾಗಿ ಕಾರ್ಪೊರೇಟ್ ಮತ್ತು ಆಧುನಿಕ ತಂತ್ರಜ್ಞಾನ ಆಧಾರಿತ ಸ್ವರೂಪವನ್ನು ಹೊಂದಿರಲಿದೆ. ಸೋಶಿಯಲ್ ಮೀಡಿಯಾದಲ್ಲಿ ಅಣ್ಣಾಮಲೈಗೆ ಇರುವ ಲಕ್ಷಾಂತರ ಫಾಲೋವರ್ಸ್‌ಗಳನ್ನು ನಟ ವಿಜಯ್ ಅಭಿಮಾನಿ ಬಳಗದ ಮಾದರಿಯಲ್ಲೇ ಅತ್ಯಂತ ವ್ಯವಸ್ಥಿತವಾಗಿ ಬೂತ್ ಮಟ್ಟದ ಕಾರ್ಯಕರ್ತರನ್ನಾಗಿ ಪರಿವರ್ತಿಸಲಾಗುತ್ತದೆ. ರಾಜ್ಯದ ಮೂಲೆ ಮೂಲೆಗಳಿಂದ ಪ್ರತಿಭಾವಂತ ಯುವಕರನ್ನು ಆಯ್ಕೆ ಮಾಡಿ ಅವರಿಗೆ ಆಧುನಿಕ ರಾಜಕೀಯ ತರಬೇತಿ ನೀಡುವ ಪ್ರಕ್ರಿಯೆ ಈ ಸಂಘಟನೆಯ ಮೂಲಕ ನಡೆಯಲಿದೆ. ಅಣ್ಣಾಮಲೈ ಅವರ ಈ ಮಾಡೆಲ್ ತಮಿಳುನಾಡು ರಾಜಕೀಯದಲ್ಲಿ ದ್ರಾವಿಡ ಕೋಟೆಯನ್ನು ನಡುಗಿಸಿ, ಹೊಸ ಕ್ರಾಂತಿ ಸೃಷ್ಟಿಸುತ್ತಾ ಎಂಬುದನ್ನು ಕಾದು ನೋಡಬೇಕಿದೆ.













Click it and Unblock the Notifications