ಉಗ್ರ ಹಿಂದುತ್ವದ ಮೊರೆಹೋದ ಆಂಧ್ರ ಸರ್ಕಾರ: ವಕ್ಫ್ ಬೋರ್ಡ್ ರದ್ದು - ಯುಪಿ ಮಾದರಿಗೆ ಮುನ್ನುಡಿ!
ಆಂಧ್ರಪ್ರದೇಶದಲ್ಲಿನ ಎನ್‌ಡಿಎ ಸರ್ಕಾರವು ಉಗ್ರ ಹಿಂದುತ್ವದ ಮೊರೆ ಹೋಗುತ್ತಿದೆ. ಈ ರಾಜ್ಯದಲ್ಲಿ ಹಿಂದೂಗಳ ಪರವಾಗಿ ಹಲವು ನಿರ್ಧಾರಗಳನ್ನು ತೆಗೆದುಕೊಳ್ಳಲಾಗುತ್ತಿದ್ದು. ದಕ್ಷಿಣ ಭಾರತದ ಉತ್ತರ ಪ್ರದೇಶವಾಗಿ ಆಂಧ್ರಪ್ರದೇಶ ಗುರುತಿಸಿಕೊಳ್ಳುವ ಹಾದಿಯಲ್ಲಿ ಈಗಾಗಲೇ ಹಲವು ಹೆಜ್ಜೆಗಳನ್ನು ಇಲ್ಲಿನ ಸರ್ಕಾರ ಇರಿಸಿದೆ ಎಂದೇ ವಿಶ್ಲೇಷಿಸಲಾಗುತ್ತಿದೆ. ಆಂಧ್ರಪ್ರದೇಶದಲ್ಲಿ ತೆಲುಗುದೇಶಂ ಪಾರ್ಟಿ ಹಾಗೂ ಜನಸೇನಾ ಪಕ್ಷದ ಸಮ್ಮಿಶ್ರ ಸರ್ಕಾರ ಅಧಿಕಾರದಲ್ಲಿ ಇದೆ. ಅಲ್ಲದೇ ಈ ಮೈತ್ರಿಕೂಟದೊಂದಿಗೆ ಬಿಜೆಪಿ ಸಹ ಗುರುತಿಸಿಕೊಂಡಿದೆ. ಈಚೆಗೆ ನಡೆದ ವಿಧಾನಸಭೆ ಚುನಾವಣೆಯಲ್ಲಿ ಈ ಮೈತ್ರಿಕೂಟವೂ ಅಮೋಘ ಸಾಧನೆಯನ್ನು ಮಾಡಿದೆ.
ಆಂಧ್ರದಲ್ಲಿ ಎನ್‌ಡಿಎ ಮೈತ್ರಿಕೂಟ ಅಧಿಕಾರಕ್ಕೆ ಬಂದ ಮೇಲೆ ಹಿಂದೂ ಹಾಗೂ ಹಿಂದುತ್ವದ ಬಗ್ಗೆ ಭಾರೀ ಚರ್ಚೆಗಳು ನಡೆದಿವೆ. ಆಂಧ್ರಪ್ರದೇಶದ ತಿರುಪತಿ ತಿರುಮಲ ದೇವಸ್ಥಾನದಲ್ಲಿ ಪ್ರಸಾದವಾಗಿ ನೀಡುವ ಲಡ್ಡುವಿನಲ್ಲಿ ಕಲಬೆರಕೆ ತುಪ್ಪವನ್ನು ಬಳಸಲಾಗಿದೆ ಎನ್ನುವ ವಿಷಯವು ಭಾರೀ ಚರ್ಚೆಗೆ ಕಾರಣವಾಗಿತ್ತು. ಈ ವಿಚಾರದಲ್ಲಿ ಆಂಧ್ರಪ್ರದೇಶದ ಸರ್ಕಾರವು ತೀಕ್ಷ್ಣವಾಗಿ ಪ್ರತಿಕ್ರಿಯಿಸಿತ್ತು. ಆ ವಿಷಯದಲ್ಲಿ ಅಂತ ತೀಕ್ಷ್ಣವಾದ ಪ್ರತಿಕ್ರಿಯೆ ಅವಶ್ಯವಿತ್ತು ಸಹ. ಇದಾದ ಮೇಲೆ ಜನಸೇನಾ ಪಕ್ಷದ ಸಂಸ್ಥಾಪಕ ಹಾಗೂ ಆಂಧ್ರಪ್ರದೇಶದ ಉಪ ಮುಖ್ಯಮಂತ್ರಿ ಪವನ್ ಕಲ್ಯಾಣ್ ಅವರು ಹಿಂದೂ ಬೋರ್ಡ್ ಬೇಕು, ಹಿಂದೂಗಳ ರಕ್ಷಣೆಗೆ ನಾವು ಬದ್ಧ ಎನ್ನುವಂತಹ ಹೇಳಿಕೆಗಳನ್ನು ಕೊಟ್ಟಿದ್ದರು. ಇದೆಲ್ಲ ಪರೋಕ್ಷವಾಗಿ ಹಿಂದುತ್ವದ ಪ್ರಯೋಗವೇ ಆಗಿದೆ.

ಆಂಧ್ರಪ್ರದೇಶದಲ್ಲಿ ವಕ್ಫ್ ಮಂಡಳಿಯೇ ರದ್ದು: ಇನ್ನು ಇತ್ತೀಚಿನ ಬೆಳವಣಿಗೆ ಎಂದರೆ ಆಂಧ್ರಪ್ರದೇಶದಲ್ಲಿ ವಕ್ಫ್ ಮಂಡಳಿಯನ್ನೇ ರದ್ದು ಮಾಡಲಾಗಿದೆ. ಈ ನಿರ್ಧಾರವನ್ನು ಆಂಧ್ರಪ್ರದೇಶದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರು ತೆಗೆದುಕೊಂಡಿದ್ದಾರೆ. ವಕ್ಫ್ ಬೋರ್ಡ್ ಹಾಗೂ ವಕ್ಫ್ ಆಸ್ತಿ ವಿಚಾರವು ದೇಶದಾದ್ಯಂತ ಸುದ್ದಿಯಾಗುತ್ತಿದೆ. ವಕ್ಫ್ ಬೋರ್ಡ್ ವಿವಾದ ಕರ್ನಾಟಕದಲ್ಲಿ ಭಾರೀ ಸಂಚಲವನ್ನೇ ಸೃಷ್ಟಿ ಮಾಡಿದೆ. ಇದರ ನಡುವೆ ಆಂಧ್ರಪ್ರದೇಶದಲ್ಲಿ ತಡೆಯಾಜ್ಞೆಯ ನಂತರವೂ ಸುದೀರ್ಘ ಅವಧಿಗೆ ಕಾರ್ಯನಿರ್ವಹಿಸಿಲ್ಲ ಎನ್ನುವ ಕಾರಣವನ್ನು ನೀಡಿ ಆಂಧ್ರಪ್ರದೇಶ ವಕ್ಫ್ ಮಂಡಳಿಯ ಹಿಂದಿನ ಸಮಿತಿಯನ್ನು ಅಲ್ಲಿನ ಸರ್ಕಾರ ರದ್ದು ಮಾಡಿ ಆದೇಶ ಹೊರಡಿಸಿದೆ.
ಈ ವಿಷಯ ಇದೀಗ ಸೋಷಿಯಲ್ ಮೀಡಿಯಾದಲ್ಲಿ ಹಾಗೂ ಸಾರ್ವಜನಿಕ ವಲಯದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. ಆಂಧ್ರ ವಕ್ಫ್ ಮಂಡಳಿ ಸಮಿತಿಯನ್ನೇ ಆಂಧ್ರ ಸಿ.ಎಂ ಚಂದ್ರಬಾಬು ನಾಯ್ಡು ಅವರು ವಿಸರ್ಜಿಸಿದ್ದಾರೆ. ಆಂಧ್ರದಲ್ಲಿ ಈ ಹಿಂದೆ ಅಧಿಕಾರದಲ್ಲಿದ್ದ ವೈಎಸ್‌ಆರ್ ಕಾಂಗ್ರೆಸ್ ಪಾರ್ಟಿ ಅಧಿಕಾರದ ಅವಧಿಯಲ್ಲಿ ವಕ್ಫ್ ಬೋರ್ಡ್ ನೇಮಕ ಮಾಡಿ ಹಾಗೂ ಆದೇಶ ಹೊರಡಿಸಿದ್ದ ಜೆವಿ 47 ಹಿಂಪಡೆಯುವುದಕ್ಕೆ ಸಂಬಂಧಿಸಿ ಅಧಿಸೂಚನೆ ಹೊರಡಿಸಲಾಗಿದೆ. ಅಲ್ಲದೇ ಶೀಘ್ರದಲ್ಲೇ ಆಂಧ್ರದಲ್ಲಿ ಹೊಸ ವಕ್ಫ್ ಮಂಡಳಿಯನ್ನು ನೇಮಿಸುವುದಾಗಿ ಸಿ.ಎಂ ಚಂದ್ರಬಾಬು ನಾಯ್ಡು ಅವರು ಹೇಳಿದ್ದಾರೆ.

ಬಿಜೆಪಿಗೆ ಹಿಂದುತ್ವ ಅಸ್ತ್ರ: ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಸೋಲುವ ಮೂಲಕ ಬಿಜೆಪಿಯು ದಕ್ಷಿಣ ಭಾರತದ ಯಾವುದೇ ರಾಜ್ಯದಲ್ಲೂ ಅಧಿಕಾರದಲ್ಲಿ ಇಲ್ಲದಂತಾಗಿದೆ. ಈಗ ಆ ಪಕ್ಷಕ್ಕೆ ರಾಜಕೀಯ ಪ್ರಯೋಗ ಹಾಗೂ ದಕ್ಷಿಣ ಭಾರತದಲ್ಲಿ ಮತ್ತೆ ಅಧಿಕಾರಕ್ಕೆ ಹೇರುವುದಕ್ಕೆ ಇರುವ ಏಕೈಕ ಆಯ್ಕೆ ಆಂಧ್ರಪ್ರದೇಶ ಎಂದೇ ಹೇಳಲಾಗುತ್ತಿದೆ. ಅಲ್ಲದೇ ಹಿಂದೂ ಪ್ರಯೋಗ ಅಸ್ತ್ರವನ್ನು ಈ ಹಿಂದೆ ಕರ್ನಾಟಕದಲ್ಲೂ ಪ್ರಯೋಗಿಸಲಾಗಿತ್ತು. ಇದೀಗ ಆ ಪ್ರಯೋಗ ಕ್ರಮೇಣ ಆಂಧ್ರಪ್ರದೇಶದಲ್ಲಿ ನಡೆಯುತ್ತಿದೆ. ಉತ್ತರ ಭಾರತದಲ್ಲಿ ಉತ್ತರ ಪ್ರದೇಶದಲ್ಲಿ ಬಿಜೆಪಿಯ ಹಿಂದುತ್ವ ಪ್ರಯೋಗವು ಯಶಸ್ವಿಯಾಗಿದೆ.
ದಕ್ಷಿಣ ಭಾರತದಲ್ಲಿ ತಮಿಳುನಾಡು, ಕೇರಳ ರಾಜ್ಯಗಳಲ್ಲಿ ಅಧಿಕಾರದ ಸಮೀಪಕ್ಕೂ ಬಿಜೆಪಿಗೆ ಬರಲು ಸಾಧ್ಯವಾಗುತ್ತಿಲ್ಲ. ಕರ್ನಾಟಕದಲ್ಲಿ ಅಧಿಕಾರ ನಡೆಸಿದೆಯಾದರೂ ಕರ್ನಾಟಕದಲ್ಲಿ ಬಿಜೆಪಿಯ ಭವಿಷ್ಯ ಮಂಜುಮುಸುಕಿದಂತೆ ಇದೆ. ಇನ್ನು ತೆಲಂಗಾಣದಲ್ಲಿ ಈಗ ಮೊದಲ ಬಾರಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಿದೆ. ಹೀಗಾಗಿ, ಬಿಜೆಪಿಗೆ ದಕ್ಷಿಣದಲ್ಲಿ ಏನಾದರೂ ಪ್ರಯೋಗ ಮಾಡಬೇಕೆಂದರೆ ಉಳಿದಿರುವುದು ಆಂಧ್ರಪ್ರದೇಶ ಮಾತ್ರ.
ಆದರೆ, ಈ ಪ್ರಯೋಗಗಳನ್ನು ಬಿಜೆಪಿಯು ನೇರವಾಗಿ ಮಾಡುತ್ತಿಲ್ಲ. ತನ್ನ ಮಿತ್ರಪಕ್ಷಗಳ ಮೂಲಕ ಮಾಡುತ್ತಿದೆ ಎನ್ನಲಾಗಿದೆ. ಇದಕ್ಕೆ ಆ ರಾಜ್ಯದಲ್ಲಿ ಜನ ಬೆಂಬಲವೂ ವ್ಯಕ್ತವಾಗುತ್ತಿದೆ.












Click it and Unblock the Notifications