ಆಂಧ್ರ ಡಿಸಿಎಂ ಪವನ್ ಕಲ್ಯಾಣ್‌ಗೆ ಜೀವ ಬೆದರಿಕೆ, ಯಾರಿಂದ?
ಆಂಧ್ರಪ್ರದೇಶದ ಡಿಸಿಎಂ ಹಾಗೂ ಟಾಲಿವುಡ್ ನಟ ಪವನ್ ಕಲ್ಯಾಣ್ ಅವರಿಗೆ ಜೀವ ಬೆದರಿಕೆ ಕರೆ ಬಂದಿದೆ ಎನ್ನಲಾಗಿದೆ. ಇನ್ನು ನಾವು ಪವನ್ ಕಲ್ಯಾಣ್ ಅವರ ಪಕ್ಕದಲ್ಲೇ ಇದ್ದು, ಅವರನ್ನು ಕೊಲ್ಲುವುದಾಗಿ ಅನಾಮಧೇಯರು ಬೆದರಿಕೆ ಹಾಕಿದ್ದಾರೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ.
ಡಿಸಿಎಂ ಪವನ್ ಕಲ್ಯಾಣ್ ಅವರ ಕಚೇರಿಗೆ ಕರೆ ಮಾಡಿ ಅಪರಿಚಿತ ವ್ಯಕ್ತಿಯೊಬ್ಬ ಬೆದರಿಕೆ ಹಾಕಿದ್ದಾನೆ. ಈ ವೇಳೆ ಪವನ್ ಕಲ್ಯಾಣ್ ಅವರು ಕಚೇರಿಯಲ್ಲಿ ಇರಲಿಲ್ಲ ಎನ್ನಲಾಗಿದೆ. ಕರೆ ಮಾಡಿ ಜೀವ ಬೆದರಿಕೆ ಹಾಕಿದ್ದಲ್ಲದೆ, ಅವಾಚ್ಯ ಶಬ್ಧಗಳನ್ನು ಬಳಸಿ ಸಂದೇಶಗಳನ್ನೂ ಕಳಿಸಿದ್ದಾನೆ.

ಅಲ್ಲದೆ ನಾವು ಪವನ್ ಕಲ್ಯಾಣ್ ಅವರ ಪಕ್ಕದಲ್ಲೇ ಇದ್ದೇವೆ, ಅವರನ್ನು ಕೊಲ್ಲುತ್ತೇವೆ ಎಂದೂ ಬೆದರಿಕೆ ಹಾಕಿದ್ದಾರಂತೆ. ಬೆದರಿಕೆ ಕರೆ ಬಂದ ಹಿನ್ನೆಲೆ ಪವನ್ ಕಲ್ಯಾಣ್ ಅವರ ಕಚೇರಿ ಸಿಬ್ಬಂದಿ ಕೂಡಲೇ ಹಿರಿಯ ಪೊಲೀಸ್ ಅಧಿಕಾರಿಗಳ ಗಮನಕ್ಕೆ ಈ ವಿಚಾರ ತಂದಿದ್ದಾರೆ. ಬೆದರಿಕೆ ಕರೆ ಸಂಬಂಧ ಪೊಲೀಸರು ತನಿಖೆ ಶುರು ಮಾಡಿದ್ದಾರೆ.
ಪವನ್ ಕಲ್ಯಾಣ್ ಅವರ ಕಚೇರಿ ಸಿಬ್ಬಂದಿಗೆ ಈ ಬೆದರಿಕೆ ಕರೆ ಹಾಗೂ ಸಂದೇಶಗಳು ಯಾರಿಂದ ಯಾವಾಗ ಬಂದಿದೆ ಎಂಬುದನ್ನು ಪೊಲೀಸರು ಪತ್ತೆ ಮಾಡುತ್ತಿದ್ದಾರೆ. ಪವನ್ ಕಲ್ಯಾಣ್ ಸೇರಿದಂತೆ ಬೇರೆ ಇನ್ಯಾರಿಗಾದರೂ ಇಂತಹ ಬೆದರಿಕೆ ಕರೆಗಳು ಬಂದಿವೆಯೇ ಎಂಬ ಆಯಾಮದಲ್ಲೂ ತನಿಖೆ ನಡೆಸುತ್ತಿದ್ದಾರೆ ಎಂದು ತಿಳಿದುಬಂದಿದೆ.
ಇನ್ನು ಪವನ್ ಕಲ್ಯಾಣ್ ಅವರಿಗೆ ಜೀವಬೆದರಿಕೆ ಬಂದಿರುವ ವಿಷಯವನ್ನು ಜನಸೇನಾ ಪಕ್ಷವು ಗಂಭೀರವಾಗಿ ಪರಿಗಣಿಸಿದ್ದು, ಉಪಮುಖ್ಯಮಂತ್ರಿಯವರ ಭದ್ರತೆಯನ್ನು ಹೆಚ್ಚಿಸುವಂತೆ ತಿಳಿಸಿದೆ. ಅಲ್ಲದೆ ಬೆದರಿಕೆ ಹಾಕಿರುವ ಕಿಡಿಗೇಡಿಗಳನ್ನು ಕೂಡಲೇ ಪತ್ತೆ ಹಚ್ಚುವಂತೆ ಒತ್ತಾಯಿಸಿದೆ. ಅಲ್ಲದೆ ಮುಂಜಾಗ್ರತಾ ಕ್ರಮವಾಗಿ ಉಪ ಮುಖ್ಯಮಂತ್ರಿ ಕಚೇರಿ ಸುತ್ತಮುತ್ತ ಸೆಕ್ಯುರಿಟಿ ಹೆಚ್ಚಿಸಲಾಗಿದೆ.

ಕೆನಡಾದಲ್ಲಿ ಹಿಂದೂ ದೇವಾಲಯದ ಮೇಲಿನ ದಾಳಿಯ ಬಗ್ಗೆ ಕಳವಳ ವ್ಯಕ್ತಪಡಿಸಿದ ನಂತರ ಪವನ್ ಕಲ್ಯಾಣ್ ಅವರು ಇತ್ತೀಚೆಗೆ ಎಲ್ಲೆಡೆ ಸುದ್ದಿಯಲ್ಲಿದ್ದರು. ಈ ಘಟನೆ ಬಗ್ಗೆ ಖಂಡಿಸಿದ್ದ ಅವರು ಹಿಂದೂ ಸಮುದಾಯದ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಕೆನಡಾ ಸರ್ಕಾರವನ್ನು ಒತ್ತಾಯಿಸಿದ್ದರು. ಸೋಶಿಯಲ್ ಮೀಡಿಯಾ ಪೋಸ್ಟ್‌ನಲ್ಲಿ ಅವರು ಹಿಂದೂಗಳು ಜಾಗತಿಕ ಅಲ್ಪಸಂಖ್ಯಾತರಾಗಿದ್ದಾರೆ ಎಂದು ಹೇಳಿದ್ದರು.
ಹಿಂದೂಗಳನ್ನು ಎಲ್ಲೆಡೆ ಕಡೆಗಣಿಸಲಾಗುತ್ತಿದೆ. ಇದರಿಂದ ಅವರು ಸುಲಭವಾಗಿ ಗುರಿಯಾಗುತ್ತಿದ್ದಾರೆ. ಪಾಕಿಸ್ತಾನ, ಅಫ್ಘಾನಿಸ್ತಾನ ಮತ್ತು ಬಾಂಗ್ಲಾದೇಶದಂತಹ ದೇಶಗಳಲ್ಲಿ ಹಿಂದೂಗಳು ಎದುರಿಸುತ್ತಿರುವ ಶೋಷಣೆ ಬಗ್ಗೆ ವಿಷಾದ ವ್ಯಕ್ತಪಡಿಸಿದ್ದರು. ಶಾಂತಿ ಮತ್ತು ಐಕ್ಯತೆಯನ್ನು ಗೌರವಿಸುವ ಮಾನವೀಯತೆ ಎಲ್ಲರಿಗೂ ಅಗತ್ಯ ಎಂದು ಪವನ್ ಕಲ್ಯಾಣ್ ಹೇಳಿದ್ದರು. ಇದರ ಬೆನ್ನಲ್ಲೇ ಅವರಿಗೆ ಬೆದರಿಕೆ ಕರೆ ಬಂದಿರುವುದು ಹಲವು ಅನುಮಾನಗಳನ್ನು ಹುಟ್ಟುಹಾಕಿದೆ.
ಡಿಸಿಎಂ ಆದ ನಂತರ ಅವರು ಎಲ್ಲೆಡೆ ಸುದ್ದಿಯಲ್ಲಿದ್ದಾರೆ. ತಿರುಪತಿಯ ಲಡ್ಡು ವಿವಾದದ ಬಳಿಕವೂ ಅವರ ಹಲವರ ಮೇಲೆ ಕಿಡಿಕಾರಿದ್ದರು. ಇತ್ತೀಚೆಗೆ ಸೀಜ್ ದ ಶಿಪ್ ಎಂದು ಅವರು ನಗುತ್ತಲೇ ನೀಡಿದ್ದ ಆದೇಶದ ಬಗ್ಗೆ ಎಲ್ಲೆಡೆ ಚರ್ಚೆಯಾಗಿತ್ತು. ಈ ಸಾಲು ಎಲ್ಲೆಡೆ ವೈರಲ್ ಆಗಿದ್ದರಿಂದ ಸೀಜ್ ದ ಶಿಪ್ ಹೆಸರಿನಲ್ಲಿ ಸಿನಿಮಾ ಕೂಡ ಬರಲು ಸಜ್ಜಾಗಿದೆ.












Click it and Unblock the Notifications