ಜಾಸ್ತಿ ಮಕ್ಕಳು ಮಾಡಿಕೊಂಡ್ರೆ ಕೈತುಂಬಾ ಕಾಸು ಕೊಡ್ತೀವಿ..! ಸರ್ಕಾರದಿಂದಲೇ ಆಫರ್
ದೇಶದಲ್ಲಿ ಹೆಚ್ಚಾಗಿರೋ ಜನಸಂಖ್ಯೆಯನ್ನ ಹೇಗಾದ್ರೂ ಮಾಡಿ ಕಂಟ್ರೋಲ್ ಮಾಡಬೇಕು ಅಂತ ಭಾರತ ಸರ್ಕಾರ ತಲೆಕೆಡಿಸಿಕೊಂಡಿದೆ. ಇದಕ್ಕಾಗಿ ಜನಸಂಖ್ಯಾ ನಿಯಂತ್ರಣ ಕಾರ್ಯಕ್ರಮಗಳೂ ಜಾರಿಯಾಗಿವೆ. ಈಗಿರೋ ದುಬಾರಿ ದುನಿಯಾದಲ್ಲಿ ಮಕ್ಕಳ ಪೋಷಣೆ ಕಷ್ಟ ಅಂತ ನಾವಿಬ್ಬರು-ನಮಗಿಬ್ಬರು ಅಂತಿದ್ದಾರೆ ದಂಪತಿಗಳು. ಆದರೆ ಈಗ ಸರ್ಕಾರವೇ ನೀವು ಜಾಸ್ತಿ ಮಕ್ಕಳನ್ನ ಮಾಡ್ಕೊಳ್ಳಿ...ಇದಕ್ಕೆ ಪ್ರೋತ್ಸಾಹಧನ ಕೂಡ ಕೊಡ್ತೀವಿ ಅಂತ ಆಫರ್ ಮುಂದಿಟ್ಟಿದೆ.
ಸದ್ಯ ಈ ವಿಚಾರವಾಗಿ ದೇಶದೆಲ್ಲೆಡೆ ಚರ್ಚೆಗಳು ಜೋರಾಗಿ ನಡೆಯುತ್ತಿದೆ. ಇಷ್ಟಕ್ಕೂ ಇಂತಹ ಆಫರ್ ಕೊಡ್ತಿರೋದು ಪಕ್ಕದ ಆಂಧ್ರಪ್ರದೇಶದ ಸರ್ಕಾರ. ಹೌದು, ಆಂಧ್ರ ಸಿಎಂ ಚಂದ್ರಬಾಬು ನಾಯ್ಡು ಅವರೇ ಈ ರೀತಿ ಘೋಷಣೆ ಮಾಡಿದ್ದಾರೆ. ಹೆಚ್ಚು ಮಕ್ಕಳನ್ನು ಮಾಡಿಕೊಳ್ಳಿ ಎಂದು ಖುದ್ದು ಸಿಎಂ ಅವರೇ ಯುವಜನರಿಗೆ ಕರೆ ಕೂಡ ನೀಡಿದ್ದಾರೆ.

ಇದಕ್ಕೆ ಕಾರಣ ಏನು ಎನ್ನುವುದನ್ನೂ ಸಿಎಂ ಚಂದ್ರಬಾಬು ನಾಯ್ಡು ಹೇಳಿದ್ದಾರೆ. ದಕ್ಷಿಣ ಭಾರತದ ರಾಜ್ಯಗಳಲ್ಲಿ ವೃದ್ಧರ ಜನಸಂಖ್ಯೆ ಹೆಚ್ಚಾಗಿದೆ. ಹಾಗಾಗಿ ಯುವಜನರ ಸಂಖ್ಯೆ ಹೆಚ್ಚಾಗಬೇಕು. ಭವಿಷ್ಯದ ದೃಷ್ಟಿಯಿಂದ ಹೆಚ್ಚೆಚ್ಚು ಮಕ್ಕಳನ್ನು ಹೊಂದುವುದು ಒಳ್ಳೆಯದು ಎಂದು ನಾಯ್ಡು ಕಾರಣ ಕೊಟ್ಟಿದ್ದಾರೆ.
ಜನಸಂಖ್ಯಾ ನಿರ್ವಹಣೆಗೆ ಆಂಧ್ರಪ್ರದೇಶ ಸರ್ಕಾರ ಹೊಸ ಯೋಜನೆ ರೂಪಿಸುತ್ತಿದೆ. ಈ ಯೋಜನೆಯಡಿ ಹೆಚ್ಚು ಮಕ್ಕಳನ್ನು ಹೊಂದಿರುವ ಕುಟುಂಬಗಳಿಗೆ ಸರ್ಕಾರದಿಂದಲೇ ಪ್ರೋತ್ಸಾಹಧನ ಕೊಡುವ ಚಿಂತನೆಯೂ ಇದೆ. ಇದಕ್ಕಾಗಿ ಒಂದು ಕಾಯ್ದೆಯನ್ನು ಸಹ ರೂಪಿಸಲಾಗುವುದು ಎಂದು ಹೇಳಿದ್ದಾರೆ.

ಇದರ ಜೊತೆಗೆ ಎರಡಕ್ಕಿಂತ ಹೆಚ್ಚು ಮಕ್ಕಳನ್ನು ಹೊಂದಿರುವವರು ಮಾತ್ರವೇ ಸ್ಥಳೀಯ ಸಂಸ್ಥೆಗಳ ಎಲೆಕ್ಷನ್‌ನಲ್ಲಿ ಸ್ಪರ್ಧಿಸುವ ಕಾನೂನು ಸಹ ರೂಪಿಸಲಿದ್ದೇವೆ. ಈ ಹಿಂದೆ ಹೆಚ್ಚು ಮಕ್ಕಳನ್ನು ಹೊಂದಿರುವವರು ಚುನಾವಣೆಗೆ ಸ್ಪರ್ಧಿಸುವಂತಿಲ್ಲ ಎಂಬ ಕಾನೂನು ಇತ್ತು. ಅದನ್ನು ತಕ್ಷಣದಿಂದಲೇ ರದ್ದು ಮಾಡುತ್ತಿದ್ದೇವೆ. ಇದಕ್ಕೆ ಬದಲಾಗಿ ಹೆಚ್ಚು ಮಕ್ಕಳನ್ನು ಹೊಂದುವ ಕುಟುಂಬಗಳಿಗೆ ಸರ್ಕಾರದಿಂದ ಹೆಚ್ಚಿನ ಸೌಲಭ್ಯಗಳನ್ನು ಒದಗಿಸಲು ನಿರ್ಧರಿಸಲಾಗಿದೆ. 2047ರವರೆಗೆ ನಮಗೆ ಹೆಚ್ಚು ಜನಸಂಖ್ಯೆಯ ಅಗತ್ಯವಿದೆ ಎಂದು ಚಂದ್ರಬಾಬು ನಾಯ್ಡು ಹೇಳಿದ್ದಾರೆ.
ಆಂಧ್ರಪ್ರದೇಶ ಸೇರಿದಂತೆ ದಕ್ಷಿಣ ಭಾರತದ ರಾಜ್ಯಗಳಲ್ಲಿ ಇತ್ತೀಚಿನ ವರ್ಷಗಳಲ್ಲಿ ವೃದ್ಧರ ಜನಸಂಖ್ಯೆ ಏರುತ್ತಿದೆ. ಇದೊಂದು ಕಳವಳಕಾರಿ ವಿಷಯ ಎಂದು ನಾಯ್ಡು ಹೇಳಿದ್ದಾರೆ. ಈ ಸಮಸ್ಯೆಯನ್ನು ಹಲವು ರಾಷ್ಟ್ರಗಳು ಎದುರಿಸುತ್ತಿವೆ. ಇದಕ್ಕೆ ಮುಖ್ಯ ಕಾರಣ ಇಲ್ಲಿನ ಯುವಜನರು ಸ್ಥಳೀಯವಾಗಿರುವ ಬದಲಿಗೆ ಬೇರೆ ರಾಜ್ಯಗಳು ಹಾಗೂ ವಿದೇಶಗಳತ್ತ ಹಾರುತ್ತಿದ್ದಾರೆ. ಇದರಿಂದಲೇ ಯುವಜನರ ಪ್ರಮಾಣ ಕುಂದುತ್ತಿದ್ದು, ವೃದ್ಧರ ಜನಸಂಖ್ಯೆ ಹೆಚ್ಚಾಗತೊಡಗಿದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.

ದಕ್ಷಿಣದ ಭಾರತದ ರಾಜ್ಯಗಳಲ್ಲಿ ಫಲವತ್ತತೆ ಪ್ರಮಾಣ ಕೂಡ ಕುಸಿಯುತ್ತಿದೆ. ಇದು ಹೀಗೆಯೇ ಮುಂದುವರಿದರೆ 2047ರ ವೇಳೆಗೆ ವೃದ್ಧರ ಸಂಖ್ಯೆ ಮತ್ತಷ್ಟು ಏರಿಕೆಯಾಗಲಿದೆ. ಆಂಧ್ರಪ್ರದೇಶದ ಹಲವು ಗ್ರಾಮಗಳಲ್ಲಿ ವೃದ್ಧರ ಸಂಖ್ಯೆಯೇ ಅಧಿಕವಾಗಿದೆ. ಈ ಹಿಂದೆ ಜನಸಂಖ್ಯೆ ನಿಯಂತ್ರಣದ ಅಗತ್ಯವೂ ಇತ್ತು. ಆದರೆ ಈಗಿನ ಪರಿಸ್ಥಿತಿ ತದ್ವಿರುದ್ಧವಾಗಿದೆ. ಭವಿಷ್ಯದಲ್ಲಿ ಜನಸಂಖ್ಯೆ ನಿಯಂತ್ರಣಕ್ಕಿಂತ ಜನಸಂಖ್ಯಾ ನಿರ್ವಹಣೆ ಮುಖ್ಯ ಎಂದು ಒತ್ತಿ ಹೇಳಿದ್ದಾರೆ.
ಈ ಬಗ್ಗೆ ಪರ-ವಿರೋಧದ ಚರ್ಚೆಗಳು ಶುರುವಾಗಿದ್ದು, ಸರ್ಕಾರವೇ ದುಡ್ಡು ಕೊಡೋ ಹಾಗಿದ್ರೆ ಮಕ್ಕಳು ಮಾಡಿಕೊಳ್ಳೋಣ ಬಿಡಿ ಎಂದು ಹಲವರು ಹ್ಯಾಪಿ ಆಗಿದ್ದಾರೆ. ಇನ್ನು ಕೆಲವರು ಇರೋ ಮಕ್ಕಳಿಗೆ ಸರಿಯಾಗಿ ಒಳ್ಳೆಯ ಬದುಕು ಕಟ್ಟಿಕೊಡೋಕಾಗ್ತಿಲ್ಲ, ಇನ್ನು ಮನೆ ತುಂಬಾ ಮಕ್ಕಳಾದ್ರೆ ನಮ್ ಹೊಟ್ಟೆಗೆ ತಣ್ಣೀರ್ ಬಟ್ಟೇನೆ ಗತಿ ಎಂದೂ ಕಾಮೆಂಟ್ ಮಾಡುತ್ತಿದ್ದಾರೆ.












Click it and Unblock the Notifications