3ನೇ ಮಹಡಿಯಿಂದ ಬಿದ್ದು ಕೋಲ್ಕತ್ತಾ ಗಗನಸಖಿಯ ನಿಗೂಢ ಸಾವು
ಕೋಲ್ಕತ್ತ, ಆಗಸ್ಟ್ 17: ಖಾಸಗಿ ಏರ್ ಲೈನ್ ಸಂಸ್ಥೆಯೊಂದರಲ್ಲಿ ಕೆಲಸ ಮಾಡುತ್ತಿರುವ ಖೊಂಗ್ಸಿಟ್ ಕ್ಲಾರಾ ಬನ್ಶಾ ರೈ ಎಂಬ 23 ವರ್ಷದ ಯುವತಿಯೊಬ್ಬರು ತಾವು ವಾಸಿಸುತ್ತಿದ್ದ ಕಟ್ಟಡದ ಮೂರನೇ ಮಹಡಿಯಿಂದ ಬಿದ್ದು ಸಾವಿಗೀಡಾದ ಘಟನೆ ಕೋಲ್ಕತ್ತಾದಲ್ಲಿ ನಡೆದಿದೆ.
ಕೋಲ್ಕತ್ತದ ಕೆಸ್ಟೋಪುರ್ ಎಂಬಲ್ಲಿರುವ ತಮ್ಮ ಫ್ಲಾಟ್ ನಲ್ಲಿ ಸ್ನೇಹಿತರೊಬ್ಬರ ಜನ್ಮದಿನ ಆಚರಿಸಲು ಸಿದ್ಧತೆ ನಡೆಸುತ್ತಿದ್ದ ಸಂದರ್ಭದಲ್ಲಿ ಘಟನೆ ನಡೆದಿದ್ದು, ಇದು ಆಕಸ್ಮಿಕ ಸಾವೋ, ಕೊಲೆಯೋ, ಆತ್ಮಹತ್ಯೆಯೋ ಎಂಬ ಬಗ್ಗೆ ಮಾಹಿತಿ ಲಭ್ಯವಾಗಿಲ್ಲ.

ದಾರಿಹೋಕರೊಬ್ಬರು ಯುವತಿಯ ಶವ ಕಂಡು ಪೊಲೀಸರಿಗೆ ಮಾಹಿತಿ ನೀಡಿದ್ದರು. ಸುದ್ದಿ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ಆಗಮಿಸಿದ ಪೊಲೀಸರು ಯುವತಿ ವಾಸವಿದ್ದ ಫ್ಲಾಟ್ ಗೆ ತೆರಳಿದಾಗ ಅಲ್ಲಿ, ಯುವತಿಯ ಇಬ್ಬರು ಸ್ನೇಹಿತೆಯರು ಮಲಗಿದ್ದರು.
ಬೆಳಗ್ಗಿನ ಜಾವ ನಡೆದ ಈ ಘಟನೆಯ ಬಗ್ಗೆ ತಮಗೇನೂ ಗೊತ್ತೇ ಇಲ್ಲ. ಆಕೆ ಯಾವಾಗ ಎದ್ದು ಹೋದಳು ಎಂಬುದಾಗಲೀ, ಬಿದ್ದಿದ್ದಕ್ಕೆ ಕಾರಣವೇನು ಎಂಬುದಾಗಲೀ ತಮಗೆ ಗೊತ್ತಿಲ್ಲ. ಆಕೆಗೆ ಆತ್ಮಹತ್ಯೆ ಮಾಡಿಕೊಳ್ಳುವಂಥ ಯಾವ ಸಮಸ್ಯೆಯೂ ಇರಲಿಲ್ಲ. ಆದ್ದರಿಂದ ಈ ಘಟನೆಯ ಕುರಿತು ಸ್ಪಷ್ಟ ತೀರ್ಮಾನಕ್ಕೆ ಬರುವುದಕ್ಕೆ ಸಾಧ್ಯವಾಗುತ್ತಿಲ್ಲ ಎಂಬುದು ಆಕೆಯ ಸ್ನೇಹಿತರ ಮಾತು.
ಒಟ್ಟಿನಲ್ಲಿ ಘಟನೆಯ ಕುರಿತು ಹೆಚ್ಚಿನ ತನಿಖೆ ನಡೆಯುತ್ತಿದ್ದು, ತನಿಖೆಯ ನಂತರ ಸತ್ಯ ಹೊರಬೀಳಲಿದೆ.












Click it and Unblock the Notifications