ನವದೆಹಲಿಗೆ ಆಗಮಿಸಿದ ರಷ್ಯಾ ವಿದೇಶಾಂಗ ಸಚಿವ: ಪ್ರಧಾನಿ ಮೋದಿ ಭೇಟಿ
ನವದೆಹಲಿ, ಏಪ್ರಿಲ್ 01: ಉಕ್ರೇನ್ ಮೇಲೆ ರಷ್ಯಾ ದಾಳಿ ನಡೆಸಿ ಒಂದು ತಿಂಗಳಾಗಿದೆ. ಇಂದಿಗೂ ಯುದ್ಧ ನಡೆಯುತ್ತಿದೆ. ಈ ನಡುವೆ ಗುರುವಾರ ರಷ್ಯಾ ವಿದೇಶಾಂಗ ಸಚಿವ ಸೆರ್ಗೆ ಲಾವ್ರೊವ್ ಭಾರತಕ್ಕೆ ಎರಡು ದಿನಗಳ ಅಧಿಕೃತ ಭೇಟಿ ನೀಡಿದ್ದಾರೆ. ಇಂದು (ಏಪ್ರಿಲ್ 01) ಪ್ರಧಾನ ಮಂತ್ರಿ ನರೇಂದ್ರ ಮೋದಿ ಹಾಗೂ ವಿದೇಶಾಂಗ ಸಚಿವ ಜೈಶಂಕರ್‌ರನ್ನು ಭೇಟಿಯಾಗಲಿದ್ದಾರೆ.
ಈ ಬಗ್ಗೆ ಮಾಹಿತಿ ನೀಡಿರುವ ರಷ್ಯಾದ ವಿದೇಶಾಂಗ ಸಚಿವಾಲಯದ ವಕ್ತಾರ ಮಾರಿಯಾ ಜಖರೋವಾ, "ಲಾವ್ರೋವ್ ಶುಕ್ರವಾರ ಪ್ರಧಾನಿ ನರೇಂದ್ರ ಮೋದಿ ಮತ್ತು ವಿದೇಶಾಂಗ ಸಚಿವ ಎಸ್ ಜೈಶಂಕರ್ ಅವರನ್ನು ಭೇಟಿಯಾಗಲಿದ್ದಾರೆ," ಎಂದು ತಿಳಿಸಿದ್ದಾರೆ.
ಇನ್ನು ಈ ಮಾತುಕತೆಯ ವೇಳೆ ರಷ್ಯಾದಿಂದ ವಿವಿಧ ಮಿಲಿಟರಿ ಯಂತ್ರಾಂಶಗಳು ಮತ್ತು ಎಸ್- 400 ಕ್ಷಿಪಣಿ ವ್ಯವಸ್ಥೆಗಳ ಘಟಕಗಳನ್ನು ಸಮಯೋಚಿತವಾಗಿ ತಲುಪಿಸುವುದನ್ನು ಖಚಿತಪಡಿಸಿಕೊಳ್ಳಲು ಭಾರತವು ಒತ್ತಡ ಹೇರುವ ಸಾಧ್ಯತೆಯಿದೆ. ಹಾಗೆಯೇ ರಷ್ಯಾದಿಂದ ಭಾರತಕ್ಕೆ ಕಡಿಮೆ ಬೆಲೆಯಲ್ಲಿ ಇಂಧನ ರಫ್ತಿನ ಆಫರ್ ಬಗ್ಗೆಯೂ ಮಾತುಕತೆ ನಡೆಯುವ ಸಾಧ್ಯತೆ ಇದೆ ಮೂಲಗಳು ತಿಳಿಸಿದೆ.

ಚೀನಾ ವಿದೇಶಾಂಗ ಸಚಿವ ವಾಂಗ್ ಯಿ ಭಾರತಕ್ಕೆ ಕಳೆದ ವಾರ ಭೇಟಿ ನೀಡಿದ್ದರು. ಇಂಡೋ-ಪೆಸಿಫಿಕ್ ಯೂರೋಪಿಯನ್ ಒಕ್ಕೂಟದ ವಿಶೇಷ ರಾಯಭಾರಿ ಗೇಬ್ರಿಯೆಲ್ ವಿಸೆಂಟಿನ್ ಈ ವಾರ ಭಾರತಕ್ಕೆ ಭೇಟಿ ನೀಡಿದರು.
ಚೀನಾ ಪ್ರವಾಸ ಮುಗಿಸಿ ಭಾರತಕ್ಕೆ ಬಂದ ರಷ್ಯಾ ಸಚಿವ
ಎರಡು ದಿನಗಳ ಚೀನಾ ಪ್ರವಾಸ ಮುಗಿಸಿದ ನಂತರ ರಷ್ಯಾ ಸಚಿವರು ಭಾರತಕ್ಕೆ ಆಗಮಿಸಿದ್ದಾರೆ. ಅಮೆರಿಕ ಉಪ ರಾಷ್ಟ್ರೀಯ ಭದ್ರತಾ ಸಲಹೆಗಾರ ದಲೀಪ್ ಸಿಂಗ್ ಮತ್ತು ಬ್ರಿಟಿಷ್ ವಿದೇಶಾಂಗ ಕಾರ್ಯದರ್ಶಿ ಲಿಜ್ ಟ್ರಸ್ ಭೇಟಿ ಬೆನ್ನಲ್ಲೇ ರಷ್ಯಾದ ವಿದೇಶಾಂಗ ಸಚಿವರು ಕೂಡಾ ಭೇಟಿ ನೀಡಿದ್ದಾರೆ.
ನಿನ್ನೆ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ಅರಿಂದಮ್ ಬಾಗ್ಚಿ ಅವರು ರಷ್ಯಾ ವಿದೇಶಾಂಗ ಸಚಿವ ಸೆರ್ಗೆ ಲಾವ್ರೊವ್ ಅವರನ್ನು ವಿಮಾನ ನಿಲ್ದಾಣದಲ್ಲಿ ಸ್ವಾಗತಿಸಿದರು. ರಷ್ಯಾ ಉಕ್ರೇನ್ ಮೇಲೆ ವಿಶೇಷ ಸೇನಾ ಕಾರ್ಯಾಚರಣೆ ಆರಂಭಿಸಿದ ನಂತರ ಇದು ಅವರ ಮೊದಲ ಭಾರತ ಪ್ರವಾಸವಾಗಿದೆ.

ಲಾವ್ರೊವ್ ಅವರು ಚೀನಾದ ಸಹವರ್ತಿ ವಾಂಗ್ ಯಿ ಅವರೊಂದಿಗೆ ಬುಧವಾರ ಮಾತುಕತೆ ನಡೆಸಿದರು ಮತ್ತು ದ್ವಿಪಕ್ಷೀಯ ಸಂಬಂಧಗಳನ್ನು ಬಲಪಡಿಸಲು ಎರಡೂ ಕಡೆಯವರು ವಾಗ್ದಾನ ಮಾಡಿದರು. ರಷ್ಯಾದ ವಿದೇಶಾಂಗ ಸಚಿವರು ಅಫ್ಘಾನಿಸ್ತಾನದಲ್ಲಿ ಪಾಕಿಸ್ತಾನ, ಇರಾನ್, ತಜಕಿಸ್ತಾನ್, ತುರ್ಕಮೆನಿಸ್ತಾನ್ ಮತ್ತು ಉಜ್ಬೇಕಿಸ್ತಾನ್ ಪ್ರತಿನಿಧಿಗಳೊಂದಿಗೆ ಎರಡು ಬಹುರಾಷ್ಟ್ರೀಯ ಸಭೆಗಳಲ್ಲಿ ಭಾಗವಹಿಸಿದರು.
ಫೆಬ್ರವರಿ 24 ರಂದು ಪ್ರಾರಂಭವಾದ ಉಕ್ರೇನ್‌ನ ರಷ್ಯಾದ ಆಕ್ರಮಣದ ಕುರಿತು ಭಾರತವು ಇಲ್ಲಿಯವರೆಗೆ ತಟಸ್ಥ ಸ್ಥಾನವನ್ನು ಕಾಯ್ದುಕೊಂಡಿದೆ. ರಷ್ಯಾದ ಆಕ್ರಮಣವನ್ನು ಖಂಡಿಸಿ ವಿಶ್ವಸಂಸ್ಥೆಯಲ್ಲಿ ಮಂಡಿಸಲಾದ ಎಲ್ಲಾ ನಿರ್ಣಯಗಳ ಮೇಲೆ ಭಾರತವು ಮತದಾನದಿಂದ ದೂರವಿತ್ತು.
ಈ ನಡುವೆ ಯುನೈಟೆಡ್ ಸ್ಟೇಟ್ಸ್ ಉಕ್ರೇನ್‌ನಲ್ಲಿನ ಯುದ್ಧ ಆರಂಭ ಮಾಡಿದ ರಷ್ಯಾದ ಮೇಲೆ ನಿರ್ಬಂಧಗಳನ್ನು ವಿಧಿಸಿದೆ. ಲಾವ್ರೋವ್ ಅವರ ಭಾರತ ಭೇಟಿಯ ಕುರಿತು ಪ್ರತಿಕ್ರಿಯಿಸಿದ ಯುಎಸ್ ಸ್ಟೇಟ್ ಡಿಪಾರ್ಟ್ಮೆಂಟ್ ವಕ್ತಾರ ನೆಡ್ ಪ್ರೈಸ್, "ರಷ್ಯಾ ಮತ್ತು ಭಾರತದ ಸಂಬಂಧವನ್ನು ಬದಲಾಯಿಸಲು ಪ್ರಯತ್ನಿಸುತ್ತಿಲ್ಲ," ಎಂದು ಹೇಳಿದರು.
"ವಿವಿಧ ದೇಶಗಳು ರಷ್ಯಾದ ಒಕ್ಕೂಟದೊಂದಿಗೆ ತಮ್ಮದೇ ಆದ ಸಂಬಂಧವನ್ನು ಹೊಂದಲಿವೆ. ಇದು ಇತಿಹಾಸದ ಸತ್ಯ. ಇದು ಭೂಗೋಳದ ಸತ್ಯ. ಇದು ನಾವು ಬದಲಾಯಿಸಲು ಬಯಸುತ್ತಿರುವ ವಿಷಯವಲ್ಲ. ಜಗತ್ತು, ಅಂತರಾಷ್ಟ್ರೀಯ ಸಮುದಾಯವು ಒಗ್ಗಟ್ಟಿನಿಂದ ಮಾತನಾಡುವಂತೆ ನೋಡಿಕೊಳ್ಳಲು ನಮ್ಮಿಂದ ಸಾಧ್ಯವಿರುವ ಎಲ್ಲ ಕಾರ್ಯವನ್ನು ನಾವು ಮಾಡುತ್ತೇವೆ," ಎಂದು ತಿಳಿಸಿದರು.












Click it and Unblock the Notifications