ಕನ್ನಡ ಸೇರಿ ಪ್ರಾದೇಶಿಕ ಭಾಷೆಗಳಲ್ಲೇ ಪತ್ರ ವ್ಯವಹಾರ: ಅಮಿತ್ ಶಾ ಮಹತ್ವದ ಘೋಷಣೆ
ನವದೆಹಲಿ, ಮಾರ್ಚ್ 22: ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ತ್ರಿಭಾಷಾ ಸೂತ್ರದ ಬಗ್ಗೆ ಗದ್ದಲದ ಮಧ್ಯೆ, ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಡಿಸೆಂಬರ್‌ನಿಂದ ತಮ್ಮ ಸಚಿವಾಲಯವು ರಾಜ್ಯಗಳೊಂದಿಗೆ ಪ್ರಾದೇಶಿಕ ಭಾಷೆಗಳಲ್ಲಿ ಸಂವಹನ ನಡೆಸಲಿದೆ ಎಂದು ಮಹತ್ವದ ಘೋಷಣೆ ಮಾಡಿದ್ದಾರೆ.
ಅಮಿತ್ ಶಾ ಅವರು ಹಿಂದಿ ಹೇರಿಕೆ ಆರೋಪಗಳನ್ನು ರಾಜ್ಯಸಭೆಯಲ್ಲಿ ತೀವ್ರವಾಗಿ ಖಂಡಿಸಿದ್ದಾರೆ. ಭಾಷೆಯ ಹೆಸರಿನಲ್ಲಿ ದೇಶವನ್ನು ವಿಭಜಿಸುವ ಕೆಲಸ ಮಾಡಬಾರದು ಎಂದು ಅಮಿತ್ ಶಾ ಹೇಳಿದ್ದಾರೆ, ಪ್ರಾದೇಶಿಕ ಭಾಷೆಗಳ ಉತ್ತೇಜನಕ್ಕಾಗಿ ಡಿಸೆಂಬರ್ನಿಂದ ರಾಜ್ಯಗಳ ಜತೆ ಅಲ್ಲಿನ ಪ್ರಾದೇಶಿಕ ಭಾಷೆಯಲ್ಲೇ ಪತ್ರ ವ್ಯವಹಾರ ಮಾಡುವುದಾಗಿ ಘೋಷಣೆ ಮಾಡಿದ್ದಾರೆ. ಅದರಂತೆ, ಕರ್ನಾಟಕ ಸರ್ಕಾರದ ಜತೆ ಕನ್ನಡದಲ್ಲಿ, ತಮಿಳುನಾಡು ಸರ್ಕಾರದ ಜತೆ ತಮಿಳು ಹಾಗೂ ಬೇರೆ ಬೇರೆ ರಾಜ್ಯಗಳ ಜತೆ ಅಲ್ಲಿನ ಭಾಷೆಯಲ್ಲೇ ಪತ್ರ ವ್ಯವಹಾರ ನಡೆಯಲಿದೆ ಎಂದು ಹಿಂದಿ ಹೇರಿಕೆ ಮಾಡಲಾಗುತ್ತಿದೆ ಎಂದು ಆರೋಪಿಸುವವರಿಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ರಾಜ್ಯಸಭೆಯಲ್ಲಿ ಉತ್ತರ ನೀಡಿದ್ದಾರೆ.

ಬಿಜೆಪಿ ದಕ್ಷಿಣ ಭಾರತದ ಭಾಷೆಗಳನ್ನು ವಿರೋಧಿಸುತ್ತದೆ ಎಂಬ ಆರೋಪಗಳನ್ನು ತಿರಸ್ಕರಿಸಿದ ಅಮಿತ್ ಶಾ, ಅವರು ಏನು ಹೇಳುತ್ತಿದ್ದಾರೆ? ನಾವು ದಕ್ಷಿಣದ ಭಾಷೆಗಳನ್ನು ವಿರೋಧಿಸುತ್ತೇವೆಯೇ? ಇದು ಹೇಗೆ ಸಾಧ್ಯ? ನಾನು ಗುಜರಾತ್‌ನಿಂದ ಬಂದವನು. ನಿರ್ಮಲಾ ಸೀತಾರಾಮನ್ ತಮಿಳುನಾಡಿನವರು. ಹೀಗಿದ್ದಾಗ ನಾವು ಪ್ರಾದೇಶಿಕ ಭಾಷೆಗಳನ್ನು ಹೇಗೆ ಸಾಧ್ಯ ಎಂದು ಪ್ರಶ್ನಿಸಿದ್ದಾರೆ. ಭಾಷೆಯ ವಿಷಯದಲ್ಲಿ ದೇಶದಲ್ಲಿ ಸಾಕಷ್ಟು ವಿಭಜನೆಗಳು ನಡೆದಿವೆ ಮತ್ತು ಇದು ಇನ್ನು ಮುಂದೆ ಸಂಭವಿಸಬಾರದು ಎಂದು ಅಮಿತ್ ಶಾ ಹೇಳಿದರು.
ಹೊಸ ರಾಷ್ಟ್ರೀಯ ಶಿಕ್ಷಣ ನೀತಿ ಮತ್ತು ಅದರ ಅಡಿಯಲ್ಲಿ ಪ್ರಸ್ತಾಪಿಸಲಾದ ತ್ರಿಭಾಷಾ ಸೂತ್ರದ ಅನುಷ್ಠಾನಕ್ಕೆ ಸಂಬಂಧಿಸಿದಂತೆ ಕೇಂದ್ರ ಮತ್ತು ತಮಿಳುನಾಡು ಸರ್ಕಾರದ ನಡುವಿನ ಜಗಳ ನಡೆಯುತ್ತಿರುವ ನಡುವೆ ಅಮಿತ್ ಶಾ ಅವರು ಆಯಾ ಪ್ರಾದೇಶಿಕ ಭಾಷೆಯ ಮೂಲಕವೇ ವ್ಯವಹಾರಿಸುವುದಾಗಿ ತಿಳಿಸಿದ್ದಾರೆ. ನಾನು ಇದನ್ನು ಮತ್ತೆ ಮತ್ತೆ ಹೇಳಿದ್ದೇನೆ, ಹಿಂದಿಗೆ ಬೇರೆ ಯಾವುದೇ ಭಾರತೀಯ ಭಾಷೆಯೊಂದಿಗೆ ಸ್ಪರ್ಧೆಯಿಲ್ಲ. ಹಿಂದಿ ಎಲ್ಲಾ ಭಾರತೀಯ ಭಾಷೆಗಳ ಮಿತ್ರ ಎಂದರು.
ಭಾಷೆಯ ಹೆಸರಿನಲ್ಲಿ ದೇಶವನ್ನು ವಿಭಜಿಸುವವರು ತಮ್ಮ ಕಾರ್ಯಸೂಚಿಯನ್ನು ಜಾರಿಗೊಳಿಸಲು ಬಿಡಬಾರದು. ಅಧಿಕೃತ ಭಾಷಾ ಇಲಾಖೆಯ ಅಡಿಯಲ್ಲಿ, ನರೇಂದ್ರ ಮೋದಿ ಸರ್ಕಾರವು ಎಲ್ಲಾ ಭಾರತೀಯ ಭಾಷೆಗಳ ಬಳಕೆಯನ್ನು ಹೆಚ್ಚಿಸುವ ಕೆಲಸ ಮಾಡುತ್ತಿದೆ. ಅದಕ್ಕಾಗಿ ತಮಿಳು, ತೆಲುಗು, ಮರಾಠಿ, ಗುಜರಾತಿ, ಪಂಜಾಬಿ, ಅಸ್ಸಾಮಿ, ಬಂಗಾಳಿ ಸೇರಿದಂತೆ ಎಲ್ಲಾ ಭಾಷೆಗಳಿಗಾಗಿ ಭಾರತೀಯ ಅಧಿಕೃತ ಭಾಷಾ ಇಲಾಖೆ ಯನ್ನು ಸ್ಥಾಪಿಸಿದೆ ಎಂದು ಶಾ ಹೇಳಿದರು.
ಹಿಂದಿ ಯಾವುದೇ ಪ್ರಾದೇಶಿಕ ಭಾಷೆಯೊಂದಿಗೆ ಸ್ಪರ್ಧಿಸುವುದಿಲ್ಲ. ಅದರ ಬದಲಿಗೆ, ಹಿಂದಿಯು ಭಾಷಾ ಸಾಮರಸ್ಯವನ್ನು ಬೆಳೆಸುತ್ತದೆ. ಹಿಂದಿ ಎಲ್ಲಾ ಭಾರತೀಯ ಭಾಷೆಗಳಿಗೆ ಒಡನಾಡಿಯಾಗಿದೆ. ಹಿಂದಿ ಎಲ್ಲಾ ಭಾರತೀಯ ಭಾಷೆಗಳನ್ನು ಬಲಪಡಿಸುತ್ತದೆ. ಭಾರತದ ಭಾಷಾ ವೈವಿಧ್ಯತೆಯನ್ನು ಬಲಪಡಿಸುವಲ್ಲಿ ಹಿಂದಿ ಮತ್ತು ಪ್ರಾದೇಶಿಕ ಭಾಷೆಗಳ ನಡುವಿನ ಪರಸ್ಪರ ಸಂಬಂಧವನ್ನು ಒತ್ತಿ ಹೇಳಿದರು. ಅಲ್ಲದೇ ಭಾಷೆಯ ಹೆಸರಿನಲ್ಲಿ ವಿಷ ಹರಡುವವರಿಗೆ ನಾನು ಒಂದು ಮಾತು ಹೇಳಲು ಬಯಸುತ್ತೇನೆ, ನೀವು ಸಾವಿರಾರು ಕಿಲೋಮೀಟರ್ ದೂರದ ಭಾಷೆಗಳನ್ನು ಇಷ್ಟಪಡುತ್ತೀರಿ, ಆದರೆ ನಿಮಗೆ ಭಾರತದ ಭಾಷೆ ಇಷ್ಟವಾಗುವುದಿಲ್ಲ ಎಂದು ಅಮಿತ್ ಶಾ ಕುಟುಕಿದರು.












Click it and Unblock the Notifications