ಪಾಕಿಸ್ತಾನ ಸ್ವಾತಂತ್ರ್ಯದ ಬಗ್ಗೆ ಸ್ಟೇಟಸ್: ಜೈಲು ಸೇರಿದ ಇಬ್ಬರು ಯುವಕರು!
ಮುಂಬೈ: ನಿನ್ನೆ ಭಾರತದಲ್ಲಿ ಸ್ವಾತಂತ್ರ್ಯ ಸಂಭ್ರಮ ಮೇಳೈಸಿದ್ದು ಶತಕೋಟಿ ಭಾರತೀಯರು ಹೆಮ್ಮೆಯಿಂದ ಸ್ವಾತಂತ್ರ್ಯ ದಿನಾಚರಣೆ ಆಚರಿಸಿದ್ದಾರೆ. ಹೀಗಿದ್ದಾಗ ಕೆಲ ಅವಿವೇಕಿಗಳು ದೇಶದ ಜನರಿಗೆ ನೋವು ತರಿಸುವ ಕೆಲಸ ಮಾಡುತ್ತಿದ್ದಾರೆ. ಹೀಗೆ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಪಾಕಿಸ್ತಾನದ ಸ್ವಾತಂತ್ರ್ಯ ದಿನಾಚರಣೆ ಬೆಂಬಲಿಸುವ ರೀತಿ ವಿಡಿಯೋ ಪೋಸ್ಟ್ ಮಾಡಿದ್ದವರು ಕಂಬಿ ಎಣಿಸಿದ್ದಾರೆ.
ಭಾರತದಲ್ಲಿ ಸ್ವಾತಂತ್ರ್ಯ ದಿನಾಚರಣೆ ನೆರವೇರುವ 1 ದಿನ ಮೊದಲು ಪಾಕಿಸ್ತಾನದಲ್ಲಿ ಸ್ವಾತಂತ್ರ್ಯ ಸಮಾರಂಭ ನೆರವೇರಿದೆ. ಭಾರತದಲ್ಲಿ ಸ್ವಾತಂತ್ರ್ಯ ದಿನಾಚರಣೆ ಆಗಸ್ಟ್ 15ರಂದು ನಡೆದರೆ, ಪಾಕಿಸ್ತಾನದಲ್ಲಿ ಆಗಸ್ಟ್ 14ರಂದು ಸ್ವಾತಂತ್ರ್ಯ ದಿನಾಚರಣೆ ನಡೆಯುತ್ತದೆ. ಹೀಗೆ ಪಾಕ್‌ನ ಸ್ವಾತಂತ್ರ್ಯ ದಿನಾಚರಣೆ ವಿಡಿಯೊವನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಕ್ಕಾಗಿ ಇಬ್ಬರು ಕಾಲೇಜು ವಿದ್ಯಾರ್ಥಿಗಳನ್ನು ವಶಕ್ಕೆ ಪಡೆಯಲಾಗಿದೆ. ಮುಂಬೈ ಪೊಲೀಸರು ಘಟನೆ ಹಿನ್ನೆಲೆಯಲ್ಲಿ ಇಬ್ಬರನ್ನು ವಶಕ್ಕೆ ಪಡೆದು ನಂತರ ರಿಲೀಸ್ ಮಾಡಿದ್ದಾರೆ ಎನ್ನಲಾಗಿದೆ.

ಓದುವ ವಯಸ್ಸಲ್ಲಿ ಇಂತಹದ್ದು ಬೇಕಾ?
ಅವರು ಇನ್ನೂ ಕಾಲೇಜು ವಿದ್ಯಯಾರ್ಥಿಗಳು, ಓದುವ ವಯಸ್ಸಲ್ಲಿ ಇಂತಹ ಕೆಲಸವನ್ನು ಮಾಡಿ ಇನ್ನೇನು ಕಂಬಿ ಎಣಿಸಬೇಕಿತ್ತು. ಆದರೆ ಕೊಲಬಾದಲ್ಲಿ ಇಬ್ಬರು ವಿದ್ಯಾರ್ಥಿಗಳನ್ನು ಬಂಧಿಸಿದ್ದ ಪೊಲೀಸರು ಬಳಿಕ ಎಚ್ಚರಿಕೆ ನೀಡಿ ರಿಲೀಸ್ ಮಾಡಿದ್ದು, ಇಬ್ಬರೂ ಸೋಷಿಯಲ್ ಮೀಡಿಯಾ ಖಾತೆಯಲ್ಲಿ ಸ್ಟೇಟಸ್‌ನಲ್ಲಿ ಪಾಕಿಸ್ತಾನದ ಧ್ವಜದ ವಿಡಿಯೋ ಪೋಸ್ಟ್ ಮಾಡಿದ್ರು ಅಂತಾ ಪೊಲೀಸರು ಹೇಳಿದ್ದಾರೆ. ಪದೇ ಪದೆ ಸಾಮಾಜಿಕ ಜಾಲತಾಣದಲ್ಲಿ ಇಂತಹ ಘಟನೆ ವರದಿಯಾಗುತ್ತವೆ. ಆದರೆ ಸ್ವಾತಂತ್ರ್ಯ ದಿನಾಚರಣೆ ದಿನವೂ ಇಂತಹ ಘಟನೆ ನಡೆದಿದ್ದು, ಪರಿಸ್ಥಿತಿಯನ್ನು ಸೂಕ್ಷ್ಮಗೊಳಿಸುವ ಮುನ್ಸೂಚನೆ ನೀಡಿತ್ತು.
ತಪ್ಪು ಮಾಡಿದವರಿಗೆ ಖಡಕ್ ವಾರ್ನಿಂಗ್
ಈ ಕುರಿತು ಸಾಮಾಜಿಕ ಭಾವನೆಗೆ ಧಕ್ಕೆಯನ್ನುಂಟು ಮಾಡುವ ಸಾಧ್ಯತೆಯಿದೆ ಎಂದು ಕೊಲಬಾ ಉದ್ಯಮಿಯೊಬ್ಬರು ದೂರು ನೀಡಿದ್ದಾಗಿ ತಿಳಿದು ಬಂದಿದೆ. ದೂರಿನ ಹಿನ್ನೆಲೆ ಬಂಧಿಸಿ ಬುದ್ಧಿ ಹೇಳಿ ರಿಲೀಸ್ ಮಾಡಲಾಗಿದೆ. ಅಲ್ಲದೆ ಇಬ್ಬರ ಮೊಬೈಲ್‌ನಲ್ಲಿದ್ದ ಆಕ್ಷೇಪಾರ್ಹ ವಿಡಿಯೋ ಅಳಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಘಟನೆ ಸಂಚಲನ ಸೃಷ್ಟಿಸಿತ್ತು, ಆದರೆ ಪರಿಸ್ಥಿತಿಯ ಸೂಕ್ಷ್ಮತೆ ಅರಿತ ಪೊಲೀಸರು ಯುವಕರಿಗೆ ಬುದ್ಧಿವಾದ ಹೇಳಿ ಕಳುಹಿಸಿದ್ದಾರೆ. ಅಲ್ಲದೆ ಮುಂದೆ ಇಂತಹ ಕೆಲಸ ಮಾಡದಂತೆ ಅವರಿಗೆ ಖಡಕ್ ಸೂಚನೆ ನೀಡಿದ್ದಾರಂತೆ.

ಆರ್ಥಿಕವಾಗಿ ಪಾಕಿಸ್ತಾನ ವಿಲವಿಲ
ಪಾಕಿಸ್ತಾನ ಸ್ವಾತಂತ್ರ್ಯ ದಿನಾಚರಣೆ ಹಿನ್ನೆಲೆ ಇಸ್ಲಾಮಾಬಾದ್‌ನ ಜಿನ್ಹಾ ಕನ್ವೆನ್ಷನ್ ಸೆಂಟರ್‌ನಲ್ಲಿ ಧ್ವಜಾರೋಹಣ ನೆರವೇರಿಸಿ, ಪಾಕಿಸ್ತಾನ ಅಧ್ಯಕ್ಷ ಆರಿಫ್ ಅಲ್ವಿ ಮಾತನಾಡುತ್ತಾ ಪಾಕಿಸ್ತಾನದ ಸ್ನೇಹಿತರನ್ನು ನೆನೆದಿದ್ದರು. ಆರ್ಥಿಕ ಸಂಕಷ್ಟದಲ್ಲಿರುವ ಪಾಕ್‌ಗೆ ನೆರವು ನೀಡಿದ್ದಕ್ಕೆ ಚೀನಾ & ಸೌದಿ ಅರೇಬಿಯಾ, ಅರಬ್, ಇರಾನ್ ಸೇರಿದಂತೆ ಟರ್ಕಿಗೆ ಧನ್ಯವಾದ ಸಲ್ಲಿಸಿದ್ದರು ಪಾಕಿಸ್ತಾನ ಅಧ್ಯಕ್ಷ ಅಲ್ವಿ. ಪಾಕ್ ಕೆಲವೇ ವರ್ಷದಲ್ಲಿ ಅಭಿವೃದ್ಧಿ ಹೊಂದಿದ ರಾಷ್ಟ್ರಗಳ ಸಾಲಿಗೆ ಸೇರುತ್ತೆ ಅನ್ನೋ ಮಾತನ್ನು ಅಲ್ವಿ ಹೇಳಿದ್ದರು. ಈ ಮೂಲಕ ಪಾಕಿಸ್ತಾನ ದುಡ್ಡು ಇಲ್ಲದೆ, ತೀರಾ ಸಂಕಷ್ಟದ ಪರಿಸ್ಥಿತಿಯಲ್ಲಿ ನರಳುತ್ತಿರುವ ವಿಚಾರವನ್ನೂ ತಿಳಿಸಿದ್ದರು. ಇದರ ಜೊತೆಯಲ್ಲಿ ಪಾಕ್‌ನ ಸಾಮಾಜಿಕ ಪರಿಸ್ಥಿತಿ ಕೂಡ ಪಾಕ್ ಸ್ವಾತಂತ್ರ್ಯ ದಿನಾಚರಣೆ ದಿನ ಬಯಲಾಗಿತ್ತು.
ಮಕ್ಕಳಿಗೆ ಶಿಕ್ಷಣ ಸಿಗದ ಪರಿಸ್ಥಿತಿ
ಇದೇ ವೇಳೆ ಪಾಕ್ ರಾಜಕಾರಣಿಗಳಿಗೆ ಪಾಕಿಸ್ತಾನ ರಾಷ್ಟ್ರಪತಿ ಆರಿಫ್ ಅಲ್ವಿ ಬುದ್ಧಿಮಾತು ಹೇಳಿ, ಕ್ಷಮಿಸುವ ಗುಣ ಕಲಿಯಿರಿ ಎಂದು ಸಲಹೆ ನೀಡಿದ್ದರು. ಅಲ್ಲದೆ ಒಗ್ಗಟ್ಟಿನಿಂದ ಇರಲು ದೇಶದ ನಾಯಕರಲ್ಲಿ ಮನವಿ ಮಾಡುತ್ತೇನೆ. ಪಾಕಿಸ್ತಾನದಲ್ಲಿ 2.70 ಕೋಟಿ ಮಕ್ಕಳು ಶಾಲೆಯಿಂದ ಹೊರಬಿದ್ದಿದ್ದಾರೆ. ಶ್ರೀಮಂತರು ಮುಂದೆ ಬಂದು ಆ ಮಕ್ಕಳ ಶಿಕ್ಷಣಕ್ಕೆ ಸಹಾಯ ಮಾಡಲಿ. ದೇಶದ ಆರ್ಥಿಕ ಚಟುವಟಿಕೆಗಳಲ್ಲಿ ಮಹಿಳೆಯರ ಭಾಗವಹಿಸುವಿಕೆಯು ಕೂಡ ಮುಖ್ಯವಾಗಿದೆ ಎಂದಿದ್ದರು. ಈ ಮೂಲಕ ಪಾಕ್‌ನಲ್ಲಿ ಮಕ್ಕಳ ಪರಿಸ್ಥಿತಿಯನ್ನ ಸ್ವತಃ ಪಾಕಿಸ್ತಾನದ ರಾಷ್ಟ್ರಪತಿ ಬಿಡಿಸಿಟ್ಟಿದ್ದಾರೆ. ಸ್ವಾತಂತ್ರ್ಯ ಸಂಭ್ರಮದಲ್ಲಿ ಪಾಕ್‌ನ ಪರಿಸ್ಥಿತಿ ಜಗತ್ತಿಗೇ ಗೊತ್ತಾಗಿತ್ತು.












Click it and Unblock the Notifications