ಮತ್ತೆ ಎನ್‌ಡಿಎ ಜೊತೆ ಸೇರಲಿದೆ ಎಐಎಡಿಎಂಕೆ ಪಕ್ಷ
ಚೆನ್ನೈ, ಮಾರ್ಚ್ 26: ತಮಿಳುನಾಡು ರಾಜಕೀಯದಲ್ಲಿ ಮಹತ್ವದ ಬದಲಾವಣೆ ನಡೆಯುವ ಮುನ್ಸೂಚನೆ ಸಿಕ್ಕಿದೆ. ರಾಜ್ಯದ ಮಾಜಿ ಮುಖ್ಯಮಂತ್ರಿ, ಎಐಎಡಿಎಂಕೆ ಪ್ರಧಾನ ಕಾರ್ಯದರ್ಶಿ ಎಡಪ್ಪಾಡಿ ಕೆ. ಪಳನಿಸ್ವಾಮಿ ದೆಹಲಿ ಪ್ರವಾಸದಲ್ಲಿದ್ದಾರೆ. ತಮಿಳುನಾಡು ವಿಧಾನಸಭೆ ಚುನಾವಣೆ 2006ರಕ್ಕೂ ಮೊದಲು ರಾಜ್ಯದಲ್ಲಿ ಮೈತ್ರಿಕೂಟ ಅಸ್ತಿತ್ವಕ್ಕೆ ಬರುವ ನಿರೀಕ್ಷೆ ಇದೆ.
ತಮಿಳುನಾಡಿನ ವಿರೋಧ ಪಕ್ಷದ ನಾಯಕರಾದ ಎಡಪ್ಪಾಡಿ ಕೆ. ಪಳನಿಸ್ವಾಮಿ ದೆಹಲಿಯಲ್ಲಿ ಕೇಂದ್ರ ಸಚಿವ, ಬಿಜೆಪಿಯ ಹಿರಿಯ ನಾಯಕ ಅಮಿತ್ ಶಾ ಭೇಟಿ ಮಾಡಿದರು. ಈ ಭೇಟಿ ಬಿಜೆಪಿ ಮತ್ತು ಎಐಎಡಿಎಂಕೆ ಮತ್ತೆ ಮೈತ್ರಿ ಮಾಡಿಕೊಳ್ಳುವ ಸುಳಿವು ನೀಡಿದೆ.

ಬಿಜೆಪಿ ಕೆ. ಅಣ್ಣಾಮಲೈ ನೇತೃತ್ವದಲ್ಲಿ ತಮಿಳುನಾಡಿನಲ್ಲಿ ಪಕ್ಷ ಸಂಘಟನೆ ಮಾಡುತ್ತಿದೆ. 2021ರ ಚುನಾವಣೆಯಲ್ಲಿ ಬಿಜೆಪಿಗೆ ಬಯಸಿದಷ್ಟು ಸೀಟುಗಳು ಸಿಗಲಿಲ್ಲ. ಸ್ವತಃ ಕೆ. ಅಣ್ಣಾಮಲೈ ಚುನಾವಣೆಯಲ್ಲಿ ಸೋಲು ಕಂಡರು. ಡಿಎಂಕೆ ಪಕ್ಷ ಎಂ. ಕೆ. ಸ್ಟಾಲಿನ್ ನೇತೃತ್ವದಲ್ಲಿ ಅಧಿಕಾರಕ್ಕೆ ಬಂದಿತು.
2026ರ ಚಿತ್ರಣ ಸಂಪೂರ್ಣ ಬದಲು: 2026ರ ತಮಿಳುನಾಡು ವಿಧಾನಸಭೆ ಚುನಾವಣೆ ಚಿತ್ರಣ ಸಂಪೂರ್ಣ ಬದಲಾಗುವ ನಿರೀಕ್ಷೆ ಇದೆ. ದಿ. ಜಯಲಲಿತಾ ನೇತೃತ್ವದ ಎಐಎಡಿಎಂಕೆ ಪಕ್ಷ ಬಿಜೆಪಿ ಜೊತೆ ಕೈ ಜೋಡಿಸುವ ಚಿಂತನೆಯಲ್ಲಿದೆ. ಆದ್ದರಿಂದ ಪಕ್ಷದ ಪ್ರಧಾನ ಕಾರ್ಯದರ್ಶಿ ಎಡಪ್ಪಾಡಿ ಕೆ. ಪಳನಿಸ್ವಾಮಿ ಅಮಿತ್ ಶಾ ಭೇಟಿಯಾಗಿದ್ದಾರೆ.
ಸದಾ ಕೇಂದ್ರದ ಜೊತೆ ಒಂದಿಲ್ಲೊಂದು ವಿಚಾರಕ್ಕೆ ಗುದ್ದಾಟ ನಡೆಸುವ ಎಂ. ಕೆ. ಸ್ಟಾಲಿನ್, ಡಿಎಂಕೆ ಪಕ್ಷವನ್ನು ಅಧಿಕಾರದಿಂದ ದೂರವಿಡಲು ಬಿಜೆಪಿ ಸಹ ಎಐಎಡಿಎಂಕೆ ಜೊತೆ ಕೈ ಜೋಡಿಸುವ ನಿರೀಕ್ಷೆ ಇದೆ. ಚಿತ್ರನಟ ವಿಜಯ್ ರಾಜಕೀಯಕ್ಕೆ ಪಾದಾರ್ಪಣೆ ಮಾಡಿದ್ದು, ಸಹ ರಾಜ್ಯದಲ್ಲಿ ಚರ್ಚೆಗೆ ಕಾರಣವಾಗಿದೆ.
ಕೆಲವು ದಿನಗಳ ಹಿಂದೆ ಬಿಜೆಪಿ-ಎಐಎಡಿಎಂಕೆ ಮೈತ್ರಿಯ ಕುರಿತು ಪ್ರಶ್ನಿಸಿದಾಗ ಎಡಪ್ಪಾಡಿ ಕೆ. ಪಳನಿಸ್ವಾಮಿ, "ಯಾವುದೇ ಸಾಧ್ಯತೆಯನ್ನು ತಳ್ಳಿ ಹಾಕುವಂತಿಲ್ಲ. ಆರು ತಿಂಗಳ ತನಕ ಕಾದು ನೋಡಿ" ಎಂದು ಹೇಳುವ ಮೂಲಕ ಕುತೂಹಲ ಮೂಡಿಸಿದ್ದರು.
ರಾಜಕೀಯ ಅಭಿಪ್ರಾಯಗಳು ಭಿನ್ನವಾದ ಕಾರಣ 2023ರಲ್ಲಿ ಬಿಜೆಪಿ-ಎಐಎಡಿಎಂಕೆ ಮೈತ್ರಿಯನ್ನು ಎಐಎಡಿಎಂಕೆ ಕಡಿದುಕೊಂಡಿತ್ತು. ಆದರೆ ಈಗ ವಿಧಾನಸಭೆ ಚುನಾವಣೆ ಬರುತ್ತಿದ್ದು, ಡಿಎಂಕೆಯನ್ನು ಏಕಾಂಗಿಯಾಗಿ ಎದುರಿಸುವುದು ಬಿಜೆಪಿ, ಎಐಎಡಿಎಂಕೆ ಇಬ್ಬರಿಗೂ ಕಷ್ಟವಾಗಿದೆ. ಆದ್ದರಿಂದ ಮೈತ್ರಿ ಮುಂದುವರೆಸುವ ಮಾತುಕತೆ ಪ್ರಾರಂಭವಾಗಿದೆ ಎಂದು ಅಂದಾಜಿಸಲಾಗಿದೆ.
ಮಾರ್ಚ್ ಮೊದಲ ವಾರದಲ್ಲಿ ಕೆ. ಅಣ್ಣಾಮಲೈ ರಾಜ್ಯದಲ್ಲಿ ತಮ್ಮ ಪಕ್ಷದ ಪ್ರಭಾವ ಹೆಚ್ಚುತ್ತಿರುವುದರಿಂದ 2026ರ ವಿಧಾನಸಭಾ ಚುನಾವಣೆಗೆ ಮುನ್ನ ಅದು ಬಹಳ ಬೇಡಿಕೆಯ ಮೈತ್ರಿಕೂಟವಾಗುತ್ತಿದೆ ಎಂದು ಹೇಳಿದ್ದರು. ಆದರೆ ಯಾವ-ಯಾವ ಪಕ್ಷ ಮೈತ್ರಿಕೂಟದಲ್ಲಿ ಇರಲಿವೆ?, ಎಐಎಡಿಎಂಕೆ ಪಕ್ಷ ಸೇರಲಿದೆಯೇ? ಎಂಬ ಕುರಿತು ಅವರು ಯಾವುದೇ ಖಚಿತ ಮಾಹಿತಿ ನೀಡಿರಲಿಲ್ಲ.
ತಮಿಳುನಾಡಿನಲ್ಲಿ ಕಾಂಗ್ರೆಸ್ ಎಂ. ಕೆ. ಸ್ಟಾಲಿನ್ ನೇತೃತ್ವದ ಡಿಎಂಕೆ ಪಕ್ಷದ ಜೊತೆ ಮೈತ್ರಿ ಮಾಡಿಕೊಂಡಿದೆ. 2021ರ ಚುನಾವಣೆಯಲ್ಲಿ ಪಕ್ಷ ರಾಜ್ಯದಲ್ಲಿ 18 ಸೀಟುಗಳನ್ನು ಗೆದ್ದಿತ್ತು. ಡಿಎಂಕೆ 133 ಸೀಟುಗಳನ್ನು ಪಡೆದು ಸರ್ಕಾರ ರಚನೆ ಮಾಡಿತ್ತು. ಎಐಎಡಿಎಂಕೆ 66 ಸೀಟುಗಳಲ್ಲಿ ಜಯಗಳಿಸಿತ್ತು.












Click it and Unblock the Notifications