AI: ಚೀನಾದ ರೋಬೋಟ್ ನಾಯಿ ವಿವಾದ: ಗಲ್ಗೋಟಿಯಾ ದಿಗ್ವಿಜಯ ಸಂಭ್ರಮವು: ರಾಜಾರಾಂ ತಲ್ಲೂರು ಬರಹ
ದೆಹಲಿಯ ಭರತ್ ಮಂಟಪದಲ್ಲಿ ಇಂಡಿಯಾ ಎಐ ಇಂಪ್ಯಾಕ್ಟ್ ಸಮ್ಮಿಟ್ 2026ರಲ್ಲಿ ಭಾರೀ ಸದ್ದು ಮಾಡಿದ್ದು ಚೀನಾದ ರೋಬೋಟ್ ನಾಯಿ ವಿಷಯ. ಗಲ್ಗೋಟಿಯಾ ದಿಗ್ವಿಜಯ ಸಂಭ್ರಮವು: ಹಿರಿಯ ಪತ್ರಕರ್ತರಾದ ರಾಜಾರಾಂ ತಲ್ಲೂರು ಅವರ ಬರಹ ಇಲ್ಲಿದೆ.
ಒಮ್ಮೊಮ್ಮೆ ಟ್ರೋಲ್ "ದಿಗ್ವಿಜಯ" ಸಂಭ್ರಮಗಳು ಭಯ ಹುಟ್ಟಿಸುತ್ತವೆ. ತನ್ನೆಲ್ಲ ಪ್ರಭುತ್ವ ಪರ ಮುಖಸ್ತುತಿ ನಿಲುವುಗಳ ಹೊರತಾಗಿಯೂ ಒಂದು ಶೈಕ್ಷಣಿಕ ಸಂಸ್ಥೆ ಆಗಿರುವ ಗಲ್ಗೋಟಿಯಾ ವಿಶ್ವವಿದ್ಯಾಲಯವನ್ನು ಕಳೆದ ಎರಡು ದಿನಗಳಿಂದ ಗಾಳಿಗೆ ಹಿಡಿಯಲಾಗುತ್ತಿದೆ. ಆ ಟ್ರೋಲಿಂಗ್ ಅಬ್ಬರದಲ್ಲಿ ಪ್ರಭುತ್ವ ಪರ-ವಿರುದ್ಧ ನಿಲುವುಗಳ ನಡುವೆ ವ್ಯತ್ಯಾಸವೇ ಇಲ್ಲದ ಸ್ಥಿತಿ ಉಂಟಾಗಿದೆ.

JNU ನಂತಹ ದೇಶದ ಪ್ರಮುಖ ಚಿಂತನ ಕುಲುಮೆಯ ಬೆಂಕಿ ಆರಿಸಿದ ಪ್ರಭುತ್ವಪರ ಶಕ್ತಿಗಳನ್ನು ಗಾಳಿಗೆ ಹಿಡಿಯುವ ಅವಕಾಶ ಸಿಕ್ಕಾಗ ಅದನ್ನು ಭರಪೂರ ಬಳಸಿಕೊಳ್ಳುವ ನೆಪದಲ್ಲಿ, ಪ್ರಭುತ್ವ ಪರ ಟ್ರೋಲ್‌ಗಳಿಗಿಂತ ಹೆಚ್ಚು ಅಬ್ಬರದಲ್ಲಿ, ಹೆಚ್ಚು ಕ್ರಿಯೇಟಿವ್ ಆಗಿ ಗಲ್ಗೋಟಿಯಾ ಟ್ರೋಲ್ ಆಗುತ್ತಿದೆ. ಈ ರೀತಿಯ ಬೆಳವಣಿಗೆ (ಸಾಂಸ್ಥಿಕ ವ್ಯವಸ್ಥೆಗಳನ್ನು ಅಳತೆ ಮೀರಿ ಹೀಗಳೆಯುವುದು) ಅಪಾಯಕಾರಿ. ಬೆಂಕಿ ಒಮ್ಮೆ ಒತ್ತಿ ಉರಿಯತೊಡಗಿದರೆ, ಅದಕ್ಕೆ ಕರುಣೆ ಇರುವುದಿಲ್ಲ.
AI ಸಮಿಟ್‌ನಲ್ಲಿ ರೊಬೊ "ಡೆವಲಪ್" ಮಾಡಿರುವುದಾಗಿ ಅಲ್ಲಿನ ಉಪನ್ಯಾಸಕಿ ನೀಡಿದ ಹೇಳಿಕೆ ತೀರಾ ತಪ್ಪೆಂದು ನನಗನ್ನಿಸುತ್ತಿಲ್ಲ. ಉದಾಹರಣೆಗೆ, ಒಂದು ವೆಬ್‌ಸೈಟ್ ಡೆವಲಪ್ ಮಾಡುವುದು ಎಂದರೆ, ಅದರ ಬ್ಯಾಕ್‌ಎಂಡ್ ಕೋಡಿಂಗ್ ಬರೆಯುವ ಆಪ್ಲಿಕೇಷನ್ ಸಂಶೋಧನೆಯಿಂದ ಆರಂಭಿಸಿ ಎಲ್ಲವನ್ನೂ "ಅ"ಕಾರದಿಂದ ಸಿದ್ಧಪಡಿಸಲಾಗಿದೆ ಎಂದರ್ಥವಲ್ಲ. ಒಂದು ಟೆಂಪ್ಲೇಟ್ ಎತ್ತಿಕೊಂಡು, ಆದರಲ್ಲಿ ನಮ್ಮ ಕಂಟೆಂಟ್ ಕೂರಿಸುವುದೂ ಡೆವಲಪ್‌ಮೆಂಟೇ. ವಿವಿ ಪ್ರತಿನಿಧಿ ಹೇಳಿದ್ದನ್ನು ನಮ್ಮ ಮಾಧ್ಯಮ "ಬುದ್ಧಿಮತ್ತೆ" ಸ್ವೀಕರಿಸಿದ ರೀತಿ ಮತ್ತು ಕ್ಯಾಮೆರಾ ಕಂಡ ಉತ್ಸಾಹದಲ್ಲಿ ವಿವಿಯ ಪ್ರತಿನಿಧಿ ಉಪನ್ಯಾಸಕಿ ನೀಡಿದ ಅತ್ಯುತ್ಸಾಹದ ಹೇಳಿಕೆಗಳ ನಡುವಿನ ಗ್ಯಾಪೇ ನಿನ್ನೆಯಿಂದ ಎದ್ದಿರುವ ವಿವಾದ.
ಅದೂ ಒಂದು ಅಂತಾರಾಷ್ಟ್ರೀಯ ಸಮಿಟ್ ಹೊತ್ತಿಗೇ ಆಗಿರುವುದರಿಂದ ಮೀಡಿಯಾ ಕೂಡ ತಬ್ಬಿಬ್ಬಾದಂತಿದೆ ಮತ್ತು ತನ್ನ ಮೇಲಿನ ಅಪವಾದ ತಪ್ಪಿಸಿಕೊಳ್ಳಲು ವಿವಿ ಪ್ರತಿನಿಧಿಯ ಮೇಲೆ ಗೂಬೆ ಕೂರಿಸಲು ಹೊರಟಂತಿದೆ. ಒಂದು ವೇಳೆ ಬೇರೆಯವರ ಸಂಶೋಧನೆ ತಮ್ಮದೆಂದು ವಿವಿ ನಿಜಕ್ಕೂ ಹೇಳಿಕೊಂಡಿದ್ದರೆ, ಚೀನಾದ (ರೊಬೊ ನಾಯಿ), ಕೊರಿಯಾದ (ಡ್ರೋನ್) ಸಂಶೋಧಕರು ಈ ಹೊತ್ತಿಗೆ ವಿವಿ ವಿರುದ್ಧ ಬೌದ್ಧಿಕ ಹಕ್ಕುಗಳ ಪ್ರಕರಣ ದಾಖಲಿಸಿರುತ್ತಿದ್ದರು. ಶೋಕೇಸ್‌ಗೆ ಪ್ರದರ್ಶಕರನ್ನು ಆಯ್ಕೆ ಮಾಡುವಾಗ ಸರ್ಕಾರದ ಕಡೆಯಿಂದ ಎಚ್ಚರ ಇರುತ್ತಿದ್ದರೆ ಈ ರೀತಿಯ ಗದ್ದಲ ಇರುತ್ತಿರಲಿಲ್ಲ ಎಂಬುದೂ ಸತ್ಯ. ಈಗ ಅವರನ್ನು ಪ್ರದರ್ಶನಾಂಗಣದಿಂದ ಹೊರದಬ್ಬಲಾಗಿದೆ ಎಂಬ ಸುದ್ದಿ ಕೂಡ ಇದೆ.
ಅಂತಿಮವಾಗಿ ಈ ವಿದ್ಯಾರ್ಥಿ ಸಂಶೋಧನೆಗೆ ದುಡಿದ ಎಳೆಯ ವಿದ್ಯಾರ್ಥಿ ತಂಡ, ಉತ್ಸಾಹಿ ಶಿಕ್ಷಕ ತಂಡಗಳಿಗೆ ಈ ಗಾತ್ರದ ವಿವಾದ ತಂದುಕೊಡಲಿರುವ ಆಘಾತ, ಅದರ ಫಲಶ್ರುತಿಗಳನ್ನು ಊಹಿಸಿದರೆ ಆತಂಕ ಆಗುತ್ತದೆ. ಇದೆಲ್ಲ ನಿಜಕ್ಕೂ ಅನಪೇಕ್ಷಿತ. ಈ ವಿವಾದದ ಪೀಕ್ ಎಂದರೆ, ಅದೇ ವಿವಿಯ ಸಂಶೋಧಕರು ಕೋವಿಡ್ ಕಾಲದಲ್ಲಿ ಕೊರೊನಾ ವೈರಸ್‌ಗಳನ್ನು ಶಬ್ದತರಂಗಗಳಿಂದ ಕೊಲ್ಲುವ ಸಾಧ್ಯತೆಯ ಬಗ್ಗೆ ಮಂಡಿಸಿದ್ದ ಹೈಪಾಥೆಸಿಸ್ ಒಂದು ಕೂಡ ಸಂಶೋಧನೆ ಎಂದು ಟ್ರೋಲ್‌ಗೆ ಒಳಗಾಗುತ್ತಿದೆ.
ನಿಜಕ್ಕೆಂದರೆ ಕೋವಿಡ್ ಕಾಲದ ಇಂತಹ ಸುಮಾರು 650 ಸಂಶೋಧನೆಗಳನ್ನು ಜಗತ್ತಿನಾದ್ಯಂತ ಹಿಂಪಡೆಯಲಾಗಿದೆ. (ವಿವರಗಳಿಗೆ : https://retractionwatch.com/retracted-coronavirus-covid.../) ಪ್ರಭುತ್ವವನ್ನು ಎಲ್ಲಿ ಪ್ರಶ್ನಿಸಬೇಕೋ ಅದನ್ನು ಬಿಟ್ಟು, ಸುಲಭ ಹಾದಿಗಳಲ್ಲಿ ಕೇವಲ ಟ್ರೋಲ್ ಮಾಡಿ ಮುಗಿಸುವುದು ಸುಲಭ ಪಲಾಯನದ ಹಾದಿ ಎಂದೇ ನನಗೆ ಅನ್ನಿಸುತ್ತದೆ.













Click it and Unblock the Notifications