ಹರ್ಯಾಣದಲ್ಲಿ ಉದ್ಘಾಟನೆಯಾಯ್ತು 'ಟ್ರಂಪ್ ವಿಲೇಜ್' !
ಹರ್ಯಾಣದ ಹಳ್ಳಿಯೊಂದರ ಹೆಸರನ್ನು ಟ್ರಂಪ್ ವಿಲೇಜ್ ಎಂದು ಬದಲಿಸಲಾಗಿದೆ. ಇದೇ ಮಾಸಾಂತ್ಯಕ್ಕೆ ಟ್ರಂಪ್, ಮೋದಿ ಭೇಟಿಯಾಗುತ್ತಿದ್ದಾರೆ. ಇದು ಈ ಇಬ್ಬರು ನಾಯಕರ ಮೊದಲ ಭೇಟಿಯಾಗಿದೆ. ಈ ಹಿನ್ನೆಲೆಯಲ್ಲಿ, ಹಳ್ಳಿಯ ಹೆಸರನ್ನು ಬದಲಾಯಿಸಲಾಗಿದೆಯಂತೆ.
ಹರ್ಯಾಣ, ಜೂನ್ 23: ಹರ್ಯಾಣದ ಹಳ್ಳಿಯೊಂದರ ಹೆಸರನ್ನು ಟ್ರಂಪ್ ವಿಲೇಜ್ ಎಂದು ಬದಲಾಯಿಸಲಾಗಿದೆ. ಈ ಗಾಮದ ನಿವಾಸಿಗಳೇ ತಮ್ಮ ಹಳ್ಳಿಯ ಹೆಸರನ್ನು ಟ್ರಂಪ್ ವಿಲೇಜ್ ಎಂದು ಬದಲಾಯಿಸಿ ಖುಷಿಪಟ್ಟಿದ್ದಾರೆ.
ಶುಕ್ರವಾರ (ಜೂನ್ 23) ಬೆಳಗ್ಗೆ ಈ ಹಳ್ಳಿಗೆ ಹೊಸ ನಾಮಕರಣವಾಗಿದೆ. ಹರ್ಯಾಣದ ಮೇವಾಟ್ ಜಿಲ್ಲೆಯ ನುಹ್ ಹೋಬಳಿಯ ಸುಪರ್ದಿಯಲ್ಲಿ ಬರುವ ಈ ಹಳ್ಳಿಯ ಪ್ರವೇಶ ದ್ವಾರದಲ್ಲಿ ಶುಕ್ರವಾರ ಬೆಳಗ್ಗೆಯೇ ಟ್ರಂಪ್ ಭಾವಚಿತ್ರವುಳ್ಳ ದೊಡ್ಡ ಬಿಲ್ ಬೋರ್ಡ್ ಅನಾವರಣಗೊಳಿಸಲಾಗಿದ್ದು, ಅದರಲ್ಲಿ 'Welcome to Trump Village' ಎಂದು ದೊಡ್ಡದಾಗಿ ಇಂಗ್ಲೀಷ್ ಹಾಗೂ ಹಿಂದಿಯಲ್ಲಿ ಬರೆಯಲಾಗಿದೆ.
ಅಷ್ಟೇ ಅಲ್ಲ, ಈ ಹಳ್ಳಿಯ ಚಿಕ್ಕ ಮಕ್ಕಳೂ ಕೂಡ ಹಳ್ಳಿ ತುಂಬೆಲ್ಲಾ ಕೆಲವಾರು ಕರಪತ್ರಗಳನ್ನು ಹಂಚಿಕೊಂಡು ಓಡಾಡುತ್ತಿದ್ದಾರೆ. ಗ್ರಾಮದ ಬಳಿಯಿಂದ ಸಾಗುವವರಿಗೆ ಈ ಕರಪತ್ರಗಳನ್ನು ಹಂಚಲಾಗುತ್ತಿದೆ.
ಇಷ್ಟು ಓದಿದ ಮೇಲೆ, ಎಲ್ಲರಿಗೂ ಅಚ್ಚರಿಯಾಗಬಹುದು. ಇದ್ದಕ್ಕಿದ್ದಂತೆ ಈ ಹಳ್ಳಿಯ ಹೆಸರು ಬದಲಾಗಿದ್ದಾದರೂ ಯಾಕೆ? ಈ ಹಳ್ಳಿಯ ಮೊದಲ ಹೆಸರೇನು? ಎಂಬಿತ್ಯಾದಿ ಸ್ವಾರಸ್ಯಕರ ವಿಚಾರಗಳು ಇಲ್ಲಿ ನಿಮಗಾಗಿ.

ನುಹ್ ಹೋಬಳಿಯ ವ್ಯಾಪ್ತಿಯಲ್ಲಿ ಬರುತ್ತೆ ಈ ಹಳ್ಳಿ
ಈ ಹಳ್ಳಿಯ ಮೂಲ ಹೆಸರು ಮರೋರಾ. ಮೊದಲೇ ಹೇಳಿದಂತೆ, ಹರ್ಯಾಣದ ಮೇವಾತ್ ಜಿಲ್ಲೆಯ ನುಹ್ ಎಂಬ ಹೋಬಳಿಯ ವ್ಯಾಪ್ತಿಯಲ್ಲಿ ಈ ಹಳ್ಳಿ ಬರುತ್ತದೆ.

ಪುಷ್ಪೋದ್ಯಮಕ್ಕೆ ಈ ಹಳ್ಳಿಯಿಂದ ದೊಡ್ಡ ದೇಣಿಗೆ
ಈ ಹಳ್ಳಿಯು ಚೆಂಡು ಹೂವು ವ್ಯವಸಾಯಕ್ಕೆ ಹೆಚ್ಚು ಫೇಮಸ್ಸು. ಹರ್ಯಾಣದ ಹೂ ಹಳ್ಳಿಗಳಲ್ಲಿ ಇದೂ ಒಂದು ಪ್ರಮುಖ ಹಳ್ಳಿ. ಅಲ್ಲಿನ ಪುಷ್ಪೋದ್ಯಮಕ್ಕೆ ಈ ಹಳ್ಳಿಯ ದೇಣಿಗೆ ಅಪಾರ.

ಇದೇ ಮಾಸಾಂತ್ಯಕ್ಕಾಗುವ ಭೇಟಿಯೇ ಹೆಸರು ಬದಲಿಸಲು ಕಾರಣ
ಅಂದಹಾಗೆ, ಈ ಹಳ್ಳಿಯ ಹೆಸರು ಬದಲಿಸಲು ಇರುವ ಮುಖ್ಯ ಕಾರಣವೇನೆಂದರೆ, ಇದೇ ಮಾಸಾಂತ್ಯಕ್ಕೆ ಭಾರತದ ಪ್ರಧಾನಿ ನರೇಂದ್ರ ಮೋದಿ, ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನು ಭೇಟಿ ಮಾಡುತ್ತಿರುವುದು.

ಟ್ರಂಪ್-ಮೋದಿ ಬೆಂಬಲಿಸಲು ಹೆಸರು ಬದಲು
ಕಳೆದೊಂದು ವರ್ಷದಿಂದ ಈ ಹಳ್ಳಿಯಲ್ಲಿ ಬಯಲು ಶೌಚ ನಿರ್ಮೂಲನೆಗಾಗಿ ಸುಲಭ್ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಅದರ ಫಲವಾಗಿ ಈ ಹಳ್ಳಿಯಲ್ಲಿ ಎಲ್ಲಾ ಮನೆಗಳಲ್ಲೂ ಶೌಚಾಲಯ, ಒಳಚರಂಡಿ ವ್ಯವಸ್ಥೆಗಳು ಬಂದಿವೆ. ಇದರಿಂದ ಇಲ್ಲಿನ ಜನರು ಪ್ರಧಾನಿ ಮೋದಿಯ ಅಭಿಮಾನಿಗಳಾಗಿದ್ದಾರೆ. ಇದೇ ವೇಳೆ, ಮೋದಿ ಟ್ರಂಪ್ ಅವರನ್ನು ಭೇಟಿ ಮಾಡಲು ತೆರಳುತ್ತಿರುವ ಹಿನ್ನೆಲೆಯಲ್ಲಿ ಪುಳಕಿತರಾಗಿರುವ ಇಲ್ಲಿನ ಜನ ಇದನ್ನು ಟ್ರಂಪ್ ವಿಲೇಜ್ ಎಂದು ನಾಮಕರಣ ಮಾಡಿದ್ದಾರೆ. ಇದೇ ಹೆಸರನ್ನೇ ಅಧಿಕೃತಗೊಳಿಸಬೇಕೆಂದು ಸ್ಥಳೀಯ ಆಡಳಿತಕ್ಕೆ ಇಲ್ಲಿನ ಜನರು ಅರ್ಜಿಯನ್ನೂ ಸಲ್ಲಿಸಿದ್ದಾರೆ.

ಅಮೆರಿಕ ಮೇಲೆ ಇಂಪ್ರೆಷನ್ ಬೀರೋಕೆ ಸರ್ಕಸ್?
ಇಲ್ಲೊಂದು ಪ್ರಶ್ನೆ ಉದ್ಭವಿಸಬಹುದು. ಟ್ರಂಪ್ ವಿಲೇಜ್ ಏಕೆ, ಮೋದಿ ವಿಲೇಜ್ ಏಕಾಗಲಿಲ್ಲ ಎಂದು ಕೇಳಬಹುದು. ಆದರೆ, ವಿಚಾರ ಇದಲ್ಲ. ಮೋದಿಯವರು ಟ್ರಂಪ್ ಅವರನ್ನು ಇದೇ ಮೊದಲ ಬಾರಿಗೆ ಭೇಟಿ ಮಾಡುವ ಹಿನ್ನೆಲೆಯಲ್ಲಿ ಭಾರತದಲ್ಲಿ ಟ್ರಂಪ್ ಆಧಾರಕರಿದ್ದಾರೆಂದು ಅಮೆರಿಕಕ್ಕೆ ಮನವರಿಕೆ ಮಾಡಿಕೊಡಲು ಕೆಲವಾರು ಮೋದಿ ಭಕ್ತ ಅಧಿಕಾರಿಗಳು ಈ ಕೆಲಸ ಮಾಡಿದ್ದಾರೆಂದು ಕೆಲವರು ಆಡಿಕೊಳ್ಳುತ್ತಿದ್ದಾರೆ.












Click it and Unblock the Notifications