ಅಗ್ನಿವೀರರ ನೇಮಕಾತಿ: ವಯೋಮಿತಿ 23 ವರ್ಷಕ್ಕೆ ಹೆಚ್ಚಳ

ನವದೆಹಲಿ, ಜೂನ್ 17: ಭಾರತೀಯ ಸೇನೆಗೆ ನವತರುಣರ ನೇಮಕ ಮಾಡಿ ತಾರುಣ್ಯದ ಹುರುಪು ತುಂಬುವ ಪ್ರಯತ್ನವಾಗಿ ಕೇಂದ್ರ ಸರಕಾರ ಜಾರಿಗೆ ತರುತ್ತಿರುವ 'ಅಗ್ನಿಪಥ್' ಯೋಜನೆ ವಿರುದ್ಧ ದೇಶದ ಕೆಲವೆಡೆ ವಿರೋಧ ವ್ಯಕ್ತವಾಗಿ ಪ್ರತಿಭಟನೆ ನಡೆಯುತ್ತಿದೆ. ಇದೇ ಹೊತ್ತಿನಲ್ಲಿ ಕೇಂದ್ರ ಸರಕಾರ ಅಗ್ನಿಪಥ್ ಯೋಜನೆಯಡಿ ನೇಮಕಾತಿಗೆ ಇರುವ ವಯೋಮಿತಿಯನ್ನು ಹೆಚ್ಚಿಸಿದೆ.

ಅಗ್ನಿವೀರರ ನೇಮಕಾತಿಗೆ ಇರುವ ಗರಿಷ್ಠ ವಯೋಮಿತಿಯನ್ನು (Upper Age Limit) 21 ವರ್ಷದಿಂದ 23 ವರ್ಷಕ್ಕೆ ಹೆಚ್ಚಿಸಿ ನಿನ್ನೆ ಗುರುವಾರ ಕೇಂದ್ರ ಸರಕಾರ ಘೋಷಣೆ ಮಾಡಿದೆ. ಆದರೆ, ಇದು ಕೇವಲ ಒಂದು ವರ್ಷಕ್ಕೆ ಮಾತ್ರ ನೀಡಲಾಗಿರುವ ವಿನಾಯಿತಿ ಆಗಿದೆ. ಅಂದರೆ, 2022ರಲ್ಲಿ ಮಾತ್ರ ವಯೋಮಿತಿ 23 ವರ್ಷಕ್ಕೆ ಇರುತ್ತದೆ. ಮುಂದಿನ ವರ್ಷದಿಂದ ಅಗ್ನಿಪಥ್ ಯೋಜನೆಯಲ್ಲಿ ಯುವ ಸೈನಿಕರ ನೇಮಕಾತಿಗೆ 21 ವರ್ಷದವ ವಯೋಮಿತಿಯ ನಿಯಮವೇ ಮುಂದುವರಿಯಲಿದೆ ಎಂದು ಕೇಂದ್ರ ರಕ್ಷಣಾ ಸಚಿವಾಲಯ ಸ್ಪಷ್ಟಪಡಿಸಿದೆ.

ಇದೇ ವೇಳೆ, ಅಗ್ನಿಪಥ್ ಯೋಜನೆಗೆ ಪರ ವಿರೋಧಗಳು ಸಮಾನವಾಗಿ ನಡೆದಿವೆ. ಬಿಜೆಪಿಯ ಕೆಲವರೂ ಈ ಯೋಜನೆಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಹಾಗೆಯೇ, ವಿರೋಧ ಪಕ್ಷಗಳ ಕೆಲ ನಾಯಕರು ಈ ಯೋಜನೆಯನ್ನು ಸ್ವಾಗತಿಸಿದ್ದಾರೆ. ಎರಡು ದಿನಗಳಿಂದ ದೇಶದ ವಿವಿಧೆಡೆ ಪ್ರತಿಭಟನೆಗಳೂ ನಡೆಯುತ್ತಿವೆ.

ಯಾಕೆ ವಯೋಮಿತಿ ಹೆಚ್ಚಳ?

ಯಾಕೆ ವಯೋಮಿತಿ ಹೆಚ್ಚಳ?

ಕಳೆದ ಎರಡು ವರ್ಷಗಳಿಂದ ಸೇನೆಗೆ ಯಾವುದೇ ನೇಮಕಾತಿ ನಡೆದಿಲ್ಲ. ತುರ್ತಾಗಿ ಸೈನಿಕರನ್ನು ನೇಮಿಸಿಕೊಳ್ಳುವ ಅಗತ್ಯವಿದೆ. ಈ ಸಂದರ್ಭದಲ್ಲಿ 21 ವರ್ಷಕ್ಕೆ ವಯೋಮಿತಿ ನಿಗದಿಪಡಿಸಿದರೆ ಮೊದಲ ವರ್ಷದಲ್ಲಿ ನಿರೀಕ್ಷಿತ ಸಂಖ್ಯೆಯಲ್ಲಿ ಅಭ್ಯರ್ಥಿಗಳು ಸಿಗದೇ ಹೋಗಬಹುದು ಎಂಬ ಕಾರಣಕ್ಕೆ 23 ವರ್ಷಕ್ಕೆ ವಯೋಮಿತಿ ಹೆಚ್ಚಿಸಲಾಗಿರುವುದು ತಿಳಿದುಬಂದಿದೆ. ಇದು ಈ ವರ್ಷಕ್ಕೆ ಮಾತ್ರ ವಯೋಮಿತಿಯಲ್ಲಿ ನೀಡಲಾಗಿರುವ ವಿನಾಯಿತಿ ಆಗಿದೆ.

ಅಗ್ನಿಪಥ್ ಯೋಜನೆ ಏನು?

ಅಗ್ನಿಪಥ್ ಯೋಜನೆ ಏನು?

ಪಾಕಿಸ್ತಾನ ಮತ್ತು ಚೀನಾ ಗಡಿಭಾಗದಲ್ಲಿ ಸದಾ ಜಾಗೃತವಾಗಿರಬೇಕಾದ ಹಾಗು ಯುದ್ಧಸನ್ನದ್ಧವಾಗಿರಬೇಕಾದ ಪರಿಸ್ಥಿತಿ ಇರುವ ಹಿನ್ನೆಲೆಯಲ್ಲಿ ಭಾರತೀಯ ಸೇನೆಗೆ ಫ್ರಂಟ್ ಲೈನ್‌ನಲ್ಲಿ ನಿಯೋಜನೆಗೊಳ್ಳಲು ಸುದೃಢವಾಗಿರುವ ಮತ್ತು ಪೂರ್ಣ ಫಿಟ್ ಇರುವ ನವತರುಣ ಯೋಧರ ಅಗತ್ಯತೆ ಹೆಚ್ಚು ಇದೆ. ಈ ಕಾರಣಕ್ಕೆ ಅಗ್ನಿಪಥ್ ಯೋಜನೆಯಲ್ಲಿ 17.5 ವರ್ಷದಿಂದ 21 ವರ್ಷ ವಯೋಮಾನದ ಯುವಕ ಮತ್ತು ಯುವತಿಯರನ್ನು ನೇಮಕಾತಿ ಮಾಡಲಾಗುತ್ತಿದೆ.

ಈ ಯೋಜನೆಯಲ್ಲಿ ನೇಮಕವಾಗುವ ಯೋಧರನ್ನು ಅಗ್ನಿವೀರರು ಎಂದು ಕರೆಯಲಾಗುತ್ತದೆ. ಇವರಲ್ಲಿ ಬಹುತೇಕರನ್ನು ಅಲ್ಪಾವಧಿಯವರೆಗೆ ಸೇನೆಯಲ್ಲಿ ಇರಿಸಿಕೊಳ್ಳಲಾಗುತ್ತದೆ. ಅಂದರೆ ಗುತ್ತಿಗೆ ಅವಧಿ 4 ವರ್ಷದವರೆಗೆ ಮಾತ್ರ ಇರಲಿದೆ. ಅಗ್ನಿವೀರರ ಪೈಕಿ ಆಯ್ದ ಶೇ. 25 ಮಂದಿಯನ್ನು 13 ವರ್ಷಗಳವರೆಗೆ ಸೇನಾ ಕಾರ್ಯಗಳಲ್ಲಿ ನಿಯೋಜಿಸಲಾಗುತ್ತದೆ. ಕೇವಲ ಯುವಕರಷ್ಟೇ ಅಲ್ಲ ಯುವತಿಯರನ್ನೂ ಅಗ್ನಿವೀರರಾಗಿ ನೇಮಕಾತಿ ಮಾಡಿಕೊಳ್ಳಲಾಗುತ್ತದೆ.

ಕಿರು ಅವಧಿ ನೇಮಕಾತಿಯಿಂದ ಲಾಭ ಏನು?

ಕಿರು ಅವಧಿ ನೇಮಕಾತಿಯಿಂದ ಲಾಭ ಏನು?

ಭಾರತೀಯ ಸೇನೆಗೆ ಅದರ ಯೋಧರ ಪಿಂಚಣಿ ಇತ್ಯಾದಿ ವೆಚ್ಚ ಬಹಳ ಭಾರವಾಗಿದೆ. ಈ ಯೋಜನೆಯಿಂದ ಆ ಭಾರ ತಗ್ಗುವ ನಿರೀಕ್ಷೆ ಇದೆ. ಗುತ್ತಿಗೆ ಆಧಾರದ ಮೇಲೆ ನೇಮಕಾತಿ ನಡೆಯುವುದರಿಂದ ಪಿಂಚಣಿ, ಭತ್ಯೆ ಇತ್ಯಾದಿಯ ಹೊರೆ ಹೆಚ್ಚು ಇರುವುದಿಲ್ಲ. ಇದರಲ್ಲಿ ಉಳಿಸಿದ ಹಣವನ್ನು ಮಿಲಿಟರಿಯ ಆಧುನೀಕರಣಕ್ಕೆ ಬಳಸಿಕೊಳ್ಳಬಹುದು ಎಂಬುದೂ ಸರಕಾರದ ಒಂದು ಇರಾದೆ.

ಹಾಗೆಯೇ, ಸೇನೆಗೆ ನವತರುಣರ ನೇಮಕದಿಂದ ಮೂರು ಸೇನೆಗಳಿಗೂ ತಾರುಣ್ಯದ ಸ್ಪರ್ಷ ಸಿಗಲಿದೆ ಎಂಬುದು ಇನ್ನೊಂದು ಪ್ರಮುಖ ಉದ್ದೇಶ. ಸದ್ಯ ಭಾರತದ ಮಿಲಿಟರಿಯಲ್ಲಿರುವ ಸೈನಿಕರ ಸರಾಸರಿ ವಯಸ್ಸು 32 ವರ್ಷ ಇದೆ. ಅಗ್ನಿಪಥ್ ಯೋಜನೆ ಬಂದರೆ ಈ ಸರಾಸರಿ ವಯಸ್ಸು 26 ವರ್ಷಕ್ಕೆ ಇಳಿಯುವ ನಿರೀಕ್ಷೆ ಇದೆ.

ಈ ವರ್ಷ ಸುಮಾರು 46 ಸಾವಿರ ಅಗ್ನಿವೀರರನ್ನು ನಾಲ್ಕು ವರ್ಷ ಅವಧಿಯವರೆಗೆ ಗುತ್ತಿಗೆ ಆಧಾರದಲ್ಲಿ ನೇಮಕಾತಿ ಮಾಡಿಕೊಳ್ಳಲಾಗುತ್ತದೆ. ಅದಾದ ಬಳಿಕ ಶೇ. 25ರಷ್ಟು ಅಗ್ನಿವೀರರನ್ನು 13 ವರ್ಷಗಳವರೆಗೆ ಮುಂದುವರಿಸಲಾಗುತ್ತದೆ.

ನಾಲ್ಕು ವರ್ಷಗಳ ನಂತರ ಅಗ್ನಿವೀರರ ಕಥೆ?

ನಾಲ್ಕು ವರ್ಷಗಳ ನಂತರ ಅಗ್ನಿವೀರರ ಕಥೆ?

ಗುತ್ತಿಗೆ ಅವಧಿ ಮುಗಿದ ಬಳಿಕ ಅಗ್ನಿವೀರರನ್ನು ಸೇವೆಯಿಂದ ವಿಯುಕ್ತಿಗೊಳಿಸಲಾಗುತ್ತದೆ. ಆದರೆ, ಪೊಲೀಸ್ ಸೇರಿದಂತೆ ವಿವಿಧ ಸರಕಾರಿ ವಿಭಾಗಗಳಲ್ಲಿ ನೇಮಕಾತಿಗಳಲ್ಲಿ ಅಗ್ನಿವೀರರಿಗೆ ಆದ್ಯತೆ ನೀಡಲಾತ್ತದೆ. ವಿದ್ಯಾಭ್ಯಾಸ ಮುಂದುವರಿಸಲು ಇಚ್ಛಿಸುವ ಅಗ್ನಿವೀರರಿಗೆ ಬ್ರಿಡ್ಜ್ ಕೋರ್ಸ್ ಇತ್ಯಾದಿ ವ್ಯವಸ್ಥೆ ಮಾಡಲಾಗುತ್ತದೆ.

ಯಾಕೆ ವಿರೋಧ?

ಯಾಕೆ ವಿರೋಧ?

ಮೂರು ಸೇನೆಗಳಿಗೆ ಅಗ್ನಿವೀರರನ್ನು ನೇಮಕಾತಿ ಮಾಡುವ ಅಗ್ನಿಪಥ್ ಯೋಜನೆಗೆ ಬಹಳಷ್ಟು ವಿರೋಧ ವ್ಯಕ್ತವಾಗಿದೆ. ಜೂನ್ 15 (ಬುಧವಾರ) ರಿಂದಲೂ ವಿವಿಧೆಡೆ ಪ್ರತಿಭಟನೆಗಳು ನಡೆಯುತ್ತಿವೆ. ನಿನ್ನೆ ಗುರುವಾರ ಸಂಜೆ ಹಲವು ಕಡೆ ಪ್ರತಿಭಟನೆಗಳು ಹಿಂಸಾರೂಪಕ್ಕೆ ತಿರುಗಿದ ಘಟನೆಗಳೂ ವರದಿಯಾಗಿವೆ.

ಪ್ರತಿಭಟನೆ ನಡೆಸುತ್ತಿರುವವರಲ್ಲಿ ಬಹುತೇಕರು ಸೇನಾ ನೇಮಕಾತಿಯ ಆಕಾಂಕ್ಷಿಗಳಾಗಿರುವವರು. ಸಾಂಪ್ರದಾಯಿಕ ನೇಮಕಾತಿ ಪ್ರಕ್ರಿಯೆ ಮರಳಬೇಕು, ನೇಮಕಾತಿ ಆದವರಿಗೆ ಪಿಂಚಣಿ ಇತ್ಯಾದಿ ಸೌಲಭ್ಯಗಳು ಸಿಗಬೇಕು ಎಂಬಿತ್ಯಾದಿ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಈ ಪ್ರತಿಭಟನೆಗಳು ನಡೆಯುತ್ತಿವೆ.

(ಒನ್ಇಂಡಿಯಾ ಸುದ್ದಿ)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+