ಬೆಲೆ ಏರಿಕೆಯಾದರೂ ಬೆಂಕಿ ಪೊಟ್ಟಣದಲ್ಲಿ 36ರ ಬದಲು 50 ಕಡ್ಡಿಗಳು
ಮದುರೈ, ಅಕ್ಟೋಬರ್ 25: ದೇಶದಲ್ಲಿ 14 ವರ್ಷಗಳ ನಂತರ ಬೆಂಕಿ ಪೊಟ್ಟಣದ ಬೆಲೆ ಏರಿಕೆ ಆಗಿರುವ ಬೆನ್ನಲ್ಲೆ ಇದೀಗ ಪೊಟ್ಟಣದಲ್ಲಿ ಇರುವ ಕಡ್ಡಿಗಳ ಸಂಖ್ಯೆಯಲ್ಲೂ ಏರಿಕೆ ಮಾಡಲಾಗಿದೆ.
ಡಿಸೆಂಬರ್ 1ರಿಂದ ಬೆಂಕಿ ಪೊಟ್ಟಣದ ದರ 1 ರೂಪಾಯಿನಿಂದ 2 ರೂ.ಗೆ ಏರಿಕೆಯಾಗುತ್ತಿದ್ದು, ಬೆಲೆ ಹೆಚ್ಚಾದರೂ ಪೊಟ್ಟಣದಲ್ಲಿ ಬೆಂಕಿ ಕಡ್ಡಿಗಳು ಹೆಚ್ಚಿಗೆ ಸಿಗುತ್ತಿದೆ ಎಂದು ಬೆಂಕಿ ಪೊಟ್ಟಣ ಕಂಪನಿಗಳು ಸ್ಪಷ್ಟಪಡಿಸಿವೆ.
14 ವರ್ಷದ ನಂತರ ಬೆಂಕಿ ಪೊಟ್ಟಣ ಬೆಲೆ ಹೆಚ್ಚಿಸುತ್ತಿದ್ದು, 2 ರೂಪಾಯಿಯ ಪೊಟ್ಟಣದಲ್ಲಿ ಇನ್ಮುಂದೆ 36 ಕಡ್ಡಿಗಳ ಬದಲು 50 ಕಡ್ಡಿಗಳು ಇರಲಿದೆ ಎಂದು ತಿಳಿಸಿವೆ. ಬೆಂಕಿ ಪೊಟ್ಟಣ ತಯಾರಿಕೆಗೆ ಬಳಸುವ 14 ಕಚ್ಚಾವಸ್ತುಗಳು ಬೆಲೆ ಏರಿಕೆ ಸಮೇತ ವಿವರ ನೀಡಿರುವ ಕಂಪನಿಗಳು ತಮ್ಮ ನಿರ್ಧಾರ ಸಮರ್ಥಿಸಿಕೊಂಡಿವೆ.

ದೇಶದಲ್ಲಿ ಒಂದೆಡೆ ಪೆಟ್ರೋಲ್- ಡಿಸೇಲ್, ಅಡುಗೆ ಅನಿಲದಿಂದ ಹಿಡಿದು ಖ್ಯಾದತೈಲ ಹಾಗೂ ದಿನನಿತ್ಯದ ವಸ್ತುಗಳ ಬೆಲೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಲೇ ಇದೆ.
ಇದೇ ವೇಳೆ ನಮ್ಮ ದೈನಂದಿನ ಬಳಕೆಯಲ್ಲೂ ಉಪಯುಕ್ತವಾದ ಒಂದು ವಸ್ತುವಿನ ಬೆಲೆ ಮಾತ್ರ ಕಳೆದ 14 ವರ್ಷಗಳಿಂದ ಹೆಚ್ಚಾಗಿರಲಿಲ್ಲ. ಆದರೆ, ಇದೀಗ ಕಷ್ಟ ಕಾಲದಲ್ಲಿ ಅದೂ ಹೆಚ್ಚಾಗಲಿದೆ.
14 ವರ್ಷಗಳ ದೀರ್ಘಾವಧಿಯ ಬಳಿಕ ಬೆಂಕಿ ಪೊಟ್ಟಣದ ಬೆಲೆ ಏರಿಕೆಯಾಗಲಿದೆ. ಇಲ್ಲಿಯವರೆಗೂ ಬೆಂಕಿ ಪೊಟ್ಟಣದ ದರ 1 ರೂ. ಇತ್ತು. ಇದೀಗ 2 ರೂ.ಗೆ ಏರಿಕೆಯಾಗುತ್ತಿದೆ. ಈ ಹೊಸ ಬೆಲೆ ಡಿಸೆಂಬರ್ 1ರಿಂದ ಜಾರಿಯಾಗಲಿದೆ.
2007ರಲ್ಲಿ ಏರಿಕೆಯಾಗಿದ್ದ ಬೆಂಕಿ ಪೊಟ್ಟಣ ಬೆಲೆ
ಐದು ಪ್ರಮುಖ ಉದ್ಯೋಗ ಒಕ್ಕೂಟಗಳ ಪ್ರತಿನಿಧಿಗಳು ಸರ್ವಾನುಮತದಿಂದ ಬೆಂಕಿ ಪೊಟ್ಟಣದ ಬೆಲೆಯನ್ನು 1 ರೂ.ನಿಂದ 2 ರೂ.ಗೆ ಹೆಚ್ಚಿಸಲು ನಿರ್ಣಯವನ್ನು ಕೈಗೊಂಡಿವೆ. ಇದಕ್ಕೂ ಮೊದಲು 2007ರಲ್ಲಿ ಬೆಂಕಿ ಪೊಟ್ಟಣದ ಬೆಲೆಯನ್ನು ಪರಿಷ್ಕರಿಸಲಾಗಿತ್ತು.
ಆಗ ಬೆಂಕಿ ಪೊಟ್ಟಣದ ಬೆಲೆಯನ್ನು 50 ಪೈಸೆಯಿಂದ 1 ರೂ.ಗೆ ಹೆಚ್ಚಿಸಲಾಗಿತ್ತು. ಗುರುವಾರ ತಮಿಳುನಾಡಿನ ಶಿವಕಾಶಿಯಲ್ಲಿ ಮುಕ್ತಾಯಗೊಂಡ ಆಲ್ ಇಂಡಿಯಾ ಚೇಂಬರ್ ಆಫ್ ಮ್ಯಾಚಿಸ್ ಸಭೆಯಲ್ಲಿ ಈ ನಿರ್ಣಯ ಕೈಗೊಳ್ಳಲಾಗಿದೆ. ಈ ಸಂದರ್ಭದಲ್ಲಿ ಕಚ್ಚಾ ಸಾಮಗ್ರಿಗಳಲ್ಲಿ ಆಗುತ್ತಿರುವ ಬೆಲೆ ಏರಿಕೆಯೇ ಈಗ ಬೆಂಕಿ ಪೊಟ್ಟಣ ಬೆಲೆ ಏರಿಕೆಗೆ ಕಾರಣ ಎಂದು ಉದ್ಯಮ ಪ್ರತಿನಿಧಿಗಳು ಹೇಳಿದ್ದಾರೆ.
ಬೆಂಕಿ ಪೊಟ್ಟಣ ಬೆಲೆ ಏರಿಕೆಗೆ ಕಾರಣ
ಪೆಟ್ರೋಲ್, ಡಿಸೇಲ್, ಗ್ಯಾಸ್ ಬೆಲೆ ಗಗನಕ್ಕೇರಿದ ಬೆನ್ನಲ್ಲೇ, ದಿನನಿತ್ಯ ಬಳಕೆಯ ಸಾಮಗ್ರಿಗಳ ಬೆಲೆಯಲ್ಲೂ ಹೆಚ್ಚಳವಾಗುತ್ತಲೇ ಇದೆ. ಆದರೆ ಕಳೆದ 14 ವರ್ಷಗಳಿಂದ ಬೆಂಕಿ ಪೊಟ್ಟಣದ ಬೆಲೆ ಮಾತ್ರ ಕಿಂಚಿತ್ತೂ ಏರಿಕೆಯಾಗದೆ ಸ್ಥಿರವಾಗಿತ್ತು. ಕಳೆದ ಗುರುವಾರ ಶಿವಕಾಶಿಯಲ್ಲಿ ಮುಕ್ತಾಯಗೊಂಡ ಆಲ್ ಇಂಡಿಯಾ ಚೇಂಬರ್ ಆಫ್ ಮ್ಯಾಚೆಸ್ ಸಭೆಯಲ್ಲಿ ಬೆಂಕಿ ಪೊಟ್ಟಣ ಬೆಲೆ ಏರಿಕೆ ನಿರ್ಣಯ ಕೈಗೊಳ್ಳಲಾಗಿದೆ.
ಸಾಮಾನ್ಯವಾಗಿ ಬೆಂಕಿ ಕಡ್ಡಿಗಳನ್ನು ತಯಾರಿಸಲು 14 ಬಗೆಯ ಕಚ್ಚಾ ಸಾಮಗ್ರಿಗಳು ಬೇಕಾಗುತ್ತವೆ ಎಂದು ತಯಾರಕರು ತಿಳಿಸಿದ್ದಾರೆ. ಒಂದು ಕೆಜಿ ಕೆಂಪು ರಂಜಕ 425 ರೂ.ನಿಂದ 810 ರೂ.ಗೆ, ಮೇಣ 58 ರೂ.ನಿಂದ 80 ರೂ.ಗೆ, ಹೊರ ಬಾಕ್ಸ್ ಬೋರ್ಡ್ 36 ರೂ.ನಿಂದ 55 ರೂ.ಗೆ ಮತ್ತು ಒಳ ಪೆಟ್ಟಿಗೆ ಬೋರ್ಡ್ 32 ರೂ.ನಿಂದ 58 ರೂ.ಗೆ ಏರಿಕೆಯಾಗಿದೆ.
ಅಕ್ಟೋಬರ್ 10ರಿಂದ ಪೇಪರ್, ಸ್ಪ್ಲಿಂಟ್ಸ್, ಪೊಟ್ಯಾಸಿಯಮ್ ಕ್ಲೋರೇಟ್ ಮತ್ತು ಸಲ್ಫರ್ ಬೆಲೆಯೂ ಹೆಚ್ಚಾಗಿದೆ. ಡೀಸೆಲ್ ಬೆಲೆ ಏರಿಕೆಯಿಂದ ಉದ್ಯಮದ ಮೇಲೆ ಹೆಚ್ಚುವರಿ ಹೊರೆ ಬೀಳುತ್ತಿದೆ ಎನ್ನಲಾಗಿದೆ.
ಹೀಗಾಗಿ ಬೆಂಕಿ ಪೊಟ್ಟಣ ತಯಾರಕರು ಬೆಲೆಯೇರಿಕೆಯ ನಿರ್ಧಾರವನ್ನು ಅವಿರೋಧವಾಗಿ ಕೈಗೊಂಡಿದ್ದಾರೆ ಎಂದು ಮೂಲಗಳು ಹೇಳಿವೆ. ಸದ್ಯ 600 ಬೆಂಕಿ ಪೊಟ್ಟಣಗಳ ಒಂದು ಬಂಡಲ್ 270ರಿಂದ 300 ರೂಪಾಯಿಗೆ ಮಾರಾಟವಾಗುತ್ತಿದೆ. ಅದನ್ನು 430ರಿಂದ 480 ರೂಪಾಯಿಗೆ ಏರಿಸಲು ನಿರ್ಧರಿಸಲಾಗಿದೆ.












Click it and Unblock the Notifications