Abhijeet Dipke: ಗೆಳೆಯರ ತ್ಯಾಗಕ್ಕೆ ಮೆಚ್ಚುಗೆ; ದರೋಡೆಕೋರರಿಗೆ ಗೌರವ, ಹೋರಾಟಗಾರರಿಗೆ ಕಿರುಕುಳ ಎಂದ ಸಿಜೆಪಿ ಸಂಸ್ಥಾಪಕ!
Abhijeet Dipke: ದೇಶದಾದ್ಯಂತ ಈಚೆಗೆ ಕಾಕ್ರೋಚ್ ಜನತಾ ಪಾರ್ಟಿ ಮಾಡಿದ ಪ್ರತಿಭಟನೆಯು ಹಲವು ಕಾರಣಗಳಿಗೆ ಸುದ್ದಿಯಾಗಿದೆ. ಇದರಲ್ಲಿ ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ /ಎಸ್‌ಐಆರ್ ವಿರೋಧಿ ಅಭಿಯಾನ, ಭಾರತೀಯ ಚುನಾವಣಾ ಆಯೋಗದ ಮುಖ್ಯ ಆಯುಕ್ತ ಜ್ಞಾನೇಶ್ ಕುಮಾರ್ ಅವರು ರಾಜೀನಾಮೆ ಕೊಡಬೇಕು ಎಂದು ಆಗ್ರಹಿಸಿ ಸಿಜೆಪಿ ಮಾಡಿದ ಹೋರಾಟದ ನಂತರ, ದೆಹಲಿ ಪೊಲೀಸರು ಸಿಜೆಪಿಯ ಪ್ರಮುಖ ನಾಯಕರ ಮೇಲೆ ಸರಣಿ ಕೇಸ್ ದಾಖಲಿಸಿದ್ದಾರೆ. ಇದೀಗ ಈ ಹೋರಾಟಗಳ ಬಗ್ಗೆ ಕಾಕ್ರೋಚ್ ಜನತಾ ಪಾರ್ಟಿಯ ಸಂಸ್ಥಾಪಕ ಅಭಿಜೀತ್ ದೀಪ್ಕೆ ಅವರು ಟ್ವೀಟ್ ಮಾಡಿದ್ದಾರೆ.
ಸೋಷಿಯಲ್ ಮೀಡಿಯಾ ಎಕ್ಸ್‌ನಲ್ಲಿ ಟ್ವೀಟ್ ಮಾಡಿರುವ ಕಾಕ್ರೋಚ್ ಜನತಾ ಪಾರ್ಟಿಯ ಸಂಸ್ಥಾಪಕ ಅಭಿಜೀತ್ ದೀಪ್ಕೆ ಅವರು, ಕೆಲವು ವರ್ಷಗಳ ಹಿಂದೆ, ಆಶು ಲಂಡನ್‌ನಲ್ಲಿ ಹೆಚ್ಚಿನ ಸಂಬಳದ ಕಾರ್ಪೊರೇಟ್ ಉದ್ಯೋಗ ಮಾಡುತ್ತಿದ್ದರು. ಲಕ್ಷಾಂತರ ರೂಪಾಯಿ ಸಂಪಾದಿಸುತ್ತಿದ್ದರು. ಸೌರವ್ ದೇಶದ ಕಾನೂನು ವ್ಯವಸ್ಥೆಯ ಬಗ್ಗೆ ತಿಳಿದಿದ್ದರು ಮತ್ತು ಉತ್ತಮ ಜೀವನ ನಡೆಸುತ್ತಿದ್ದರು. ಇಬ್ಬರಿಗೂ ಯಶಸ್ವಿ ವೃತ್ತಿಜೀವನ, ಆರ್ಥಿಕ ಭದ್ರತೆ ಮತ್ತು ತಾವು ನಿರ್ಮಿಸಿಕೊಂಡ ಜೀವನವನ್ನು ಮುಂದುವರಿಸಲು ಎಲ್ಲಾ ಅವಕಾಶಗಳಿದ್ದವು ಎಂದು ಅಭಿಜೀತ್ ದೀಪ್ಕೆ ಅವರು ಹೇಳಿದ್ದಾರೆ.

ಮುಂದುವರಿದು ದೇಶವನ್ನು ಉತ್ತಮವನ್ನಾಗಿಸಬೇಕು ಎನ್ನುವ ಆಶಯದಿಂದ ಅವರು ತಮ್ಮೆಲ್ಲ ಉತ್ತಮ ಸೌಲಭ್ಯ ಹಾಗೂ ಜೀವನವನ್ನು ತ್ಯಜಿಸಲು ನಿರ್ಧರಿಸಿದರು. ಆರಾಮದಾಯಕ ಜೀವನವನ್ನು ಬಿಟ್ಟು ಬೀದಿಗಿಳಿಯಲು, ಅನಿಶ್ಚಿತತೆಯನ್ನು ಎದುರಿಸಲು ಮತ್ತು ಕೊನೆಗೆ ಜೈಲಿಗೆ ಹೋಗಲು ಅವರಿಗೆ ಯಾವುದೇ ಅನಿವಾರ್ಯತೆ ಇರಲಿಲ್ಲ. ಆದರೂ ಅವರು ಆ ನಿರ್ಧಾರ ಕೈಗೊಂಡರು.
ಈ ಇಬ್ಬರ ಬಗ್ಗೆ ನನಗೆ ಹೆಚ್ಚು ಮೆಚ್ಚುಗೆ ಮೂಡಿಸುವ ವಿಷಯವೆಂದರೆ, ಅವರು ಸವಲತ್ತುಗಳಿರುವ ಹಿನ್ನೆಲೆಯಿಂದ ಬಂದಿದ್ದರೂ, ಅಂತಹ ಅವಕಾಶಗಳಿಲ್ಲದವರ ಪರವಾಗಿ ಹೋರಾಡಲು ಆಯ್ಕೆ ಮಾಡಿಕೊಂಡರು. ಅವರು ತಮ್ಮ ಜೀವನವನ್ನು ಆನಂದಿಸುತ್ತಾ, ತಮಗೆ ಪರಿಚಯವಿಲ್ಲದ ಜನರ ಸಮಸ್ಯೆಗಳನ್ನು ನಿರ್ಲಕ್ಷಿಸಬಹುದಿತ್ತು. ಆದರೆ ಅವರು ಹಾಗೆ ಮಾಡಲಿಲ್ಲ. ಈ ತ್ಯಾಗವನ್ನು ಮಾಡುವಂತೆ ಯಾರೂ ಅವರನ್ನು ಕೇಳಿರಲಿಲ್ಲ. ಅವರು ಹೀಗೆ ಮಾಡುತ್ತಾರೆಂದು ಯಾರೂ ನಿರೀಕ್ಷಿಸಿರಲಿಲ್ಲ. ಆದರೂ, ತಮ್ಮನ್ನು ಮೀರಿ ಇತರರ ಬಗ್ಗೆಯೂ ನಿಜವಾದ ಕಾಳಜಿ ಹೊಂದಿದ್ದರಿಂದ ಅವರು ಈ ನಿರ್ಧಾರ ಕೈಗೊಂಡರು.
ನನ್ನ ಪ್ರಕಾರ, ಇದು ಮನುಷ್ಯನಲ್ಲಿರಬಹುದಾದ ಅತ್ಯುತ್ತಮ ಗುಣ. ಪರಿಚಯವಿಲ್ಲದ ಜನರ ಪರವಾಗಿ ನಿಲ್ಲುವುದು, ತಮಗೆ ಸಂಬಂಧವಿಲ್ಲದ ಹೋರಾಟಗಳಲ್ಲಿ ಭಾಗವಹಿಸುವುದು ಮತ್ತು ಇತರರಿಗೆ ಉತ್ತಮ ಜೀವನ ಸಿಗಲೆಂದು ತಮ್ಮಲ್ಲಿರುವ ಎಲ್ಲವನ್ನೂ ಪಣಕ್ಕಿಡುವುದು. ಆಶು ಮತ್ತು ಸೌರವ್ ಅಂತಹ ವ್ಯಕ್ತಿಗಳು ಎಂದು ಅಭಿಜೀತ್ ದೀಪ್ಕೆ ಅವರು ಸೋಷಿಯಲ್ ಮೀಡಿಯಾ ಎಕ್ಸನಲ್ಲಿ ಸುದೀರ್ಘ ಪೋಸ್ಟ್ ಮಾಡಿದ್ದಾರೆ.
ಲಾರೆನ್ಸ್ ಬಿಷ್ಣೋಯ್ ಸಾಹೇಬ್ ಎಂದ ದೆಹಲಿ ಪೊಲೀಸ್!
ಇನ್ನು ದೆಹಲಿ ಪೊಲೀಸರು ಲಾರೆನ್ಸ್ ಬಿಷ್ಣೋಯ್ ಸಾಹೇಬ್ ಎಂದು ಹೇಳಿರುವುದಕ್ಕೆ ಅಭಿಜೀತ್ ದೀಪ್ಕೆ ಅವರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. "ಲಾರೆನ್ಸ್ ಬಿಷ್ಣೋಯ್ ಸಾಹೇಬ್". ದರೋಡೆಕೋರರ ಬಗ್ಗೆ ದೆಹಲಿ ಪೊಲೀಸರಿಗೆ ಇರುವ ಗೌರವ. ಪ್ರತಿಭಟನೆ ಮಾಡುವುದನ್ನು ಬಿಟ್ಟು ಬೇರೇನನ್ನೂ ಮಾಡದ ವಿದ್ಯಾರ್ಥಿಗಳು ಮತ್ತು ಕಾರ್ಯಕರ್ತರಿಗೆ ಅವರು ಈ ಸೌಜನ್ಯದ 10% ರಷ್ಟನ್ನಾದರೂ ತೋರಿಸಬೇಕೆಂದು ನಾನು ಬಯಸುತ್ತೇನೆ ಅಂತಲೂ ಹೇಳಿದ್ದಾರೆ.


Click it and Unblock the Notifications
