Government Employee: ಸರ್ಕಾರಿ ನೌಕರರಿಗೆ ಬಂಪರ್ ಕೊಡುಗೆ, 8ನೇ ವೇತನ ಆಯೋಗ ರಚನೆಗೆ ಒಪ್ಪಿಗೆ
ನವದೆಹಲಿ, ಜನವರಿ 16: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಕೇಂದ್ರ ಸರ್ಕಾರಿ ನೌಕರರು, ಪಿಂಚಣಿದಾರರಿಗೆ ಸಿಹಿಸುದ್ದಿಯನ್ನು ನೀಡಿದೆ. 2025-26ನೇ ಸಾಲಿನ ಬಜೆಟ್ ಮಂಡನೆಗೂ ಮುನ್ನವೇ 8ನೇ ವೇತನ ಆಯೋಗ ರಚನೆಗೆ ಒಪ್ಪಿಗೆ ನೀಡಲಾಗಿದೆ. ಈ ಮೂಲಕ ಕೇಂದ್ರ ಸರ್ಕಾರಿ ನೌಕರರ ಬಹುದಿನದ ಬೇಡಿಕೆಗೆ ಸರ್ಕಾರ ಹಸಿರು ನಿಶಾನೆ ತೋರಿಸಿದೆ.
ಕೇಂದ್ರ ಸರ್ಕಾರಿ ನೌಕರರ ವೇತನ, ಭತ್ಯೆ, ಪಿಂಚಣಿಗಳ ಪರಿಷ್ಕರಣೆಗೆ 8ನೇ ವೇತನ ಆಯೋಗ ರಚನೆಯಾಗಲಿದೆ. ವೇತನ ಆಯೋಗ ರಚನೆ ಕುರಿತ ಪ್ರಕ್ರಿಯೆಗಳನ್ನು ನಡೆಸಲು ಸಮಿತಿ ರಚನೆ ಮಾಡಲು ಕೇಂದ್ರ ಸರ್ಕಾರ ಗುರುವಾರ ಒಪ್ಪಿಗೆ ಕೊಟ್ಟಿದೆ.

ಸಂಪ್ರದಾಯದಂತೆ ಪ್ರತಿ 10 ವರ್ಷಗಳಿಗೊಮ್ಮೆ ಸರ್ಕಾರ ವೇತನ ಆಯೋಗ ರಚನೆ ಮಾಡಬೇಕು. ವೇತನ ಆಯೋಗ ಕೇಂದ್ರ ಸರ್ಕಾರಿ ನೌಕರರ ವೇತನ, ಭತ್ಯೆ, ನಿವೃತ್ತ ನೌಕರರ ಪಿಂಚಣಿ ಪರಿಷ್ಕರಣೆ ಕುರಿತು ವರದಿ ನೀಡಲಿದೆ. ಈ ವರದಿ ಆಧರಿಸಿ ಸರ್ಕಾರ ವೇತನ, ಭತ್ಯೆ ಮತ್ತು ಪಿಂಚಣಿ ಹೆಚ್ಚಳ ಮಾಡಲಿದೆ. ಸದ್ಯ 2016ರಲ್ಲಿ ಜಾರಿಗೆ ಬಂದ 7ನೇ ವೇತನ ಆಯೋಗದ ವರದಿ ಅನ್ವಯ ನೌಕರರು ವಿವಿಧ ಸೌಲಭ್ಯವನ್ನು ಪಡೆಯುತ್ತಿದ್ದಾರೆ.
ಕೇಂದ್ರ ಸರ್ಕಾರಿ ನೌಕರರು, ನೌಕರರ ಸಂಘಗಳು ಕೇಂದ್ರ ಹಣಕಾಸು ಸಚಿವೆ ನಿರ್ಮಾಲಾ ಸೀತಾರಾಮನ್‌ಗೆ 8ನೇ ವೇತನ ಆಯೋಗ ರಚನೆ ಮಾಡಬೇಕು ಎಂದು ಮನವಿ ಸಲ್ಲಿಕೆ ಮಾಡಿದ್ದವು. ಬಜೆಟ್‌ನಲ್ಲಿ ಈ ಬಗ್ಗೆ ಘೋಷಣೆ ನಿರೀಕ್ಷೆ ಮಾಡಲಾಗಿತ್ತು. ಆದರೆ ಸರ್ಕಾರ 8ನೇ ವೇತನ ಆಯೋಗ ರಚನೆಗೆ ಸಮಿತಿ ರಚಿಸಲು ಒಪ್ಪಿಗೆ ಕೊಟ್ಟಿದೆ.
ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಸರ್ಕಾರ ಜನವರಿ 2016ರಲ್ಲಿ 7ನೇ ಕೇಂದ್ರ ವೇತನ ಆಯೋಗದ ವರದಿಯನ್ನು ಜಾರಿಗೊಳಿಸಿದೆ. ಸದ್ಯ ಕೇಂದ್ರ ಸರ್ಕಾರಿ ನೌಕರರು, ಪಿಂಚಣಿದಾರರು ಈ ಆಯೋಗದ ವರದಿ ಅನ್ವಯವೇ ವೇತನ, ಭತ್ಯೆ, ಪಿಂಚಣಿಯನ್ನು ಪಡೆಯುತ್ತಿದ್ದಾರೆ. ಈಗ ಜನವರಿ 1, 2025ರಿಂದಲೇ ಜಾರಿಗೆ ಬರುವಂತೆ ಹೊಸ ವೇತನ ಆಯೋಗ ರಚನೆಯಾಗಲಿದೆ ಎಂಬ ಮಾಹಿತಿ ಇದೆ.
2024ರ ಲೋಕಸಭೆ ಚುನಾವಣೆ ಮುಗಿದು ಎನ್‌ಡಿಎ 3.0 ಸರ್ಕಾರ ಅಧಿಕಾರಕ್ಕೆ ಬಂದಿತು. ಆಗ ಮಂಡನೆಯಾದ 2024-25 ಪೂರ್ಣ ಪ್ರಮಾಣದ ಬಜೆಟ್‌ನಲ್ಲಿಯೇ 8ನೇ ವೇತನ ಆಯೋಗ ರಚನೆ ಘೋಷಣೆ ನಿರೀಕ್ಷೆ ಮಾಡಲಾಗಿತ್ತು. ಆದರೆ ಯಾವುದೇ ಘೋಷಣೆಯನ್ನು ಸರ್ಕಾರ ಮಾಡಿರಲಿಲ್ಲ. ಇದರಿಂದಾಗಿ ನೌಕರರಿಗೆ ನಿರಾಸೆಯಾಗಿತ್ತು.
ರಾಜ್ಯಸಭೆಯ ಕಲಾಪದಲ್ಲಿ ಹಣಕಾಸು ಖಾತೆ ರಾಜ್ಯ ಸಚಿವ ಪಂಕಜ್ ಚೌಧರಿ, "ಸದ್ಯಕ್ಕೆ 8ನೇ ವೇತನ ಆಯೋಗ ರಚನೆ ಮಾಡುವ ಯಾವುದೇ ಪ್ರಸ್ತಾವನೆ ಸರ್ಕಾರದ ಮುಂದಿಲ್ಲ" ಎಂದು ಹೇಳಿಕೆ ನೀಡಿದ್ದರು. ಆದರೆ ಕೇಂದ್ರ ಸರ್ಕಾರಿ ನೌಕರರು ವೇತನ ಆಯೋಗ ರಚನೆ ಮಾಡಬೇಕು ಎಂದು ಪಟ್ಟು ಹಿಡಿದಿದ್ದರು.
ಈಗ ಸರ್ಕಾರ 8ನೇ ವೇತನ ಆಯೋಗ ರಚನೆ ಮಾಡಲು ಸಮಿತಿಯನ್ನು ರಚಿಸಲು ಒಪ್ಪಿಗೆ ನೀಡಿದೆ. 2026ಕ್ಕೆ ಸಮಿತಿ ಸರ್ಕಾರಕ್ಕೆ ವರದಿ ನೀಡುವ ನಿರೀಕ್ಷೆ ಇದ್ದು, ಯಾವಾಗ ವರದಿ ಶಿಫಾರಸು ಜಾರಿಗೆ ಬರಲಿದೆ? ಎಂಬುದು ಇನ್ನೂ ಸಹ ಖಚಿತವಾಗಿಲ್ಲ. ಸಂಪ್ರದಾಯದಂತೆ 10 ವರ್ಷಗಳಿಗೊಮ್ಮೆ ಅಂದರೆ 2026ರ ಜನವರಿ 1 ರಿಂದ 8ನೇ ವೇತನ ಆಯೋಗದ ವರದಿ ಜಾರಿಗೆ ಬರಬೇಕು.












Click it and Unblock the Notifications