Government Employee: 8ನೇ ವೇತನ ಆಯೋಗ, ಸರ್ಕಾರಿ ನೌಕರರಿಗೆ ನಿರಾಸೆ
ನವದೆಹಲಿ, ಫೆಬ್ರವರಿ 05: ಕೇಂದ್ರ ಸರ್ಕಾರ ಕೇಂದ್ರ ಸರ್ಕಾರಿ ನೌಕರರಿಗೆ 8ನೇ ವೇತನ ಆಯೋಗ ರಚನೆ ಮಾಡುವ ಮೂಲಕ ಕೊಡುಗೆ ನೀಡಿದೆ. ಆದರೆ 2026ರ ಜನವರಿ 1ರಿಂದ ಅನ್ವಯವಾಗುವುದಿಲ್ಲ ಎಂಬ ಮಾಹಿತಿ ಸಿಕ್ಕಿದೆ. ಇದಕ್ಕೆ ಕಾರಣ 2025-26ನೇ ಬಜೆಟ್‌ನಲ್ಲಿ ವೇತನ ಆಯೋಗದ ಕುರಿತು ಕೇಂದ್ರ ಹಣಕಾಸು ಸಚಿವರು ಯಾವುದೇ ಉಲ್ಲೇಖಗಳನ್ನು ಮಾಡಿಲ್ಲ. ಸದ್ಯ ಕೇಂದ್ರ ಸರ್ಕಾರಿ ನೌಕರರು 7ನೇ ವೇತನ ಆಯೋಗದ ವರದಿ ಅನ್ವಯ ವೇತನ, ಭತ್ಯ ಪಡೆಯುತ್ತಿದ್ದು, ಈ ಆಯೋಗದ ಅವಧಿ 2025ರ ಡಿಸಂಬರ್ 31ಕ್ಕೆ ಮುಕ್ತಾಯವಾಗಲಿದೆ.
ಫೆಬ್ರವರಿ 1ರಂದು ಕೇಂದ್ರ ಹಣಕಾಸು ಮತ್ತು ಕಾರ್ಪೊರೇಟ್ ವ್ಯವಹಾರಗಳ ಸಚಿವೆ ನಿರ್ಮಲಾ ಸೀತಾರಾಮನ್ 2025-26ನೇ ಸಾಲಿನ ಬಜೆಟ್ ಮಂಡಿಸಿದ್ದಾರೆ. ಆದರೆ ಬಜೆಟ್‌ನಲ್ಲಿ 8ನೇ ವೇತನ ಆಯೋಗಕ್ಕೆ ಯಾವುದೇ ಅನುದಾನ ಹಂಚಿಕೆ ಮಾಡಿಲ್ಲ. ಆದ್ದರಿಂದ ವೇತನ ಆಯೋಗದ ಶಿಫಾರಸು ಜಾರಿಗೆ ಬರುವುದು ವಿಳಂಬವಾಗಲಿದೆ ಎಂದು ಅಂದಾಜಿಸಲಾಗಿದೆ.

ಬಜೆಟ್‌ನಲ್ಲಿ ನಿರ್ಮಲಾ ಸೀತಾರಾಮನ್ 8ನೇ ವೇತನ ಆಯೋಗದ ಕುರಿತು ಸ್ಪಷ್ಟವಾದ ಮಾಹಿತಿ ನೀಡಲಿದ್ದಾರೆ. ವೇತನ ಆಯೋಗದ ಅನುಷ್ಠಾನದ ಬಗ್ಗೆ, ವೇತನ ಹೆಚ್ಚಳದ ಕುರಿತು ಮಾಹಿತಿ ಸಿಗಲಿದೆ ಎಂದು ನಿರೀಕ್ಷೆ ಮಾಡಲಾಗಿತ್ತು, ಆದರೆ 1.2 ಕೋಟಿ ನೌಕರರು, ಬಜೆಟ್‌ನಲ್ಲಿ ನಿರಾಸೆ ಅನುಭವಿಸಿದ್ದಾರೆ.
ಬಜೆಟ್‌ಗೂ ಮೊದಲೇ ಘೋಷಣೆ: ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಬಜೆಟ್‌ಗೂ ಮೊದಲೇ 8ನೇ ವೇತನ ಆಯೋಗ ರಚನೆಯ ಘೋಷಣೆ ಮಾಡಿತ್ತು. ಆಯೋಗ ರಚನೆಗೆಗಾಗಿ ಸಮಿತಿಯನ್ನು ರಚಿಸಲಾಗುತ್ತದೆ ಎಂದು ಹೇಳಿತ್ತು. ಅಧ್ಯಕ್ಷರು ಸೇರಿದಂತೆ ಇಬ್ಬರು ಸದಸ್ಯರು ಇರುವ ಸಮಿತಿ ಇದಾಗಿದೆ. 8ನೇ ವೇತನ ಆಯೋಗ ಜನವರಿ 1, 2026ರಿಂದ ಜಾರಿಗೆ ಬರಲಿದೆ ಎಂದು ನಿರೀಕ್ಷೆ ಮಾಡಲಾಗಿತ್ತು.
ಮಾಹಿತಿಗಳ ಪ್ರಕಾರ 2026-27ರ ಬಜೆಟ್‌ನಲ್ಲಿ ಕೇಂದ್ರ ಸರ್ಕಾರ 8ನೇ ವೇತನ ಆಯೋಗಕ್ಕೆ ಅನುದಾನ ಮೀಸಲಿಡಲಿದೆ. ಆಯೋಗ ಈಗ ರಚನೆಗೊಂಡರೂ ಸಹ ಅದು ತನ್ನ ವರದಿಯನ್ನು ನೀಡಲು ಒಂದು ವರ್ಷ ತೆಗೆದುಕೊಳ್ಳಲಿದೆ. ಆದ್ದರಿಂದ ಮುಂದಿನ ಬಜೆಟ್‌ನಲ್ಲಿ ವೇತನ ಆಯೋಗದ ಶಿಫಾರಸು ಜಾರಿಗೆ ಅನುದಾನ ಮೀಸಲಿಡಲಾಗುತ್ತದೆ.
7ನೇ ವೇತನ ಆಯೋಗ ತನ್ನ ವರದಿಯನ್ನು ನೀಡಲು 18 ತಿಂಗಳ ಅವಧಿ ತೆಗೆದುಕೊಂಡಿತ್ತು. ಆದ್ದರಿಂದ 8ನೇ ವೇತನ ಆಯೋಗದ ವರದಿ ಜನವರಿ 1, 2026ರಿಂದ ಜಾರಿಗೆ ಬರಲಿದೆ ಎಂದು ಅಂದಾಜಿಸಿದ್ದ ಕೇಂದ್ರ ಸರ್ಕಾರಿ ನೌಕರರ ಲೆಕ್ಕಾಚಾರ ಉಲ್ಟಾ ಆಗಲಿದೆ.
ಹಣಕಾಸು ಸಚಿವಾಲಯ 8ನೇ ವೇತನ ಆಯೋಗದ ಕೆಲಸ ಆರಂಭಿಸಲು ಅನುಮತಿ ನೀಡುವ ಮುನ್ನ ರಕ್ಷಣಾ ಸಚಿವಾಲಯ, ಗೃಹ ಸಚಿವಾಲಯ, ಸಿಬ್ಬಂದಿ ಮತ್ತು ತರಬೇತಿ ಸಚಿವಾಲಯದ ಜೊತೆ ಸಭೆಯನ್ನು ನಡೆಸಲಿದೆ. ಈ ಸಭೆಯ ಬಳಿಕ ವೇತನ ಆಯೋಗ ರಚನೆಯ ಕುರಿತು ಅಧಿಕೃತ ಆದೇಶ ಪ್ರಕಟವಾಗಲಿದೆ ಎಂದು ನಿರೀಕ್ಷೆ ಮಾಡಲಾಗಿದೆ.
ಅಧಿಕಾರಿಗಳ ಮಾಹಿತಿ ಪ್ರಕಾರ 2026-27ನೇ ಸಾಲಿನ ಆರ್ಥಿಕ ವರ್ಷದಲ್ಲಿ ಕೇಂದ್ರ ಸರ್ಕಾರಿ ನೌಕರರಿಗೆ, ಪಿಂಚಣಿದಾರರಿಗೆ 8ನೇ ವೇತನ ಆಯೋಗದ ಸೌಲಭ್ಯಗಳು ಸಿಗುವ ನಿರೀಕ್ಷೆ ಇದೆ. ಕೇಂದ್ರ ಸರ್ಕಾರಿ ನೌಕರರ ವೇತನ ಏರಿಕೆಯಲ್ಲಿ ಆಯೋಗ ಶಿಫಾರಸು ಮಾಡುವ ಫಿಟ್ಮೆಂಟ್ ಎಷ್ಟು ಎಂಬುದು ಪ್ರಮುಖ ಪಾತ್ರವನ್ನು ವಹಿಸುತ್ತದೆ.












Click it and Unblock the Notifications