8th Pay Commission: ಡೇಟಾ ವಿಂಡೋ ಕ್ಲೋಸ್: ಸರ್ಕಾರಿ ನೌಕರರಿಗೆ ಶೀಘ್ರವೇ ವೇತನ ಹೆಚ್ಚಳದ ಸಿಹಿಸುದ್ದಿ?
ನವದೆಹಲಿ: ಕೇಂದ್ರ ಸರ್ಕಾರದ ಸಚಿವಾಲಯಗಳು, ಇಲಾಖೆಗಳು, ಸಂಸ್ಥೆಗಳು ಮತ್ತು ಕಚೇರಿಗಳಿಂದ ಮಾಹಿತಿ ಕೋರುತ್ತಿದ್ದ ಡೇಟಾ ಸಂಗ್ರಹ ಕಾರ್ಯವನ್ನು 8ನೇ ಕೇಂದ್ರ ವೇತನ ಆಯೋಗ ಮುಗಿಸಿದೆ. ಡೇಟಾ ಕಲೆಕ್ಷನ್ ವಿಂಡೋವನ್ನು ಆಯೊಗ ಕ್ಲೋಸ್ ಮಾಡಿದೆ. ಆನ್‌ಲೈನ್ ಡೇಟಾ ಪೋರ್ಟಲ್ ಮೂಲಕ ಆಯೋಗವು ವಿವಿಧ ಸರ್ಕಾರಿ ಸಂಸ್ಥೆಗಳಿಂದ ನಿಗದಿತ ಸ್ವರೂಪಗಳಲ್ಲಿ ವಿವರವಾದ ಮಾಹಿತಿಯನ್ನು ಕೋರಿತ್ತು. ಅಲ್ಲದೆ ಡೇಟಾ ಸಲ್ಲಿಕೆಗೆ ಜೂನ್ 30, 2026ರ ಗಡುವು ನೀಡಿತ್ತು. ನಂತರ ಈ ಅವಧಿಯನ್ನು ಜುಲೈ 31, 2026ವರೆಗೆ ವಿಸ್ತರಿಸಲಾಯಿತು.
ವೇತನ, ಭತ್ಯೆಗಾಗಿ 8ನೇ ವೇತನ ಆಯೋಗದ ಡೇಟಾ
8ನೇ ವೇತನ ಆಯೋಗವು ಅಂತಿಮ ಶಿಫಾರಸುಗಳನ್ನು ಮಾಡಬೇಕಾದರೆ ಕೆಲವೊಂದು ವಿವರವಾದ ಡೇಟಾಗಳ ಅಗತ್ಯವಿರುತ್ತದೆ. ಉದ್ಯೋಗಿಗಳ ಸಂಖ್ಯೆ, ಅಸ್ತಿತ್ವದಲ್ಲಿರುವ ವೇತನ ರಚನೆ, ಖಾಲಿ ಹುದ್ದೆ, ನೇಮಕಾತಿ ಮಾದರಿಗಳು, ಬಡ್ತಿ, ನಿವೃತ್ತಿ ಪ್ರವೃತ್ತಿಗಳು, ಭತ್ಯೆ, ಪಿಂಚಣಿ ಮತ್ತು ತಾಂತ್ರಿಕ ಬದಲಾವಣೆಗಳಿಗೆ ಸಂಬಂಧಿಸಿದ ಡೇಟಾ ವೇತನ ಆಯೋಗದ ಶಿಫಾರಸುಗಳ ಮೇಲೆ ಪರಿಣಾಮ ಬೀರುತ್ತದೆ. ಹೀಗಾಗಿ ಆಯೋಗವು ಈ ಎಲ್ಲಾ ಮಾಹಿತಿಗಳ ಸಂಗ್ರಹದಲ್ಲಿ ತೊಡಗಿತ್ತು.

8ನೇ ವೇತನ ಆಯೋಗದ ದತ್ತಾಂಶದ ಮಹತ್ವ
ಇಲ್ಲಿ ಸಂಗ್ರಹಿಸುವ ಡೇಟಾ ಬಹಳ ಮಹತ್ವದ್ದಾಗಿದೆ. ಯಾಕೆಂದರೆ ಈ ಡೇಟಾವನ್ನು ಆಧರಿಸಿ, ವೆಚ್ಚ ಲೆಕ್ಕಾಚಾರಗಳು, ವೇತನ ಮ್ಯಾಟ್ರಿಕ್ಸ್ ಮರುವಿನ್ಯಾಸ, ಕೇಡರ್ ಪುನರ್ರಚನೆ, ಭತ್ಯೆ , ಪಿಂಚಣಿ, ಎಲ್ಲವೂ ನಿರ್ಧಾರವಾಗುವುದು.ಈ ಡೇಟಾವನ್ನು ಆಧಾರವಾಗಿ ಇಟ್ಟುಕೊಂಡೇ ಆಯೋಗ ಮುಂದಿನ ಎಲ್ಲಾ ಲೆಕ್ಕಾಚಾರಗಳನ್ನು ಮಾಡುವುದು.
ಶೀಘ್ರದಲ್ಲೇ ಆಗುವುದೇ ವೇತನ ಹೆಚ್ಚಳ?
ಡೇಟಾ ವಿಂಡೋ ಕ್ಲೋಸ್ ಆಗಿದೆ ಎಂದ ಕೂಡಲೇ ವೇತನ ಹೆಚ್ಚಳದ ಬಗ್ಗೆ ಚರ್ಚೆ ನಡೆದಿದೆ ಎನ್ನುವುದು ಖಂಡಿತಾ ಅಲ್ಲ. ಇಲ್ಲಿ ಸಲ್ಲಿಕೆಯಾದ ಡೇಟಾ ಆಯೋಗದ ಅಂತಿಮ ಶಿಫಾರಸುಗಳ ಮೇಲೆ ಪ್ರಭಾವ ಬೀರುತ್ತದೆ. ಆಯೋಗವು ಈಗ ತನ್ನ ಶಿಫಾರಸುಗಳ ಮೇಲೆಯೇ ಕೆಲಸ ಮಾಡುತ್ತದೆ. ತನ್ನ ಅಂತಿಮ ವರದಿಯನ್ನು ಕೇಂದ್ರಕ್ಕೆ ಸಲ್ಲಿಸುತ್ತದೆ. ಕೇಂದ್ರ ಸರ್ಕಾರವು ಶಿಫಾರಸುಗಳನ್ನು ಸ್ವೀಕರಿಸಿದ ನಂತರವೇ ಪರಿಷ್ಕೃತ ಸಂಬಳ ಮತ್ತು ಪಿಂಚಣಿಗಳು ಜಾರಿಗೆ ಬರುತ್ತವೆ.
8ನೇ ವೇತನ ಆಯೋಗದ ಡೇಟಾ ವಿಂಡೋ
ಸಂಗ್ರಹಿಸಲಾಗುವ ಡೇಟಾ ಸುಮಾರು 50 ಲಕ್ಷ ಕೇಂದ್ರ ಸರ್ಕಾರಿ ನೌಕರರು ಮತ್ತು ಸುಮಾರು 69 ಲಕ್ಷ ಪಿಂಚಣಿದಾರರ ವೇತನ, ಭತ್ಯೆಗಳು, ಪಿಂಚಣಿಗಳು ಮತ್ತು ಸೇವಾ ನಿರ್ಣಯಗಳ ಮೇಲೆ ನೇರ ಪರಿಣಾಮ ಬೀರುತ್ತದೆ. ಹಾಗಾಗಿ ಇದರ ಪರಿಶೀಲನೆ ಮತ್ತು ಪರಿಷ್ಕರಣೆಯ ಕುರಿತಾದ ತನ್ನ ವರದಿಯನ್ನು ರೂಪಿಸಲು ಕ್ರಮಬದ್ಧ ವಿಧಾನವನ್ನು ಬಳಸುತ್ತಿದೆ.
1. ಮೊದಲ ಹಂತವು ಆನ್‌ಲೈನ್ ಪ್ರಶ್ನಾವಳಿಯ ಮೂಲಕ ಪಾಲುದಾರರಿಂದ ಅಭಿಪ್ರಾಯಗಳನ್ನು ಪಡೆಯುವುದು.
2. ಎರಡನೇ ಹಂತವು ಪಾಲುದಾರರಿಂದ ಔಪಚಾರಿಕ ಪ್ರಾತಿನಿಧ್ಯಗಳು ಮತ್ತು ಜ್ಞಾಪಕ ಪತ್ರಗಳನ್ನು ತರಿಸಿಕೊಳ್ಳುವುದು.
3. ಮೂರನೇ ಮತ್ತು ಪ್ರಸ್ತುತ ಹಂತದ ಪ್ರಕಾರ ಸರ್ಕಾರಿ ಸಂಸ್ಥೆಗಳಿಂದ ದತ್ತಾಂಶ ಸಂಗ್ರಹವಾಗಿದ್ದು, ಇದು ಆಯೋಗವು ಅಂತಿಮ ಶಿಫಾರಸು ಮಾಡಲು ಸಹಾಯ ಮಾಡುತ್ತದೆ.
8ನೇ ವೇತನ ಆಯೋಗದ ಶಿಫಾರಸುಗಳು
ಪಾಲುದಾರರ ಸಲಹೆಗಳು ಮತ್ತು ಪ್ರಸ್ತಾವನೆಗಳನ್ನು ಪರಿಶೀಲಿಸಿದ ನಂತರ ಆಯೋಗವು ತನ್ನ ವರದಿಯನ್ನು ತಯಾರು ಮಾಡುತ್ತದೆ. ಆಯೋಗದ ರಚನೆಯ ಸುಮಾರು 18 ತಿಂಗಳ ನಂತರ ವರದಿಯನ್ನು ಸಲ್ಲಿಸುವ ನಿರೀಕ್ಷೆಯಿದೆ.
ಇನ್ನು 8 ನೇ ಕೇಂದ್ರ ವೇತನ ಆಯೋಗವು ಮುಂದಿನ ಸುತ್ತಿನ ಸಮಾಲೋಚನಾ ಸಭೆಗಳನ್ನು ನಡೆಸಲಿದೆ. ಈ ಬಾರಿ, ಆಯೋಗವು ರಾಜಸ್ಥಾನದ ರಾಜಧಾನಿ ಜೈಪುರದಲ್ಲಿ ಉದ್ಯೋಗಿ ಸಂಘಟನೆಗಳು ಮತ್ತು ಸಂಘಗಳೊಂದಿಗೆ ಸಭೆ ನಡೆಸಲಿದೆ. ಆಯೋಗವು ತನ್ನ ಶಿಫಾರಸುಗಳನ್ನು ಅಂತಿಮಗೊಳಿಸುವ ಮೊದಲು ಆಗಸ್ಟ್ ಅಂತ್ಯದಲ್ಲಿ ರಾಜಸ್ಥಾನದ ಅರ್ಹ ಉದ್ಯೋಗಿ ಸಂಘಟನೆಗಳು ಮತ್ತು ಸಂಘಗಳ ಪ್ರತಿನಿಧಿಗಳೊಂದಿಗೆ ಸಭೆ ನಡೆಸಲಿದೆ.ಆಯೋಗದ ಪ್ರಕಾರ, ಈ ಸಭೆಗಳು ಆಗಸ್ಟ್ 31 ಮತ್ತು ಸೆಪ್ಟೆಂಬರ್ 1, 2026 ರಂದು ನಡೆಯಲಿವೆ.
ಮುಂಬರುವ ತಿಂಗಳುಗಳಲ್ಲಿ ಇತರ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿಯೂ ಇದೇ ರೀತಿಯ ಸಮಾಲೋಚನಾ ಸಭೆಗಳನ್ನು ನಡೆಸಲಾಗುವುದು ಎಂದು ಆಯೋಗ ಸ್ಪಷ್ಟಪಡಿಸಿದೆ. ಈ ಸಭೆಗಳ ಕುರಿತು ಮಾಹಿತಿಯನ್ನು ಆಯೋಗದ ಅಧಿಕೃತ ವೆಬ್‌ಸೈಟ್‌ನಲ್ಲಿ ಬಿಡುಗಡೆ ಮಾಡಲಾಗುತ್ತದೆ.


Click it and Unblock the Notifications
