ಕೊರೊನಾ ಲಸಿಕೆ ತೆಗೆದುಕೊಳ್ಳಲು 60% ಮಂದಿ ಸಿದ್ಧರಿಲ್ಲ; ಕಾರಣ ಏನು?
ನವದೆಹಲಿ, ಜನವರಿ 26: ಕೊರೊನಾ ಸೋಂಕಿನ ವಿರುದ್ಧದ ಹೋರಾಡಲು ಜನವರಿ 16ರಿಂದ ಭಾರತದಾದ್ಯಂತ ಲಸಿಕಾ ಅಭಿಯಾನ ಆರಂಭಿಸಲಾಗಿದೆ. ಇದುವರೆಗೂ ದೇಶಾದ್ಯಂತ ಸುಮಾರು 16 ಲಕ್ಷ ಮಂದಿಗೆ ಕೊರೊನಾ ಲಸಿಕೆಗಳನ್ನು ನೀಡಲಾಗಿದೆ.
ಆದರೆ ಕೊರೊನಾ ಲಸಿಕೆಗಳನ್ನು ಪಡೆಯಲು ಜನರು ಇನ್ನೂ ಹಿಂದೇಟು ಹಾಕುತ್ತಿರುವುದು ಕಂಡುಬಂದಿದೆ. ಲೋಕಲ್ ಸರ್ಕಲ್ ಈ ಸಮೀಕ್ಷೆಯನ್ನು ನಡೆಸಿದ್ದು, ಲಸಿಕೆ ಪಡೆದುಕೊಳ್ಳಲು ಭಾರತದ ಶೇ.60ರಷ್ಟು ಜನರು ಹಿಂಜರಿಯುತ್ತಿರುವುದಾಗಿ ತಿಳಿಸಿದೆ.
ಕಳೆದ ಅಕ್ಟೋಬರ್ ನಲ್ಲಿಯೇ ಲೋಕಲ್ ಸರ್ಕಲ್ ಸಮೀಕ್ಷೆ ನಡೆಸಿದ್ದು, ಅದರಲ್ಲಿ 61% ನಾಗರಿಕರು ಕೊರೊನಾ ಲಸಿಕೆ ತೆಗೆದುಕೊಳ್ಳಲು ಹಿಂಜರಿಯುತ್ತಿದ್ದಾರೆ ಎಂದು ತಿಳಿಸಿತ್ತು. ನವೆಂಬರ್ ವೇಳೆಗೆ ಆ ಪ್ರಮಾಣ 59%ಗೆ ಇಳಿದಿತ್ತು. ಇದೀಗ 60% ಜನರು ಲಸಿಕೆ ತೆಗೆದುಕೊಳ್ಳಲು ಸಿದ್ಧರಿಲ್ಲ ಎಂದು ತಿಳಿಸಿದೆ.

ಡಿಸೆಂಬರ್ ನಲ್ಲಿ ಈ ಸಂಖ್ಯೆಯು 69%ಗೆ ಏರಿಕೆಯಾಗಿದ್ದು, ಜನವರಿ ಒಂದನೇ ವಾರದವರೆಗೂ ಇದೇ ಸ್ಥಿತಿ ಮುಂದುವರೆದಿತ್ತು. ಆನಂತರ ಈ ಪ್ರಮಾಣ 60%ಗೆ ಇಳಿದಿದೆ. ಜನವರಿ 18ರಿಂದ ಜನವರಿ 25ರವರೆಗೆ 60% ಯಾಥಾಸ್ಥಿತಿ ಮುಂದುವರೆದಿದೆ ಎಂದು ಸಮೀಕ್ಷೆ ತಿಳಿಸಿದೆ.
ಲಸಿಕೆ ಕುರಿತು ಕೆಲವು ಗೊಂದಲಗಳು, ಲಸಿಕೆ ಪರಿಣಾಮದ ಕುರಿತು ನಂಬಿಕೆ ಇಲ್ಲದಿರುವುದು ಹಾಗೂ ಲಸಿಕೆಗಳ ಅಡ್ಡಪರಿಣಾಮದ ಕುರಿತು ಗೊಂದಲ ನಾಗರಿಕರನ್ನು ಲಸಿಕೆ ತೆಗೆದುಕೊಳ್ಳಲು ಹಿಂದೇಟು ಹಾಕುವಂತೆ ಮಾಡಿವೆ ಎನ್ನಲಾಗಿದೆ.
72ನೇ ಗಣರಾಜ್ಯೋತ್ಸವ ಸಂಭ್ರಮ ವಿಶೇಷ ಪುಟ
ಲಸಿಕೆ ತೆಗೆದುಕೊಳ್ಳಲು ಅದರ ಅಡ್ಡಪರಿಣಾಮದ ಮೇಲಿನ ಭಯ ಬಹುಮುಖ್ಯ ಕಾರಣ ಎನ್ನಲಾಗಿದೆ. ಅಡ್ಡ ಪರಿಣಾಮದ ಕುರಿತು ಯಾವುದೇ ಮಾಹಿತಿ ಇಲ್ಲದೇ ಇದ್ದರೂ ಭಯದಿಂದ ಲಸಿಕೆ ತೆಗೆದುಕೊಳ್ಳಲು ಹಿಂದೇಟು ಹಾಕುತ್ತಿದ್ದಾರೆ. 14% ಜನರು ಲಸಿಕೆ ಪರಿಣಾಮಕಾರಿ ಗುಣದ ಬಗ್ಗೆ ನಂಬಿಕೆಯಿಲ್ಲದೇ ಹಿಂಜರಿಯುತ್ತಿದ್ದಾರೆ.
ಇನ್ನುಳಿದ 4% ಮಂದಿ ಕೊರೊನಾ ಸೋಂಕು ಕಡಿಮೆಯಾಗುತ್ತಿರುವಾಗ ಲಸಿಕೆಯ ಅಗತ್ಯವಿಲ್ಲ ಎಂದು ತೆಗೆದುಕೊಳ್ಳಲು ನಿರಾಕರಿಸಿದ್ದಾರೆ ಎಂದು ಸಮೀಕ್ಷೆ ತಿಳಿಸಿದೆ.











Click it and Unblock the Notifications